ಶನಿವಾರ, ಜೂನ್ 25, 2022
26 °C

ಹವ್ಯಾಸಿ ಸಂಗೀತಗಾರರ ಹಾಡು ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಪೊ ಕೊ ಎ ಪೊಕೊ’ ಹವ್ಯಾಸಿ ಸಂಗೀತಗಾರರ ತಂಡ. ಈ ತಂಡದಲ್ಲಿ 30ಕ್ಕೂ ಹೆಚ್ಚು ಸದಸ್ಯರಿದ್ದು, ಸಂಗೀತದ ಮೇಲಿನ ಪ್ರೀತಿ, ಆಸಕ್ತಿ ಇವರೆಲ್ಲರನ್ನು ಒಟ್ಟುಗೂಡಿಸಿದೆ.

‘ಪೊಕೊ ಎ ಪೊಕೊ’ ಎಂಬುದು ಇಟಾಲಿಯನ್‌ ಪದ. ‘ಸ್ವಲ್ಪ ಸ್ವಲ್ಪ’ ಎನ್ನುವುದು ಇದರ ಅರ್ಥ. ಈ ತಂಡದಲ್ಲೂ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅದರ ಬಗ್ಗೆ ಸ್ವಲ್ಪ ಕಲಿತುಕೊಂಡವರಿದ್ದಾರೆ. ಈ ತಂಡದ ನೇತೃತ್ವ ವಹಿಸಿಕೊಂಡವರು ಪಿಯಾನೊ ವಾದಕಿ ಶುಬಿರಾ ಡೆಸಾ. ತಂಡದಲ್ಲಿ ಶಾಸ್ತ್ರೀಯ, ಫಿಲ್ಮಿ, ರಾಕ್‌, ರ‍್ಯಾಪ್‌, ಹಾಗೆಯೇ ಇನ್‌ಸ್ಟ್ರುಮೆಂಟಲ್‌ ಹಾಡುಗಳನ್ನೂ ಹಾಡುವವರಿದ್ದಾರೆ.

ಈ ತಂಡದ ಎಲ್ಲಾ ಸದಸ್ಯರು ಬೇರೆ ಬೇರೆ ಹಿನ್ನೆಲೆಯಿಂದ ಬಂದವರು. ವಕೀಲೆ, ಡಿಸೈನರ್‌, ಬರಹಗಾರರು ವೈದ್ಯೆ, ಐಟಿ, ಅಮ್ಮಂದಿರು, ಅಜ್ಜ– ಅಜ್ಜಿಯಂದಿರು..  ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿದ್ದಾರೆ. ಇದರಲ್ಲಿ ಕೆಲವರು ಸಂಗೀತ ಕಲಿತವರಿದ್ದಾರೆ. ಆದರೆ ಸಂಗೀತವನ್ನು ಕೇಳುತ್ತಾ, ಆಲಿಸುತ್ತಾ ಅದರ ಬಗ್ಗೆ ಮೋಹ ಬೆಳೆಸಿಕೊಂಡವರೇ ಹೆಚ್ಚಿರುವುದು ವಿಶೇಷ.

ಸಂಗೀತದ ಮನೋಭಾವ, ಬದ್ಧತೆ ಮತ್ತು ಸಂಗೀತ ‘ಕೇಳುವ’ ಸಾಮರ್ಥ್ಯದಿಂದ ಯಾರಾದರೂ ಹಾಡಲು ಅಥವಾ ವಾದ್ಯ ನುಡಿಸಲು ತರಬೇತಿ ಪಡೆಯಬಹುದು ಎಂಬುದು ಶುಬಿರಾ ಅವರ ಅನುಭವದ ಮಾತು.

ಸಂಗೀತ ಪಯಣ

ಕಳೆದ ವರ್ಷ ಬರೀ 16 ಸದಸ್ಯರೊಂದಿಗೆ ಪಯಣ ಆರಂಭಿಸಿದ ತಂಡ ಒಂದು ವರ್ಷದಲ್ಲಿ ತನ್ನ ಬಳಗವನ್ನು ವಿಸ್ತರಿಸಿಕೊಂಡಿದೆ. ತಂಡದ ಸದಸ್ಯರ ಸಂಖ್ಯೆ ದುಪ್ಪಟ್ಟಾಗಿದೆ. ಸದ್ಯ ತಂಡದಲ್ಲಿ 30 ಸದಸ್ಯರಿದ್ದಾರೆ. ಪ್ರತ್ಯೇಕವಾಗಿ ಮಕ್ಕಳ ತಂಡ ಕೂಡ ಅಸ್ತಿತ್ವಕ್ಕೆ ಬಂದಿದೆ. ‘ಪೊಕೊ ಎ ಪೊಕೊ’ ರಚನಾತ್ಮಕ ಮತ್ತು ಪರಿಣಾಮಕಾರಿ ಕಾರ್ಯಕ್ರಮಗಳ ಮೂಲಕ ದಿಟ್ಟ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದೆ.  

ಈ ತಂಡದ ಸದಸ್ಯರು ಬೇರೆ ಬೇರೆ ಪ್ರಕಾರದ ಹಾಡುಗಳನ್ನು ಹಾಡುತ್ತಾರೆ ಹಾಗೂ ಬೇರೆ ಬೇರೆ ಕಾಲಘಟ್ಟದ ಅಪರೂಪದ ಹಾಡುಗಳನ್ನು ಆಯ್ಕೆ ಮಾಡಿಕೊಂಡು ಪ್ರೇಕ್ಷಕರಿಗೆ ತಲುಪಿಸುವುದು ಈ ತಂಡದ ವೈಶಿಷ್ಟ್ಯ. ಪಿಯಾನೊ, ಡ್ರಮ್ಮಿಂಗ್, ಗಿಟಾರ್‌ ಮೂಲಕ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ.

‘ಪೊಕೊ ಎ ಪೊಕೊ’ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲವು ಕಾರ್ಯಕ್ರಮಗಳನ್ನು ನೀಡಿದೆ. 2019ರ ಫೆ.29ರಂದು ಬೆಂಗಳೂರಿನಲ್ಲಿ ಮೊದಲ ಷೊ ನಡೆದಿತ್ತು. ಮೊದಲ ಕಾರ್ಯಕ್ರಮವೇ ಅಭೂತಪೂರ್ವ ಯಶಸ್ಸು ಕಂಡಿತ್ತು. ಅದರ ಬಳಿಕ ಜೂನ್‌ನಲ್ಲಿ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಕಾರ್ಯಕ್ರಮ
ನಡೆದಿತ್ತು. 2019ರಲ್ಲಿ ತಂಡ ಯಶಸ್ವಿಯಾಗಿ ಒಟ್ಟು ಎಂಟು ಷೊ ನಡೆಸಿದೆ. 

ಬಹುಮುಖ ಪ್ರತಿಭೆ

ಈ ಯಶಸ್ಸಿನ ಹಿಂದೆ ಶುಬಿರಾ ಡೆಸಾ ಅವರ ಸೃಜನಶೀಲ ಮನಸ್ಸಿದೆ. ತಂಡದ ಸದಸ್ಯರ ತಂತ್ರಜ್ಞಾನ, ಹಾಡುಗಾರಿಕೆ ಮತ್ತು ಆಲ್‌ರೌಂಡ್‌ ಪ್ರದರ್ಶನ ನೀಡುವುದರಲ್ಲಿ ಅವರ ಶ್ರಮವಿದೆ.

ತಂಡದ ಸದಸ್ಯರು ಶುಬಿರಾ ಅವರ ಮನೆಯಲ್ಲಿ ಅಥವಾ ಯಾವುದಾದರೂ ಸ್ಥಳದಲ್ಲಿ ತಾಲೀಮು ನಡೆಸುತ್ತಾರೆ. ವಾರಕ್ಕೊಮ್ಮೆ ಸದಸ್ಯರು ಸೇರಿ ಚಟುವಟಿಕೆ ಬಗ್ಗೆ ಚರ್ಚಿಸುತ್ತಾರೆ.

‘ಪೊಕೊ ಎ ಪೊಕೊ’ ಹವ್ಯಾಸಿ ಸಂಗೀತಗಾರರ ತಂಡ ಕಟ್ಟಿದ ಶುಬಿರಾ ಬಹುಮುಖ ಸಂಗೀತ ಪ್ರತಿಭೆ. ಪಿಯಾನೊ ನುಡಿಸುತ್ತಾರೆ, ಹಾಡುತ್ತಾರೆ ಒಟ್ಟಿನಲ್ಲಿ ಸಂಗೀತ ಪ್ರೇಮಿ. 19 ವರ್ಷಗಳಿಂದ ಪಿಯಾನೊ ಮತ್ತು ಹಾಡು ಕಲಿಸುವ ಕಾಯಕದಲ್ಲಿದ್ದಾರೆ. ಅನೇಕ ಶಾಲೆ, ಕಾಲೇಜುಗಳಲ್ಲಿಯೂ ಸಂಗೀತ ಕಲಿಸುತ್ತಿದ್ದಾರೆ.

ಪುಣೆಯ ಸಂಗೀತ ತಂಡದೊಂದಿಗೆ ಕೆಲಸ ಮಾಡಿದ್ದಾರೆ. ಅನೇಕ ಸಂಗೀತ ಕಾರ್ಯಕ್ರಮಗಳನ್ನು ನಡೆಸಿದ, ನಾಟಕಗಳಿಗೆ ಪಿಯಾನೊ ನುಡಿಸಿದ ಮತ್ತು ಸಂಗೀತ ನಿರ್ದೇಶಿಸಿದ ಅನುಭವ ಅವರ ಬೆನ್ನಿಗಿದೆ.     

ಸಮಾಜಮುಖಿ ಕಾರ್ಯ

ಕಾರ್ಯಕ್ರಮಗಳಿಂದ ಸಂಗ್ರಹವಾದ ಮೊತ್ತದ ಒಂದು ಭಾಗವನ್ನು ಸಮಾಜಮುಖಿ ಕೆಲಸಗಳಿಗೆ, ಸಂಘ– ಸಂಸ್ಥೆಗಳಿಗೆ ಈ ತಂಡ ನೀಡುತ್ತದೆ. ಫೆ.29ರಂದು ಅಂಬೇಡ್ಕರ್‌ ಭವನದಲ್ಲಿ ಎರಡು ಷೊ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಿಂದ ಸಂದಾಯವಾಗುವ ಹಣದಲ್ಲಿ ಕ್ಯಾನ್ಸರ್‌ ಕೇರ್‌ ಫೌಂಡೇಷನ್‌ಗೂ ಸಹಾಯ ನೀಡುವ ನಿರ್ಧಾರ ತಂಡದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು