ಫುಟ್‌ಪಾತ್‌ಗೆ ಬೀಡಾಡಿ ದನಗಳಂತೆ ನುಗ್ಗುವ ಬೈಕ್‌ ಸವಾರರ ವಿರುದ್ಧ ಪ್ರತಿಭಟನೆ

ಭಾನುವಾರ, ಜೂಲೈ 21, 2019
25 °C

ಫುಟ್‌ಪಾತ್‌ಗೆ ಬೀಡಾಡಿ ದನಗಳಂತೆ ನುಗ್ಗುವ ಬೈಕ್‌ ಸವಾರರ ವಿರುದ್ಧ ಪ್ರತಿಭಟನೆ

Published:
Updated:

 ಬನಶಂಕರಿ 3ನೇ ಹಂತದ ಜನತಾ ಬಜಾರ್‌ನಲ್ಲಿ ಪಾದಚಾರಿಗಳ ಮಾರ್ಗಕ್ಕೆ ನುಗ್ಗುವ ದ್ವಿಚಕ್ರ ವಾಹನ ಚಾಲಕರ ವಿರುದ್ಧ ವಿಶಿಷ್ಟ ಪ್ರತಿಭಟನೆ ನಡೆಯುತ್ತಿತ್ತು. ಭಾಗವಹಿಸಿದವರೆಲ್ಲ ಪುಟಾಣಿಗಳು!

ಫುಟ್‌ಪಾತ್‌ಗೆ ನುಗ್ಗುವ ಬೈಕ್‌ ಸವಾರರು ಪಾದಚಾರಿಗಳಿಗೆ ಅನಗತ್ಯ ಕಿರಿ ಕಿರಿ ಮತ್ತು ಅಪಾಯ ತಂದೊಡ್ಡುತ್ತಾರೆ ಎನ್ನುವುದು ಪ್ರತಿಭಟನಾಕಾರರ ವಾದವಾಗಿತ್ತು. ಈ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿರುವ ಡಾ. ಸರಯು ಮಾತಿಗೆ ಸಿಕ್ಕರು. ಅವರೊಂದಿಗೆ ನಡೆಸಿದ ಪುಟ್ಟ ಮಾತುಕತೆಯಲ್ಲಿ ಈ ಅಭಿಯಾನದ ರೂವಾರಿ ಒಬ್ಬ ಹಿರಿಯ ಜೀವಿ ಉಷಾ ಶ್ರೀಕಾಂತನ್‌ ಎನ್ನುವುದು ತಿಳಿದು ಕುತೂಹಲ ಮೂಡಿತು. ಅವರಿಗೀಗ 75ರ ವಯಸ್ಸು. ಈ ಅಭಿಯಾನದ ಬಗ್ಗೆ ಸರಯು ಅವರದೇ ಮಾತುಗಳಲ್ಲಿ ತಿಳಿಯೋಣ ಬನ್ನಿ.

ಸಮಾಜಕ್ಕೆ ಸಹಾಯಕವಾಗುವ ಈ ಅಭಿಯಾನಕ್ಕೆ ಏನು ಪ್ರೇರಣೆ?

ಪಾದಚಾರಿಗಳ ಸುರಕ್ಷತೆಗೆ ಧಕ್ಕೆಯುಂಟುಮಾಡುವ ದ್ವಿಚಕ್ರ ಮತ್ತು ಬೈಕ್‌ ಸವಾರಿಯ ಅನೇಕ ಅವಘಡಗಳ ಬಗ್ಗೆ ಕೇಳಿದ್ದೇವೆ. ಕಣ್ಣಾರೆ ಕಂಡಿದ್ದೇವೆ. ಇದರಿಂದ ಮನಸಿಗೆ ನೋವೆನಿಸಿ ಸ್ಟೆರ್ಲಿಂಗ್‌ ಟೆರೇಸ್ ಮತ್ತು ಬಿಎಸ್‌ಕೆ 3ನೇ ಹಂತದ ಶಂಕರಿ ಅಪಾರ್ಟ್‌ಮೆಂಟ್‌ ನಿವಾಸಿಗಳು ಈ ವಿಷಯವನ್ನು ಗಂಭಿರವಾಗಿ ತೆಗೆದುಕೊಂಡಿದ್ದೇವೆ.

ಬರಿಯ ಪ್ರಚಾರಕ್ಕಾಗಿ ಕೈಗೊಂಡ ಅಭಿಯಾನ ಅಲ್ಲ ತಾನೆ?

ಪಾದಚಾರಿಗಳು ಸುರಕ್ಷತೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ಕೈಗೊಂಡ ಅಭಿಯಾನವಿದು. ಪ್ರಚಾರಕ್ಕಾಗಿ ಅಲ್ಲ.

ಪ್ರಸ್ತುತ ನಿಮ್ಮ ತಂಡದಲ್ಲಿ ಎಷ್ಟು ಸ್ವಯಂಸೇವಕರಿದ್ದಾರೆ ಮತ್ತು ಯಾರು ನಾಯಕತ್ವ ವಹಿಸುತ್ತಿದ್ದಾರೆ?

ಈ ಉಪಕ್ರಮವನ್ನು 75 ವರ್ಷ ವಯಸ್ಸಿನ ಹಿರಿಯ ಮಹಿಳೆ, ಸ್ಟೆರ್ಲಿಂಗ್‌ ಟೆರೇಸ್‌ನ ನಿವಾಸಿ, ಸಾಮಾಜಿಕ ಕಾರ್ಯಕರ್ತೆ ಉಷಾ ಶ್ರೀಕಾಂತನ್ ನೇತೃತ್ವದಲ್ಲಿ ಪ್ರಾರಂಭಿಸಿದ್ದೇವೆ. ನಂತರ ಶಂಕರಿ ಅಪಾರ್ಟ್‌ಮೆಂಟ್‌ನ ಸುಬ್ರಮಣ್ಯಂ ಸೇರಿಕೊಂಡರು. ಈಗ ನಾವು ಸುಮಾರು 20 ಜನರ ಗುಂಪಾಗಿದ್ದು, ಫುಟ್‌ಪಾತ್‌ನಲ್ಲಿ ಬೈಕ್‌ ಸವಾರಿ ಮಾಡುವವರ ವಿರುದ್ಧ ಪ್ರತಿಭಟಿಸುತ್ತಿದ್ದೇವೆ.

ವೈಯಕ್ತಿಕ ಬೆಳವಣಿಗೆಯ ಉದ್ದೇಶವೇ?

ಈ ಉಪಕ್ರಮವನ್ನು ಒಳ್ಳೆಯ ಉದ್ದೇಶದಿಂದ ಮತ್ತು ನಿಸ್ವಾರ್ಥದಿಂದ ಕೈಗೆತ್ತಿಕೊಂಡಿದ್ದೇವೆ. ಸಾರ್ವಜನಿಕರಿಗೆ, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಿಗೆ ಸುರಕ್ಷಿತ ಫುಟ್‌ಪಾತ್‌ಗಳನ್ನು ಒದಗಿಸಿಕೊಡುವುದು ಈ ಅಭಿಯಾನದ ಪ್ರಮುಖ ಕಾಳಜಿ.

 ಈ ಅಭಿಯಾನದ ಭವಿಷ್ಯ ಹೇಗೆ?

ಇಲ್ಲಿಗೇ ಕೊನೆಗೊಳಿಸಲು ನಾವು ಬಯಸುವುದಿಲ್ಲ. ಇದನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೇವೆ. ಇಡೀ ಬೆಂಗಳೂರು ಮತ್ತು ಶೀಘ್ರದಲ್ಲೇ ಭಾರತದಾದ್ಯಂತ ಹಬ್ಬಿಸಲು ಬಯಸುತ್ತೇವೆ. ಇದು ಸಂಚಾರ ಪೊಲೀಸ್ ಮುಖ್ಯಸ್ಥರಿಗೆ ಅನುಸಾರವಾಗಿರುವಂತೆ ನೋಡಿಕೊಳ್ಳಬೇಕು. ಫುಟ್‌ಪಾತ್‌ನಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುವ ಚಾಲಕರ ವಿರುದ್ಧ ಪ್ರತಿಭಟನೆ ಇದಾಗಿದೆ. ಜನರಿಗೆ, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಿಗೆ ಸುರಕ್ಷಿತ ಫುಟ್‌ಪಾತ್‌ಗಳ ಅಗತ್ಯವಿದೆ. ಇದನ್ನೇ ಸಂಬಂಧಪಟ್ಟ ಅಧಿಕಾರಿಗಳು, ಇಲಾಖೆ ಮತ್ತು ಒಟ್ಟು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದೇ ನಮ್ಮ ತಂಡದ ಪ್ರಮುಖ ಗುರಿ. ನಾವು ಫುಟ್‌ಪಾತ್‌ಗಳಲ್ಲಿ ಫಲಕಗಳೊಂದಿಗೆ ನಿಂತಾಗ ನಮ್ಮ ಅಭಿಯಾನವನ್ನು ಎಲ್ಲ ವಯೋಮಾನದವರು ಮೆಚ್ಚಿಕೊಂಡಿದ್ದಾರೆ. ಅವರಿಗೂ ಇದರ ಮಹತ್ವ ಅರಿವಿಗೆ ಬಂದಿದೆ ಎನಿಸುತ್ತದೆ.

ಈ ವಿಶಿಷ್ಟ ಅಭಿಯಾನಕ್ಕೆ ಪುಟಾಣಿಗಳೂ ಕೈ ಜೋಡಿಸಿದ್ದಾರೆ. ಸುಮಾರು ಆರು ತಿಂಗಳಿಂದ ಸತತವಾಗಿ ಈ ಅಭಿಯಾನ ನಡೆಸಿಕೊಂಡು ಬಂದಿದ್ದೇವೆ. ಪ್ರತಿ ನಿತ್ಯ ಸಂಜೆ 5ರಿಂದ 6ರ ವರೆಗೆ ಈ ಪ್ರತಿಭಟನೆ ನಡೆಯುತ್ತದೆ.

 ಮುಂಬರುವ ದಿನಗಳಲ್ಲಿ ದ್ವಿಚಕ್ರ ವಾಹನ ಸವಾರರು ಫುಟ್‌ಪಾತ್‌ಗಳಲ್ಲಿ ವಾಹನ ಚಾಲನೆ ಮಾಡದೆ ಪಾದಚಾರಿಗಳ ಸುರಕ್ಷತೆಗೆ ಅನುವು ಮಾಡಿಕೊಡುವ ಮನಸ್ಸು ಮಾಡಲಿ ಎನ್ನುವುದು ಆಶಯ. ಸಾರ್ವಜನಿಕರು ಈ ಅಭಿಯಾನಕ್ಕೆ ಕೈಜೋಡಿಸಿದರೆ ಇಂಥ ಪರಿವರ್ತನೆ ಖಂಡಿತ ಸಾಧ್ಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !