ಭಾನುವಾರ, ಫೆಬ್ರವರಿ 23, 2020
19 °C

ಗರಗದ ಖಾದಿ ಧ್ವಜಕ್ಕೆ ಬೇಡಿಕೆ

ಸುಮನಾ ಕೆ. Updated:

ಅಕ್ಷರ ಗಾತ್ರ : | |

prajavani

ಈ ರಾಷ್ಟ್ರೀಯ ಹಬ್ಬಕ್ಕೆ ಕಳೆಗಟ್ಟಲು ತ್ರಿವರ್ಣದ ಬಾವುಟ, ರಿಸ್ಟ್‌ಬ್ಯಾಂಡು, ಟೀ– ಶರ್ಟ್‌ಗಳು, ಖಾದಿ ಉಡುಪುಗಳು, ಸ್ಟಿಕ್ಕರ್‌ ಸೇರಿದಂತೆ ಕೆಲ ವಸ್ತುಗಳು ಮಾರುಕಟ್ಟೆ ಪ್ರವೇಶಿಸಿವೆ.

ಕಮರ್ಷಿಯಲ್‌ ಸ್ಟ್ರೀಟ್‌, ಹಲಸೂರು, ಇಂದಿರಾನಗರ ಸೇರಿದಂತೆ ನಗರದ ಕೆಲ ಅಂಗಡಿಗಳಲ್ಲಿ ಬಾವುಟ ಸೇರಿದಂತೆ ತ್ರಿವರ್ಣದ ಕೆಲ ವಸ್ತುಗಳನ್ನು ಮಾರುವುದು ಕಂಡು ಬಂತು. ಆದರೆ ಸ್ವಾತಂತ್ರ್ಯ ದಿನ ಸಂದರ್ಭಕ್ಕೆ ಹೋಲಿಸಿದರೆ ಗಣರಾಜ್ಯೋತ್ಸವಕ್ಕೆ ಬಾವುಟ ಅಥವಾ ತ್ರಿವರ್ಣದ ವಸ್ತುಗಳಿಗೆ ಬೇಡಿಕೆ ಇರುವುದಿಲ್ಲ ಎಂಬುದು ಅಂಗಡಿ ಮಳಿಗೆಯವರ ಅಭಿಪ್ರಾಯ.

ರಾಷ್ಟ್ರೀಯ ಹಬ್ಬದ ಸಂದರ್ಭದಲ್ಲಿ ಬಾವುಟಗಳಿಗೆ ಬೇಡಿಕೆ ಇರುತ್ತದೆ. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಕ್ಕಳು, ಯುವಕರು ಎಲ್ಲರೂ ಬಾವುಟ ಖರೀದಿ ಮಾಡುತ್ತಾರೆ. ಆಗ ದಿನವೊಂದಕ್ಕೆ 500–600 ಬಾವುಟಗಳು ಮಾರಾಟವಾಗುತ್ತವೆ. ಆದರೆ ಗಣರಾಜ್ಯೋತ್ಸವದ ಹಿಂದಿನ ಹೆಚ್ಚು ಬಾವುಟಗಳು ಮಾರಾಟವಾಗುವುದಿಲ್ಲ ಎನ್ನುತ್ತಾರೆ ಇಬ್ರಾಹಿಂ ಸಾಹೀಬ್‌ ಸ್ಟ್ರೀಟ್‌ನ ಲಕ್ಷ್ಮೀ ಸ್ಟೋರ್ಸ್‌ ಮಾಲಕ ಎಂ.ಆರ್‌.ವಿ ನಾಗೇಶ್‌.

ಇಲ್ಲಿ ಹತ್ತಿ, ಪೇಪರ್‌ಗಳಿಂದ ಮಾಡಿರುವ ಬಾವುಟ ಸಿಗುತ್ತದೆ. ಹಾಗೇ ಮಕ್ಕಳು ಹಾಗೂ ಯುವಕರಿಗಾಗಿ ತ್ರಿವರ್ಣದ ರಿಸ್ಟ್‌ ಬ್ಯಾಂಡ್‌, ರಿಬ್ಬನ್‌, ಕ್ಯಾಪ್‌, ಶಾಲು ಕೂಡ ಇವೆ. ಬಾವುಟಗಳ ಬೆಲೆ ₹50ರಿಂದ ಆರಂಭ.

ಟೀಶರ್ಟ್‌ಗಳಿಗೂ ಬೇಡಿಕೆ ಇಲ್ಲ: ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ತ್ರಿವರ್ಣದ ಟೀಶರ್ಟ್‌ಗಳು ದಿನಕ್ಕೆ 500ಕ್ಕಿಂತಲೂ ಹೆಚ್ಚು ಶರ್ಟ್‌ ಮಾರಾಟವಾಗಿವೆ. ಗಣರಾಜ್ಯೋತ್ಸವಕ್ಕೆ 100 ಖರ್ಚಾದರೆ ಜಾಸ್ತಿ. ಯಾರಾದರೂ ಕೇಳಿದರೆ ಅಂತಹ ಟೀ ಶರ್ಟ್‌ಗಳನ್ನು ತಂದುಕೊಡುತ್ತೇವೆ ಎನ್ನುತ್ತಾರೆ ಶಿವಾಜಿನಗರದ ಬಟ್ಟೆ ಮಳಿಗೆಯೊಂದರೆ ಸಿಬ್ಬಂದಿ ಸುರೇಶ್‌.‌

ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಆಯೋಜಿಸಿರುವ ಖಾದಿ ಮತ್ತು ಗ್ರಾಮೋದ್ಯೋಗ ಪ್ರದರ್ಶನ ಮತ್ತು ಮಾರಾಟದಲ್ಲಿ ಖಾದಿ ಬಟ್ಟೆಗಳು ಹಾಗೂ ಬಾವುಟಗಳಿಗೆ ಹೆಚ್ಚು ಬೇಡಿಕೆಯಿದೆ. ಈಗ ಗಣರಾಜ್ಯೋತ್ಸವ ಸಂದರ್ಭವೂ ಆಗಿದ್ದರಿಂದ ಜನರು ಬಾವುಟ ಕೇಳಿಕೊಂಡು ಮಳಿಗೆಗೆ ಬರುತ್ತಾರೆ ಎಂದು ಮೇಳದ ಉಸ್ತುವಾರಿ ವಹಿಸಿಕೊಂಡಿರುವ ಸಂಪತ್‌ಕುಮಾರ್‌ ಹೇಳುತ್ತಾರೆ.

ನಮ್ಮಲ್ಲಿ ಖಾದಿ, ರೇಷ್ಮೆ, ಉಣ್ಣೆಬಟ್ಟೆ, ಜಮ್ಮು ಕಾಶ್ಮೀರ, ದೆಹಲಿಯಲ್ಲಿನ ಬೇರೆ ಬೇರೆ ಬಟ್ಟೆಗಳು  ಸಿಗುತ್ತವೆ. ಹಾಗೇ ಖಾದಿಯ ಎಲ್ಲ ಉಡುಪುಗಳಿಗೆ ಬೇಡಿಕೆ ಇದೆ. ಈಗ ಟ್ರೆಂಡ್‌ ಬದಲಾಗಿದೆ. ಯುವಕರು ಸಹಾ ಖಾದಿ ಉಡುಪುಗಳನ್ನು ಇಷ್ಟಪಡುತ್ತಿದ್ದಾರೆ. ಈಗ ಪೈಜಾಮ, ಜುಬ್ಬಾ, ಕುರ್ತಾ, ಮಕ್ಕಳ ಖಾದಿ ಬಟ್ಟೆಗಳು ಹೆಚ್ಚು ಮಾರಾಟವಾಗಿವೆ. ಅದಕ್ಕೆ ಗಣರಾಜ್ಯೋತ್ಸವ ಕಾರಣವೂ ಇರಬಹುದು ಎನ್ನುತ್ತಾರೆ ಅವರು.

ಮೇಳದಲ್ಲಿನ ಹುಬ್ಬಳ್ಳಿ ಸೊಸೈಟಿ, ಗರಗ ಸೊಸೈಟಿ ಮಳಿಗೆಯ ತ್ರಿವರ್ಣ ಧ್ವಜಗಳು ಲಭ್ಯ. ಇಲ್ಲಿ ಚಿಕ್ಕ ಬಾವುಟದಿಂದ ದೊಡ್ಡ ದೊಡ್ಡ ಬಾವುಟಗಳು ಸಿಗುತ್ತದೆ. ಈ ಬಾವುಟಗಳು ಐಎಸ್‌ಐ ಮಾರ್ಕ್‌ ಕೂಡ ಹೊಂದಿದೆ.

ಈಗ ಗರಗ ಸೊಸೈಟಿಯು ಆನ್‌ಲೈನ್‌ ಮಾರುಕಟ್ಟೆ ಮೂಲಕವೂ ಬಾವುಟಗಳ ಮಾರಾಟ ನಡೆಸುತ್ತಿದೆ.  ದೇಶದಾದ್ಯಂತ  ಖಾದಿ ಬಾವುಟಕ್ಕೆ ಹೆಚ್ಚು ಬೇಡಿಕೆ ಇದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ  200ಕ್ಕೂ ಹೆಚ್ಚು ಬಾವುಟಗಳಿಗೆ ಬೇಡಿಕೆ ಬಂದಿದೆ. ಇಲ್ಲಿ ಬಾವುಟಗಳ ಬೆಲೆ ₹200ರಿಂದ ₹7, 8 ಸಾವಿರದವರೆಗೂ ಇದೆ ಎನ್ನುತ್ತಾರೆ ಸಂಪತ್‌.

ರಿಯಾಯಿತಿ ಮಾರಾಟ: ಗಣರಾಜ್ಯೋತ್ಸವಕ್ಕೆ ಕೆಲವು ಮಳಿಗೆಗಳಲ್ಲಿ ಶೇ20ರಿಂದ 50 ರಿಯಾಯಿತಿ ಮಾರಾಟ ಘೋಷಣೆ ಮಾಡಿದೆ. ಟೈನಿಮೊ ತನ್ನ ಉತ್ಪನ್ನಗಳಿಗೆ ಶೇ. 26ರಷ್ಟು ರಿಯಾಯಿತಿ ಘೋಷಿಸಿದೆ. ಹಾಗೇ ಬಿಗ್‌ ಬಜಾರ್‌ನಲ್ಲೂ ಎಲ್ಲಾ ಉತ್ಪನ್ನಗಳ ಮೇಲೆ ರಿಯಾಯಿತಿ ಇದೆ.

ಆಭರಣದ ಅಂಗಡಿ ಜೋಯಾಲುಕ್ಕಾಸ್‌ ಗಣರಾಜ್ಯೋತ್ಸವದ ಪ್ರಯುಕ್ತ ಜ.26ರವರಗೆ ಪ್ರತಿ ಗ್ರಾಂ ಚಿನ್ನ ಖರೀದಿಗೆ ₹71 ರೂಪಾಯಿ ಕಡಿತ ಮಾಡಿದೆ.

ರಿಲಯನ್ಸ್‌ನಲ್ಲಿ ಗಣರಾಜ್ಯೋತ್ಯದ ಅಂಗವಾಗಿ ಡಿಜಿಟಲ್ ಇಂಡಿಯಾ ಸೇಲ್ ಆರಂಭವಾಗಿದೆ. ಜನವರಿ 26ರವರೆಗೆ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಮೇಲೆ ರಿಯಾಯಿತಿ ಮತ್ತು ಅದ್ಭುತ ಕ್ಯಾಶ್‌ಬ್ಯಾಕ್‌ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು