ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಹಾ ತಾಯ್ತನದ ‘ನಿಯಮಗಳು’

Last Updated 22 ನವೆಂಬರ್ 2019, 19:45 IST
ಅಕ್ಷರ ಗಾತ್ರ

‘ನಮ್ಮ ಮಗಳು, ನಮ್ಮ ಮನೆಯ ರಾಜಕುಮಾರಿ. ನಾನು ಮತ್ತು ಕುನಾಲ್‌ ಅವಳೊಟ್ಟಿಗೆ ಅತಿ ಹೆಚ್ಚು ಸಮಯ ಕಳೆಯುತ್ತಿದ್ದೇವೆ. ಮತ್ತೆ ಮತ್ತೆ ಈ ಸಮಯ ಸಿಗುವುದಿಲ್ಲವಲ್ಲ’ ಸೋಹಾ ಅಲಿ ಖಾನ್‌ ಖೇಮು ತಮ್ಮ ಬಲಗಿವಿಯಿಂದಿಳಿದ ಕೂದಲನ್ನು ಹಿಂದೆ ತಳ್ಳುತ್ತ, ತಮ್ಮ ತಾಯ್ತನವನ್ನು ಸಂಭ್ರಮಿಸುವ ಬಗೆ ಬಣ್ಣಿಸುತ್ತಿದ್ದರು.

‘ಇನಾಯಾಗೆ ಈಗ ಎರಡು ವರ್ಷ. ಸಮಯ ಅದ್ಹೇಗೆ ಓಡಿ ಹೋಯಿತೋ ಗೊತ್ತಿಲ್ಲ. ನಾನು ಮತ್ತು ಕುನಾಲ್‌ ಅತಿ ಎಚ್ಚರದಿಂದ ಬೆಳೆಸುತ್ತಿದ್ದೇವೆ. ಈವರೆಗೂ ಅವಳಿಗೆ ಯಾವುದೇ ಕ್ಯಾಮೆರಾಗಳಿಂದ ಕಿರಿಕಿರಿಯಾಗಿಲ್ಲ. ಅವಳನ್ನು ಮನೆಯಂಗಳದಲ್ಲಿಯೇ ಸಾಮಾನ್ಯರಂತೆ ಬೆಳೆಸುತ್ತಿದ್ದೇವೆ’ ಎಂದು ಹೇಳಿದರು.

‘ನಾವೇ ಅವಳೊಟ್ಟಿಗೆ, ಅವಳು ಹೇಳಿದಂತೆ ಆಡುತ್ತೇವೆ. ಅವಳಿಗಿನ್ನೂ ಯಾವ ಆಟಗಳನ್ನೂ ಕಲಿಸುವ, ಆಡಿಸುವ ಗೋಜಿಗೆ ಹೋಗಿಲ್ಲ. ಅವಳ ಕುತೂಹಲ ಮೊದಲು ತಣಿಯಲಿ ಎಂಬುದು ನಮ್ಮ ಕಾಳಜಿ. ಇನ್ನೂ ಯಾವ ಡಿಜಿಟಲ್‌ ಡಿವೈಸ್‌ಗಳಿಗೂ ಅವಳು ಅಂಟಿಕೊಂಡಿಲ್ಲ. ಯಾವಾಗಲಾದರೂ ನಾನು ಅಥವಾ ಇನಾಯಾಳಿಂದ ಕುನಾಲ್‌ ದೂರ ಇರುವ ಪ್ರಸಂಗ ಬಂದರೆ ಮಾತ್ರ ವೀಡಿಯೊ ಕಾಲ್‌ ಮಾಡಿ ಮಾತನಾಡುತ್ತೇವೆ. ಆ ನಿಟ್ಟಿನಲ್ಲಿ ಈ ಡಿಜಿಟಲ್‌ ಕ್ರಾಂತಿಗೆ ಎಷ್ಟು ಕೃತಜ್ಞರಾದರೂ ಸಾಲದು’ ಎನ್ನುತ್ತಲೇ ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು.

ನಾವು ಸಣ್ಣವರಿದ್ದಾಗ ಅಪ್ಪ ದೂರದ ಊರಿನಲ್ಲಿದ್ದರೆ ಟೆಲಿಫೋನ್‌ ರಿಂಗಣಿಸುತ್ತಿದ್ದರೆ ಕಿವಿಗೊಟ್ಟು ಕೇಳುತ್ತಿದ್ದೆವು. ಸುದೀರ್ಘವಾಗಿ ರಿಂಗಣಿಸಿದರೆ ಅದು ಐಎಸ್‌ಡಿ ಕಾಲ್‌ ಎಂದು ತಿಳಿದು ಓಡಿ ಬರುತ್ತಿದ್ದೆವು. ನಾವಿಲ್ಲಿ ಮಾತನಾಡಿದ ನಂತರ ಒಂದೆರಡು ಸೆಕೆಂಡುಗಳಾದ ಮೇಲೆ ಅಪ್ಪನ ಪ್ರತಿಕ್ರಿಯೆ ಬರುತ್ತಿತ್ತು. ಈಗ ಇನಾಯಾ ಅಷ್ಟೆಲ್ಲ ಕಾಯಬೇಕಾಗಿಲ್ಲ ಎನ್ನುತ್ತಲೇ ಕಣ್ಣರಳಿಸಿದರು.

ಇನಾಯಾಗೆ ಇನ್ಮೇಲೆ ಡಿಜಿಟಲ್‌ ಡಿವೈಸ್‌ಗಳನ್ನು ಪರಿಚಯಿಸಲಿದ್ದೇವೆ. ಕಥೆ, ರೈಮ್ಸ್‌ಗಳನ್ನು ತೋರಿಸಬೇಕೆಂದಿದ್ದೇವೆ. ಆ ಸ್ಕ್ರೀನ್‌ ಟೈಮ್‌ ನಮ್ಮ ಜೊತೆಗೆ ಹಂಚಿಕೊಳ್ಳಬೇಕು ಎಂಬಂತೆ ಯೋಜಿಸುತ್ತಿದ್ದೇವೆ. ಮೊದಲಾದರೆ ಒಂದು ಚಿತ್ರಹಾರ್‌ ನೋಡಲು ಮನೆಮಂದಿಯೆಲ್ಲ ಬುಧವಾರ ಹಾಗೂ ಶುಕ್ರವಾರ ಸಂಜೆ ಟೀವಿಯ ಮುಂದೆ ಪ್ರತಿಷ್ಠಾಪಿಸುತ್ತಿದ್ದೆವು. ಆಗ ಚಿತ್ರಹಾರವನ್ನು ಆನಂದಿಸಲೆಂದೇ ಕುರುಕಲುಗಳನ್ನೂ ಸಿದ್ಧಪಡಿಸಿ ಇಡುತ್ತಿದ್ದೆವು. ಎಲ್ಲರನ್ನೂ ಒಗ್ಗೂಡಿಸುವ ಸಮಯ ಅದಾಗಿತ್ತು. ಆದರೆ ಇಂದು, ಟಿವಿ ಬೇರ್ಪಡಿಸುವ ಮಾಧ್ಯಮವಾಗಿದೆ. ಆಯ್ಕೆಗಳಿದ್ದಷ್ಟೂ ಮನೆಯ ಸದಸ್ಯರು ಚದುರಿಹೋಗಿದ್ದೇವೆ. ಪ್ರತಿಯೊಬ್ಬರೂ ತಮ್ಮ ಆಸಕ್ತಿಯ, ಅಭಿರುಚಿಯ ಕಾರ್ಯಕ್ರಮಗಳನ್ನು ನೋಡಲು ಇಷ್ಟ ಪಡುತ್ತೇವೆ. ಹೀಗಾಗಿ ಪ್ರತಿಯೊಬ್ಬರಿಗೂ ಒಂದೊಂದು ರೂಮುಗಳು ಬಂದವು, ರೂಮುಗಳೊಂದಿಗೆ ಟಿವಿಗಳೂ ಬಂದವು. ನಮ್ಮ ನಡುವೆಯೇ ಗೋಡೆ ಕಟ್ಟುವ ಕೆಲಸ ಟಿವಿಯಿಂದಾಗುತ್ತಿದೆ. ಹಾಗಾಗಿ ನಾನು ಮತ್ತು ಖೇಮು ಒಟ್ಟಿಗೆ ಟಿವಿ ನೋಡುವ ಎಂದುಕೊಂಡಿದ್ದೇವೆ. ಅದನ್ನೇ ಕಾರ್ಯಾನುಷ್ಠಾನಕ್ಕೆ ತರುತ್ತೇವೆ.

‘ಉಳಿದವರ ವಿಷಯ ಗೊತ್ತಿಲ್ಲ. ನನ್ನಮ್ಮ ಶರ್ಮಿಳಾ ಟ್ಯಾಗೋರ್‌ ಯಾವಾಗಲೂ ನನ್ನನ್ನು ದೂರುತ್ತಾರೆ. ನಿನ್ನದು ಏನಿದ್ದರೂ ಅತಿರೇಕ ಅಂತ. ಆದರೆ ನಾನು ಮತ್ತು ಖೇಮು ಒಂದಷ್ಟು ನಿಯಮಗಳನ್ನು ಹಾಕಿಕೊಂಡಿದ್ದೇವೆ. ಮಗಳು ಯಾರ ಪರವಾಗಿಯೂ ಹೆಚ್ಚು ಒಲವು ತೋರುವಂತಿರಬಾರದು. ಅವಳಿಗೆ ಏನೇ ನಿಷೇಧ ಹಾಕಬೇಕಿದ್ದರೂ ಇಬ್ಬರೂ ಕೂಡಿಯೇ ಹೇಳಬೇಕು. ನಾನು ಐಸ್‌ಕ್ರೀಮ್‌ ಬೇಡವೆಂದರೆ ಕುನಾಲ್‌ ಸಹ ಬೇಡವೆನ್ನಬೇಕು. ಅವನು ತಿನ್ನಿಸಿ ಅಥವಾ ತಿನ್ನಲು ಅನುಮತಿಸಿದರೆ ಯಾರೋ ಒಬ್ಬರು ಅವಳ ಮಾತು ಕೇಳುತ್ತಾರೆ ಎಂಬಂತೆ ಆಗಬಾರದಲ್ಲ. ಹಾಗಾಗಿ ಇಬ್ಬರೂ ಈ ಬಗ್ಗೆ ತೀರ್ಮಾನಿಸಿದ್ದೇವೆ. ಒಂದು ಗೆರೆಯನ್ನೂ ಹಾಕಿಕೊಂಡಿದ್ದೇವೆ. ಹಾಗಾಗಿ ನಾವು ಮೂವರೂ ಒಂದು ಟೀಮ್‌ನಂತೆ ಬೆಳೆಯುತ್ತಿದ್ದೇವೆ’

‘ಇನಾಯಾ ತೈಮೂರ್‌ ಜೊತೆ ಬೆರೆಯುತ್ತಾಳೆ. ಆಟವಾಡುತ್ತಾಳೆ. ಯಾವ ಮಗು ತಾನೇ ತನ್ನ ಸೋದರ ಮಾವನ ಮನೆಯನ್ನು ಇಷ್ಟ ಪಡುವುದಿಲ್ಲ ಹೇಳಿ...?’ ಹೀಗೆ ಕೇಳುತ್ತಲೇ ಇನಾಯಾಳಿಗೆ ಕಾಲ್‌ ಮಾಡುವ ಸಮಯವಾಯಿತು ಎಂದು, ಸೋಹಾ ಅಲಿಖಾನ್‌ ಅಲ್ಲಿಂದ ಎದ್ದರು.

ಮುಂಬೈನ ಜೆ.ಡಬ್ಲು. ಮ್ಯಾರಿಯೇಟ್‌ ಹೋಟೆಲ್‌ನಲ್ಲಿ voot.kids ಆ್ಯಪ್‌ ಅರ್ಪಣೆಯ ಸಂದರ್ಭದಲ್ಲಿ ‘ಪ್ರಜಾವಾಣಿ’ ಜೊತೆಗೆ ಮಾತಿಗಿಳಿದು, ತಮ್ಮ ತಾಯ್ತನದ ಬಗ್ಗೆ ಹರಟಿದರು. ಮಕ್ಕಳ ಬಗೆಗಿನ ಮಾತಿಗೆ, ಕತೆಗೆ ಕೊನೆಯೇ ಇಲ್ಲ ಎಂಬ ಶರಾ ಸಹ ಬರೆದು ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT