ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನದ ಹಲವು ಪದರುಗಳು

ರಂಗಭೂಮಿ
Last Updated 6 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ತುಮಕೂರು ಶಿವಕುಮಾರ್‌ ಅವರು ನಿರ್ದೇಶಿಸಿ, ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ ಪ್ರಸ್ತುತ ಪಡಿಸಿದ ‘ಪದರುಗಳು’ ಸಾಮಾಜಿಕ ನಾಟಕವಾಗಿದ್ದು, ಇಂದಿನ ವಿದ್ಯಾವಂತರ ಸಂಸಾರಗಳಲ್ಲಿ ನಡೆಯುವ ತಲ್ಲಣಗಳ ಬಗ್ಗೆ ರೂಪಿತವಾಗಿದೆ. ನಾಟಕದಲ್ಲಿ ಪ್ರಮುಖವಾಗಿ ನಾಲ್ಕು ಪಾತ್ರಗಳಿವೆ. ಅವೇ ನಾಟಕದ ಆಧಾರ ಸ್ತಂಭಗಳು.

ಮೊದಲನೆಯದಾಗಿ ಕಾಣಿಸಿಕೊಳ್ಳು­ವುದು ಸ್ವಾಮಿಯ ಪಾತ್ರ. ಇವರು ಕಾನೂನು ವಿದ್ಯಾಭ್ಯಾಸದ ಜೊತೆಗೆ ಪತ್ರಿಕಾ ವರದಿಗಾರರಾಗಿರುತ್ತಾರೆ. ಸ್ವಾಸ್ಥ್ಯ, ಆರೋಗ್ಯವಂತ ಸಮಾಜದ ಬೆಳವಣಿಗೆಯತ್ತ ಮುಖಮಾಡಿರುವ ನೈತಿಕ ಮೌಲ್ಯಗಳ ಮುಖವಾಡ ಹೊತ್ತಿರುವ ಪಾತ್ರವಿದು.

ಪುಸ್ತಕ ಓದುತ್ತಾ ತೆರೆ ಮೇಲೆ ಕಾಣಿಸಿಕೊಳ್ಳುವ ಪಾತ್ರ ಮೂರ್ತಿ ಅವರದ್ದು. ಇವರು ಇಂದಿನ ಮಕ್ಕಳನ್ನು ನಾಳಿನ ಪ್ರಜೆಗಳನ್ನಾಗಿ ರೂಪಿಸುವ, ಶೈಕ್ಷಣಿಕವಾಗಿ, ಬೌದ್ಧಿಕವಾಗಿ ಸಮಾಜವನ್ನು ಕಟ್ಟುವ, ವಿದ್ಯಾರ್ಥಿ ಸಂಕುಲಕ್ಕೆ ಮಾರ್ಗದರ್ಶಕರಾಗಿ ನಿಲ್ಲುವಂಥ ಉಪನ್ಯಾಸಕ. ಆದರೆ ಅವರು ಅದನ್ನು ಎಷ್ಟರ ಮಟ್ಟಿಗೆ ಅರ್ಥೈಸಿಕೊಂಡಿದ್ದಾರೆ ಎಂಬುದೇ ಇವರ ಪಾತ್ರ.

ಮೂರ್ತಿ ಅವರ ಪತ್ನಿಯಾಗಿ ಉಷಾ ಎಂ.ಎ ಓದುತ್ತಿರುವವರು. ತಾನೂ ಪದವೀಧರೆ ಎಂಬುದೇ ಅವರಿಗೆ ಹೆಮ್ಮೆ. ಸ್ವಾಭಿಮಾನವನ್ನು ಸ್ವಲ್ಪ ಹೆಚ್ಚಾಗಿಯೇ ಮೈತುಂಬಿಕೊಂಡಿರುವ ಉಷಾ ಸ್ವತಂತ್ರವಾಗಿ ಬದುಕಬೇಕೆಂಬ ಛಲವಾದಿ. ನಂತರ ಬರುವ ಪಾತ್ರ ಸಾವಿತ್ರಿ. ಉಷಾಳ ತಂಗಿ. ಹೆಸರು ಮಾತ್ರ ಪುರಾಣದಲ್ಲಿ ಬರುವ ಸಾವಿತ್ರಿ. ಆದರೆ ಅಕ್ಕನ ಗಂಡನನ್ನೇ ಬುಟ್ಟಿಗೆ ಹಾಕಿಕೊಂಡಿರುತ್ತಾಳೆ. ಇವರ ನಡುವೆ ಒಂದು ಸೀನ್‌ನಲ್ಲಿ  ಇಂದಿನ ಸ್ವಾಮೀಜಿ ಮತ್ತು ಅವರ ಶಿಷ್ಯಂದಿರು ಬಂದು ಹೋಗುತ್ತಾರೆ. ಮಠದ ಬಗ್ಗೆ ವರದಿ ಮಾಡಿದ ಸ್ವಾಮಿಯನ್ನು ಮಠಕ್ಕೆ ಕರೆಸಿಕೊಂಡು ಹಣ ಮತ್ತು ಫಾರಿನ್‌ ಪ್ರವಾಸದ ಆಮಿಷ ಒಡ್ಡುವ ಸ್ವಾಮಿಗಳು, ತಮ್ಮ ಮಾತನ್ನು ಕೇಳದ ಸ್ವಾಮಿಗೆ ಚೆನ್ನಾಗಿ ಥಳಿಸಿ ಕಳುಹಿಸುತ್ತಾರೆ.

ದೀಪಾವಳಿ ಹಬ್ಬಕ್ಕೆಂದು ಉಷಾಳ ಊರಿಗೆ ತೆರಳಿದ ಮೂರ್ತಿ ಮತ್ತು ಉಷಾ ದಂಪತಿಯ ದಾಂಪತ್ಯ  ಅದೂವರೆಗೆ ಚೆನ್ನಾಗಿಯೇ ಇರುತ್ತದೆ. ಒಂದು ವಾರ ಊರಿನಲ್ಲಿ ಕಾಲ ಕಳೆದ ಮೂರ್ತಿಗೆ ತನ್ನ ಪತ್ನಿಯ ತಂಗಿ ಮೇಲೆ ಕಣ್ಣು ಬೀಳುತ್ತದೆ. ಆಕೆಯೂ (ಸಾವಿತ್ರಿ) ತನ್ನ ಗಂಡನನ್ನು ಮರೆತು ಮೂರ್ತಿಯೊಂದಿಗೆ ಸೇರುತ್ತಾಳೆ. ಇದನ್ನು ಕಣ್ಣಾರೆ ಕಂಡ ಉಷಾ ಏನೂ ತೋಚದಾಗುತ್ತಾಳೆ. ತನ್ನ ಗಂಡ ಮಾಡಿದ ತಪ್ಪಿನ ಬಗ್ಗೆ ತನಗೆ ಎಂದಾದರೂ ಹೇಳಬಹುದು, ತನ್ನ ತಪ್ಪನ್ನು ತಿದ್ದುಕೊಳ್ಳಬಹುದು ಎಂದು ಕಾಯುತ್ತಾಳೆ ಆದರೆ ಅವನು ಮಾಡಿದ ತಪ್ಪನ್ನೇ ಪದೇ ಪದೇ ಮಾಡುತ್ತಿರುತ್ತಾನೆ. ಉಷಾಳ ಸಾಂಸಾರಿಕ ಜೀವನದ ಮೇಲೆ ಇದು ಪರಿಣಾಮ ಬೀರುತ್ತಾ ಹೋಗುತ್ತದೆ. ಇಂತಹ ಸಂದರ್ಭದಲ್ಲಿ ಪರಿಚಯವಾಗುವ ಸ್ವಾಮಿಯನ್ನು ತನ್ನ ಗಂಡನಿಗೆ ಬುದ್ಧಿ ಕಲಿಸುವುದಕ್ಕಾಗಿ ಬಳಸಿಕೊಳ್ಳುತ್ತಾಳೆ. ಸ್ವಾಮಿ ಕೂಡ ಅವಳ ಜೊತೆ ಸರಸ ಸಲ್ಲಾಪದಲ್ಲಿ ತೊಡಗುತ್ತಾನೆ. ಇದು ಮೂರ್ತಿಗೆ ತಿಳಿಯುತ್ತದೆ. ತನ್ನ ಪತ್ನಿಯಲ್ಲಿ ಕ್ಷಮೆ ಕೇಳುತ್ತಾನೆ. ಆದರೆ ಕಾಲ ಮಿಂಚಿ ಹೋಗಿರುತ್ತದೆ.

ಉಷಾ ಸ್ವಾಭಿಮಾನದೊಂದಿಗೆ ತನ್ನ ನೆಲೆಯನ್ನು ಕಂಡುಕೊಳ್ಳುತ್ತಾಳೆ. ನಾಟಕದಲ್ಲಿ ಪ್ರತಿಯೊಂದು ಪಾತ್ರದ ನಿರ್ವಹಣೆ ಅಚ್ಚುಕಟ್ಟಾಗಿತ್ತು. ಸ್ವಾಮಿಯ ಪಾತ್ರದಲ್ಲಿ ಭರತ್‌ ಎಂ.ಜೆ. ಅವರದ್ದು ಔಚಿತ್ಯಪೂರ್ಣ ಅಭಿನಯ. ಮೂರ್ತಿ ಪಾತ್ರದಲ್ಲಿ ಪ್ರಸಾದ್‌ ಅವರು ಪಕ್ಕಾ ಉಪನ್ಯಾಸಕನಾಗಿ ಕಂಡರೂ ದೇಹಭಾಷೆಯನ್ನು ಇನ್ನೂ ಸುಧಾರಿಸಿಕೊಳ್ಳಬೇಕು. ಇನ್ನು ಉಷಾಳ ಪಾತ್ರದಲ್ಲಿ ಉಮಾ ಅವರು ಸ್ವಾಭಿಮಾನದ ಮೂರ್ತಿಯಾಗಿ  ಗಮನ ಸೆಳೆದಿದ್ದಾರೆ. ಸಾವಿತ್ರಿಯ ಪಾತ್ರದಲ್ಲಿ ಮುದ್ದಾಗಿ ಕಾಣುತ್ತಿದ್ದ ತಾರಾ ಮಂಜುನಾಥ್‌ ಅವರದ್ದು ಪಾತ್ರಕ್ಕೆ ತಕ್ಕ ಅಭಿನಯ. ಕೇವಲ ಒಂದು ಸನ್ನಿವೇಶದಲ್ಲಿ ಬಂದು ಹೋಗುವ ಸ್ವಾಮೀಜಿ ಪಾತ್ರದಲ್ಲಿ ಯೋಗೀಶ್‌ ಮತ್ತು ಶಿಷ್ಯಂದಿರ ಪಾತ್ರದಲ್ಲಿ ವೆಂಕಟೇಶ್‌ ಮತ್ತು ಸುರೇಶ್‌ ಅವರದ್ದು ನೆನಪಿನಲ್ಲಿರುವಂತಹ ಅಭಿನಯ.

ಕೆಲವು ಕಡೆ ರಂಗಪರಿಕರಗಳನ್ನು ಬಳಸಿಕೊಳ್ಳುವಲ್ಲಿ ಕಲಾವಿದರು ಸೋತಿದ್ದಾರೆ. ನಿರ್ದೇಶಕ ಶಿವಕುಮಾರ್‌  ನಾಟಕದಲ್ಲಿ  ಪ್ಲಾಷ್‌­ಬ್ಯಾಕ್‌ಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಸಂಗೀತ ಸಂಯೋ­ಜ­ಕ­­ರಾಗಿ ಯು.ಗೋವಿಂದೇಗೌಡರು ತಮ್ಮ ಪ್ರತಿಭೆಯನ್ನು ತೋರಿದರೆ, ರಂಗ­ಪರಿಕರಗಳ ತಯಾರಿಯನ್ನು ಚಂದ್ರಶೇಖರ ಬಹಳ ನಿಷ್ಠೆಯಿಂದ ಮಾಡಿದಂತಿತ್ತು. ಬೆಳಕಿನಲ್ಲಿ ಪ್ರಭಾಕರ್‌ ಬಾಬು ಅವರದ್ದು ಅನುಭವದ ಕೆಲಸ.  ಪಾತ್ರಗಳ ಭಾವಗಳನ್ನು ಅರಿತು ಹಿರಿಯ­ರಾದ ಆಲೆಮನೆ ಸುಂದರ­ಮೂರ್ತಿ­ ಮುಖವರ್ಣಿಕೆ­ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT