ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಗಡದ ಬಂಡೆಗಳು

ಸುತ್ತಾಣ
Last Updated 31 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಟ್ಟದ ಮೇಲೆ ರಣಹದ್ದುಗಳ ಹಾರಾಟ, ಮೇಲೆ ಕಾಣುವ ಕಲ್ಲು ಬಂಡೆಗಳ ನೋಟ, ಕುತೂಹಲ ಸೃಷ್ಟಿಸುವ ದೊಡ್ಡ ಗುಹೆಗಳು, ಸಾಲು ಸಾಲು ಮರಗಳಿಂದ ಬೀಸುವ ತಂಗಾಳಿ, ಸಪ್ತ ಋಷಿಗಳ ಬಂಡೆ, ಹಸಿರು ವನದಿಂದ ಕಂಗೊಳಿಸುವ ಪ್ರಾಕೃತಿಕ ಸೌಂದರ್ಯ. ಇದು ರಾಮದೇವರ ಬೆಟ್ಟದ ಮನಮೋಹಕ ನೋಟ.

ಬೆಂಗಳೂರಿನಿಂದ ಒಂದು ದಿನದ ಪ್ರವಾಸ ಹೊರಡುವವರಿಗೆ ರಾಮದೇವರ ಬೆಟ್ಟ ಹೇಳಿ ಮಾಡಿಸಿದ ತಾಣ. ಈ ಬೆಟ್ಟದಲ್ಲಿ ಶ್ರೀರಾಮನ ಭಕ್ತಿ ಪುಳಕದ ಜತೆಗೆ ನಿಸರ್ಗದ ರಮಣೀಯತೆಯನ್ನು ಕಣ್ತುಂಬಿಕೊಳ್ಳಬಹುದು. ವಾರಾಂತ್ಯ ಸರ್ಕಾರಿ ರಜೆ, ಹಬ್ಬದ ದಿನಗಳಲ್ಲಿ ಭಕ್ತರು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. 

ಹೋಗುವುದು ಹೀಗೆ...
ಬೆಂಗಳೂರಿನಿಂದ 55 ಕಿ.ಮೀ. ದೂರದ ರಾಮನಗರಕ್ಕೆ ಬರುವ ಮೊದಲೇ ಬಲಕ್ಕೆ ರಾಮದೇವರ ಬೆಟ್ಟದ ಮಹಾದ್ವಾರ ಕಾಣಿಸುತ್ತದೆ. ಅಲ್ಲಿಂದ 3 ಕಿ.ಮೀ. ದೂರ ಕ್ರಮಿಸಿದರೆ ಈ ಬೆಟ್ಟ ಸಿಗುತ್ತದೆ. ಬಸ್ಸಿನಲ್ಲಿ ಬರುವವರು ರಾಮನಗರಕ್ಕೆ ಬಂದು, ಅಲ್ಲಿಂದ  ಆಟೊಗೆ ಹೋಗಬೇಕು. ಉತ್ತಮ ರಸ್ತೆ ಇದ್ದು, ಸಕಾಲಕ್ಕೆ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಸಿಗುತ್ತವೆ. ಬೆಟ್ಟಕ್ಕೆ ಸ್ವಂತ ವಾಹನದಲ್ಲಿ ಹೋದರೆ 90 ನಿಮಿಷಗಳ ಪ್ರಯಾಣ. ಬಸ್ಸಿನಲ್ಲಿ ಆದರೆ 150 ನಿಮಿಷಗಳ ಹಾದಿ.  

ರಾಮದೇವರ ಬೆಟ್ಟವು ಏಕಶಿಲಾ ಬೆಟ್ಟ. ಅದು ಹಲವು ವೈಶಿಷ್ಟ್ಯಗಳಿಂದ ಭಕ್ತರು ಮತ್ತು ಪ್ರವಾಸಿಗರನ್ನು  ಆಕರ್ಷಿಸುತ್ತಿದೆ. ಬೆಟ್ಟ ಹತ್ತುವ ಮೊದಲೇ ಕಾಣುವ ರಣಹದ್ದುಗಳು, ಬೆಟ್ಟ ಹತ್ತುವವರ ಆಯಾಸವನ್ನು ಶಮನ ಮಾಡಲು ಸಾಲು ಮರಗಳಿಂದ ಬೀಸುವ ಗಾಳಿ ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ. ಅಲ್ಲಲ್ಲಿ ಕಾಣುವ ಗುಹೆಗಳು ಒಳಹೋಗುವ ಕುತೂಹಲ ಮೂಡಿಸುತ್ತವೆ.

ಪ್ರತೀತಿ

ಸುಗ್ರೀವನು ಈ ದಾರಿಯಲ್ಲಿ ರಾಮನ ಮೂರ್ತಿ ತೆಗೆದುಕೊಂಡು ಹೋಗುತ್ತಿದ್ದಾಗ ‘ಸುಕಾಶುರ’ ಎಂಬ ರಾಕ್ಷಸ ಸುಗ್ರೀವನನ್ನು ತಡೆಯಲು ಬಂದ. ಅವನ ಜತೆ ಕಾದಾಡಲು ಮೂರ್ತಿಯನ್ನು ಬೆಟ್ಟದ ಮೇಲಿಟ್ಟ. ಆಮೇಲೆ ಆತನನ್ನು ಸೋಲಿಸಿ, ಮತ್ತೆ ಮೂರ್ತಿಯನ್ನು ಎತ್ತಿಕೊಳ್ಳಲು ಹೋದಾಗ ಆ ಮೂರ್ತಿ ಅಲ್ಲಿಂದ ಕದಲಲಿಲ್ಲ. ‘ಈ ಸ್ಥಳ ತುಂಬಾ ಪ್ರಶಾಂತವಾಗಿದೆ... ನಾನು ಇಲ್ಲಿಯೇ ನೆಲೆಸುತ್ತೇನೆ’ ಎಂಬ ಅಶರೀರವಾಣಿಯೊಂದು ಕೇಳಿಬಂತು.

ಇದರಿಂದ ಸುಗ್ರೀವನು ರಾಮನ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಿದ ಎಂಬ ಪ್ರತೀತಿ ಇದೆ. ಅಂದಿನಿಂದ ರಾಮನು ಪಟ್ಟಾಭಿರಾಮನಾಗಿ ಈ ಬೆಟ್ಟದಲ್ಲಿ ನೆಲೆಸಿದ್ದಾನೆ ಎಂಬುದು ಜನರ ನಂಬಿಕೆ. ಇದು ಮಾಗಡಿ ಕೆಂಪೇಗೌಡನ ಕಾಲದಲ್ಲಿ ನಿರ್ಮಾಣಗೊಂಡ ಪುರಾತನ ದೇವಾಲಯ.

ಬೆಟ್ಟದ ಮೇಲಿನ ಪುಟ್ಟ ಗರ್ಭಗುಡಿಯಲ್ಲಿ ಶ್ರೀರಾಮ  ನೆಲೆಸಿದ್ದಾನೆ. ಅವನ ಎಡತೊಡೆಯ ಮೇಲೆ ಸೀತಾದೇವಿ, ಬಲಭಾಗದಲ್ಲಿ ಲಕ್ಷ್ಮಣ ಮತ್ತು ಪಾದದ ಬಳಿ ಆಂಜನೇಯನ ವಿಗ್ರಹಗಳಿದ್ದು, ನೋಡುಗರ ಕಣ್ಮನ ಸೆಳೆಯುತ್ತವೆ. ಒಂದು ದಿನ ಏಳು ಋಷಿಗಳು ಕಲ್ಯಾಣಿಯಲ್ಲಿ ಸ್ನಾನಮಾಡಿ ಈ ಬೆಟ್ಟದ ಮೇಲೆ ತಪಸ್ಸು ಮಾಡಿದ್ದರಂತೆ. ಈ ಬೆಟ್ಟದ ಮೇಲೆ ಸಿಗುವ ಪ್ರಶಾಂತವಾದ ಗಾಳಿ, ಪ್ರಕೃತಿ ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ನೆಲೆಸಿದ್ದಾರೆ ಎಂಬ ನಂಬಿಕೆಯೂ ಜನರಲ್ಲಿ ಇದೆ. ಆದಕ್ಕೆ ಸಾಕ್ಷಿಯಾಗಿ ಬೆಟ್ಟದ ಮೇಲೆ ನಿಂತಿರುವ ಸಪ್ತ ಋಷಿಗಳ ಬಂಡೆಗಳು ನಿಮ್ಮನ್ನು ಆಕರ್ಷಿಸುತ್ತವೆ.

ರಾಮಕಲ್ಯಾಣಿ
ರಾಮ–ಸೀತೆ ವನವಾಸದಲ್ಲಿರುವಾಗ ಬಿಸಿಲಿನಿಂದ ಬಾಯಾರಿದ ಸೀತೆಗೆ ಬೆಟ್ಟದ ಮೇಲೆ ಎಲ್ಲೂ ನೀರು ಸಿಗಲಿಲ್ಲ. ಆಗ ರಾಮ ತನ್ನ ಬಾಣದಿಂದ ಬಂಡೆಯನ್ನು ಸೀಳಿ ಕಲ್ಯಾಣಿ ಸೃಷ್ಟಿಸಿ, ನೀರು ಕುಡಿಸಿದ. ಇದು ಮುಂದೆ ರಾಮ ಕಲ್ಯಾಣಿ ಎಂದೇ ಪ್ರಸಿದ್ಧಿಯಾಯಿತು. ಸದಾಕಾಲ ನೀರಿನಿಂದ ತುಂಬಿರುವ ಈ ಕಲ್ಯಾಣಿಯ ಆಳ ಇದೂವರೆಗೂ ತಿಳಿದುಬಂದಿಲ್ಲ. ಅಲ್ಲದೆ ಬೆಟ್ಟದ ಸುತ್ತಲೂ ಅಷ್ಟ ತೀರ್ಥ ಕೊಳಗಳಿವೆ.

ರಣಹದ್ದುಗಳ ಪಕ್ಷಿಧಾಮ

ಬೆಟ್ಟದ ಸುತ್ತಲಿನ 20 ಚದರ ಕಿ.ಮೀ. ವಿಸ್ತೀರ್ಣದಲ್ಲಿ ರಣಹದ್ದು ರಕ್ಷಿತ ತಾಣವಿದೆ. ಉದ್ದ ಕೊಕ್ಕಿನ ವಿಶಿಷ್ಟ ಪ್ರಭೇದದ ಒಂಬತ್ತು ರಣಹದ್ದುಗಳು ಈ ಬೆಟ್ಟದಲ್ಲಿರುವುದು ಬೆಟ್ಟದ ಪ್ರಸಿದ್ಧಿಗೆ ಮತ್ತೊಂದು ಕಾರಣ. ‘ಇಲ್ಲಿ ಇನ್ನೂ ಎರಡು ರಣಹದ್ದುಗಳ ಸಂತಾನೋತ್ಪತ್ತಿ ಪ್ರಕ್ರಿಯೆ ನಡೆದಿದ್ದು, ಮುಂದಿನ ದಿನಗಳಲ್ಲಿ ಹದ್ದುಗಳ ಸಂತತಿ ಹೆಚ್ಚಲಿವೆ’ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು. ಬೆಳಗಿನ ಜಾವ ಬೆಟ್ಟಕ್ಕೆ ಬರುವವರು ರಣಹದ್ದುಗಳನ್ನು ನೋಡಬಹುದು.

ಶೂಟಿಂಗ್ ತಾಣ
ರಾಮದೇವರ ಬೆಟ್ಟ ಧಾರ್ಮಿಕ ಕೇಂದ್ರದ ಜತೆಗೆ ಸಿನಿಮಾದವರನ್ನು ಹೆಚ್ಚು ಆಕರ್ಷಿಸುವ ತಾಣ. ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯನ್ನೆ ಸೃಷ್ಟಿಸಿದ ‘ಶೋಲೆ’ ಸಿನಿಮಾದ ಬಹುಭಾಗ ಈ ಬೆಟ್ಟದಲ್ಲಿಯೇ ಚಿತ್ರೀಕರಣಗೊಂಡಿದೆ. ಈ ಬೆಟ್ಟವು ಸಿನಿಮಾ ಚಿತ್ರೀಕರಣಕ್ಕೆ ಪೂರಕವಾದ ಪ್ರಾಕೃತಿಕ ಸೌಂದರ್ಯದಿಂದ ಕೂಡಿದೆ. ಕನ್ನಡ, ತಮಿಳು, ಹಿಂದಿ ಸೇರಿದಂತೆ ಹಲವಾರು ಭಾಷೆಯ ಸಿನಿಮಾಗಳು ಚಿತ್ರೀಕರಣಗೊಂಡ ಸ್ಥಳವಿದು. ಇಂದಿಗೂ ಈ ಬೆಟ್ಟವನ್ನು ಜನರು ‘ರಾಮ್‌ ಗಡ್’ ಎಂದೇ ಕರೆಯುತ್ತಾರೆ.

ಪ್ರವಾಸಿಗರು ಮತ್ತು ಭಕ್ತರಿಗೆ ಬೆಟ್ಟದ ಮೇಲೆ ಕುಡಿಯುವ ನೀರು ಬಿಟ್ಟು ಬೇರೇನೂ ಸಿಗುವುದಿಲ್ಲ. ರಾತ್ರಿ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆಯಿಲ್ಲ. ಊಟ–ತಿಂಡಿ ಮಾಡಿಕೊಂಡು ಬೆಟ್ಟ ಹತ್ತಿದರೆ, ನಿಮಗೆ ಮತ್ತಷ್ಟು ಉತ್ಸಾಹವಿರುತ್ತದೆ. ಕುರುಕಲು ತಿಂಡಿ ಮತ್ತು ತಂಪು ಪಾನಿೀಯವನ್ನು ಹೊರಗಿನಿಂದ ತಂದರೆ ಉತ್ತಮ. ಪ್ರತಿದಿನ ಬೆಳಿಗ್ಗೆ 8ರಿಂದ ಸಂಜೆ 5ರವರೆಗೂ ಬೆಟ್ಟ ಹತ್ತಬಹುದು. ಬೆಳಿಗ್ಗೆ ಬೇಗ ಹೋದರೆ ರಣಹದ್ದುಗಳನ್ನು ನೋಡಬಹುದು.

ಶ್ರೀರಾಮ ಜಯಂತಿ, ಹನುಮ ಜಯಂತಿ, ಮತ್ತು ಹಬ್ಬದ ದಿನಗಳಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಮಾಡಲಾಗುವುದು. ಶ್ರಾವಣ ಶನಿವಾರದ ನಾಲ್ಕು ವಾರವೂ ಇಲ್ಲಿ ಜಾತ್ರೆ ನಡೆಯುತ್ತದೆ. ಈ ಬೆಟ್ಟಕ್ಕೆ ಸುತ್ತಲಮುತ್ತಲಿನ ಗ್ರಾಮದವರು ಪ್ರತಿದಿನ ಚಾರಣಕ್ಕಾಗಿ ಬರುತ್ತಾರೆ. 
–ಸ್ವಾಮಿ ಕೆ.ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT