ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಗೋರಿ ಗ್ರೂಪ್

ಮೆಟ್ರೊ ಪ್ರತಿಕ್ರಿಯೆ
Last Updated 17 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಮೆಟ್ರೊದಲ್ಲಿ ಜುಲೈ 8ರಂದು ಪ್ರಕಟವಾಗಿದ್ದ ‘ಬೇಕಿದೆ ಬಯಲು’ ಲೇಖನ ಓದಿದೆ. ಆಗ ನನಗೆ ನನ್ನ ಬಾಲ್ಯ ನೆನಪಾಯಿತು.
ನಾನು ಹುಟ್ಟಿ ಬೆಳೆದದ್ದು ಹಸಿರಿನ ತವರು ಪುಟ್ಟ ಊರು ಆಗುಂಬೆಯಲ್ಲಿ. ಕಣ್ಣು ಹಾಯಿಸಿದಷ್ಟೂ ಕಾಣುವ ಹಸಿರು ವನಸಿರಿ. ಬೆಟ್ಟಗುಡ್ಡದ ಜೊತೆಗೆ ಮನ ತಣಿಸುವಷ್ಟು ಕುಣಿದಾಡಲು ದೊಡ್ಡ ದೊಡ್ಡ ಮೈದಾನಗಳು. ಪುಟಾಣಿಗಳನ್ನು ಆಟವಾಡಲು ಅವೆಲ್ಲಾ ಪ್ರೇರೇಪಿಸುತ್ತಿದ್ದವು.

ನನ್ನ ‘ವಾನರಸೇನೆಗೆ’ ನಾನೇ ಲೀಡರ್‌. ಕಾರಣ ಲಗೋರಿ, ಚಿನ್ನಿದಾಂಡು. ಗೋಲಿ ಆಟದಲ್ಲಿ ನಾನು ಭಯಂಕರ ಜೋರು. ಲಗೋರಿ ಕಲ್ಲು ಜೋಡಿಸಿ ಅದನ್ನು ಬೀಳಿಸುವ ಸರದಿ ಬಂದಾಗ ನನ್ನ ಗೆಳೆಯರ ಗುಂಪು ಚೆಂಡನ್ನು ಮೊದಲು ಕೊಡುತ್ತಿದ್ದುದೇ ನನ್ನ ಕೈಗೆ.  ಸಾಮಾನ್ಯವಾಗಿ  ನನ್ನ ‘ಗುರಿ’ ತಪ್ಪುತ್ತಿರಲಿಲ್ಲ. ಚಿನ್ನಿದಾಂಡು ಆಡುವಾಗ ‘ಡಬಲ್ ಗಿಲ್ಲಿ’ ಎತ್ತದೇ ಬಿಡುತ್ತಿರಲಿಲ್ಲ.

ನನ್ನ ಬಾಲ್ಯವನ್ನು ನಾನು ಹಕ್ಕಿಯಂತೆ ಹಾರುತ್ತಾ, ಕುಣಿಯುತ್ತಾ ಕಳೆದೆ. ಆದರೆ, ಪಟ್ಟಣ ಪ್ರದೇಶದಲ್ಲಿ ಯಾಂತ್ರಿಕವಾಗಿ ಬದುಕುತ್ತಿರುವ ನನ್ನ ಮಕ್ಕಳು ಮಾತ್ರ ಈ ರೀತಿಯ ದೇಸಿ ಆಟಗಳಿಂದ ವಂಚಿತರಾದರಲ್ಲ ಎಂಬ ಕೊರಗು ಸದಾ ನನ್ನನ್ನು ಕಾಡುತ್ತಲೇ ಇತ್ತು. ರಜೆ ಬಂದಾಗ ಬೆಂಗಳೂರಿನಿಂದ ತಾಯಿಯ ಮನೆಗೆ ಮಕ್ಕಳೊಂದಿಗೆ ಹೋದಾಗಲೆಲ್ಲ ಅಕ್ಕಪಕ್ಕದ ಪುಟಾಣಿಗಳನ್ನು ಸೇರಿಸಿಕೊಂಡು ನನ್ನ ಮಕ್ಕಳೊಂದಿಗೆ ಲಗೋರಿ, ಗೋಲಿ, ಚಿನ್ನಿದಾಂಡು ಆಟಗಳನ್ನು ಆಡುತ್ತಿದ್ದೆ. ಈ ಆಟಗಳನ್ನು ಆಡುವಾಗಲೆಲ್ಲ ನನ್ನ ಮಕ್ಕಳಲ್ಲಿ ಏನೋ ಒಂದು ರೀತಿಯ ಸಂತಸ. ಆದರೆ, ರಜೆ ಮುಗಿದು ಬೆಂಗಳೂರಿಗೆ ಮತ್ತೆ ಬಂದಾಗ ಮಕ್ಕಳು ಮಂಕಾಗಿ ಬಿಡುತ್ತಿದ್ದರು.

‘ಅಮ್ಮ, ಅಜ್ಜಿಯ ಊರಲ್ಲಿ ಆಟವಾಡಲು ದೊಡ್ಡ ದೊಡ್ಡ ಮೈದಾನಗಳಿವೆ. ಆದರೆ ಇಲ್ಲಿ ಏನೂ ಇಲ್ಲ. ಇಲ್ಲಿ ತುಂಬಾ ಬೇಜಾರು’ ಎಂದು ವಿಡಿಯೋ ಗೇಮ್‌ ಎತ್ತಿಕೊಂಡಾಗ ನನಗೆ ಥಟ್ಟನೆ ನೆನಪಾಗಿದ್ದು ‘ಲಗೋರಿ’ ಆಟ. ಅಕ್ಕಪಕ್ಕದ ಮಕ್ಕಳನ್ನೆಲ್ಲ ಸೇರಿಸಿ, ಲಗೋರಿ ಕಲ್ಲುಗಳನ್ನು ಜೋಡಿಸಿ, ಎಲ್ಲ ಮಕ್ಕಳಿಗೂ ಲಗೋರಿ ಆಡುವುದು ಹೇಗೆ ಎಂದು ಹೇಳಿಕೊಟ್ಟೆ. ಮಕ್ಕಳು ಮನದ ಬೇಸರ ಮರೆತರು. ಖುಷಿಯಿಂದ ಮನೆಯ ಮುಂದೆ ‘ಲಗೋರಿ’ ಆಡಲು ಶುರು ಮಾಡಿದರು. ಅವರ ಸಂಭ್ರಮ, ಕೇಕೆ, ಸಣ್ಣಪುಟ್ಟ ಜಗಳಗಳು ಬೇಸರವನ್ನು ಮರೆಸಿದವು. ಮಕ್ಕಳು ಮನೆಯಿಂದ ನೀರು ತಂದು ಲಗೋರಿ ಕಲ್ಲುಗಳನ್ನು ಫಳಫಳ ಹೊಳೆವಂತೆ ತೊಳೆಯುತ್ತಿದ್ದ ದೃಶ್ಯ ಎಂದೂ ಮರೆಯುವಂತಿಲ್ಲ.

ಪಟ್ಟಣ ಪ್ರದೇಶದಲ್ಲಿ ಮೈದಾನಗಳು ಮಾಯವಾಗುತ್ತಿವೆ ನಿಜ. ಅದಕ್ಕೆ ಹಲವಾರು ಕಾರಣಗಳಿರಬಹುದು. ಆದರೆ, ಮಕ್ಕಳನ್ನು ಮನೆಯಲ್ಲೇ ಆಟವಾಡಿ ಎಂದು ಕಡಿವಾಣ ಹಾಕುವ ಬದಲು ಪೋಷಕರಾದ ನಾವು ‘ಹಳ್ಳಿಯ ಆಟ’ ಗಳನ್ನು ಆಡಲು ಅವಕಾಶ ಎಲ್ಲಿದೆ ಎಂದು ಪತ್ತೆ ಮಾಡಬೇಕು. ಅಲ್ಲಿ ಆಟವಾಡಲು ಮಕ್ಕಳಿಗೆ ಅನುವು ಮಾಡಿಕೊಟ್ಟಲ್ಲಿ ಅವರು ಇತರ ಮಕ್ಕಳೊಂದಿಗೆ ಬೆರೆಯಲು ಸಹಕಾರಿಯಾಗುವುದರೊಂದಿಗೆ ಆರೋಗ್ಯ ಉತ್ತಮವಾಗುತ್ತದೆ. ಮನಸ್ಸೂ ಉಲ್ಲಾಸಗೊಳ್ಳುತ್ತದೆ. ಮಕ್ಕಳ ಸಂತೋಷಕ್ಕಾಗಿ ನಾವು ಸ್ವಲ್ಪ ಹೆಚ್ಚು ಶ್ರಮ ಪಡಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT