ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೇಶ್ವರದ ನೀಲು ಅಜ್ಜಿಗೆ ‘ನೀಲು ನಿಲಯ’ ಹಸ್ತಾಂತರ

ಕನಸಿನ ಸೂರಿಗೆ ಹೆಗಲಾಗಿದ್ದ ಗ್ರಾಮ ಪಂಚಾಯಿತಿಯ ಸಮಾನ ಮನಸ್ಕರ ತಂಡ
Last Updated 6 ಏಪ್ರಿಲ್ 2023, 6:21 IST
ಅಕ್ಷರ ಗಾತ್ರ

ಕುಂದಾಪುರ: ಕೋಟೇಶ್ವರದ ಮಠದಬೆಟ್ಟಿನಲ್ಲಿ ಶಿಥಿಲವಾದ ಗುಡಿಸಲಿನಲ್ಲಿ ವಾಸಿಸುತ್ತಿದ್ದ ನೀಲು ಅಜ್ಜಿಯ ಕನಸಿನ ಸೂರಿಗೆ ಹೆಗಲಾಗಿದ್ದ ಸಮಾನ ಮನಸ್ಕರ ತಂಡದ ಶ್ರಮದಿಂದ ನಿರ್ಮಾಣವಾದ ‘ನೀಲು ನಿಲಯ’ದ ಹಸ್ತಾಂತರ ಕಾರ್ಯಕ್ರಮ ಬುಧವಾರ ನಡೆಯಿತು.

ಹಲವು ವರ್ಷಗಳಿಂದ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿನ ಧಾರ್ಮಿಕ ಕಾರ್ಯಕ್ಕೆ ನುಕ್ಕೆ ಸೊಪ್ಪು ಸಂಗ್ರಹಿಸಿ ನೀಡುವ ಕಾಯಕ ಮಾಡುತ್ತಿರುವ ಪರಿಶಿಷ್ಟ ಜಾತಿಯ ವಯೋವೃದ್ಧೆ ನೀಲು ಅಜ್ಜಿಗೆ ಇರಲು ಸರಿಯಾದ ಸೂರು ಇರಲಿಲ್ಲ. ಕೋಟೇಶ್ವರ ಗ್ರಾಮ ಪಂಚಾಯಿತಿಯ ದಲಿತರ ಕುಂದು ಕೊರತೆ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿತ್ತು.

ಅಜ್ಜಿಗೆ ಮನೆ ನೀಡಬೇಕು ಎನ್ನುವ ಆಶಯಕ್ಕೆ, ಅಜ್ಜಿ ವಾಸ್ತವ್ಯ ಇದ್ದ ಜಾಗದಲ್ಲಿನ ದಾಖಲೆ ಪತ್ರಗಳು ಅಡ್ಡಿಯಾಗಿದ್ದವು. ಸಮಸ್ಯೆಯನ್ನು ಮನಗಂಡ ಗ್ರಾಮ ಪಂಚಾಯಿತಿ, ಮನೆ ರಿಪೇರಿಗಾಗಿ ₹15 ಸಾವಿರ ತುರ್ತು ಅನುದಾನ ನೀಡಿತ್ತು. ಅಜ್ಜಿಯ ಮನೆಯನ್ನು ಸಂಪೂರ್ಣವಾಗಿ ನಿರ್ಮಿಸಬೇಕು ಎನ್ನುವ ಸಂಕಲ್ಪಕ್ಕೆ ಗ್ರಾ.ಪಂ. ಅಧ್ಯಕ್ಷ ಕೃಷ್ಣ ಗೊಲ್ಲ ಹಾಗೂ ಪಿಡಿಒ ಮಾರ್ಗದರ್ಶನದಲ್ಲಿ ಮನೆ ಕಟ್ಟುವ ಅಭಿಯಾನಕ್ಕೆ ಮುಂದಾದವರು ಗ್ರಾಮ ಪಂ‌ಚಾಯಿತಿ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಲೋಕೇಶ್ ಅಂಕದಕಟ್ಟೆ. ಅಜ್ಜಿಯ ಮನೆ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಹೊತ್ತು ಸಮಾನ ಮನಸ್ಕ ದಾನಿಗಳ ಸಹಕಾರದೊಂದಿಗೆ ನೀಲು ಅಜ್ಜಿಗೆ ಸೂರು ನಿರ್ಮಿಸಿ ಕೊಟ್ಟಿದ್ದಾರೆ.

ಬೀಳುವ ಸ್ಥಿತಿಯಲ್ಲಿದ್ದ ಗುಡಿಸಲು: ಗೆದ್ದಲು ಹಿಡಿದ ಹಳೆಯ ಮಣ್ಣಿನ ಗೋಡೆ, ಹಳೆಯ ಟಾರ್ಪಾಲಿನ ಚಾವಣಿಯ ಹೊದಿಕೆ, ಆಧಾರವಾಗಿ ನಿಲ್ಲಿಸಿದ ಮರದ ಗೆಲ್ಲಿನ ಕಂಬಗಳು, ಅಜ್ಜಿಯ ಮನೆಯ‌ ನೈಜ ಸ್ಥಿತಿಯನ್ನು ಸಾರುತ್ತಿತ್ತು.

ಇಳಿವಯಸ್ಸಿನಲ್ಲಿ ಒಂಟಿಯಾಗಿ ದುಸ್ತರ ಬದುಕು ನಡೆಸುತ್ತಿದ್ದ ನೀಲು ಅಜ್ಜಿಗೆ ಆಸರೆಯಾದ ಗ್ರಾಮ ಪಂಚಾಯಿತಿ, ದಾನಿಗಳ ಸಹಕಾರದಲ್ಲಿ ಸುಸಜ್ಜಿತ ಮನೆ ನಿರ್ಮಿಸಿರುವ ಕುರಿತು ಸಾರ್ವಜನಿಕರಲ್ಲಿ ಮೆಚ್ಚುಗೆ ಇದೆ. ಎರಡೂವರೆ ತಿಂಗಳಲ್ಲೇ ಸಿದ್ಧಗೊಂಡಿರುವ ನೀಲು ಅಜ್ಜಿಯ ಮನೆ ನಿರ್ಮಾಣಕ್ಕೆ ಕೋಟಿಲಿಂಗೇಶ್ವರ ದೇವಸ್ಥಾನದವರು ಸಹ ಸಹಕಾರ ನೀಡಿದ್ದಾರೆ.

ಬುಧವಾರ ವಿಶ್ವೇಶ್ವರ ಉಡುಪ ಪೂಜಾ ವಿಧಿ ನೆರವೇರಿಸಿ‌ ಗೃಹಪ್ರವೇಶ ನೆರವೇರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ ಗೊಲ್ಲ, ಉಪಾಧ್ಯಕ್ಷೆ ರಾಗಿಣಿ ದೇವಾಡಿಗ, ಸದಸ್ಯರಾದ ಲೋಕೇಶ್ ಅಂಕದಕಟ್ಟೆ, ನಾಗರಾಜ ಎಂ. ಕಾಂಚನ್, ರಾಘವೇಂದ್ರ ಪೂಜಾರಿ, ರಾಜು ಮರಕಾಲ, ಉದಯ ನಾಯಕ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯ್ಕ್, ಮೂಡುಗಿಳಿಯಾರು ಜನಸೇವಾ ಟ್ರಸ್ಟ್‌ ಸಂಚಾಲಕ ವಸಂತ ಗಿಳಿಯಾರ್, ಉದ್ಯಮಿಗಳಾದ ಮಹೇಂದ್ರ ಶೆಟ್ಟಿ, ಸುರೇಶ್ ಶೆಟ್ಟಿ, ಸಮಾಜ ಸೇವಕ ದಿನೇಶ್ ಬಾಂಧವ್ಯ, ಸ್ಥಳೀಯರಾದ ಸುನಿಲ್ ದಫೇದಾರ್, ರವಿ ಕಾಗೇರಿ, ಕೋಟೇಶ್ವರ ಎಸ್‌.ಎಲ್‌.ಆರ್.ಎಂ ಘಟಕದ ಮೇಲ್ವಿಚಾರಕಿ ಅನ್ನಪೂರ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT