ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಬ್ಜ ಗಿಡದ ಅಗಾಧ ಅಂದ

Last Updated 29 ಅಕ್ಟೋಬರ್ 2020, 1:30 IST
ಅಕ್ಷರ ಗಾತ್ರ

ದೊಡ್ಡ ಗಿಡದಲ್ಲಿ ಬೆಳೆಯುವ ಕಿತ್ತಳೆ ಅಥವಾ ನಿಂಬೆ ಹಣ್ಣುಗಳು ಬಾಲ್ಕನಿಯಲ್ಲಿಟ್ಟ ಪುಟ್ಟ ಕುಂಡದಲ್ಲಿನ ಗಿಡದಲ್ಲಿ ಬೆಳೆದರೆ ಹೇಗಿರುತ್ತದೆ ಹೇಳಿ.. ಕಣ್ಣಿಗೂ ಮುದ, ಬಾಯಿಗೂ ರುಚಿ. ಹಾಗೆಯೇ ತೋಟದಂಚಿನಲ್ಲಿ ಬೆಳೆಯುವ ಪೈಕಾಸ್‌ ಗಿಡ ಮನೆಯೊಳಗೇ ಇಟ್ಟ ಕುಂಡದಲ್ಲಿ ಹಸಿರು ಚೆಲ್ಲಿದರೆ ಅದರ ಸೊಬಗೇ ಬೇರೆ. ಈ ಕುಬ್ಜ ಗಿಡಗಳು ಅಥವಾ ಬೋನ್ಸಾಯ್‌ ಗಿಡಗಳು ಮನೆಯಂಗಳಕ್ಕೆ ಮಾತ್ರವಲ್ಲ, ಬಾಲ್ಕನಿ, ಮನೆಯೊಳಗೆ ಮಲಗುವ ಕೊಠಡಿಯ ಅಂದಕ್ಕೂ ಇನ್ನಷ್ಟು ಮೆರುಗು ನೀಡುತ್ತವೆ. ಮನಸ್ಸಿಗೂ ಉಲ್ಲಾಸ ತುಂಬುತ್ತವೆ. ಮನೆ ಮುಂದೆ ದೊಡ್ಡ ಗಿಡಮರಗಳನ್ನು ಬೆಳೆಸಲು ಅಸಾಧ್ಯ ಎನಿಸುವವರಿಗೆ ಬೋನ್ಸಾಯ್‌ ಗಿಡಗಳು ಹೇಳಿ ಮಾಡಿಸಿದ್ದು.

ಏನಿದು ಬೋನ್ಸಾಯ್‌?

ಚೀನೀ ಭಾಷೆಯ ಬೋನ್‌ ಮತ್ತು ಸಾಯ್‌ ಶಬ್ದಗಳಿಂದ ಉಗಮವಾದದ್ದು ಬೋನ್ಸಾಯ್‌. ಮುಂದೆ ಬೋನ್ಸಾಯ್‌ ಕಲೆಯನ್ನು ಬೆಳೆಸಿದವರು ಜಪಾನಿಯರು. ಬೋನ್ಸಾಯ್‌ ಎಂದರೆ ತಟ್ಟೆ (ಟ್ರೇ)ಯಲ್ಲಿ ಬೆಳೆಸಿದ್ದು ಎಂದು ಅರ್ಥ.

‘ಬೋನ್ಸಾಯ್‌ ಪದ್ಧತಿಯಲ್ಲಿ ಮರದ ಜಾತಿಯ ಎಲ್ಲ ಸಸ್ಯಗಳನ್ನೂ ಬೆಳೆಸಬಹುದು. ಎತ್ತರಕ್ಕೆ ಬೆಳೆಯಲು ಬಿಡುವಂತಿಲ್ಲ. ಆಗಾಗ ಕತ್ತರಿಸುತ್ತಿರಬೇಕಾಗುತ್ತದೆ. ಆಲ, ಪೈನ್‌, ಪೈಕಾಸ್‌ ಜಾತಿಯ ಮರಗಳು, ಕ್ರಿಸ್‌ಮಸ್‌ ಟ್ರೀ ಮತ್ತು ಸಂಪಿಗೆ... ನಿಂಬೆ ಮತ್ತಿತರ ಹಣ್ಣಿನ ಜಾತಿಯ ಗಿಡಗಳನ್ನು ಈ ಪದ್ಧತಿಯಲ್ಲಿ ಬೆಳೆಸಬಹುದು’ ಎನ್ನುತ್ತಾರೆ ಲಾಲ್‌ಬಾಗ್‌ನ ತೋಟಗಾರಿಕಾ ಇಲಾಖೆ (ನರ್ಸರಿ ವಿಭಾಗ) ಉಪನಿರ್ದೇಶಕ ಚಂದ್ರಶೇಖರ್‌.

‘ಬೋನ್ಸಾಯ್‌ ಮೇಲೆ ಹಲವಾರು ನಂಬಿಕೆಗಳೂ ಇವೆ. ಅದು ಅವರವರಿಗೆ ಬಿಟ್ಟದ್ದು. ಆದರೆ, ಮನೆಯ ಹೊರಗೆ ಬೆಳೆಸಲು ಏನೂ ಅಡ್ಡಿ ಇಲ್ಲವಲ್ಲ. ನಾನು ಸುಮಾರು 3– 4 ವರ್ಷಗಳಿಂದ ಮನೆಯಲ್ಲಿ ಬೆಳೆಸುತ್ತಿದ್ದೇನೆ. ಎಲ್ಲವೂ ಚೆನ್ನಾಗಿಯೇ ಇವೆ’ ಎಂದು ಖುಷಿ ಹಂಚಿಕೊಂಡರು ಅವರು.

ಗಿಡಗಳ ಆಯ್ಕೆಯೂ ಉತ್ತಮವಾಗಿರಬೇಕು. ನರ್ಸರಿಯಲ್ಲಿ ಬೋನ್ಸಾಯ್‌ಗಾಗಿಯೇ ಬೆಳೆಸಿದ ಸಸಿಗಳನ್ನು ಒಯ್ದು ನೆಡಬಹುದು. ಸಸ್ಯಗಳ ಬಗ್ಗೆ ಪರಿಣತಿ ಇದ್ದರೆ ಬೆಟ್ಟ, ಗುಡ್ಡಗಳಿಂದ ಸಸಿಗಳನ್ನು ಹುಡುಕಿ ತಂದು ನೆಡಬಹುದು. ಇದರಲ್ಲಿ ತಾಯಿ ಬೇರನ್ನು ಕತ್ತರಿಸಿ ಉಳಿದ ಬೇರುಗಳನ್ನು ಹಾಗೆಯೇ ಬಿಡಬೇಕು. ಆಗ ಗಿಡ ಎತ್ತರಕ್ಕೆ ಬೆಳೆಯದೇ ಕುಬ್ಜವಾಗೇ ಇರುತ್ತದೆ. ಆದರೆ ಮನೆಯಲ್ಲಿಯೇ ಕುಬ್ಜ ಗಿಡಗಳನ್ನು ಬೆಳೆಸುವ ಪ್ರಕ್ರಿಯೆ ದೀರ್ಘ ಕಾಲ ತೆಗೆದುಕೊಳ್ಳುತ್ತದೆ. ಸಸಿ ನೆಡುವ ಕುಂಡ ಸ್ವಲ್ಪ ಅಗಲವಾಗಿರಬೇಕು ಅಷ್ಟೆ.

ನಿರ್ವಹಣೆ ಹೇಗೆ?

‘ಗಿಡದ ಟ್ರೇಗೆ ಜೇಡಿ ಮಿಶ್ರಿತ ಕೆಂಪು ಮಣ್ಣನ್ನು ಹಾಕಬೇಕು. ತಳಭಾಗಕ್ಕೆ ಸ್ವಲ್ಪ ದೊಡ್ಡ ಹೆಂಟೆಗಳನ್ನು ಹಾಕಬೇಕು. ಅದರ ಮೇಲೆ ಜೇಡಿ ಮಿಶ್ರಿತ ಕೆಂಪು ಮಣ್ಣು ಹರಡಿ ಗಿಡ ನೆಡಬೇಕು. ಮನೆಯಲ್ಲೇ ತಯಾರಿಸಿದ ಗೊಬ್ಬರ ಹಾಕಬಹುದು. ಅಥವಾ ಬೋನ್ಸಾಯ್‌ ಮಿಶ್ರಣದ ಸಿದ್ಧ ಗೊಬ್ಬರ ಸಿಗುತ್ತದೆ. ಅದನ್ನೂ ಬಳಸಬಹುದು’ ಎನ್ನುತ್ತಾರೆ ಚಂದ್ರಶೇಖರ್‌.

‘ಗಿಡಗಳು ಬೆಳೆದಾಗ ಹೇಗೆ ಬೇಕಾದರೂ ಹಾಗೆ ಕತ್ತರಿಸಬಾರದು. ಕಲಾತ್ಮಕವಾಗಿ, ಸಮತೋಲನ ಕಾಯ್ದುಕೊಂಡು ಕತ್ತರಿಸಬೇಕು’ ಎಂದು ಸಲಹೆ ನೀಡುತ್ತಾರೆ ಅವರು.

ರೋಗ ಬಾಧೆ ಕಡಿಮೆ

‘ಬೋನ್ಸಾಯ್‌ ಗಿಡಗಳಿಗೆ ರೋಗ ಬಾಧೆ ಕಡಿಮೆ. ಬಂದರೂ ಮನೆಯಲ್ಲಿರುವ ಸಾಮಗ್ರಿಗಳಿಂದ ಚಿಕಿತ್ಸೆ ಕೊಡಬಹುದು. ವಿನೆಗರ್‌, ಶುಂಠಿ- ಬೆಳ್ಳುಳ್ಳಿ ಪೇಸ್ಟ್‌ ಮಿಶ್ರಣವನ್ನು ಸಿಂಪಡಿಸಿದರೆ ಕೀಟ ಬಾಧೆ ಕಡಿಮೆಯಾಗುತ್ತದೆ’ ಎಂದು ವಿವರಿಸುತ್ತಾರೆ ಚಂದ್ರಶೇಖರ್‌.

ಲಾಲ್‌ಬಾಗ್‌ನಲ್ಲಿ ತರಬೇತಿ

ಬೋನ್ಸಾಯ್‌ ಗಿಡ ಬೆಳೆಸುವ ಆಸಕ್ತರಿಗೆ ಬೆಂಗಳೂರಿನ ಲಾಲ್‌ಬಾಗ್‌ ಉದ್ಯಾನದಲ್ಲಿ ತರಬೇತಿ ಸೌಲಭ್ಯ ಇದೆ.4 ದಿನಗಳ ತರಬೇತಿ ಪಡೆದು ಮನೆಯಲ್ಲೇ ಗಿಡ ಬೆಳೆಸಬಹುದು.

–ಚಂದ್ರಶೇಖರ್‌, ಲಾಲ್‌ಬಾಗ್‌ನ ತೋಟಗಾರಿಕಾ ಇಲಾಖೆ (ನರ್ಸರಿ ವಿಭಾಗ) ಉಪನಿರ್ದೇಶಕ

(ಸಂಪರ್ಕಿಸಲು– 95250151189)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT