ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದಲ್ಲಿ ಮನೆ ನಿರ್ವಹಣೆ ಇಲ್ಲಿವೆ ಸರಳ ಸಲಹೆಗಳು

Last Updated 8 ಜುಲೈ 2022, 20:30 IST
ಅಕ್ಷರ ಗಾತ್ರ

1. ಸ್ವಚ್ಛತೆಗೆ ಆದ್ಯತೆ ನೀಡಿ

ಮಳೆಗಾಲ ಶುರುವಾದ ಮೇಲೆ ಮನೆಯ ಒಳಗೆ, ಹೊರಗೆ ಜಿರಲೆ, ಸೊಳ್ಳೆಯಂತಹ ಕ್ರಿಮಿಕೀಟಗಳ ಉಪಟಳ ಹೆಚ್ಚಾಗುತ್ತದೆ. ಇವು ಡೆಂಗಿ, ಚಿಕುನ್‌ಗುನ್ಯಾದಂತಹ ರೋಗ ಹರಡಲು ಕಾರಣವಾಗುತ್ತವೆ. ಇದರ ನಿವಾರಣೆಗೆ, ಮನೆಯನ್ನು ಪ್ರತಿ ನಿತ್ಯ ಸೋಂಕು ನಿವಾರಕದಿಂದ ಶುಚಿಗೊಳಿಸಿ. ಹಿಂದೆ ನಿತ್ಯ ಕೈಗೊಳ್ಳುತ್ತಿದ್ದ ಶುಚಿಕಾರ್ಯಕ್ಕಿಂತ ಹೆಚ್ಚಿನ ಆದ್ಯತೆ ನೀಡಿ. ಮನೆಯ ಮೂಲೆಗಳಲ್ಲಿ ಜೇಡ ಬಲೆ ಕಟ್ಟದಂತೆ ನೋಡಿಕೊಳ್ಳಿ. ಜೇಡ ಬಲೆ ಕಟ್ಟಿರುವುದು ಕಂಡುಬಂದರೆ, ಅದನ್ನು ಆಗಲೇ ಶುಚಿಗೊಳಿಸಿ.

2. ಸೋರಿಕೆ ತಡೆಗಟ್ಟಿ

ಮಳೆಗಾಲ ಆರಂಭವಾಗುವ ಮೊದಲೇ ಮನೆಯ ತಾರಸಿ, ಗೋಡೆಗಳನ್ನು ಗಮನಿಸಿ. ಅಲ್ಲಲ್ಲಿ ಬಿರುಕು ಬಿಟ್ಟು ಮಳೆ ನೀರು ಸೋರಿಕೆಯಾಗುವ ಸಾಧ್ಯತೆ ಇರುತ್ತದೆ. ಇದರಿಂದ ಗೋಡೆಗಳು ಪಾಚಿಕಟ್ಟುತ್ತವೆ. ಜೊತೆಗೆ ಗೋಡೆಯೊಳಗೆ ನೀರಿಳಿದು ಒಳಗೆ ಜೋಡಿಸಿರುವ ವಿದ್ಯುತ್ ತಂತಿಗಳಿಗೂ ಅಪಾಯವಾಗಬಹುದು. ಹಾಗಾಗಿ ಸೋರಿಕೆಯಾಗುವ ಜಾಗ ಗುರುತಿಸಿ, ಅದನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಿ.

3. ವಿದ್ಯುತ್ ಪರಿಕರಗಳ ಬಗ್ಗೆ ಎಚ್ಚರ

ಮಳೆಗಾಲದಲ್ಲಿ ಗುಡುಗು, ಸಿಡಿಲು, ಮಿಂಚಿನಿಂದಾಗಿ ವಿದ್ಯುತ್ ಏರಿಳಿತ ಸಾಮಾನ್ಯ. ಹಾಗಾಗಿ ಮಳೆಗಾಲಕ್ಕೆ ಮುನ್ನವೇ ಮನೆಯ ವೈರಿಂಗ್ ಪರಿಶೀಲಿಸಿ. ಸ್ವಿಚ್‌ ಬೋರ್ಡ್‌ಗಳಲ್ಲಿ ನೀರು ಇಳಿಯುತ್ತಿದೆಯೇ ಎಂದು ಪರಿಶೀಲಿಸಿ. ಗೋಡೆಗಳಲ್ಲಿ ನೀರಿಳಿದಾಗ ಶಾರ್ಟ್‌ ಸರ್ಕಿಟ್‌ ಆಗುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಅಗತ್ಯ.

4. ಕಾರ್ಪೆಟ್ ನಿರ್ವಹಣೆ

ಮಳೆಗಾಲದಲ್ಲಿ ನೆಲಕ್ಕೆ ಹಾಸುವ ಫೂಟ್ ರಗ್, ರತ್ನಗಂಬಳಿ(ಕಾರ್ಪೆಟ್‍ಗಳ) ನಿರ್ವಹಣೆ ಬಹಳ ಕಷ್ಟ. ಸದಾ ನೆಲ ಒದ್ದೆಯಾಗುತ್ತಿರುತ್ತದೆ. ಒದ್ದೆ ಕಾಲಿನಲ್ಲೇ ಇವುಗಳ ಮೇಲೆ ನಡೆದಾಡುತ್ತಾರೆ. ದೂಳು ಮತ್ತು ತೇವ ಸೇರಿಕೊಂಡು ಈ ನೆಲ ಹಾಸುಗಳು ದುರ್ವಾಸನೆ ಬೀರುತ್ತವೆ. ಇವು ರೋಗ ಹರಡಲು ಕಾರಣವಾಗುತ್ತವೆ. ಇಂಥ ಸಂದರ್ಭದಲ್ಲಿ ದುಬಾರಿ ನೆಲ ಹಾಸುಗಳನ್ನು ಬಳಸದಿರುವುದು ಕ್ಷೇಮ. ಅನಿವಾರ್ಯವಾದರೆ ದಿನ ನಿತ್ಯ ಬಳಸುವ ನೆಲ ಹಾಸುಗಳನ್ನು ಬಳಸಿ. ಅವುಗಳನ್ನೂ ಆಗಾಗ್ಗೆ ಸ್ವಚ್ಛಗೊಳಿಸಿ, ತೇವವಾಗದಂತೆ ನೋಡಿಕೊಳ್ಳಬೇಕು.

5. ಗಾಳಿ, ಬಿಸಿಲು ಒಳ ಬರಲಿ...

ಮಳೆಗಾಲದಲ್ಲಿ ನಿತ್ಯ ಮೋಡಕವಿದ ವಾತಾವರಣ. ಸೂರ್ಯ ಆಗಾಗ ಇಣುಕಿ ಹೋಗುತ್ತಾನೆ. ಇಣುಕುವ ಸೂರ್ಯನ ಕಿರಣಗಳು ಮನೆಯೊಳಗೆ ಪ್ರವೇಶಿಸುವಂತೆ ಕಿಟಕಿಗಳನ್ನು ತೆರೆದಿಡಿ. ಕಿಟಕಿಗಳಿಗೆ ಪರದೆಗಳನ್ನು ಹಾಕಿದರೆ, ಮಳೆಗಾಲ ಮುಗಿಯುವವರೆಗೂ ಅವುಗಳನ್ನು ತೆಗೆದಿಡಿ. ಇದರಿಂದ ಬಿಸಿಲು ಸರಾಗವಾಗಿ ಮನೆ ಪ್ರವೇಶಿಸುತ್ತದೆ. ಜೊತೆಗೆ ಗಾಳಿಯಾಡುತ್ತದೆ. ತೇವಾಂಶ ಹೆಚ್ಚಾದರೆ ಮನೆಯ ವಸ್ತುಗಳೆಲ್ಲವೂ ದುರ್ವಾಸನೆ ಬೀರಬಹುದು. ಆದ್ದರಿಂದ ಸಾಧ್ಯವಾದಷ್ಟು ಕಿಟಕಿಗಳನ್ನು ತೆಗೆದಿಡಿ.

6. ಪುಸ್ತಕಗಳ ರಕ್ಷಣೆ

ಗೋಡೆಗೆ ಒರಗಿಸಿಟ್ಟ ಕಬ್ಬಿಣ ಅಥವಾ ಮರದ ಕಪಾಟಿನಲ್ಲಿಟ್ಟ ಪುಸ್ತಕಗಳು ಮಳೆಗಾಲದಲ್ಲಿ ತೇವ ಹೆಚ್ಚಾಗಿ ಹಾಳಾಗುತ್ತವೆ. ಸ್ವಲ್ಪ ಮೈಮರೆತರೆ ಗೆದ್ದಲು ದಾಳಿ ಮಾಡುತ್ತವೆ. ಪುಸ್ತಕಗಳನ್ನು ತೇವಾಂಶದಿಂದ ರಕ್ಷಿಸಲು ಗೋಡೆಗಳಿಗೆ ತೇವಾಂಶ ನಿರೋಧಕ ಬಣ್ಣ ಬಳಿಯಬಹುದು, ಇದು ದೀರ್ಘಕಾಲದ ಪರಿಹಾರ. ತಕ್ಷಣದ ಪರಿಹಾರವಾಗಿ, ಆದಷ್ಟು ಪುಸ್ತಕಗಳನ್ನು ಗಾಳಿಯಾಡುವ ಜಾಗದಲ್ಲಿಟ್ಟು, ತೇವವಾಗದಂತೆ ರಕ್ಷಿಸಬಹುದು.

7. ದುರ್ವಾಸನೆ ದೂರವಿರಿಸಿ

ನಿರಂತರವಾಗಿ, ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದಾಗ, ಮನೆಯೊಳಗೆ ದುರ್ವಾಸನೆ ಹೆಚ್ಚಾಗುತ್ತದೆ. ಇದು ಮನಸ್ಸಿಗೆ ಕಿರಿ ಕಿರಿ ಉಂಟು ಮಾಡುತ್ತದೆ. ಈ ಸಮಯದಲ್ಲಿ ಸೌಮ್ಯ ಪ್ರಮಾಣದಲ್ಲಿ ಪರಿಮಳ ಬೀರುವ ಊದು ಬತ್ತಿಗಳನ್ನು ಬಳಸಬಹುದು. ಈಗೀಗ ಮಾರುಕಟ್ಟೆಯಲ್ಲಿ ನೀಲಿಗಿರಿ, ಲ್ಯಾವೆಂಡರ್‌ ಸೇರಿದಂತೆ ವಿವಿಧ ಪರಿಮಳ ಸೂಸುವ ‘ಆರೊಮಾ‘ ತೈಲಗಳು ಲಭ್ಯವಿವೆ. ಅವುಗಳನ್ನು ಬಳಸಿ ಮನೆಯ ವಾತಾವರಣವನ್ನು ಪರಿಮಳಯುಕ್ತ ವಾಗಿಸಬಹುದು. ಇದು ಆರೋಗ್ಯಕ್ಕೂ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT