ಸೋಮವಾರ, ಮಾರ್ಚ್ 8, 2021
27 °C

ಅಡುಗೆ ಕ್ಯಾಬಿನೆಟ್ ಜೋಡಣೆ ಹೀಗಿರಲಿ

ಮನಸ್ವಿ Updated:

ಅಕ್ಷರ ಗಾತ್ರ : | |

Prajavani

ಅಡುಗೆ ಮಾಡುವುದೆಂದರೆ ನೀರಜಾಗೆ ತುಂಬಾ ಪ್ರೀತಿ. ಭಾರತೀಯ, ಪಾಶ್ಚಾತ್ಯ ಶೈಲಿಯ ಬಗೆ ಬಗೆಯ ಅಡುಗೆಗಳ ಪ್ರಯೋಗಗಳನ್ನು ಮಾಡಿ ಮನೆಯವರಿಗೆ ತಿನ್ನಿಸುವ ಮೂಲಕ ಖುಷಿ ಪಡುತ್ತಾಳೆ. ಆದರೆ ಅಡುಗೆಮನೆಯ ವಸ್ತುಗಳನ್ನು ಜೋಡಿಸುವುದರಲ್ಲಿ ಆಕೆಗೆ ಉದಾಸೀನ. ಜೀರಿಗೆ ಸಿಕ್ಕರೆ, ಬೆಳ್ಳುಳ್ಳಿ ಸಿಗಲ್ಲ, ಪ್ಲೇಟ್‌ ಸಿಕ್ಕರೆ ಚಮಚ ಸಿಗಲ್ಲ, ಕಪ್‌ ಸಿಕ್ಕರೆ ಸಾಸರ್ ಸಿಗಲ್ಲ, ಏನೊ ತೆಗೆಯಲು ಹೋಗಿ ಇನ್ನೇನನ್ನೋ ಬೀಳಿಸುವುದು ಹೀಗೆ ವಸ್ತುಗಳ ತಡಕಾಟದಲ್ಲಿ ಆಕೆಗೆ ಸುಸ್ತಾಗುತ್ತದೆ. ‘ಅಡುಗೆಮನೆಯ ಚೆಲ್ಲಾಪಿಲ್ಲಿಯಿಂದ ಒಳಗೆ ಕಾಲಿಡುವುದೇ ಬೇಸರ ತರಿಸುತ್ತದೆ’ ಎನ್ನುವುದು ಅವಳ ಗೋಳು. ಇದು ನೀರಜಾಳಂತೆ ಹಲವು ಹೆಣ್ಣುಮಕ್ಕಳ ಕಥೆ. ಹಾಗಾಗಿ ಕಿಚನ್ ಕ್ಯಾಬಿನೆಟ್‌ನಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು, ಹೊಸ ಐಡಿಯಾಗಳನ್ನು ಉಪಯೋಗಿಸಿ ಜೋಡಿಸಿಕೊಳ್ಳುವುದು ಅವಶ್ಯ. ಇದರಿಂದ ಮನಸ್ಸಿಗೂ ಖುಷಿ.

ಡಬ್ಬಿಗಳ ಜೋಡಣೆ

ದಿನನಿತ್ಯ ಬಳಸುವ ಹಿಟ್ಟು, ಓಟ್ಸ್‌, ಸಾಸಿವೆ, ಜೀರಿಗೆಯಂತಹ ವಸ್ತುಗಳನ್ನು ತೆರೆದ ಜಾಗದಲ್ಲಿ ನೀಟಾಗಿ ಜೋಡಿಸಿಡಿ. ಬಣ್ಣದ ಡಬ್ಬಿಯಲ್ಲಿ ತುಂಬಿಡುವುದಕ್ಕಿಂತ ಬಣ್ಣ ರಹಿತ ಬಾಟಲಿ ಇಡುವುದರಿಂದ ಯಾವ ಹಿಟ್ಟು, ಯಾವ ಬಗೆಯ ಮಸಾಲೆ ಪದಾರ್ಥ ಎಂಬುದನ್ನು ನೇರವಾಗಿ ಗುರುತಿಸಬಹುದು. ಜೊತೆಗೆ ತಕ್ಷಣಕ್ಕೆ ಸಿಗದ ವಸ್ತಗಳನ್ನು ಕಣ್ಣಿಗೆ ಕಾಣುವಂತೆ ಇರಿಸುವುದು ಮುಖ್ಯ. ನೀವು ಡ್ರಾವರ್‌ನಲ್ಲಿ ವಸ್ತಗಳನ್ನು ಜೋಡಿಸಿಕೊಂಡಿದ್ದರೆ ದೊಡ್ಡ ದೊಡ್ಡ ಡಬ್ಬಿಗಳನ್ನು ಹಿಂದೆ ಜೋಡಿಸಿಟ್ಟು ಪುಟ್ಟ ಡಬ್ಬಿಗಳನ್ನು ಮುಂದೆ ಜೋಡಿಸಿ. ಸಣ್ಣಪುಟ್ಟ ವಸ್ತುಗಳನ್ನು ಡ್ರಾವರ್‌ ಹಿಂದಕ್ಕೆ ತಳ್ಳುವುದು ಮಾಡಬೇಡಿ. ಎಷ್ಟೇ ಅವಸರವಿದ್ದರೂ ಒಮ್ಮೆ ತೆಗೆದ ವಸ್ತುವನ್ನು ಅದೇ ಜಾಗದಲ್ಲಿ ಮತ್ತೆ ಇಡಿ. ಇದನ್ನು ರೂಢಿಸಿಕೊಂಡರೆ ತಡಕಾಡುವುದು ತಪ್ಪುತ್ತದೆ.

ತಟ್ಟೆ ಹಾಗೂ ಕಪ್‌ಗಳು ‌

ತಟ್ಟೆಗಳನ್ನು ಸಾಮಾನ್ಯವಾಗಿ ಪಾತ್ರೆ ಸ್ಟ್ಯಾಂಡ್ ಅಥವಾ ರ‍್ಯಾಕ್‌ನಲ್ಲಿ ಜೋಡಿಸುತ್ತೇವೆ. ಆದರೆ ಗಾಜಿನ ತಟ್ಟೆಯನ್ನು ಜೋಡಿಸುವಾಗ ಜಾಗರೂಕತೆ ಇರಬೇಕು. ಗಾಜಿನ ತಟ್ಟೆಗಳನ್ನು ದೊಡ್ಡದು, ಚಿಕ್ಕದು ಹೀಗೆ ವಿಭಾಗಿಸಿ ಜೋಡಿಸಿ. ಕಪ್‌ಗಳನ್ನು ಸಾಮಾನ್ಯವಾಗಿ ಪ್ರತಿದಿನ ಉಪಯೋಗಿಸುತ್ತೇವೆ. ಉಪಯೋಗಿಸದ ಕಪ್‌ಗಳನ್ನು ಸಾಸರ್‌ನೊಂದಿಗೆ ಹೊಂದಿಸಿ ಇಡಿ. ಅದನ್ನು ಪ್ರತಿದಿನ ಬಳಸುವ ರ‍್ಯಾಕ್‌ನಲ್ಲಿ ಇಡದೇ ಪ್ರತ್ಯೇಕವಾಗಿ ಇಡಿ. ಇದರಿಂದ ಅವುಗಳನ್ನು ಯಾವಾಗಲೂ ಒಡೆಯುವುದು, ಬೀಳಿಸುವುದನ್ನು ತಪ್ಪಿಸಬಹುದು. ಜ್ಯೂಸ್‌ ಜಾರ್‌ಗಳು ಹಾಗೂ ಕಪ್‌ಗಳನ್ನು ಯಾವಾಗಲೂ ತಲೆಕೆಳಗಾಗಿಯೇ ಇರಿಸಬೇಕು, ಇದರಿಂದ ಅವುಗಳ ಒಳಗೆ ದೂಳು, ಕಸ ಕಡ್ಡಿ ಬೀಳುವುದನ್ನು ತಪ್ಪಿಸಬಹುದು. ಅಡುಗೆಮನೆಯಲ್ಲಿ ಶೆಲ್ಫ್‌ಗಳನ್ನು ಜೋಡಿಸುವಾಗಲೇ ಹೆಚ್ಚು ರ‍್ಯಾಕ್‌ಗಳಿರುವಂತೆ ನೋಡಿಕೊಳ್ಳಬೇಕು. ಆಗ ವಸ್ತುಗಳನ್ನು ಸುಲಭವಾಗಿ ಜೋಡಿಸಬಹುದು.

ಪಾಟ್‌ ಹಾಗೂ ಪ್ಯಾನ್‌ಗಳನ್ನು ಜೋಡಿಸುವುದು

ಪಾಟ್‌ ಅಥವಾ ಪ್ಯಾನ್‌ಗಳನ್ನು ಜೋಡಿಸಲು ಗೋಡೆಯಲ್ಲಿ ಹ್ಯಾಂಗರ್‌ ರೀತಿಯ ವಸ್ತುಗಳನ್ನು ಜೋಡಿಸುವುದು ಉತ್ತಮ. ಕಪ್‌ಬೋರ್ಡ್‌ ಅಥವಾ ಶೆಲ್ಫ್‌ನಲ್ಲಿ ಅವುಗಳನ್ನು ಜೋಡಿಸುವುದರಿಂದ ಜಾಗದ ಕೊರತೆಯೂ ಹೆಚ್ಚು. ಕೆಲವರು ಪ್ಯಾನ್‌ ಅಥವಾ ಪಾಟ್‌ಗಳನ್ನು ಇರಿಸುವ ಸಲುವಾಗಿ ಉದ್ದದ ಕ್ಯಾಬಿನೆಟ್‌ಗಳನ್ನು ರಚಿಸಿಕೊಂಡಿರುತ್ತಾರೆ. ಅದರೊಳಗೆ ಒಂದರ ಮೇಲೆ ಒಂದರಂತೆ ಪ್ಯಾನ್‌ಗಳನ್ನು ಜೋಡಿಸಿಕೊಳ್ಳುವುದಕ್ಕಿಂತ ಉದ್ದಕ್ಕೆ ಜೋಡಿಸಿಕೊಳ್ಳುವುದು ಸೂಕ್ತ. ಮುಚ್ಚಳ ಇರುವ ಪಾಟ್‌ಗಳನ್ನು ಅದರ ಮುಚ್ಚಳದೊಂದಿಗೆ ಜೋಡಿಸಿ ಒಂದರ ಪಕ್ಕ ಇನ್ನೊಂದನ್ನು ಜೋಡಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.