ಗಣೇಶನಿಗೂ ಮ್ಯೂಸಿಯಂ!

4

ಗಣೇಶನಿಗೂ ಮ್ಯೂಸಿಯಂ!

Published:
Updated:

ಪುರಾತನ ಕಾಲದ ವಸ್ತುಗಳು, ಕ್ರೀಡಾ ಸಾಮಗ್ರಿ, ಕಾರುಗಳು, ಬೈಕ್‌ಗಳು ಹೀಗೆ ವಿವಿಧ ವಸ್ತುಗಳನ್ನು ಸಂಗ್ರಹಿಸಿ ಇಟ್ಟಿರುವ ಹಲವು ವಸ್ತು ಸಂಗ್ರಹಾಲಯಗಳನ್ನು ನಾವು ನೋಡಿದ್ದೇವೆ. ದಿನ ಪತ್ರಿಕೆಗಳು, ಗಾಜಿವ ವಸ್ತುಗಳು, ಗಿಡಗಳನ್ನು ಸಂಗ್ರಹಿಸಿರುವ, ವಿಶೇಷ ಎನಿಸುವ ವಿವಿಧ ಮ್ಯೂಸಿಯಂಗಳು ವಿಶ್ವದಾದ್ಯಂತ ಇವೆ. ಇವುಗಳಲ್ಲಿ ‘ಗಣೇಶನ ಮ್ಯೂಸಿಯಂ’ ಒಂದು.

ಹಿಂದುಗಳಿಂದ ಪ್ರಥಮ ಪೂಜಿತನಾದ ವಿನಾಯಕನ ಈ ವಸ್ತು ಸಂಗ್ರಹಾಲಯ ಇರುವುದು ನಮ್ಮ ದೇಶದಲ್ಲಿ ಅಲ್ಲ, ಥಾಯ್ಲೆಂಡ್‌ನಲ್ಲಿ.

ಈ ವಸ್ತು ಸಂಗ್ರಹಾಲಯದ ಹೆಸರು ‘ಗಣೇಶ್ ಹಿಮಲ್ ಮ್ಯೂಸಿಯಂ’ ಥಾಯ್ಲೆಂಡ್‌ನ ಚಾಂಗ್‌ ಮಯ್‌ ಪ್ರದೇಶದಲ್ಲಿದೆ. ಈ ಮ್ಯೂಸಿಯಂನ ಹೊರಗಡೆ ದ್ವಾರಪಾಲಕ ಅವತರಾರದಲ್ಲಿರುವ ಇಲಿಯ ದೊಡ್ಡ ವಿಗ್ರಹಗಳು ಎರಡೂ ಬದಿಗಳಲ್ಲಿ ಸ್ವಾಗತ ಕೋರುತ್ತವೆ. ಸ್ವಲ್ಪ ಮುಂದೆ ಸಾಗುತ್ತಿದ್ದಂತೆಯೇ,  ದೊಡ್ಡ ಗಾತ್ರದ ಹಲವು ಗಣಪತಿ ವಿಗ್ರಹಗಳು ಕಣ್ಣಿಗೆ ಕಾಣುತ್ತವೆ.  ಮ್ಯೂಸಿಯಂ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಎದುರಿಗೆ ಉಯ್ಯಾಲೆಯಲ್ಲಿ ನಿದ್ರಾಭಂಗಿಯಲ್ಲಿರುವ ದೊಡ್ಡ ಗಾತ್ರದ ವಿನಾಯಕ ವಿಗ್ರಹ ದರ್ಶನ ನೀಡುತ್ತದೆ. ಒಳಗೆ ಮೂರು ವಿಶಾಲ ಕೋಣೆಗಳಿದ್ದು, ಎಲ್ಲ ಕೋಣೆಗಳಲ್ಲೂ ವಿವಿಧ ಆಕಾರ ಮತ್ತು ಗಾತ್ರದ ಸುಮಾರು 700 ಗಣೇಶ ವಿಗ್ರಹಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. 

ಕಲ್ಲಿನ ವಿಗ್ರಹಗಳಷ್ಟೇ ಅಲ್ಲದೆ, ಮರದಿಂದ, ತಾಮ್ರದಿಂದ ಮತ್ತು ಪಂಚಲೋಹಗಳಿಂದ ತಯಾರಿಸಿದ ವಿಗ್ರಹಗಳನ್ನೂ ಪ್ರದರ್ಶನಕ್ಕೆ ಇಡಲಾಗಿದೆ. ಪುಂದೋರ್ನ್‌ ತೀರಕ್‌ನಾನ್ ಎಂಬುವವರು ಈ ವಸ್ತುಸಂಗ್ರಾಹಲಯವನ್ನು ಸ್ಥಾಪಿಸಿದ್ದಾರೆ. ಪುಂದೋರ್ನ್‌ ಅವರ ತಂದೆ ಗಣೇಶ ವಿಗ್ರಹವೊಂದನ್ನು ಉಡುಗೊರೆ ರೂಪದಲ್ಲಿ ಅವರಿಗೆ ನೀಡಿದ್ದರು. ಇದು ಪುಂದೋರ್ನ್ ಅವರಿಗೆ ಹೆಚ್ಚು ಇಷ್ಟವಾಯಿತು. ಅಂದಿನಿಂದ ಅವರು,  ವಿವಿಧ ಗಣೇಶ ವಿಗ್ರಹಗಳನ್ನು ಮತ್ತು ಗಣೇಶನಿಗೆ ಸಂಬಂಧಿಸಿದ, ಚಿತ್ರಪಟ, ವರ್ಣಚಿತ್ರ ಹಾಗೂ ರೇಖಾ ಚಿತ್ರಗಳನ್ನು ಸಂಗ್ರಹಿಸುವುದೇ ಪ್ರವೃತ್ತಿ ಮಾಡಿಕೊಂಡರು. ಸಂಗ್ರಹಿಸಿದ ಎಲ್ಲ ಗಣೇಶ ವಿಗ್ರಹಗಳನ್ನು ಪ್ರದರ್ಶನಕ್ಕೆ ಇಡಲು ಈ ವಸ್ತು ಸಂಗ್ರಹಾಲಯ ಸ್ಥಾಪಿಸಿದರು. 

ಭಾರತದಲ್ಲಿ ಆಚರಿಸುವಂತೆ ಈ ಮ್ಯೂಸಿಯಂನಲ್ಲೂ ವಿಜೃಂಭಣೆಯಿಂದ ಗಣೇಶ ಚತುರ್ಥಿಯಂದು ‘ವಿನಾಯಕ ಉತ್ಸವ’ವನ್ನು ಅದ್ದೂರಿಯಿಂದ ಆಚರಿಸಲಾಗುತ್ತದೆ. ಚಾಂಗ್‌ ಮಯ್‌ನ ಹಲವು ಅಂಗಡಿಗಳಲ್ಲಿ ವಿನಾಯಕ ಮೂರ್ತಿಗಳನ್ನು ವಿಕ್ರಯಿಸುತ್ತಾರೆ. ವಿನಾಯಕ ಚಿತ್ರವಿರುವ ಬಣ್ಣ ಬಣ್ಣದ ಟೀ ಶರ್ಟ್‌ಗಳನ್ನೂ ಇಲ್ಲಿ ಮಾರಾಟ ಮಾಡುತ್ತಾರೆ.

ವಿಶೇಷ
* ಭಾರತ ಅಷ್ಟೇ ಅಲ್ಲದೆ ಶ್ರೀಲಂಕಾ, ಮ್ಯಾನ್ಮಾರ್, ಕಾಂಬೋಡಿಯಾದಿಂದ ಸಂಗ್ರಹಿಸಿದ ಗಣಪತಿ ವಿಗ್ರಹಗಳು ಇಲ್ಲಿವೆ.
* ವಿಗ್ರಹಗಳಷ್ಟೇ ಅಲ್ಲದೇ, ವರ್ಣಚಿತ್ರಗಳು, ರೇಖಾಚಿತ್ರಗಳೂ ಇವೆ.
* ರತ್ನಾಲಂಕೃತ ವಿಶೇಷ ವರ್ಣಚಿತ್ರಗಳು ಮತ್ತು ವಿಗ್ರಹಗಳೂ ಇಲ್ಲಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !