ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ಜಾಗದ ಗರಿಷ್ಠ ಬಳಕೆ

Last Updated 9 ನವೆಂಬರ್ 2020, 17:34 IST
ಅಕ್ಷರ ಗಾತ್ರ

ಮನೆ ಕಟ್ಟಿಸಿದ ಮೇಲೆ ಮನೆ ಚಿಕ್ಕದಾಯ್ತು, ಜಾಗ ಸಾಲುತ್ತಿಲ್ಲ ಎಂದು ಕೊರಗುವುದಕ್ಕಿಂತ ಮನೆ ಕಟ್ಟುವ ಮೊದಲೇ ಯೋಜನೆ ರೂಪಿಸಬೇಕು. ಒಂದು ವೇಳೆ ಈಗಾಗಲೇ ಮನೆ ಕಟ್ಟಿಸಿದ್ದರೆ ಇರುವ ಜಾಗದಲ್ಲೇ ಹೇಗೆ ವಸ್ತುಗಳನ್ನು ವ್ಯವಸ್ಥಿತವಾಗಿ ಜೋಡಿಸಿಕೊಳ್ಳಬಹುದು ಎಂಬ ಬಗ್ಗೆಯೂ ಇಲ್ಲಿದೆ ಮಾಹಿತಿ.

ತಮ್ಮದೇ ಹೆಸರಿನಲ್ಲಿ ಸ್ವಂತ ಸೂರು ಕಟ್ಟಿಸಬೇಕು ಎಂಬುದು ಹಲವರ ಕನಸು. ಕೆಲವರು ಮನೆ ಕಟ್ಟಿಸುವ ಮೊದಲು ಹಣದ ಬಗ್ಗೆ ಚಿಂತಿಸಿ ಚಿಕ್ಕ ಮನೆ ಕಟ್ಟಿಸುತ್ತಾರೆ. ಆದರೆ ಆಮೇಲೆ ಮನೆ ಚಿಕ್ಕದಾಯ್ತು, ಮನೆಯೊಳಗೆ ಏನ್ನನ್ನೂ ಸರಿಯಾಗಿ ಜೋಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅಲವತ್ತುಕೊಳ್ಳುತ್ತಾರೆ. ಆದರೆ ಸಣ್ಣ ಮನೆಯನ್ನೇ ಸುಂದರವಾಗಿ, ಅಲಂಕಾರಿಕವಾಗಿ ಕಟ್ಟಿಸಬೇಕು. ಒಂದು ವೇಳೆ ಈಗಾಗಲೇ ನೀವು ಕಡಿಮೆ ಜಾಗ ಇರುವ ಮನೆಯಲ್ಲಿ ವಾಸಿಸುತ್ತಿದ್ದರೆ ಕಡಿಮೆ ಜಾಗದಲ್ಲೇ ಮನೆಯನ್ನು ಹೇಗೆ ವ್ಯವಸ್ಥಿತವಾಗಿ ರೂಪಿಸಬೇಕು ಎಂಬುದರ ಬಗ್ಗೆ ಯೋಚಿಸಬೇಕು.

ಸಣ್ಣಮನೆಯಲ್ಲಿ ಸಣ್ಣ ಸಣ್ಣ ಜಾಗವನ್ನು ಉಪಯುಕ್ತವಾಗಿ ಬಳಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಕೆಲವೊಂದು ವಿಧಾನಗಳು ಇಲ್ಲಿವೆ.

ಫೋಲ್ಡಿಂಗ್ ಟೇಬಲ್‌

ಈಗ ವಿವಿಧ ವಿನ್ಯಾಸದ ಸಣ್ಣ ಮನೆಗೆ ಹೊಂದುವಂತಹ ಟೇಬಲ್‌, ಕುರ್ಚಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ನೀವು ಮನೆ ಕಟ್ಟಿಸುವ ಯೋಚನೆಯಲ್ಲಿದ್ದರೆ ಮನೆಯ ಗೋಡೆಗೆ ಅಂಟಿಕೊಂಡಿರುವ ರೀತಿಯ ಡೈನಿಂಗ್ ಟೇಬಲ್ ಹಾಗೂ ಕಂಪ್ಯೂಟರ್‌ ಟೇಬಲ್‌ಗಳನ್ನು ಅಳವಡಿಸಬಹುದು. ಅದೇ ಟೇಬಲ್‌ಗೆ ಅಂಟಿಕೊಂಡಿರುವ ಕುರ್ಚಿಗಳು ಕೂಡ ಸಿಗುತ್ತವೆ. ಬೇಕೆಂದಾಗ ಅದನ್ನು ಬಿಡಿಸಿ ಉಪಯೋಗಿಸಬಹುದು. ಬೇಡವೆಂದಾಗ ಹಾಗೇ ಮಡಿಸಿ ಇಡಬಹುದು. ಇದರಿಂದ ತುಂಬಾನೇ ಜಾಗ ಸಿಗುತ್ತದೆ.

ಫೋಲ್ಡಿಂಗ್ ಸೋಫಾ ಹಾಗೂ ಬೆಡ್‌ಗಳು

ಸೋಫಾ, ಕುರ್ಚಿ ಹಾಗೂ ಬೆಡ್‌ ಮನೆಯ ಹಾಲ್‌ ಹಾಗೂ ಬೆಡ್‌ರೂಮ್‌ ಅನ್ನು ಸಂಪೂರ್ಣವಾಗಿ ಆವರಿಸಿಕೊಂಡು ಜಾಗವೇ ಇಲ್ಲ ಎನ್ನಿಸುವಂತೆ ಮಾಡುತ್ತವೆ. ಆ ಕಾರಣಕ್ಕೆ ಮಡಿಸಲು ಸಾಧ್ಯವಾಗುವ ಸೋಫಾ ಹಾಗೂ ಬೆಡ್‌ಗಳ ಖರೀದಿ ಉತ್ತಮ. ಅವುಗಳನ್ನು ಮಡಿಸಿ ಇಟ್ಟಾಗ ಮನೆಯಲ್ಲಿ ಜಾಗದ ಕೊರತೆ ನಮ್ಮನ್ನು ಕಾಡುವುದಿಲ್ಲ.

ದುಂಡನೆಯ ಊಟದ ಟೇಬಲ್‌

ಊಟದ ಕೋಣೆಯಲ್ಲಿ ಅಗಲವಾದ, ಉದ್ದನೆಯ ಊಟದ ಟೇಬಲ್‌ ಇರಿಸುವುದರಿಂದ ಅರ್ಧದಷ್ಟು ಜಾಗವನ್ನು ಹಾಳು ಮಾಡಿದಂತಾಗುತ್ತದೆ. ಆ ಕಾರಣಕ್ಕೆ ದುಂಡನೆಯ ಟೇಬಲ್ ಹಾಗೂ ಕುರ್ಚಿ ಇರಿಸಬಹುದು. ಇವು ನೋಡಲು ಸುಂದರವಾಗಿದ್ದು ಊಟದ ಕೋಣೆಯ ಅಂದವನ್ನು ಹೆಚ್ಚಿಸುತ್ತವೆ.

ಗೋಡೆಯಲ್ಲಿ ಅಂಟಿಸುವಂತಹ ಉಪಕರಣಗಳು

ಕಡಿಮೆ ಜಾಗ ಇರುವ ಮನೆ ಕಟ್ಟಿಸುವ ಮೊದಲೇ ಟಿವಿ, ಕಂಪ್ಯೂಟರ್‌ ಬಳಕೆಗೆ ಗೋಡೆಯಲ್ಲೇ ಚೌಕಾಕಾರದ ಜಾಗ ಬಿಡುವುದು ಉತ್ತಮ. ಅಥವಾ ಗೋಡೆಗೆ ಅಂಟಿಸಲು ಸಾಧ್ಯವಾಗುವಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿ ಮಾಡಬೇಕು. ಇದರಿಂದ ಟಿವಿ, ಕಂಪ್ಯೂಟರ್ ಹೀಗೆ ಪ್ರತಿಯೊಂದಕ್ಕೂ ಒಂದೊಂದು ಟೇಬಲ್ ಇರಿಸುವುದನ್ನು ತಪ್ಪಿಸಬಹುದು. ಜೊತೆಗೆ ಜಾಗವೂ ಹೆಚ್ಚು ಉಳಿಯುತ್ತದೆ.

ವಾಲ್ ಡೆಸ್ಕ್ ಬಳಕೆ

ಪುಸ್ತಕ ಇಡಲು, ಫೈಲ್‌ಗಳನ್ನು ಇಡಲು, ಹೂ ಕುಂಡಗಳನ್ನು ಇಡಲು ಹೀಗೆ ಪ್ರತಿಯೊಂದಕ್ಕೂ ಚಿಕ್ಕ ಚಿಕ್ಕ ಟೇಬಲ್‌, ಸ್ಟೂಲ್‌ಗಳನ್ನು ಇರಿಸುವ ಬದಲು ವಾಲ್‌ಡೆಸ್ಕ್ ಬಳಕೆ ಉತ್ತಮ. ಇದರಿಂದ ಮನೆಗೆ ಹೊಸ ಲುಕ್ ಸಿಗುವುದಲ್ಲದೇ ಎಲ್ಲವನ್ನೂ ವಾಲ್‌ ಡೆಸ್ಕ್‌ನಲ್ಲೇ ಇರಿಸಬಹುದು. ಅಲ್ಲದೇ ಕೋಣೆಯಲ್ಲಿ ಜಾಗವನ್ನೂ ಉಳಿಸಬಹುದು.

ಬೆಳಕಿನ ಹರಿವು ಚೆನ್ನಾಗಿರಲಿ

ಮನೆಯೊಳಗೆ ಹೆಚ್ಚು ಬೆಳಕು ಬಿದ್ದಷ್ಟೂ ಜಾಗದ ವಿಸ್ತಾರದ ಅರಿವು ಚೆನ್ನಾಗಿ ಆಗುತ್ತದೆ. ಮನೆಯೊಳಗೆ ಕತ್ತಲೆ ಇದ್ದರೆ ಜಾಗದ ಕೊರತೆ ಕಾಡುತ್ತದೆ. ಆ ಕಾರಣಕ್ಕೆ ಸೂರ್ಯನ ಬೆಳಕು ನೇರವಾಗಿ ಮನೆಯೊಳಗೆ ಬರುವಂತೆ ಮನೆಯನ್ನು ವಿನ್ಯಾಸಗೊಳಿಸಬೇಕು. ಮೇಲಿನಿಂದ ಕಿಂಡಿ ಅಳವಡಿಸಿ ಸೂರ್ಯನ ಬೆಳಕು ಒಳಗೆ ಬರುವಂತೆ ಮಾಡಬೇಕು. ನೈಸರ್ಗಿಕ ಬೆಳಕು ಮನೆ ಮೂಲೆ ಮೂಲೆಗೂ ಹರಡುವುದರಿಂದ ಎಲ್ಲೆಲ್ಲಿ ಖಾಲಿ ಜಾಗವಿದೆ ಎಂಬುದು ಅರಿವಿಗೆ ಬರುತ್ತದೆ.

ಮೆಟ್ಟಿಲಿನ ಕೆಳಗೆ ಸ್ಟೋರೇಜ್‌ಗಳು

ಡ್ರಾಯರ್‌ಗಳು, ಶೆಲ್ಫ್‌ಗಳು ಹಾಗೂ ಕ್ಯಾಬಿನೆಟ್‌ಗಳನ್ನು ಮನೆಯ ಒಳಗಿನ ಮೆಟ್ಟಿಲಿನ ಕೆಳಗೆ ಅಳವಡಿಸುವಂತೆ ಮನೆಯನ್ನು ವಿನ್ಯಾಸ ಮಾಡಬಹುದು. ಇದು ಟ್ರೆಂಡಿ ನೋಟ ಸಿಗುವಂತೆ ಮಾಡುತ್ತದೆ. ಅಲ್ಲದೇ ಜಾಗದ ಉಳಿತಾಯವನ್ನೂ ಮಾಡಿದಂತಾಗುತ್ತದೆ. ಬೇಕಾದ ಆಕಾರದಲ್ಲಿ ದೊಡ್ಡದು, ಚಿಕ್ಕದು ಹೀಗೆ ವಿಧ ವಿಧ ಗಾತ್ರದ ಡ್ರಾಯರ್‌ಗಳನ್ನು ಅಳವಡಿಸಬಹುದು.

---

ಪಟ್ಟಣಗಳಲ್ಲಿ ಹಾಗೂ ಹಳ್ಳಿಗಳಲ್ಲೂ ಕಡಿಮೆ ವಿಸ್ತೀರ್ಣ ಹೊಂದಿರುವ ಮನೆ ಕಟ್ಟಿಸಿದಾಗ ಜಾಗದ ಕೊರತೆ ಕಾಡುವುದು ಸಹಜ. ಆದರೆ ಇರುವ ಜಾಗವನ್ನೇ ಬಳಸಿಕೊಂಡು, ಸುಂದರವಾಗಿ ಕಾಣುವಂತೆ ಮನೆಯನ್ನು ರೂಪಿಸಬಹುದು. ಒಂದಷ್ಟು ಖರ್ಚು ಬರಬಹುದು ನಿಜ, ಆದರೆ ಪ್ರತಿದಿನ ಜಾಗವಿಲ್ಲ ಎಂದು ಗೊಣಗಾಡುವುದನ್ನು ತಪ್ಪಿಸಬಹುದು.

ಪ್ರತಾಪ್ ಶೆಟ್ಟಿ, ಒಳಾಂಗಣ ವಿನ್ಯಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT