ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಂತ ಇತಿಹಾಸದ ಪುಟ ಸೇರಿದ ಹಾಡೋನಹಳ್ಳಿ

ಕಣ್ಣೇದುರೇ ಕರುಳ ಕುಡಿಗಳು ಮುಳುಗುವ ದೃಶ್ಯ ನೋಡಿ ದಿಗ್ಭ್ರಮೆಗೆ ಒಳಗಾಗಿರುವ ಪೋಷಕರು
Last Updated 9 ಸೆಪ್ಟೆಂಬರ್ 2016, 11:00 IST
ಅಕ್ಷರ ಗಾತ್ರ

ಹಾಡೋನಹಳ್ಳಿ (ಶಿವಮೊಗ್ಗ ತಾ.): ತುಂಗಭದ್ರಾ ನದಿಯಲ್ಲಿ ತೆಪ್ಪ ಮುಳುಗಿ 12 ಜನರು ಬಲಿಯಾದ ಘಟನೆ  ಜಿಲ್ಲೆಯ ಇತಿಹಾಸದಲ್ಲೇ ಅತಿ ದೊಡ್ಡ ಜಲ ದುರಂತ.

1992ರಲ್ಲಿ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ಗಣೇಶ ವಿಸರ್ಜಿಸುವ ಸಮಯದಲ್ಲಿ ದೋಣಿ ಮುಳುಗಿ 9 ಜನ ಮೃತಪಟ್ಟಿದ್ದರು. ಜಿಲ್ಲೆಯ ಇತರೆ ಭಾಗಗಳಲ್ಲಿ ಗಣಪತಿ ವಿಸರ್ಜನೆ ವೇಳೆ ಹಲವು ಅವಘಡಗಳಲ್ಲಿ ಒಬ್ಬರು, ಇಬ್ಬರು ಮೃತಪಟ್ಟ ಉದಾಹರಣೆಗಳು ಇವೆ. ಆದರೆ, ಒಂದೇ ಬಾರಿಗೆ ಲಿಂಗನಮಕ್ಕಿ ಘಟನೆಯ ನಂತರ ಹೆಚ್ಚಿನ ಸಂಖ್ಯೆಯ ಜನರು ಜಲ ಸಮಾಧಿಯಾಗಿರುವುದು ಜಿಲ್ಲೆಯಲ್ಲಿ ಇದೇ ಮೊದಲು. ಆ ಮೂಲಕ ಶಿವಮೊಗ್ಗ ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮ ಜಿಲ್ಲೆಯ ದುರಂತ ಇತಿಹಾಸದ ಪುಟ ಸೇರಿದೆ.

ತಾಯಿ–ತಂದೆ, ಬಂಧುಗಳ ಕಣ್ಣೆದುರೇ ಜಲ ಸಮಾಧಿ: ದುರಂತ ನಡೆದಾಗ ಗ್ರಾಮದ ಎಲ್ಲರೂ ನದಿ ತೀರದಲ್ಲೇ ಇದ್ದರು. ಮೃತಪಟ್ಟ ಬಹುತೇಕ ಮಂದಿಯ ತಾಯಿ–ತಂದೆ, ಬಂಧುಗಳು ಗಣೇಶ ವಿಸರ್ಜನೆ ವೀಕ್ಷಿಸಲು ಆಗಮಿಸಿದ್ದರು. ನದಿ ತೀರದ ಮಧ್ಯೆ ಹೋಗಿದ್ದ ತೆಪ್ಪ ನಿಧಾನವಾಗಿ ಮುಳುಗಿತು. ಎಲ್ಲರ ಕಣ್ಣೆದುರೇ ಕರುಳ ಕುಡಿಗಳು ನೀರು ಪಾಲಾಗುತ್ತಿದ್ದ ದೃಶ್ಯ ನೋಡಿ ಆಘಾತಕ್ಕೆ ಒಳಗಾಗಿದ್ದರು.

ಇದೇ ಮೊದಲ ಬಾರಿ ಸಮ್ಮತಿಸಿದ್ದ ಅಪ್ಪ: ದುರಂತದಲ್ಲಿ ಏಕ ಕಾಲಕ್ಕೆ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡ ಕೃಷಿಕ ಶೇಖರಪ್ಪ ಅವರು ಮಕ್ಕಳ ಹಠಕ್ಕೆ ಮಣಿದು ಇದೇ ಮೊದಲ ಬಾರಿಗೆ ಗಣೇಶ ಮೂರ್ತಿ ವಿಸರ್ಜನೆ ಹೋಗಲು ಸಮ್ಮತಿಸಿದ್ದರು.

ಹಿರಿಯ ಮಗ ವೀರೇಶ ಎಟಿಎಸ್‌ ಮಾಡಿಕೊಂಡು ಹೊಳಲೂರಿನ ಮೆಸ್ಕಾಂ ಕಚೇರಿಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸಕ್ಕೆ ಸೇರಿದ್ದ. ಮೂರು ಪಾಳಿಯ ಕೆಲಸವಾದ ಕಾರಣ ಮಧ್ಯಾಹ್ನ ಗಣಪತಿ ವಿಸರ್ಜಿಸಿ, ಮರುದಿನ ಎರಡು ಪಾಳಿ ಕೆಲಸ ಮಾಡುವ ಭರವಸೆ ನೀಡಿ ಕೆಲಸಕ್ಕೆ ರಜೆ ಹಾಕಿದ್ದ. ಆತನ ಸಹೋದರ ಜೀವನ್ ಶಿವಮೊಗ್ಗ ಪೆಸಿಟ್‌ ಕಾಲೇಜಿನಲ್ಲಿ ಮೂರನೇ ಸೆಮಿಸ್ಟರ್‌ ಬಿ.ಇ.  ಓದುತ್ತಿದ್ದು, ಕಾಲೇಜಿಗೆ ಚಕ್ಕರ್‌ ಹೊಡೆದು ಅಣ್ಣನ ಜತೆ ನದಿ ತೀರಕ್ಕೆ ತೆರಳಿದ್ದ. ಅಪ್ಪನ ಕಣ್ಣೆದುರೇ ಇಬ್ಬರು ತೆಪ್ಪ ಏರಿದ್ದರು. ಕೊನೆ ಕ್ಷಣದಲ್ಲಿ ಜನ ಸಂದಣಿ ಹೆಚ್ಚಾದ ಕಾರಣ ತಮ್ಮನ ಮಗ ನಿತಿನ್‌ನನ್ನೂ ತಡೆದು ಶೇಖರಪ್ಪ ಜತೆಯಲ್ಲೇ ನಿಲ್ಲಿಸಿಕೊಂಡಿದ್ದರು.

‘ಯಾವ ವರ್ಷವೂ ವಿಸರ್ಜನೆ ವೇಳೆ ತೆಪ್ಪದಲ್ಲಿ ತೆರಳಲು ಅವಕಾಶ ನೀಡಿರಲಿಲ್ಲ. ಓದು ಮುಗಿಸಿ, ಕೆಲಸಕ್ಕೆ ಸೇರಿದ್ದ ವೀರೇಶ್ ಈ ಬಾರಿ ಅನುಮತಿ ನೀಡುವಂತೆ ಮನವಿ ಮಾಡಿದ್ದ. ಇಬ್ಬರೂ ಕಣ್ಣೆದುರೇ ಜಲ ಸಮಾಧಿಯಾದರು. ಇಬ್ಬರ ಶವವೂ ಒಟ್ಟಿಗೆ ದೊರೆತಿದೆ. ತಮ್ಮನನ್ನು ರಕ್ಷಿಸಲು ವೀರೇಶ್‌ ಕೊನೆಯವರೆಗೂ ಪ್ರಯತ್ನಿಸಿದ್ದಾನೆ. ಏಳೂವರೆ ಎಕರೆ ಅಡಿಕೆ ತೋಟ. ಈಚೆಗಷ್ಟೇ ಕಟ್ಟಿದ ಮನೆ ಯಾರಿಗಾಗಿ ಬೇಕು’ ಎಂದು ಕಣ್ಣೀರಾದರು ಶೇಖರಪ್ಪ.

ಸೇತುವೆ ಬೇಡಿಕೆ ಈಡೇರುವ ಮುನ್ನವೇ ಇಲ್ಲವಾದ ಮಗ: ನಯನ್‌ ಅವರ ತಾಯಿ ಬೆನಕಮ್ಮ ಅಲ್ಲಿನ ಮಹಿಳಾ ಸಂಘದ ಅಧ್ಯಕ್ಷೆ. ಹಲವು ದಶಕಗಳಿಂದ ನದಿಯ ಎರಡೂ ದಂಡೆಯ ಮೇಲಿನ ಗ್ರಾಮಗಳ ಜನರು ಹೋಗಿ ಬರಲು ತೆಪ್ಪಗಳನ್ನೇ ಆಶ್ರಯಿಸಿದ್ದರು. ಅದಕ್ಕೆ ತಿಲಾಂಜಲಿ ಇಡಲು ನಿರ್ಧರಿಸಿದ್ದ ಬೆನಕಮ್ಮ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬಳಿ ಸೇತುವೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದರು. ಆನವೇರಿ–ಹಾಡೋನಹಳ್ಳಿ ಮಧ್ಯೆ ತೂಗು ಸೇತುವೆ ನಿರ್ಮಿಸುವ ಮಂಜೂರಾತಿ  ಕಡತ ವಿಧಾನ ಸೌಧದಲ್ಲಿದೆ. ಈ ಸಮಯದಲ್ಲೇ ಅವರು ತೆಪ್ಪ ದುರಂತದಲ್ಲಿ ಮಗನನ್ನು ಕಳೆದುಕೊಂಡಿದ್ದಾರೆ. ಇಂತಹ ಹಲವು ನೋವುಗಳೇ ದುರಂತಕ್ಕೀಡಾದವರ ಮನೆಗಳಲ್ಲಿ ಪ್ರತಿಧ್ವನಿಸುತ್ತಿತ್ತು.

ವೀಡಿಯೊ ಮಾಡಲು ಮೊಬೈಲ್‌ ನೀಡಿದ್ದರು: ದುರಂತದಲ್ಲಿ ಮಡಿದ ಹಲವರು ತೆಪ್ಪ ಏರುವ ಮುನ್ನ ಗೆಳೆಯರು, ಬಂಧುಗಳ ಬಳಿ  ತಮ್ಮ ಮೊಬೈಲ್‌ ನೀಡಿ ಗಣೇಶ ವಿಸರ್ಜನೆಯ ವೀಡಿಯೊ ಚಿತ್ರೀಕರಿಸಲು ಕೋರಿಕೊಂಡಿ ದ್ದರು. ಅವರದೇ ಮೊಬೈಲ್‌ಗಳು ಅವರ ದುರಂತ ಘಟನೆ ಚಿತ್ರೀಕರಿಸಿದ್ದು ವಿಪರ್ಯಾಸ.

ಜಿಲ್ಲಾಡಳಿತದ ಸಹಕಾರ; ಗಣ್ಯರ ಸಾಂತ್ವನ
ಜಿಲ್ಲಾಧಿಕಾರಿ ಪಿ.ವಿ.ಇಕ್ಕೇರಿ, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ್‌ ಖರೆ, ಉಪ ವಿಭಾಗಾಧಿಕಾರಿ ಕೃಷ್ಣಮೂರ್ತಿ, ಹೆಚ್ಚುವರಿ ಎಸ್‌ಪಿ ವಿನ್ಸೆಂಟ್‌ ಶಾಂತಕುಮಾರ್, ಡಿವೈಎಸ್‌ಪಿ ಮಂಜುನಾಥ್ ಶೆಟ್ಟಿ, ಶ್ರೀನಿವಾಸ್‌, ತಹಶೀಲ್ದಾರ್ ಸತ್ಯನಾರಾಯಣ ಸೇರಿದಂತೆ ಜಿಲ್ಲೆಯ ಎಲ್ಲ ಪ್ರಮುಖ ಅಧಿಕಾರಿಗಳೂ ಸ್ಥಳದಲ್ಲಿ ಹಾಜರಿದ್ದು ಮೃತ ದೇಹ ಪತ್ತೆ ಹಚ್ಚಲು ಎಲ್ಲ ರೀತಿಯ ಸಹಕಾರ ನೀಡಿದರು.

ಪೂರ್ವವಲಯ ಐಜಿಪಿ ನಂಜುಂಡಸ್ವಾಮಿ ಭೇಟಿ ನೀಡಿದ್ದರು. ಪೊಲೀಸರು ವಾಹನ ದಟ್ಟಣೆ ನಿಯಂತ್ರಿಸಿ, ಯಾವುದೇ ನೂಕಾಟವಿಲ್ಲದೆ ಎಲ್ಲರಿಗೂ ಅಂತಿಮ ದರ್ಶನ ಪಡೆಯಲು ಅವಕಾಶ ಮಾಡಿಕೊಟ್ಟರು. ಶಾಸಕಿ ಶಾರದಾ ಪೂರ್‍ಯಾನಾಯ್ಕ, ವಿಧಾನ ಪರಿಷತ್‌ ಸದಸ್ಯ ಭಾನುಪ್ರಕಾಶ್, ಜಿಲ್ಲಾ ಪಂಚಾಯ್ತಿ ಸದಸ್ಯ ಕಾಂತೇಶ್ ಸಾಕಷ್ಟು ಸಮಯ ನದಿ ತೀರದಲ್ಲೇ ಕಳೆದರು. ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ, ಬಿಜೆಪಿ ರಾಜ್ಯ ಘಟಕದ ಬಿ.ಎಸ್‌.ಯಡಿಯೂರಪ್ಪ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಗ್ರಾಮಕ್ಕೆ ಭೇಟಿ ನೀಡಿ, ನೊಂದ ಗ್ರಾಮಸ್ಥರಿಗೆ ಸಾಂತ್ವನ ಹೇಳಿದರು. ಕುಮಾರಸ್ವಾಮಿ ಪ್ರತಿ ಕುಟುಂಬಕ್ಕೂ ₹ 50 ಸಾವಿರ ನೀಡಿದರು.

ಶೋಕ ಸಾಗರದಲ್ಲಿ ಮುಳುಗಿದ ಗ್ರಾಮ
ಒಂದೇ ಬಾರಿಗೆ 12 ಜನರು ಮೃತಪಟ್ಟು, ಏಕಕಾಲಕ್ಕೆ ನಡೆದ 11 ಜನರ ಅಂತ್ಯ ಸಂಸ್ಕಾರ ವೀಕ್ಷಿಸಲು ನೂರಾರು ಹಳ್ಳಿಗಳ ಸಾವಿರಾರು ಜನರು ಭಾಗವಹಿಸಿದ್ದರು. ಒಂದು ಕಿ.ಮೀ. ಉದ್ದದ ಪತ್ಯೇಕ ಸರದಿಯಲ್ಲಿ ಮಹಿಳೆಯರು, ಪುರುಷರು ನಿಂತು ಪಾರ್ಥಿವ ಶರೀರಗಳ ಅಂತಿಮ ದರ್ಶನ ಪಡೆದರು. ಎಲ್ಲ 11 ಜನರ ಪಾರ್ಥಿವ ಶರೀರಗಳನ್ನೂ ಸ್ಮಾಶನಕ್ಕಾಗಿಯೇ ಮೀಸಲಿಟ್ಟಿದ್ದ ಶ್ರೀರಾಮೇಶ್ವರ ದೇವಸ್ಥಾನದ ಜಮೀನಿನಲ್ಲಿ ಸಮಾಧಿ ಮಾಡಲಾಯಿತು. ಇಬ್ಬರು ವಿವಾಹಿತರನ್ನು ಕೂರಿಸಿ, 9 ಅವಿವಾಹಿತರನ್ನು ಮಲಗಿಸಿ ಸಮಾಧಿ ಮಾಡಲಾಯಿತು. ಹೆಚ್ಚಿನ ಸಂಖ್ಯೆಯ ಯುವಕರನ್ನೇ ಕಳೆದುಕೊಂಡ ಇಡೀ ಗ್ರಾಮ ಶೋಕ ಸಾಗರದಲ್ಲಿ ಮುಳುಗಿತ್ತು.

ಮಾನವೀಯತೆ ಮರೆದ ಗ್ರಾಮಸ್ಥರು
ಶೋಕ ಸಾಗರದಲ್ಲಿ ಇಡೀ ಗ್ರಾಮ ಮುಳುಗಿದ್ದರೂ, ಪಾರ್ಥಿವ ಶರೀರ ವೀಕ್ಷಿಸಲು ಆಗಮಿಸಿದ ಇತರೆ ಗ್ರಾಮಗಳ ಜನರಿಗೆ, ಕಾರ್ಯಾಚರಣೆಗೆ ಆಗಮಿಸಿದ ಅಧಿಕಾರಿಗಳು, ಸಿಬ್ಬಂದಿಗೆ ನೀರು, ಉಪಾಹಾರ ನೀಡುವ ಮೂಲಕ ಗ್ರಾಮದ ಜನರು ಮಾನವೀಯತೆ ಮೆರೆದರು.

ಸಮಾಧಿ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ
ಜಿಲ್ಲಾ ಆರೋಗ್ಯ  ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜೇಶ್‌ ಸೂರಗಿಹಳ್ಳಿ ನೇತೃತ್ವದಲ್ಲಿ ಡಾ.ವೇಣುಗೋಪಾಲ್‌, ಡಾ.ಅಶೋಕ್, ಡಾ.ದೇವರಾಜ್, ಡಾ.ರಾಜೇಂದ್ರ, ಡಾ.ದಿನೇಶ್‌ ಹಾಗೂ ಡಾ.ಗೀತಾ ಅವರು ಸಮಾಧಿ ಸ್ಥಳದಲ್ಲೇ ಎಲ್ಲ 11 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದರು.

ಪರಿಹಾರ: ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ ₹ 1ಲಕ್ಷ ಪರಿಹಾರ ನೀಡಲಾಗುವುದು ಎಂದು ಸಚಿವ ಕಾಗೋಡು ತಿಮ್ಮಪ್ಪ ಹಾಡೋನಹಳ್ಳಿಯಲ್ಲಿ  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT