₹4 ಲಕ್ಷಕ್ಕೆ ಯಕೃತ್ ಕಸಿ ಶಸ್ತ್ರಚಿಕಿತ್ಸೆ!

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ₹25–40 ಲಕ್ಷ ವೆಚ್ಚದಲ್ಲಿ ಮಾಡುವ ಯಕೃತ್ (ಲಿವರ್) ಕಸಿ ಶಸ್ತ್ರಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ ₹4 ಲಕ್ಷಕ್ಕೆ ಮಾಡಲಾಗುತ್ತದೆ!
ಹೌದು, ವಿಕ್ಟೋರಿಯಾ ಆಸ್ಪತ್ರೆ ಆವರಣದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿರುವ (ಪಿಎಂಎಸ್‌ಎಸ್‌ವೈ) ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಅಂಗಾಂಗ ಕಸಿ ವಿಜ್ಞಾನ ಸಂಸ್ಥೆಯಲ್ಲಿ ಕಡಿಮೆ ವೆಚ್ಚದಲ್ಲಿ ಯಕೃತ್ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ.
ಯಕೃತ್ ಕಸಿ ಮಾಡುತ್ತಿರುವ ಸರ್ಕಾರಿ ಆಸ್ಪತ್ರೆಗಳ ಪೈಕಿ ಗ್ಯಾಸ್ಟ್ರೋ ಎಂಟರಾಲಜಿ ಸಂಸ್ಥೆಯು ದೇಶದಲ್ಲೇ ಎರಡನೆಯ ಸಂಸ್ಥೆಯಾಗಿದೆ. ರಾಜ್ಯ ಸರ್ಕಾರವು ಕಳೆದ ವರ್ಷ ಯಕೃತ್ ಕಸಿ ಘಟಕವನ್ನು ಸ್ಥಾಪಿಸಿದ್ದು, ಇದಕ್ಕಾಗಿ ₹7 ಕೋಟಿ ಅನುದಾನ ಹಾಗೂ 25 ಮಂದಿ ಸಿಬ್ಬಂದಿಯನ್ನು ಒದಗಿಸಿದೆ. ಕಳೆದ ಆರು ತಿಂಗಳಲ್ಲಿ ನಾಲ್ಕು ಯಕೃತ್ ಕಸಿ ಮಾಡಲಾಗಿದೆ.
‘ಈ ಶಸ್ತ್ರಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ₹25–40 ಲಕ್ಷ ವೆಚ್ಚವಾಗುತ್ತದೆ. ಗ್ಯಾಸ್ಟ್ರೋ ಎಂಟರಾಲಜಿ ಸಂಸ್ಥೆಯಲ್ಲಿ ₹4 ಲಕ್ಷ ಶುಲ್ಕ ವಿಧಿಸಲಾಗುತ್ತದೆ. ಬಿಪಿಎಲ್ ಕಾರ್ಡುದಾರರಿಗೆ ₹2 ಲಕ್ಷ ಹಾಗೂ ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ’ ಎಂದು ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಅಂಗಾಂಗ ಕಸಿ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಎನ್.ಎಸ್.ನಾಗೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಯಕೃತ್, ಜಠರಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ₹4 ಲಕ್ಷ ಶುಲ್ಕವಿದ್ದರೆ, ಇಲ್ಲಿ ₹4–5 ಸಾವಿರ ಇದೆ. ಎಸ್‌ಸಿ, ಎಸ್‌ಟಿ ಹಾಗೂ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ’ ಎಂದರು.
‘ದೇಶದಲ್ಲಿ ಯಕೃತ್ ಕಸಿಗಾಗಿ ಪ್ರತಿವರ್ಷ 2 ಲಕ್ಷ ರೋಗಿಗಳು ಅರ್ಜಿ ಸಲ್ಲಿಸುತ್ತಾರೆ. ಆದರೆ, 2 ಸಾವಿರ ರೋಗಿಗಳಿಗೆ ಮಾತ್ರ ಯಕೃತ್ ಕಸಿ ಮಾಡಲಾಗುತ್ತಿದೆ’ ಎಂದು ಹೇಳಿದರು.
ಯಕೃತ್ ಕಸಿ ಸವಾಲಿನ ಕೆಲಸ: ‘ಯಕೃತ್ ಕಸಿ ಶಸ್ತ್ರಚಿಕಿತ್ಸೆ ನಡೆಸಲು 12 ಗಂಟೆ ಹಿಡಿಯುತ್ತದೆ. ಇದಕ್ಕೂ ಮುನ್ನ ಏಳು ದಿನಗಳ ಕಾಲ ರೋಗಿಯನ್ನು ತುರ್ತು ನಿಗಾ ಘಟಕದಲ್ಲಿಡಲಾಗುತ್ತದೆ. ಈ ಅವಧಿಯಲ್ಲಿ ರೋಗಿಗೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಹೀಗಾಗಿ ವೈದ್ಯರು ರೋಗಿಯ ಮೇಲೆ ನಿಗಾ ಇಟ್ಟಿರುತ್ತಾರೆ. ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಅಂಗಾಂಗ ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇರುತ್ತದೆ’ ಎಂದರು.
ಎಂಸಿಎಚ್ ಕೋರ್ಸ್: ‘ಗ್ಯಾಸ್ಟ್ರೋ ಎಂಟರಾಲಜಿ ಸಂಸ್ಥೆಯು ಎಂಸಿಎಚ್ ಸೂಪರ್ ಸ್ಪೆಷಾಲಿಟಿ ಕೋರ್ಸ್ ನಡೆಸುತ್ತಿದೆ. ರಾಜ್ಯದ ಬೇರಾವ ಸಂಸ್ಥೆಯೂ ಈ ಕೋರ್ಸ್ ಅನ್ನು ನಡೆಸುತ್ತಿಲ್ಲ. ಇದರ ಜತೆಗೆ ಫೆಲೋಷಿಪ್ ಕೋರ್ಸ್‌ಗಳನ್ನು ನಡೆಸುತ್ತಿದ್ದು, ಈವರೆಗೂ 28 ಗ್ಯಾಸ್ಟ್ರೋ ಎಂಟರಾಲಜಿಸ್ಟ್‌ಗಳು ತರಬೇತಿ ಪಡೆದಿದ್ದಾರೆ. ಹೀಗೆ ತರಬೇತಿ ಪಡೆದವರು ಜಿಲ್ಲಾ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.
‘ಕಳೆದ ವರ್ಷ ಗ್ಯಾಸ್ಟ್ರೋ ಎಂಟರಾಲಜಿ ಕಾಯಿಲೆಗಳಿಗೆ ಸಂಬಂಧಿಸಿದಂತೆ 19,628 ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ. ಆ್ಯಸಿಡ್ ಕುಡಿದವರು, ಅನ್ನನಾಳ, ಜಠರ ಸಂಬಂಧಿತ ಕಾಯಿಲೆಗಳಿಗೆ ತುತ್ತಾದವರು, ಬೊಜ್ಜು ಕಡಿಮೆ ಮಾಡಿಸಿಕೊಳ್ಳುವವರು ಆಸ್ಪತ್ರೆಗೆ ಬರುತ್ತಾರೆ. ಅವರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಪ್ರಯತ್ನಿಸುತ್ತಿದ್ದೇವೆ’ ಎಂದು ತಿಳಿಸಿದರು.
ಸಂಪರ್ಕ ವಿಳಾಸ: ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಅಂಗಾಂಗ ಕಸಿ ವಿಜ್ಞಾನ ಸಂಸ್ಥೆ, ವಿಕ್ಟೋರಿಯಾ ಆಸ್ಪತ್ರೆ ಆವರಣದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಪಿಎಂಎಸ್‌ಎಸ್‌ವೈ), ಬೆಂಗಳೂರು. ದೂರವಾಣಿ ಸಂಖ್ಯೆ 080– 2698 1893. ಇ–ಮೇಲ್: drnageshns@gmail.com.
*
ಸಂಸ್ಥೆಗೆ ಪ್ರತ್ಯೇಕ ಕಟ್ಟಡ
‘ಯಕೃತ್ ಕಸಿಗೆಂದೇ ದೇಶದಲ್ಲೇ ಮೊದಲ ಬಾರಿಗೆ ‘ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಅಂಗಾಂಗ ಕಸಿ ವಿಜ್ಞಾನ ಸಂಸ್ಥೆ’ ಎಂಬ ಸ್ವಾಯತ್ತ ಸಂಸ್ಥೆಯನ್ನು ರಾಜ್ಯ ಸರ್ಕಾರ ಹುಟ್ಟುಹಾಕಿದೆ. ಈ ಸಂಸ್ಥೆಗಾಗಿ ನಿಮ್ಹಾನ್ಸ್ ಬಳಿ 10 ಎಕರೆ ಜಾಗ ನೀಡಿದ್ದು, ಅಲ್ಲಿ 500 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಗೊಳ್ಳಲಿದೆ’ ಎಂದು ಡಾ. ನಾಗೇಶ್ ತಿಳಿಸಿದರು.
‘ನಿಮ್ಹಾನ್ಸ್ ಬಳಿ ಕಟ್ಟಡ ನಿರ್ಮಾಣವಾಗುವವರೆಗೂ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನರ್ಸಿಂಗ್ ಸ್ಕೂಲ್ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಗ್ಯಾಸ್ಟ್ರೋ ಎಂಟರಾಲಜಿ ಸಂಸ್ಥೆ ಕಾರ್ಯಾರಂಭ ಮಾಡಲಿದೆ. ಇಲ್ಲಿ 150 ಹಾಸಿಗೆಗಳ ಸೌಲಭ್ಯ ಕಲ್ಪಿಸಲಾಗುತ್ತದೆ’ ಎಂದರು.
‘ನಿಮ್ಹಾನ್ಸ್‌ನಲ್ಲಿ ಮಿದುಳು ನಿಷ್ಕ್ರಿಯಗೊಳ್ಳುವ ವ್ಯಕ್ತಿಗಳು ಸಿಗುತ್ತಾರೆ. ಆದರೆ, ಅವರ ಅಂಗಾಂಗಗಳನ್ನು ಪಡೆದುಕೊಳ್ಳುವಷ್ಟು ಸಮಯ ಹಾಗೂ ಸೌಲಭ್ಯ ನಿಮ್ಹಾನ್ಸ್‌ನಲ್ಲಿ ಇಲ್ಲ. ಅಲ್ಲಿ ಅಂಗಾಂಗ ಕಸಿ ವಿಜ್ಞಾನ ಸಂಸ್ಥೆ ಸ್ಥಾಪನೆಯಾದರೆ ಅಂಗಾಂಗಗಳನ್ನು ಪಡೆದುಕೊಳ್ಳುವುದು ಸುಲಭವಾಗುತ್ತದೆ. ಮಿದುಳು ನಿಷ್ಕ್ರಿಯಗೊಳ್ಳುವ ವ್ಯಕ್ತಿಯ ಸಂಬಂಧಿಕರನ್ನು ಮನವೊಲಿಸಿ ಅಂಗಾಂಗ ದಾನ ಪಡೆಯಲಾಗುವುದು. ಪ್ರತಿದಿನ 5–10 ಅಂಗಾಂಗ ಪಡೆಯುವ ಉದ್ದೇಶವಿದೆ’ ಎಂದು ತಿಳಿಸಿದರು.
*
ಯಕೃತ್ ಕಸಿಗಾಗಿ 150ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಯಕೃತ್ ಸಿಗುತ್ತಿಲ್ಲ. ಅಂಗಾಂಗ ದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ.
–ಡಾ.ಎನ್.ಎಸ್. ನಾಗೇಶ್,
ನಿರ್ದೇಶಕ, ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಅಂಗಾಂಗ ಕಸಿ ವಿಜ್ಞಾನ ಸಂಸ್ಥೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.