ಸೋಮವಾರ, ಜೂಲೈ 6, 2020
23 °C

ಪ್ಯಾರಿಸ್‌ ಒಪ್ಪಂದ ಜಾರಿಗೆ ಸಂಪುಟ ಒಪ್ಪಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

ಪ್ಯಾರಿಸ್‌ ಒಪ್ಪಂದ ಜಾರಿಗೆ ಸಂಪುಟ ಒಪ್ಪಿಗೆ

ನವದೆಹಲಿ: ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಅನುಮೋದನೆ ನೀಡಲು ಕೇಂದ್ರ ಸಚಿವ ಸಂಪುಟವು ಬುಧವಾರ ಒಪ್ಪಿಗೆ ನೀಡಿದ್ದು, ಮಹಾತ್ಮಾ ಗಾಂಧಿ ಜನ್ಮ ದಿನಾಚರಣೆ ದಿನವಾದ ಅಕ್ಟೋಬರ್ 2ರಿಂದ ಒಪ್ಪಂದ ಅಧಿಕೃತವಾಗಿ ಜಾರಿಯಲ್ಲಿ ಬರಲಿದೆ.ಜಾಗತಿಕ ತಾಪಮಾನ ನಿಯಂತ್ರಣ ಕ್ರಮಗಳನ್ನು ಶೀಘ್ರದಲ್ಲಿ ಜಾರಿ ಮಾಡಲಾಗುತ್ತದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ ಮಾರನೇ ದಿನವೇ ಸಚಿವ ಸಂಪುಟ ಒಪ್ಪಂದಕ್ಕೆ ಅನುಮೋದನೆ ನೀಡಿರುವುದರಿಂದ ತಾಪಮಾನ ನಿಯಂತ್ರಣ ಕ್ರಮಗಳ ಅನುಷ್ಠಾನದ ವೇಗ ಹೆಚ್ಚಲಿದೆ.ಪ್ಯಾರಿಸ್ ಹವಾಮಾನ ಒಪ್ಪಂದ ಏರ್ಪಡಲು ಭಾರತ ಮಹತ್ತರ ಪಾತ್ರ ವಹಿಸಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.ಪ್ಯಾರಿಸ್ ಒಪ್ಪಂದವನ್ನು ಅನುಮೋದಿಸುವ ಮೂಲಕ ಜಾಗತಿಕ ತಾಪಮಾನ ಕುಗ್ಗಿಸಿ ಪರಿಸರ ಸಮತೋಲನ ಕಾಪಾಡಲು ಭಾರತ ಬದ್ಧತೆಯನ್ನು ತೋರಿಸಿದೆ ಎಂದು ಅವರು ವರದಿಗಾರರಿಗೆ ತಿಳಿಸಿದರು.ಕನಿಷ್ಠಪಕ್ಷ 55 ರಾಷ್ಟ್ರಗಳು ಒಪ್ಪಂದವನ್ನು ಅನುಮೋದಿಸಿ ಹಸಿರುಮನೆ  ತ್ಯಾಜ್ಯ ಹೊರಸೂಸುವಿಕೆ ಪ್ರಮಾಣವನ್ನು ಶೇಕಡ 55ರಷ್ಟು ಕುಗ್ಗಿಸುವುದು ಒಪ್ಪಂದದ ಪ್ರಮುಖ ಅಂಶ. ಈಗಾಗಲೇ 61 ರಾಷ್ಟ್ರಗಳು ಒಪ್ಪಂದವನ್ನು ಅನುಮೋದಿಸಿವೆ ಎಂದು ಸಚಿವರು ತಿಳಿಸಿದರು. ಹಸಿರುಮನೆ ತ್ಯಾಜ್ಯ ಹೊರಸೂಸುವ ಪ್ರಮಾಣವನ್ನು ಶೇಕಡ 51.89ಕ್ಕೆ ಇಳಿಸುವ ಗುರಿಯನ್ನು ಭಾರತ ಹಾಕಿಕೊಂಡಿದೆ ಎಂದು ಹೇಳಿದರು.ಉಷ್ಣತೆಯ ಪ್ರಮಾಣವು 2 ಡಿಗ್ರಿ ಸೆಲ್ಸಿಯಸ್‌ಗಿಂತ ಜಾಸ್ತಿ ಏರಿಕೆಯಾಗದಂತೆ  ನೋಡಿಕೊಳ್ಳಬೇಕು ಎಂದು ಒಪ್ಪಂದ ಆಗಿರುವುದರಿಂದ ಅದನ್ನು ಸಾಧಿಸಲು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.ಭಾರತವು ಪ್ಯಾರಿಸ್ ಒಪ್ಪಂದಕ್ಕೆ ಅನುಗುಣವಾಗಿ ತಾಪಮಾನ ಕುಗ್ಗಿಸಲು ಮುಂದಾಗಿರುವುದರಿಂದ ಇತರ ರಾಷ್ಟ್ರಗಳು ಸಹ 2020ರ ಪೂರ್ವದ ಕ್ರಿಯಾ ಯೋಜನೆಯನ್ನು ಜಾರಿ ಮಾಡಬೇಕು ಎಂದು ಜಾವಡೇಕರ್ ಅವರು ಹೇಳಿದರು.ರೈಲ್ವೆ ನೌಕರರ ಬೋನಸ್‌ಗೆ ಹಸಿರು ನಿಶಾನೆ: ರೈಲ್ವೆ ನೌಕರರಿಗೆ 78 ದಿನಗಳ ಸಂಬಳವನ್ನು ಬೋನಸ್ ಆಗಿ ನೀಡುವ ತೀರ್ಮಾನಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.ಪತ್ರಾಂಕಿತ ಅಧಿಕಾರಿಗಳು ಮತ್ತು ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಹೊರತುಪಡಿಸಿ ಉಳಿದ ನೌಕರರು 2015–16ನೇ ಸಾಲಿನ ಬೋನಸ್‌ ಪಡೆಯಲು ಅರ್ಹರಾಗಿದ್ದಾರೆ.ಭಾರತೀಯ ರೈಲ್ವೆಯು ಕಳೆದ ಐದು ವರ್ಷಗಳಿಂದ ತನ್ನ ನೌಕರರಿಗೆ ಬೋನಸ್ ನೀಡುತ್ತ ಬಂದಿದೆ. 12 ಲಕ್ಷ ನೌಕರರಿಗೆ ಬೋನಸನ್ನು ಪ್ರತಿ ವರ್ಷ ದಸರಾ ಹಬ್ಬದ ಮೊದಲು ನೀಡಲಾಗುತ್ತಿದೆ. ಬೋನಸ್ ನೀಡುವುದರಿಂದ ರೈಲ್ವೆಗೆ ` 2090.96 ಕೋಟಿ ವೆಚ್ಚವಾಗಲಿದೆ.

ಮೋದಿ ಶ್ಲಾಘಿಸಿದ ಅಮೆರಿಕ

ವಾಷಿಂಗ್ಟನ್‌(ಪಿಟಿಐ):
ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ಪ್ಯಾರಿಸ್ ಒಪ್ಪಂದವನ್ನು ಅಕ್ಟೋಬರ್‌ 2 ರಂದು ಅನುಮೋದಿಸುವುದಾಗಿ  ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಅಮೆರಿಕ ಶ್ಲಾಘಿಸಿದೆ.

ಭಾರತ ಸರ್ಕಾರದ ಈ ನಿರ್ಧಾರವನ್ನು ಅಮೆರಿಕ ಅಭಿನಂದಿಸಿದ್ದು, ಇದು ಮೋದಿಯವರ ದಿಟ್ಟ ನಾಯಕತ್ವಕ್ಕೆ ಉದಾಹರಣೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೋಷ್ ಅರ್ನೆಸ್ಟ್‌ ಹೇಳಿದ್ದಾರೆ.ಅಂತರರಾಷ್ಟ್ರೀಯ ಸಮುದಾಯದಲ್ಲಿ ಭಾರತ ಪ್ರಮುಖ ರಾಷ್ಟ್ರವಾಗಲು ಈ ಒಪ್ಪಂದ ಎಷ್ಟು ಅವಶ್ಯಕವಾದುದು ಎಂದು ಮೋದಿಯವರು ಕಂಡುಕೊಂಡಿದ್ದಾರೆ ಎಂದು ಅರ್ನೆಸ್ಟ್‌ ಅವರು ಹೇಳಿದ್ದಾರೆ.

‘ಸಕ್ಷಂ’ಗೆ ಅಸ್ತು

ಕೇಂದ್ರ ಅಬಕಾರಿ ಮತ್ತು ಸುಂಕ ಮಂಡಳಿಗೆ (ಸಿಬಿಇಸಿ) ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಬೇಕಿರುವ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ‘ಸಕ್ಷಂ’ ಜಾರಿಗೆ ₹ 2,256 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ. ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ ಈ ತೀರ್ಮಾನ ಕೈಗೊಂಡಿದೆ.

ಷರತ್ತುಬದ್ಧ ಅನುಮೋದನೆ

* ಭಾರತದ ಅಭಿವೃದ್ಧಿ ಕಾರ್ಯಸೂಚಿಗೆ ಅನುಗುಣವಾಗಿ ಒಪ್ಪಂದಕ್ಕೆ ಅನುಮೋದನೆ

* ಒಪ್ಪಂದ ಜಾರಿಗೆ ಮೊದಲು ಭಾರತಕ್ಕೆ ಪರಿಸರಸ್ನೇಹಿ ತಂತ್ರಜ್ಞಾನ ಲಭ್ಯವಾಗಬೇಕು

* ಹಣಕಾಸಿನ ಲಭ್ಯತೆ ಬಗ್ಗೆ ಕೂಡ ಚಿಂತನೆ ಅಗತ್ಯ

* ಜಾಗತಿಕ ಬದ್ಧತೆ ಬಗ್ಗೆ ಮೌಲ್ಯಮಾಪನ

* ಅನುಮೋದನೆ ಪ್ರಕ್ರಿಯೆ ಪುನರ್‌ರಚನೆ ಅವಕಾಶ ಮುಕ್ತವಾಗಿರಿಸಲಾಗಿದೆ

* ರಾಷ್ಟ್ರೀಯ ಗುರಿಗಳ ಬಗ್ಗೆ ಮರುಚಿಂತನೆಯ ಅವಕಾಶವೂ ಇದೆ

* ಅನುಮೋದನೆ ಮಾಡಿರುವುದರಿಂದ ನಿಯಮ ರಚನೆಯಲ್ಲಿ ಭಾರತದ ನಿಲುವು ಸೇರ್ಪಡೆಗೆ ಅವಕಾಶ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.