ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಹೇಳುವ ಅಪ್ಪ, ಸುಮ್ಮನಿರದ ಮಗಳು

ಸಕಾರ
Last Updated 11 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

‘ನನ್ನ ಅಪ್ಪ ಪರಪಂಚದ ಬೆಸ್ಟ್‌ ಅಪ್ಪ...’
– ಪತ್ರದ ಮೊದಲ ಸಾಲು ಓದುತ್ತಿದ್ದಂತೆಯೇ ನಡು ಹರೆಯದ ಅಪ್ಪನ ಮೊಗದಲ್ಲಿ ನಗು ಆವರಿಸಿತ್ತು. ಅಪ್ಪನ ಬರ್ತ್‌ಡೇಗೆಂದು ಮಗಳು ಬರೆದುಕೊಟ್ಟಿದ್ದ ಪತ್ರ ಅದು.

ಒಂದನೇ ಕ್ಲಾಸ್‌ನ ಹುಡುಗಿ ತನಗೆ ಬರುವ ಎಲ್ಲ ಪದಗಳನ್ನೂ ಹಾಳೆಯೊಂದರ ಮೇಲೆ ತುಂಬಿಸಿದ್ದಳು. ಅಪ್ಪನಿಗೆ ಕೊಡುವ ಆ ಪತ್ರ ಸ್ಪೆಷಲ್ ಅಲ್ಲವೇ? ಬಿಳಿ ಹಾಳೆಯ ಮೇಲೆ ಸೀಸದಕಡ್ಡಿಯ ಬೂದು ಬಣ್ಣವಷ್ಟೇ ಇದ್ದರೆ ಏನು ಚಂದ? ಅದಕ್ಕೇ ಒಂದಿಷ್ಟು ಚಿತ್ರಗಳು, ಆ ಚಿತ್ರಗಳಿಗೆ ಬಣ್ಣದ ಮೆರುಗೂ ಇತ್ತು. ಇಡಿಕಿರಿದಿದ್ದ ಬಣ್ಣದೋಕುಳಿಯ ನಡುವೆ ಅಲ್ಲಲ್ಲಿ ಅಕ್ಷರಗಳು ಬಚ್ಚಿಟ್ಟುಕೊಂಡಿದ್ದವು.

‘ನನ್ನಪ್ಪನಂಥ ಅಪ್ಪನೇ ಪರಪಂಚದಲ್ಲಿ ಇಲ್ಲ. ನನ್ನಪ್ಪನಷ್ಟು ಚಂದವಾಗಿರುವ ಮನುಷ್ಯನೇ ಇಲ್ಲ. ಅಪ್ಪನಿಗೆ ಎಷ್ಟೊಂದು ಲೆಕ್ಕಗಳು ಗೊತ್ತು, ಎಷ್ಟೊಂದು ಕಥೆ– ಹಾಡು ಹೇಳ್ತಾರೆ, ನನ್ನ ಯಾವಾಗ್ಲೂ ನಗಿಸ್ತಾರೆ. ಅಪ್ಪನ್ನ ಕಂಡ್ರೆ ದೇವಸ್ಥಾನದ ಭಿಕ್ಷುಕರಿಗೂ– ಹೋಟೆಲ್ ವೇಟರ್‌ಗಳಿಗೂ ಪಂಚಪ್ರಾಣ ಅಂತೀನಿ. ಅಪ್ಪ ನಂಗೆ ಐಸ್‌ಕ್ರೀಂ ಕೊಡಿಸ್ತಾರೆ. ಸ್ಕೂಲಲ್ಲಿ ನಂಗೆ ಪ್ರೈಜ್ ಕೊಟ್ರೆ ಅಪ್ಪ ಕೂತ ಜಾಗದಲ್ಲೇ ಡಾನ್ಸ್‌ ಮಾಡಿಬಿಟ್ರು. ಅಪ್ಪನ್ನ ಇನ್ನೊಂದ್ಸಲ ಕುಣಿಸೋಕಾದ್ರೂ ನಾನು ತಿರಗಾ ಪ್ರೈಜ್ ತಗೋಬೇಕು ಅನ್ನಿಸ್ತು. ಅಪ್ಪ ನಿಜಕ್ಕೂ ಗ್ರೇಟ್‌’.

‘ಆದರೆ...’
ಇಲ್ಲಿಯವರೆಗೂ ಮಗಳು ಬರೆದುಕೊಟ್ಟ ಪತ್ರವನ್ನು ಖುಷಿಯಾಗಿ ಓದುತ್ತಾ, ತನಗೇ ಗೊತ್ತಿಲ್ಲದೆ ಕುಣಿಯುತ್ತಾ– ತೊನೆಯುತ್ತಿದ್ದ ಅಪ್ಪ ಗಂಭೀರವಾಗಿ ನಿಂತುಬಿಟ್ಟ. ಮಂಜಾದ ಕಣ್ಣುಗಳಿಗೆ ಮುಂದಿನ ಸಾಲು ಓದಲು ಸಾಧ್ಯವಾಗಲಿಲ್ಲ. ಮಗಳು ಕನ್ನಡಕ ತೆಗೆದಳು ಅಪ್ಪ ಕಣ್ಣೊರೆಸಿಕೊಂಡ. ಮತ್ತೆ ಕನ್ನಡಕ ಏರಿಸಿಕೊಂಡು ಪತ್ರ ದಿಟ್ಟಿಸಿದ.

‘ಅಪ್ಪ ನಿಜಕ್ಕೂ ಗ್ರೇಟ್, ಆದ್ರೆ ಸಿಕ್ಕಾಪಟ್ಟೆ ಸುಳ್ಳು ಹೇಳುತ್ತಾರೆ. ನನಗೆ ಗೊತ್ತಾಗಲ್ಲ ಅಂತ ಅಂದ್ಕೊಂಡಿದ್ದಾರೆ. ನಾನೀಗ ಬೆಳೆದಿಲ್ವಾ? ನನಗೆ ಬುದ್ಧಿ ಇಲ್ವಾ? ಅಪ್ಪ, ಯಾಕೆ ನನಗೆ ಸುಳ್ಳು ಹೇಳ್ತೀ? ನಿನಗೆ ಬೇಜಾರಾಗಬಾರದು ಅಂತ ನಾನು ಎಷ್ಟು ದಿನ ಅಂತ ಅದನ್ನೆಲ್ಲಾ ನಂಬ್ಲಿ?’

‘ಅಪ್ಪ ನಿನ್ನ ಹಳೆ ಕೆಲಸ ಹೋಗಿದೆ, ಬೇರೆ ಕೆಲಸ ಹುಡುಕ್ತಾ ಇದ್ದೀಯಾ. ಆದ್ರೂ ನಂಗೆ ಹೇಳಿಲ್ಲ. ಅವತ್ತು ಕೆ.ಆರ್.ಮಾರ್ಕೆಟ್‌ನಲ್ಲಿ ಕೂಲಿ ಕೆಲಸ ಮಾಡಿ ಮನೆಗೆ ಬಂದು ಸುಸ್ತೇ ಆಗಿಲ್ಲ ಅಂತ ಸುಳ್ಳು ಹೇಳಿದ್ದೆ. ನೀನೆಷ್ಟು ಸುಸ್ತಾಗಿದ್ದೆ ಅಂದ್ರೆ ಅಡುಗೆ ಮಾಡೋಕು ನಿಂಗೆ ಆಗಲಿಲ್ಲ. ಹೋಟೆಲ್‌ಗೆ ಕರ್ಕೊಂಡು ಹೋಗಿ ನನಗೆ ಮಾತ್ರ ಇಡ್ಲಿ ಕೊಡಿಸಿ, ನೀನು ಹಸಿವಿಲ್ಲ ಅಂದೆ. ನಿಂಗೆ ನಿಜವಾಗ್ಲೂ ಹಸಿವಾಗಿತ್ತು. ನನಗದು ಗೊತ್ತು. ನಿನ್ನ ಜೇಬಲ್ಲಿ 10 ರೂಪಾಯಿ ಇದ್ರೂ, ನಾಳೆ ಬೆಳಿಗ್ಗೆ ನಂಗೆ ತಿಂಡಿ ಕೊಡಿಸೋಕೆ ಆಗುತ್ತೆ ಅಂತ ನೀರು ಕುಡಿದು ಎದ್ದು ಬಂದೆ. ನಂಗೊತ್ತು ಅಪ್ಪ ನಿಂಗೆ ಅಮ್ಮನನ್ನೂ ಮರೆಯೋಕೆ ಆಗಿಲ್ಲ. ಆದ್ರೆ ನನ್ನೆದುರಿಗೆ ಮಾತ್ರ ಅಳಲ್ಲ. ನೀನು ಬಾತ್‌ರೂಂಗೆ ಹೋಗಿ ಬಾಗಿಲು ಹಾಕಿಕೊಂಡು ಜೋರಾಗಿ ನೀರು ಬಿಟ್ಟು ಅಳುವಾಗ ನಾನು ಬಾಗಿಲಿಗೆ ಕಿವಿಕೊಟ್ಟು ಕೇಳಿಸಿಕೊಳ್ತೀನಿ. ನೀನು ನೀರು ನಿಲ್ಲಿಸಿದ ತಕ್ಷಣ ವಾಪಸ್‌ ಓಡಿ ಬಂದು ಹೊದಿಗೆ ಹೊದ್ದು ಮಲಗ್ತೀನಿ. ನನಗೋಸ್ಕರ ನೀನು ಎಷ್ಟು ಕಷ್ಟಪಡ್ತಿದ್ದೀಯ ಅಂತ ನಂಗೆ ಗೊತ್ತಪ್ಪ. ನೀನು ಸುಳ್ಳು ಹೇಳಬೇಕಿಲ್ಲ...’

ಪತ್ರದ ಮುಂದಿನ ಸಾಲು ಅಸ್ಪಷ್ಟವಾಗಿತ್ತು. ಬರೆದ ಅಕ್ಷರಗಳು ಕಾಣಿಸಬಾರದೆಂದು ಒಡೆದು, ಗೀಚಿ ಮುಚ್ಚಿಡಲು ಮಗಳು ಯತ್ನಿಸಿದ್ದಳು. ಆದರೂ ಅಪ್ಪ ಅಂದಾಜಿನ ಮೇಲೆ ಮುಂದಕ್ಕೆ ಓದಿದ.

‘ಅಪ್ಪ..., ನನಗೆ ನೀನು– ನಿನಗೆ ನಾನು. ಖುಷಿಯಾಗಿರೋಣ. ನೀನು ಹೇಳೋ ಎಲ್ಲ ಸುಳ್ಳನ್ನೂ ನಂಬ್ತೀನಿ. ಪ್ಲೀಸ್ ಬೇಜಾರ್ ಮಾಡ್ಕೋಬೇಡ. ಅಮ್ಮ ಹೇಗೂ ದೇವರ ಹತ್ರ ಹೋಗಿದ್ದಾಳೆ. ಇಷ್ಟೊತ್ತಿಗೆ ಅಪಾಯಿಂಟ್‌ಮೆಂಟ್ ತಗೊಂಡು ಮಾತಾಡಿರ್ತಾಳೆ. ನಿಂಗೊಂದು ಕೆಲಸ ಸಿಕ್ಕೇ ಸಿಗುತ್ತೆ. ನಗೋ ಥರ ನಾಟಕ ಬೇಡಪ್ಪ, ನಿಜವಾಗಿ ನಕ್ಕುಬಿಡು. ಬಾ ನನ್ನ ಮುದ್ದಿಸು...’
***
ಅಪ್ಪ ಕಟ್ಟಿದ್ದ ಸುಳ್ಳಿನ ಕೋಟೆಯ ಒಂದೊಂದೇ ಕಲ್ಲು ಕಳಚಿ ಬಿತ್ತೆಂದೂ, ಅವನು ಧಾರಾಕಾರವಾಗಿ ಅಳುತ್ತಾ ಮಗಳನ್ನು ಬಾಚಿ ತಬ್ಬಿಕೊಂಡನೆಂದೂ, ಮಗಳ ಎದೆಬಡಿತ ಅವನ ಎದೆಮಿಡಿತದೊಂದಿಗೆ ಸೇರಿ ಹೋಯಿತೆಂದು ಪದಗಳಲ್ಲಿ ಹೇಳಬೇಕೆ?
(ಪ್ರೇರಣೆ: My Dad is a Liar ಜಾಹೀರಾತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT