ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಮರನ ಒಸಗೆ

e–ಪುಸ್ತಕ
Last Updated 16 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಉಮರ್ ಖಯ್ಯಾಮ್ ಹನ್ನೊಂದನೇ ಶತಮಾನದ ಪರ್ಷಿಯನ್ ಕವಿ. ಈತನನ್ನು ಕೇವಲ ಕವಿ ಎಂದಷ್ಟೇ ಹೇಳಿದರೆ ಅವನ ಪರಿಚಯ ಸಂಪೂರ್ಣವಾಗಲಾರದು. ಆತ ಮಹಾತತ್ವಜ್ಞಾನಿ, ಗಣಿತಶಾಸ್ತ್ರಜ್ಞ ಮತ್ತು ಖಗೋಳ ಶಾಸ್ತ್ರದ ಕುರಿತು ಆಳವಾದ ಅರಿವಿದ್ದವನು. ಕೋಪರ್ನಿಕಸ್‌ಗಿಂತ ಮೊದಲೇ ಸೂರ್ಯ ಕೇಂದ್ರಿತ ಗ್ರಹ ವ್ಯವಸ್ಥೆಯ ಸಿದ್ಧಾಂತವನ್ನು ಮಂಡಿಸಿದ್ದ ಎಂದೂ ಹೇಳಲಾಗುತ್ತದೆ. ಈ ಬಗೆಯ ಬಹುಶ್ರುತ ವಿದ್ವಾಂಸನೊಬ್ಬ ರಚಿಸಿದ ಚೌಪದಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದು ಕೂಡಾ ಈತನಂತೆಯೂ ಬಹುಶ್ರುತರಾಗಿದ್ದ ವಿದ್ವಾಂಸ ಡಿ.ವಿ. ಗುಂಡಪ್ಪ ಅವರು.

1930ರಲ್ಲೇ ಸ್ಕಾಟ್ ಫಿಟ್ಜ್ ಜೆರಾಲ್ಡ್ ಅವರ ಇಂಗ್ಲಿಷ್ ಅನುವಾದವನ್ನು ಇಟ್ಟುಕೊಂಡು ಉಮರನ ರುಬೈಯ್ಯಾತ್‌ಗಳನ್ನು ಡಿ.ವಿ.ಜಿ. ಕನ್ನಡಕ್ಕೆ ಅನುವಾದಿಸಿದ್ದಾರೆ. ಕನ್ನಡದ ಚೌಪದಿಯ ಸ್ವರೂಪವನ್ನು ಅರಗಿಸಿಕೊಂಡು ಫಿಟ್ಜ್ ಜೆರಾಲ್ಡ್ ಮೂಲಕ ಬಂದ ಪರ್ಷಿಯಾದ ಸಂವೇದನೆಗಳನ್ನು ಕನ್ನಡದ್ದೇ ಪದ್ಯಗಳನ್ನಾಗಿಸುವಲ್ಲಿ ಡಿ.ವಿ.ಜಿ.ಯವರ ಪ್ರತಿಭೆ ಕಾಣಿಸುತ್ತದೆ.

ಈ ಪುಸ್ತಕದಲ್ಲಿ ಉಮರನ ಮತ್ತು ಆತನ ಇಂಗ್ಲಿಷ್ ಅನುವಾದಕ ಫಿಟ್ಜ್ ಜೆರಾಲ್ಡ್ ಅವರ ಬಗ್ಗೆಯೂ ವಿವರಗಳಿವೆ. ಇವರಿಬ್ಬರನ್ನೂ ಕನ್ನಡದ ಸಂದರ್ಭಕ್ಕೆ ಪರಿಚಯಿಸಿರುವ ಲೇಖನಗಳವು. ಈಗಾಗಲೇ ಗೋವಿಂದ ಪೈಗಳು ಇದೇ ಪದ್ಯಗಳನ್ನು ಅನುವಾದಿಸಿದ್ದಾರೆಂಬ ವಿಷಯವನ್ನೂ ಸೇರಿಸಿಕೊಂಡು ಡಿವಿಜಿ ಅವರು ಬರೆದಿರುವ ಮುನ್ನುಡಿ ಅವರ ಬೌದ್ಧಿಕ ವಿನಯಕ್ಕೆ ಸೂಚಕ.

ಒಂದು ಕಾಲದ ಮಹಾ ವಿದ್ವಾಂಸನನ್ನು ಮತ್ತೊಂದು ಕಾಲದ ಮಹಾ ವಿದ್ವಾಂಸ ಗೌರವಿಸಿರುವ ಪರಿಯಾಗಿಯೂ ಈ ಗ್ರಂಥವನ್ನು ಅರ್ಥೈಸಿಕೊಳ್ಳಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಈ ಒಸಗೆಗಳನ್ನು ಕನ್ನಡಕ್ಕೆ ತರುವ ಮೂಲಕ ಕನ್ನಡದ ಕಾವ್ಯ ಜಗತ್ತನ್ನೂ ಡಿವಿಜಿ ಶ್ರೀಮಂತಗೊಳಿಸಿದ್ದಾರೆ.

1930ರಲ್ಲಿ ಕರ್ನಾಟಕ ಪ್ರಕಟನಾಲಯದಿಂದ ಪ್ರಕಾಶಿತವಾದ ಈ ಕೃತಿ ಈಗ ಆರ್ಕೈವ್ ತಾಣದಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಲಭ್ಯ. ಆಸಕ್ತರು ಇಲ್ಲಿರುವ ಲಿಂಕ್ ಬಳಸಬಹುದು: http://bit.ly/uOsage

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT