ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯದ ಬೆಳಕು ತೋರಿದ ಸಂತ

Last Updated 11 ಜನವರಿ 2017, 19:30 IST
ಅಕ್ಷರ ಗಾತ್ರ

ಭಕ್ತಿಯೋಗ, ಜ್ಞಾನಯೋಗಗಳ ಅಂತರ್ ಹಿತಾರ್ಥಗಳನ್ನು ತಮ್ಮ ಪ್ರಖರ ಉಪನ್ಯಾಸಗಳ ಮುಖೇನ ಪ್ರಪಂಚ ವ್ಯಾಪಿಯಾಗಿ ವಿಸ್ತರಿಸಿದ ಜ್ಞಾನಯೋಗಿ ಸ್ವಾಮಿ ವಿವೇಕಾನಂದರು. ಜ.12 ಸ್ವಾಮಿ ವಿವೇಕಾನಂದರ ಜನ್ಮದಿನ. 1985 ರಿಂದ ದೇಶದಾದ್ಯಂತ ವಿವೇಕಾನಂದರ ಹುಟ್ಟುಹಬ್ಬವನ್ನು ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸಲಾಗುತ್ತಿದೆ.

ಕೋಲ್ಕತ್ತ ಸಮೀಪದ ರಾಯಪುರದಲ್ಲಿ 1863ರಲ್ಲಿ ವಿಶ್ವನಾಥ ದತ್ತ ಮತ್ತು ಭುವನೇಶ್ವರಿ ದಂಪತಿಯ ಪುತ್ರನಾಗಿ ವಿಶ್ವೇಶ್ವರನ ಜನನ. ಅವರೇ ಮುಂದೆ ನರೇಂದ್ರನಾಥ ದತ್ತ, ಆ ಬಳಿಕ ಖೇತ್ರಿ ಮಹಾರಾಜರ ಕೋರಿಕೆಯಂತೆ ವಿವೇಕಾನಂದರೆಂದು ಖ್ಯಾತರಾದರು. ಭಾರತೀಯ ಕಾಲಮಾನದಂತೆ ಈ ಬಾರಿ ಪುಷ್ಯಮಾಸ ಕೃಷ್ಣಪಕ್ಷ ಸಪ್ತಮಿಯಂದು ವಿವೇಕಾನಂದ ಜಯಂತಿ ಜ.19ರಂದು ಬಂದಿದೆ.

ಮೇ 31, 1893ರಂದು ವಿದೇಶಯಾನ ಕೈಗೊಂಡ ವಿವೇಕಾನಂದರು ಲಂಡನ್, ನ್ಯೂಯಾರ್ಕ್, ಚೀನಾ, ಜರ್ಮನಿ ಸೇರಿದಂತೆ ಪ್ರಪಂಚದ ಮಹಾನಗರಗಳಲ್ಲಿ ನವನಾಗರಿಕತೆಯ ತುತ್ತತುದಿಯಲ್ಲಿ ವಿಹರಿಸುತ್ತಿದ್ದ ಜನರನ್ನು ಆರ್ಯಾವರ್ತದ ಸತ್ಯಪ್ರಕಾಶಕ್ಕೆ ಕೊಂಡೊಯ್ದರು.

ಚಿಕಾಗೊ ನಗರದ ಸರ್ವಧರ್ಮ ಸಮ್ಮೇಳನದಲ್ಲಿ ಉಪನ್ಯಾಸ ನೀಡಿದ್ದು ಸಮಸ್ತ ಭಾರತೀಯರಿಗೆ ಹೆಮ್ಮೆಯ ಸಂಗತಿ. ‘ಒಳ್ಳೆಯದು, ಕೆಟ್ಟದ್ದು, ತಾರತಮ್ಯಕ್ಕೂ ಜಾತಿಗೂ ಸಂಬಂಧವಿಲ್ಲ. ಸುಖ, ದುಃಖಗಳ ವೇದನೆ ಒಂದೇ ನರಮಂಡಲದಿಂದ ಬರುತ್ತದೆ. ಪ್ರತಿಯೊಂದು ಜನಾಂಗದಲ್ಲಿಯೂ ಅಹಿಂಸಾವಾದಿಗಳು ಅನೇಕರಿದ್ದಾರೆ. ನಾವೆಲ್ಲರೂ ಸಹನೆ ಮತ್ತು ವಿಶ್ವಮೈತ್ರಿಯ ಧರ್ಮಕ್ಕೆ ಸೇರಿದವರು’ ಎಂದು ಸಾರಿದ ವಿವೇಕಾನಂದರ ವಿಚಾರಧಾರೆಯನ್ನು ಜನರು ಒಪ್ಪಿಕೊಂಡರು.

ಸುಂದರ ಶಬ್ದ ಸಂಯೋಜನೆ, ಅದ್ಭುತ ವಾಕ್ ಝರಿ, ಶಾಸ್ತ್ರ ವ್ಯಾಖ್ಯಾನ ಕುಶಲತೆ ಇವುಗಳೆಲ್ಲ ಪಾಂಡಿತ್ಯ ರಂಜನೆಯೇ ಹೊರತು ಧರ್ಮವಾಗಲಾರದು.ಹೃದಯಾಂತರಾಳದಲ್ಲಿ ಸಾಕ್ಷಾತ್ಕಾರವಾದ ಬೆಳಕಿನಿಂದ ಧರ್ಮ ಅಂತರ್ಗತವಾಗಿ ಉದಯಿಸುತ್ತದೆ. ಪಾತಕಿಗಳಲ್ಲಿ, ಪುಣ್ಯವಂತರಲ್ಲಿ ಸುಂದರರಲ್ಲಿ, ಕುರೂಪಿಗಳಲ್ಲಿ, ಮೃಗಗಳಲ್ಲಿ, ಮಾನವರಲ್ಲಿ ಎಲ್ಲ ಜೀವಿಗಳಲ್ಲಿ ಇರುವ ಆತ್ಮ ಒಂದೇ ಎಂದು ಅವರು ಪ್ರತಿಪಾದಿಸಿದರು.

ಬ್ರಹ್ಮ ಮತ್ತು ಜಗತ್ತು: ಯಾರ ಭಕ್ತಿಗೂ ಭಂಗ ತರುವುದು ಉಚಿತವಲ್ಲ. ಮನಸ್ಸನ್ನು ಕಲಕಬಾರದು. ಮಾನವಕೋಟಿಯ ಮೇಲೆ ಪ್ರೀತಿ ಸಾರುವ ವಿಶ್ವಧರ್ಮದಲ್ಲಿ ಸಮಷ್ಟಿ-ಸಾಮೂಹಿಕತೆಗಳು ಸಮಾಹಿತವಾಗಿವೆ ಎಂಬುದು ವಿವೇಕಾನಂದರ ಅಭಿಮತ. ಅದ್ವೈತ ದರ್ಶನವನ್ನು ವಿವೇಕಾನಂದರು ಸುಂದರವಾಗಿ ವಿಶ್ಲೇಷಿಸಿ ದ್ದಾರೆ. ವಿವಿಧತೆಯಲ್ಲಿ ಏಕತೆ, ವಿಶ್ವ ಚಿಂತನೆಗಳನ್ನು ವಿವೇಕಾನಂದರು ಪ್ರಖರವಾಗಿ ವಿವರಿಸಿದ್ದಾರೆ.

ವೈವಿಧ್ಯವೇ ಜೀವನ ನಿಯಮ. ಎಲ್ಲ ಮುಖಗಳೂ ಒಂದೇ ತರ ಇರಲಾರದು. ಪಾತ್ರೆ ಬೇರೆ ಬೇರೆ ಇದ್ದರೂ ಎಲ್ಲದ ರಲ್ಲೂ ನೀರನ್ನು ಸಂಗ್ರಹಿಸಬಹುದು. ಹಾಗೆಯೇ ಮತ, ಸಿದ್ಧಾಂತಗಳು ವಿಶ್ವಧ ರ್ಮದಲ್ಲಿ ಅಡಕವಾಗಿದೆಯೆಂಬ ಸಾರ್ವಕಾಲಿಕ ಸತ್ಯವನ್ನು ವಿವೇಕಾನಂದರು ಸರಳವಾಗಿ ಸರ್ವರಿಗೂ ಅರ್ಥವಾಗುವಂತೆ ವಿವರಿಸಿದ್ದಾರೆ.

ಭಾರತದಲ್ಲಿ ಸ್ವಾಮಿ ಶ್ರದ್ಧಾನಂದ, ಪ್ರೇಮಾನಂದ, ನಿಶ್ಚಲಾನಂದ ಮೊದಲಾದ ಶಿಷ್ಯರು ವಿವೇಕಾನಂದರ ತತ್ವಗಳನ್ನು ಪ್ರತಿಪಾದಿಸಿದರು. ಬದುಕಿದ್ದ ಕೇವಲ 39 ವರ್ಷಗಳಲ್ಲಿ ಅನಂತ ಸಾಧನೆಗಳನ್ನು ಮಾಡಿದ ವಿವೇಕಾನಂದರು ಭಾರತಮಾತೆಯ ಕೀರ್ತಿಯನ್ನು ಜಗದಗಲ ಬೆಳಗಿದ ಮಹಾ ಯೋಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT