ಮಂಗಳವಾರ, ಜೂನ್ 22, 2021
24 °C
ವಾರದ ಸಂದರ್ಶನ

ಅಭಿವೃದ್ಧಿಗೆ ವಿರೋಧವಿಲ್ಲ; ಸುಸ್ಥಿರ ಅಭಿವೃದ್ಧಿಗೆ ಆದ್ಯತೆ

ಸಿ ಜಿ ಮಂಜುಳಾ Updated:

ಅಕ್ಷರ ಗಾತ್ರ : | |

ಅಭಿವೃದ್ಧಿಗೆ ವಿರೋಧವಿಲ್ಲ; ಸುಸ್ಥಿರ ಅಭಿವೃದ್ಧಿಗೆ ಆದ್ಯತೆ

ಗ್ರೀನ್‌ಪೀಸ್ ಸಂಘಟನೆಯ ಅಂತರರಾಷ್ಟ್ರೀಯ ಕಾರ್ಯನಿರ್ವಾಹಕಿ ನಿರ್ದೇಶಕಿ ಬನ್ನಿ  ಮೆಕ್ಡಾರ್ಮಿಡ್ ಅವರು ಈ ವಾರ ಭಾರತದ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಬೆಂಗಳೂರಿಗೂ ಭೇಟಿ ನೀಡಿದ್ದರು. ಅವರ ಜೊತೆ ಗ್ರೀನ್‌ಪೀಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ರವಿ ಚೆಲ್ಲಂ ಅವರೂ ಇದ್ದರು. ಬೆಂಗಳೂರು ಸೇರಿದಂತೆ ಭಾರತದ ನಗರಗಳ ವಾಯುಮಾಲಿನ್ಯದ ಬಗ್ಗೆ ಇತ್ತೀಚೆಗಷ್ಟೇ ಗ್ರೀನ್‌ಪೀಸ್ ಇಂಡಿಯಾ ನೀಡಿರುವ ವರದಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ಎತ್ತಿ ಹೇಳಿದೆ.  ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಸುಸ್ಥಿರ ಅಭಿವೃದ್ಧಿಯ  ಸೂತ್ರವನ್ನು ಹೇಳಿದ ಮೊದಲ ಸಂಘಟನೆಗಳಲ್ಲಿ ಗ್ರೀನ್‌ಪೀಸ್ ಸಹ ಒಂದು.

 

1990ರ ದಶಕದಲ್ಲೇ ಭೂಮಿಯ ಬಿಸಿ ಏರುವಿಕೆಯ ಬಗ್ಗೆ ಜಾಗತಿಕವಾಗಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಈ ಸಂಘಟನೆ ಕೈಗೊಂಡಿತ್ತು. ತಾಪಮಾನ ಏರಿಕೆ ಎಂಬುದು ಈ ಭುವಿಯನ್ನು ಕಾಡುತ್ತಿರುವ ಅತಿ ದೊಡ್ಡ ಪರಿಸರ ಸಮಸ್ಯೆ ಎಂದು ಗ್ರೀನ್‌ಪೀಸ್ ಪರಿಗಣಿಸುತ್ತದೆ. ಗ್ರೀನ್‌ಪೀಸ್‌ ಜಗತ್ತಿನಾದ್ಯಂತ ನಡೆಸುತ್ತಿರುವ ಹೋರಾಟಗಳ ಕುರಿತಂತೆ ಸಂಘಟನೆಯ ಈ ಇಬ್ಬರು ಮುಖ್ಯಸ್ಥರು ‘ಪ್ರಜಾವಾಣಿ’ ಜೊತೆ ನಡೆಸಿದ ಮಾತುಕತೆಗಳ ವಿವರ ಇಲ್ಲಿದೆ:

 

* ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಡೊನಾಲ್ಡ್ ಟ್ರಂಪ್ ಅವರು ಹವಾಮಾನ ಬದಲಾವಣೆಗೆ ಸಂಬಂಧಿಸಿದ ನೀತಿಗಳ ಬಗ್ಗೆ ಅನುಮಾನಗಳನ್ನು ಹೊಂದಿದ್ದಾರೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ:

ಬನ್ನಿ ಮೆಕ್ಡಾಮಿರ್ಡ್ : ಜಾಗತಿಕ ಹವಾಮಾನ ಒಪ್ಪಂದಕ್ಕೆ ಸಹಿ ಹಾಕಿರುವ ಅಮೆರಿಕ, ಹವಾಮಾನ ಒಪ್ಪಂದದ ಬಾಧ್ಯತೆಗಳಿಗೆ ಬದ್ಧವಾಗುವುದಿಲ್ಲ ಎಂದು ನಿರ್ಧರಿಸಲು ಮುಂದಾಗಿರುವುದು ಕ್ಲಿಷ್ಟಕರವಾದ ಸನ್ನಿವೇಶ. ಆದರೆ ಇತರ ರಾಷ್ಟ್ರಗಳು ತಮ್ಮ ಬದ್ಧತೆಗಳಿಗೆ ಬದ್ಧವಾಗುತ್ತವೆಂಬ ಆಶಯ ಇದೆ. ಆ ಕುರಿತಂತೆ ಭರವಸೆ ಇದೆ.

 

* ಅಣುತ್ಯಾಜ್ಯದ ವಿರುದ್ಧ ನಿಮ್ಮ ಹೋರಾಟದ ಅನುಭವಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದೆ?

 ಬನ್ನಿ: ಅಣು ಶಕ್ತಿ ಹೊಂದಿದ ರಾಷ್ಟ್ರಗಳು ಅಣುತ್ಯಾಜ್ಯವನ್ನು ಬ್ಯಾರೆಲ್‌ಗಳಿಗೆ ತುಂಬಿ ಸಾಗರಕ್ಕೆ ಎಸೆಯುತ್ತಿದ್ದಂತಹ ಸನ್ನಿವೇಶ ಈ ಹಿಂದೆ ಇತ್ತು. 1954ರಲ್ಲಿ ಅಮೆರಿಕದ ಅಣು ಪರೀಕ್ಷೆ ಕಾರ್ಯಕ್ರಮದಿಂದಾಗಿ ವಿಕಿರಣದ ಪರಿಣಾಮಗಳಿಂದ ನರಳುತ್ತಿದ್ದ ಪೆಸಿಫಿಕ್ ಸಾಗರದ ರಾಂಗ್‌ಲ್ಯಾಪ್‌ ದ್ವೀಪದ ಜನರನ್ನು 1985ರಲ್ಲಿ ಬೇರೆಡೆ ಸ್ಥಳಾಂತರಿಸುವ ಕಾರ್ಯಾಚರಣೆಗೆ ಇಳಿದಿದ್ದ ಗ್ರೀನ್‌ಪೀಸ್‌ ‘ರೈನ್‌ಬೊ ವಾರಿಯರ್’ ಹಡಗಿನ ಸಿಬ್ಬಂದಿಯಲ್ಲಿ ನಾನೂ ಒಬ್ಬಳಾಗಿದ್ದೆ. ಅಣು ಪರೀಕ್ಷೆ ನಡೆದ ಸುಮಾರು 30 ವರ್ಷಗಳ ನಂತರವೂ ಈ ದ್ವೀಪದ ಜನರು ಆರೋಗ್ಯ ಸಮಸ್ಯೆಗಳಿಂದ ನರಳುತ್ತಿದ್ದರು. ವಿಕಿರಣದಿಂದಾಗುವ ಪರಿಣಾಮಗಳ ಅಧ್ಯಯನಕ್ಕೆ ಆ ಜನರನ್ನೇ ಅಮೆರಿಕ ಬಳಸಿಕೊಂಡಿತ್ತು. ಆದರೆ ಅಮೆರಿಕ ಮಾಡಿರುವ ತಪ್ಪನ್ನು ಮನದಟ್ಟು ಮಾಡಿಸಿ ಪರಿಹಾರವನ್ನು ಪಡೆದುಕೊಳ್ಳಲು ರಾಂಗ್‌ಲ್ಯಾಪ್‌ ದ್ವೀಪದ ಜನರಿಗೆ ಮತ್ತೆ ಸುಮಾರು 30 ವರ್ಷಗಳೇ ಬೇಕಾದವು. ಹಾಗೆಯೇ 1985ರಲ್ಲಿ ದಕ್ಷಿಣ ಪೆಸಿಫಿಕ್‌ನ  ಮೊರುರೊವಾದಲ್ಲಿ ಫ್ರೆಂಚ್ ಅಣು ಪರೀಕ್ಷೆ ವಿರುದ್ಧ ಪ್ರತಿಭಟಿಸಲು ಗ್ರೀನ್‌ಪೀಸ್‌ನ ‘ರೈನ್‌ಬೊ ವಾರಿಯರ್’ ಹಡಗು ನ್ಯೂಜಿಲೆಂಡ್‌ನತ್ತ ಚಲಿಸಿತ್ತು.

 

ಹಲವು ರಾಷ್ಟ್ರಗಳೂ ಈ ಅಣು ಪರೀಕ್ಷೆಗೆ ವಿರುದ್ಧವಾಗಿದ್ದವು. ಆದರೆ ಈ ಪ್ರತಿಭಟನೆಗಳ ಬಗ್ಗೆ ಭೀತಿ ಹೊಂದಿದ್ದ ಫ್ರಾನ್ಸ್ ಸರ್ಕಾರ, ತನ್ನ ಗುಪ್ತಚರ ವಿಭಾಗದ ಇಬ್ಬರು ಸಿಬ್ಬಂದಿಯ ಮೂಲಕ ರಹಸ್ಯವಾಗಿ ಮಧ್ಯರಾತ್ರಿ ಹಡಗಿನೊಳಗೆ ಬಾಂಬ್ ಸ್ಫೋಟಿಸಿ ಅದು ಮುಳುಗುವಂತೆ ಮಾಡಿತು. ಈ ಅವಘಡದಲ್ಲಿ ಗ್ರೀನ್‌ಪೀಸ್‌ ಸಂಘಟನೆಯ ಯುವ ಛಾಯಾಗ್ರಾಹಕ ರೊಬ್ಬರು ಜೀವ ಕಳೆದುಕೊಳ್ಳಬೇಕಾಯಿತು. ಈ ಹಡಗಿನಲ್ಲಿ ನಾನೂ ಇದ್ದೆ. ಆರಂಭದಲ್ಲಿ ಹೊಣೆಗಾರಿಕೆ ನಿರಾಕರಿಸಿದರೂ ನಂತರ ಸತ್ಯ ಹೊರಬಿದ್ದು ಫ್ರಾನ್ಸ್‌ನ ರಕ್ಷಣಾ ಸಚಿವರು ರಾಜೀನಾಮೆ ನೀಡಬೇಕಾಯಿತು. 

 

ಗ್ರೀನ್‌ಪೀಸ್‌ಗೆ  ಸಾಕಷ್ಟು ಪರಿಹಾರವನ್ನು ಫ್ರಾನ್ಸ್‍ ಸರ್ಕಾರ ನೀಡಬೇಕಾಯಿತು. ಆದರೆ ಫ್ರಾನ್ಸ್‍ ಸರ್ಕಾರ ಕಡೆಗೂ ಕ್ಷಮಾಪಣೆ ಕೋರಲಿಲ್ಲ. ಅಣು ಉದ್ಯಮದ ನಕಾರಾತ್ಮಕ ಕಥನಗಳಿವು. ಅಣುಶಕ್ತಿಯಿಂದ ಹೊರಹೊಮ್ಮುವ ಅಣುತ್ಯಾಜ್ಯಕ್ಕೆ ಪರಿಹಾರವೇ ಇಲ್ಲ. ಸಾವಿರಾರು ವರ್ಷಗಳವರೆಗೆ ಈ ಅಣುತ್ಯಾಜ್ಯ ಪರಿಸರಕ್ಕೆ ಹಾನಿ ಮಾಡದಂತೆ ಕಾಯಬೇಕಾಗುತ್ತದೆ.

 

* ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಅಣು ಇಂಧನವನ್ನು ಪರ್ಯಾಯ ಶಕ್ತಿಯಾಗಿ ಪರಿಗಣಿಸಲಾಗುತ್ತಿದೆ. ಭಾರತ ಸರ್ಕಾರವೂ ಇದಕ್ಕೆ ಹೊರತಾಗಿಲ್ಲ. ಪರಿಸರವಾದಿಗಳು ಈ ಅಗತ್ಯವನ್ನು ಮನಗಾಣುತ್ತಿಲ್ಲ ಎಂಬ ಆರೋಪಗಳಿವೆಯಲ್ಲ?

ಬನ್ನಿ: ಅಣು ಇಂಧನವನ್ನು ಪರ್ಯಾಯ ಶಕ್ತಿಯಾಗಿ ಪ್ರತಿಪಾದಿಸುವ ನಿಲುವುಗಳ ಬಗ್ಗೆ ಗ್ರೀನ್‌ಪೀಸ್‌ ಸಂಘಟನೆಗೆ ಆತಂಕವಿದೆ. ವಾಸ್ತವವಾಗಿ ಕಳೆದ 20 ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನದ ಮಹತ್ವವನ್ನು ಜಗತ್ತು ಅರಿತುಕೊಳ್ಳುತ್ತಿದೆ. ಪಳೆಯುಳಿಕೆ ಇಂಧನದ ಜೊತೆಗೆ ಹೋಲಿಸಿದರೆ ನವೀಕರಿಸಬಹುದಾದ ಇಂಧನದ ದಕ್ಷತೆ ಹೆಚ್ಚು. ಹಾಗೆಯೇ ಆರ್ಥಿಕ ದೃಷ್ಟಿಯಿಂದ ಇದು ಅಗ್ಗವಾಗಿದ್ದು ಸ್ಪರ್ಧಾತ್ಮಕವೂ ಆಗಿದೆ. ಅದರಲ್ಲೂ ಭಾರತದಂತಹ ರಾಷ್ಟ್ರದಲ್ಲಿ ನವೀಕರಿಸಬಹುದಾದ ಶುದ್ಧ ಇಂಧನಕ್ಕೆ ಅಪಾರ ಅವಕಾಶಗಳಿವೆ. ಈ ಸಂಬಂಧ ಈಗ ಗುರಿಗಳನ್ನು ಹೊಂದಿರುವ ಭಾರತ ಪ್ರಬಲ ಬದ್ಧತೆಯನ್ನು ಪ್ರದರ್ಶಿಸಿದೆ.

 

ರವಿ ಚೆಲ್ಲಂ: ಈಗಲೂ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಕೊಡುವುದು ಭಾರತಕ್ಕೆ ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ವಿದ್ಯುತ್ ಅನ್ನು ಎಲ್ಲರಿಗೂ ತಲುಪಿಸಲು ಇರುವ ಮೂಲಸೌಕರ್ಯಗಳ ಸಮಸ್ಯೆ. ಆದರೆ ಸ್ಥಳೀಯವಾಗಿಯೇ ಪ್ರತಿ ಮನೆಗೂ  ಸೌರ ವಿದ್ಯುತ್ ಉತ್ಪಾದಿಸುವಂತಹ ಸೌಕರ್ಯ ಸೃಷ್ಟಿಸಿದಲ್ಲಿ ಎಲ್ಲಾ ಹಳ್ಳಿಗಳಿಗೂ ವಿದ್ಯುತ್ ತಲುಪಿಸುವ ಸವಾಲನ್ನು ದಕ್ಷವಾಗಿ ಎದುರಿಸಬಹುದು. ಇದಕ್ಕೆ ಕೋಟ್ಯಂತರ ರೂಪಾಯಿ ಹಣ ಹೂಡಿಕೆಯೂ ಬೇಕಿಲ್ಲ. ನಾವು ಈಗಲೂ ಅಣು ವಿದ್ಯುತ್ ಅಷ್ಟೇ ಪರಿಹಾರ ಒದಗಿಸಬಲ್ಲದು ಎಂಬಂಥ ಮನಸ್ಥಿತಿಯಿಂದ ಹೊರಬರಬೇಕಿದೆ ಅಷ್ಟೆ. ಅಣುವಿದ್ಯುತ್‌ನ ಆರ್ಥಿಕ ವೆಚ್ಚ, ಪರಿಸರದ ಮೇಲೆ ಅದರಿಂದಾಗುವ ದೂರಗಾಮಿ ಪರಿಣಾಮ ಹಾಗೂ ಆರೋಗ್ಯ ಸಮಸ್ಯೆಗಳನ್ನು ಗಂಭೀರವಾಗಿ ವಿಶ್ಲೇಷಿಸಬೇಕಿದೆ.  ಜಪಾನ್‌ನ ಫುಕುಶಿಮಾ ಅಣು ಸ್ಥಾವರ ದುರಂತದಿಂದ ಪಾಠ ಕಲಿಯಲಾಗುವುದಿಲ್ಲ ಎಂದರೆ ಏನು ಹೇಳಬೇಕು? ಶುದ್ಧ ಇಂಧನ ಎಂಬುದು ಜನರಿಗೆ ಲಾಭದಾಯಕ.  ಯಥಾಸ್ಥಿತಿಯ ಮನಸ್ಥಿತಿಯಿಂದ ನಮ್ಮ ನೀತಿ ನಿರೂಪಕರು ಹೊರಬರಬೇಕು. ಆರ್ಥಿಕ ಹಾಗೆಯೇ ನೈತಿಕ ದೃಷ್ಟಿಯಿಂದಲೂ ಇದು ಅಗತ್ಯ. ಫುಕುಶಿಮಾ ಅಣು ಸ್ಥಾವರ ದುರಂತದ ನಂತರ ತನ್ನ ಅಣು ಘಟಕಗಳನ್ನು ಜಪಾನ್ ಮುಚ್ಚುತ್ತಿದೆ. ಆದರೆ ಜಪಾನ್ ಜೊತೆ ಒಪ್ಪಂದ ಮಾಡಿಕೊಂಡಿರುವ ಭಾರತಕ್ಕೆ ಅದು ಅಣುಶಕ್ತಿ ರಫ್ತು ಮಾಡುತ್ತಿದೆ. ಈ ವಿರೋಧಾಭಾಸ ಅರ್ಥ ಮಾಡಿಕೊಳ್ಳಬೇಕು. ಅಷ್ಟೇನೂ ಬಿಸಿಲು ಬೀಳದ ಜರ್ಮನಿಯಂತಹ ರಾಷ್ಟ್ರವೇ ನವೀಕರಿಸಬಹುದಾದ ಇಂಧನದತ್ತ ಸಾಗುತ್ತಿರಬೇಕಾದರೆ ನಮ್ಮಲ್ಲಿನ ಸೌರಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳಲು ಯಾಕೆ ಆಗುವುದಿಲ್ಲ?

 

ಬನ್ನಿ: ಸ್ಥಳೀಯ ಸಮುದಾಯದ ಅಗತ್ಯಗಳಿಗೆ ಗಾಳಿ ಇಂಧನವನ್ನು ಯಶಸ್ವಿಯಾಗಿ ಬಳಸುತ್ತಿರುವ ಡೆನ್ಮಾರ್ಕ್ ಉದಾಹರಣೆಯೂ ಇದೆ. ವಿಶ್ವದಲ್ಲಿ ತಂತ್ರಜ್ಞಾನ ಲಭ್ಯವಿದೆ. ರಾಜಕೀಯ ಇಚ್ಛಾಶಕ್ತಿ ಇದ್ದಲ್ಲಿ ಸಮುದಾಯಗಳು ಈ ತಂತ್ರಜ್ಞಾನಗಳನ್ನು  ಮಿತವ್ಯಯಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಿದೆ.

 

ರವಿ: ದೊಡ್ಡ ಇಂಧನ ಯೋಜನೆಗಳ ವಿರುದ್ಧದ ಜನಾಂದೋಲನಗಳ ವಿರುದ್ಧ ಸರ್ಕಾರಗಳ ಟೀಕೆಗಳ ನಡುವೆಯೇ ಬಿಹಾರದ ಧರನಯಿ ಗ್ರಾಮವನ್ನು ಸಂಪೂರ್ಣ ಸೌರಶಕ್ತಿ ಗ್ರಾಮವಾಗಿ ಗ್ರೀನ್‌ಪೀಸ್‌ ಸಂಘಟನೆ ಅಭಿವೃದ್ಧಿಪಡಿಸಿದೆ. ಸ್ವಲ್ಪ ದಿನಗಳಲ್ಲೇ ಈ ಗ್ರಾಮಕ್ಕೆ ಬಿಹಾರದ ಮುಖ್ಯಮಂತ್ರಿ ಭೇಟಿ ನೀಡಲಿದ್ದಾರೆ. ಆಗ ಬಿಹಾರ ರಾಜ್ಯದ ಸೌರಶಕ್ತಿ ನೀತಿಯನ್ನೂ ಅವರು ಪ್ರಕಟಿಸುವ ನಿರೀಕ್ಷೆ ಇದೆ. ಭಾರತಲ್ಲಿ ಗ್ರೀನ್‌ಪೀಸ್‌  ಕೈಗೊಂಡಿರುವ ಮಹತ್ವದ ಪ್ರಾಯೋಗಿಕ ಯೋಜನೆ ಇದು. ಹಾಗೆಯೇ ಮುಂದೆ ಬೆಂಗಳೂರು ನಗರ ಸೇರಿದಂತೆ ನಗರಗಳ ಪರಿಸರವನ್ನು (ಅರ್ಬನ್ ಇಕಾಲಜಿ) ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸುವ ಜಾಗತಿಕ ಯೋಜನೆಯನ್ನು ಗ್ರೀನ್‌ಪೀಸ್ ಕೈಗೊಂಡಿದೆ.

 

* ಗ್ರೀನ್‌ಪೀಸ್‌ ಸೇರಿದಂತೆ ಅನೇಕ ಎನ್‌ಜಿಓಗಳ ವಿರುದ್ಧ ಭಾರತ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. 2015ರ ಜನವರಿಯಲ್ಲಿ ಲಂಡನ್‌ಗೆ ತೆರಳಬೇಕಿದ್ದ ಗ್ರೀನ್ ಪೀಸ್ ಕಾರ್ಯಕರ್ತೆ ಪ್ರಿಯಾ ಪಿಳ್ಳೈ ಅವರನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ತಡೆಯಲಾಯಿತು. ಮಧ್ಯಪ್ರದೇಶದ ಮಹಾನ್‌ನಲ್ಲಿ ಕಲ್ಲಿದ್ದಲು ಉದ್ಯಮಿಗಳು ಅರಣ್ಯವಾಸಿಗಳ ಹಕ್ಕನ್ನು ಕಸಿದುಕೊಂಡಿದ್ದರ ಬಗ್ಗೆ ಪಿಳ್ಳೈ ಅವರು ಬ್ರಿಟಿಷ್ ಸಂಸತ್ ಸದಸ್ಯರ ಎದುರು ಮಾತನಾಡುವವರಿದ್ದರು. ನಂತರ ವಿದೇಶಿ ಹಣಕಾಸು ನೆರವು ಲೈಸೆನ್ಸ್ ರದ್ದಿನಂತಹ ಕ್ರಮಗಳನ್ನೂ ಕೈಗೊಳ್ಳಲಾಗಿರುವ ಬಗ್ಗೆ ನಿಮ್ಮ ಅನಿಸಿಕೆ.

ರವಿ: ಆರೋಪಗಳನ್ನು ಎದುರಿಸುವ ಸವಾಲು ಇದ್ದೇ ಇದೆ. ಇದು ವಾಸ್ತವ. ಆದರೆ ನಮ್ಮ ಪರಿಸರ ಪ್ರಚಾರಾಂದೋಲನದಲ್ಲಿ ಭಾಗಿಯಾಗುವ ಸಾವಿರಾರು ಭಾರತೀಯರ ಬೆಂಬಲದ ಬಲ ಇದೆ. ನ್ಯಾಯಾಂಗವಂತೂ ನಿರಂತರವಾಗಿ ನಮ್ಮ ಪರವಾಗಿ ನಿರ್ದೇಶನಗಳನ್ನು ನೀಡಿದೆ.

 

* 30 ವರ್ಷಗಳಿಂದ ಪರಿಸರಪರ ಹೋರಾಟದಲ್ಲಿ ಭಾಗಿಯಾಗುತ್ತಿದ್ದೀರಿ. ಯಾವ ರೀತಿಯ ಬದಲಾವಣೆಗಳನ್ನು ಕಾಣುತ್ತಿದ್ದೀರಿ? ಜಾಗತಿಕವಾಗಿ ಜನಪ್ರಿಯ ಬಲಪಂಥೀಯವಾದಗಳು ತಲೆ ಎತ್ತುತ್ತಿರುವ ಕಾಲ ಇದು. ಎನ್‌ಜಿಓಗಳ ಕಾರ್ಪೊರೇಟೀಕರಣದ ಪ್ರಕ್ರಿಯೆಯಿಂದಾಗಿ ಹೋರಾಟಗಳ ಬಗ್ಗೆ ಜನರ ವಿಶ್ವಾಸ ಗಳಿಸಿಕೊಳ್ಳುವುದು ಸಾಧ್ಯವೆ? ಪರಿಸರವಾದಿಗಳು ಅಭಿವೃದ್ಧಿ ವಿರೋಧಿಗಳು ಎಂಬಂಥ ಆರೋಪಗಳನ್ನೂ ಮಾಡಲಾಗುತ್ತದೆ.

ಬನ್ನಿ: ಸದ್ಯದ ಸಂದರ್ಭದಲ್ಲಿ ಜನಾಂದೋಲನಗಳು ಇನ್ನೂ ಹೆಚ್ಚು ಪ್ರಸ್ತುತ. ಗ್ರೀನ್‌ಪೀಸ್ ಸಂಘಟನೆಯ ದೃಷ್ಟಿಕೋನದಿಂದ ಹೇಳುವುದಾದಲ್ಲಿ ನಾವು ಅಭಿವೃದ್ಧಿ ವಿರೋಧಿಗಳಲ್ಲ. ವಿಭಿನ್ನ ಬಗೆಯ ಅಭಿವೃದ್ಧಿಯ ಪರ ಇದ್ದೇವೆ ನಾವು. ಈ ಅಭಿವೃದ್ಧಿ ಎಂಬುದು ನಮ್ಮ ನೆಲ, ಜಲ, ವಾಯು ಹಾಗೂ ಮನುಷ್ಯರ ಆರೋಗ್ಯ ಹಾಳುಗೆಡವಬಾರದು. ಸರ್ಕಾರದ ನೀತಿಗಳ ವಿರುದ್ಧ ಭಿನ್ನಾಭಿಪ್ರಾಯ ತಳೆದಾಗ ಅಭಿವೃದ್ಧಿ ವಿರೋಧಿ ಎಂಬ ಹಣೆಪಟ್ಟಿ ಹಚ್ಚುವುದು ಸರಿಯಲ್ಲ. ಬೇರೆ ಮಾರ್ಗದಲ್ಲಿ ಅಭಿವೃದ್ಧಿ ಸಾಧನೆಯಾಗಬೇಕು ಎಂಬುದು ನಮ್ಮ ವಾದವಾಗಿರುತ್ತದೆ. ಮತ್ತು ಜನರಿಗೆ ಅವರದೇ ಅಭಿಪ್ರಾಯಗಳನ್ನು ಹೊಂದಲು ಅವಕಾಶ ಇರಬೇಕು. ಇತ್ತೀಚಿನ ವರ್ಷಗಳಲ್ಲಿ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಜನರ ಸಂಖ್ಯೆ ಹೆಚ್ಚುತ್ತಿದೆ. ಇದು ಸಕಾರಾತ್ಮಕವಾದದ್ದು. ಎನ್‌ಜಿಓಗಳ ಕಾರ್ಪೊರೇಟೀಕರಣದ ಪ್ರಶ್ನೆ ಕುರಿತಂತೆ ಹೇಳುವುದಾದಲ್ಲಿ, ಹಲವು ಎನ್‌ಜಿಓಗಳು ದೊಡ್ಡ ಮಟ್ಟದಲ್ಲಿ ಸಂಘಟಿತಗೊಳ್ಳುತ್ತಿವೆ. ಇದರಿಂದಾಗಿ ಅವಕಾಶಗಳು ಹೆಚ್ಚುತ್ತಿವೆ ಎಂಬುದು ಒಳ್ಳೆಯ ಬೆಳವಣಿಗೆ. ಇನ್ನು ಸಾಮಾಜಿಕ ಮಾಧ್ಯಮಗಳಿಂದಾಗಿ ಅನೇಕ ಮಂದಿ ತಮ್ಮದೇ ವಿಭಿನ್ನ ರೀತಿಗಳಲ್ಲಿ ಪ್ರತಿರೋಧದ ಮಾದರಿಗಳನ್ನು ಸೃಷ್ಟಿಸುತ್ತಿದ್ದಾರೆ. ಒಟ್ಟಾಗಿ ಕೆಲಸ ಮಾಡಿ ಬದಲಾವಣೆಯನ್ನು ತರುವುದು ಮುಖ್ಯವಾಗಬೇಕು. ಸುಸ್ಥಿರವಾದ ಅಭಿವೃದ್ಧಿಗಾಗಿ ಜನಾಂದೋಲನ ಎಂಬುದಷ್ಟೇ ಇಲ್ಲಿ ಆದ್ಯತೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.