ಶುಕ್ರವಾರ, ಮಾರ್ಚ್ 5, 2021
30 °C

ವಿಶ್ವಪ್ರಸಿದ್ಧಿಯ ಹಾದಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಪ್ರಸಿದ್ಧಿಯ ಹಾದಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ

–ಎಂ. ಎಸ್. ಚೈತ್ರ

**

ಇತ್ತೀಚಿನ ವರ್ಷಗಳಲ್ಲಿ ನಮ್ಮ ಉನ್ನತ ಶಿಕ್ಷಣಕ್ಷೇತ್ರದ ದಯನೀಯ ಪರಿಸ್ಥಿತಿಯನ್ನು ಕುರಿತು ಅನೇಕ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಈ ನಿರಾಸೆಯ ನಡುವೆ ಆಗೊಮ್ಮೆ ಈಗೊಮ್ಮೆ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ದ್ವೀಪಗಳಂತಿರುವ ಕೆಲವು ಸಂಸ್ಥೆಗಳು ನಮಗೆ ಆಶಾಭಾವನೆಯನ್ನು ಮೂಡಿಸುತ್ತವೆ. ಇಂಥ ಸಂಸ್ಥೆಗಳಲ್ಲಿ ತನ್ನ ಅಪ್ರತಿಮ ಸಾಧನೆಯ ನಾಗಾಲೋಟವನ್ನು ಮುಂದುವರೆಸಿದ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್‌ ಸೈನ್ಸ್ - ಐ.ಐ.ಎಸ್‌ಸಿ.) ಅಥವಾ ‘ಟಾಟಾ ಇನ್ಸ್‌ಟಿಟ್ಯೂಟ್’ ಎಂದೇ ಜಾಗತಿಕವಾಗಿ ಚಿರಪರಿಚಿತವಾಗಿರುವ ಸಂಶೋಧನಾ ಸಂಸ್ಥೆಯೂ ಒಂದು. ಇತ್ತೀಚೆಗೆ ಟೈಮ್ಸ್ ಹೈಯರ್ ಎಜುಕೇಶನ್ ಸರ್ವೆ ನಡೆಸಿದ ಜಾಗತಿಕ ವಿಶ್ವವಿದ್ಯಾಲಯಗಳ ಸಮೀಕ್ಷೆಯಲ್ಲಿ – ಐದು ಸಾವಿರಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ – ಜಗತ್ತಿನ ಅತ್ಯಂತ ಶ್ರೇಷ್ಠ ಸಂಸ್ಥೆಗಳಲ್ಲಿ ಎಂಟನೆಯ ಸ್ಥಾನವನ್ನು ಪಡೆಯುವ ಮೂಲಕ ಸಮಸ್ತ ಭಾರತೀಯರಿಗೂ ಐ.ಐ.ಎಸ್‌ಸಿ. ಹೆಮ್ಮೆ ತಂದಿದೆ.

ಉನ್ನತ ಶಿಕ್ಷಣದ ರ್‍ಯಾಂಕಿಂಗ್ ಮತ್ತದರ ಲಾಭಗಳು

ವಿಜ್ಞಾನ-ತಂತ್ರಜ್ಞಾನದ ಹೊಸ ಆವಿಷ್ಕಾರಗಳ ಮೂಲಕ ಮಾನವನ ಮತ್ತು ಜಗತ್ತಿನ ಕಲ್ಯಾಣದ ಸಾಧ್ಯತೆಗಳೇನೆಂಬುದನ್ನು ಇಪ್ಪತ್ತನೆಯ ಶತಮಾನದಲ್ಲಿ ನಾವು ಕಂಡುಕೊಂಡಿದ್ದೇವೆ. ಹಾಗಾಗಿಯೇ ಇಂದು ಜಗತ್ತಿನ ಎಲ್ಲಾ ದೇಶಗಳು ತಮ್ಮ ಅಭಿವೃದ್ಧಿಯಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಯನ್ನು ಬಹಳ ಪ್ರಮುಖವಾದ ಸಾಧನವೆಂದು ಗುರುತಿಸಿವೆ. ಜ್ಞಾನದ ಉತ್ಪತ್ತಿ ಮತ್ತು ಪ್ರಸರಣವನ್ನು ಹೆಚ್ಚು ಸಮರ್ಪಕವಾಗಿ ನಿರ್ವಹಿಸಲು ಜಗತ್ತಿನಾದ್ಯಂತ ಅನೇಕ ಸಂಸ್ಥೆಗಳು ಬೋಧನೆ, ಸಂಶೋಧನೆ, ಅದರ ಆನ್ವಯಿಕತೆ, ಮೂಲಭೂತ ವ್ಯವಸ್ಥೆಗಳು ಇತ್ಯಾದಿ ಅನೇಕ ಮಾನದಂಡಗಳನ್ನಿಟ್ಟುಕೊಂಡು ಜಗತ್ತಿನಾದ್ಯಂತ ಜ್ಞಾನ ಹೇಗೆ ಬೆಳೆಯುತ್ತಿದೆ ಎಂಬುದನ್ನು ಅಳತೆ ಮಾಡುತ್ತವೆ. ಉದಾಹರಣೆಗೆ ಅಕಾಡಮಿಕ್ ರ್‍ಯಾಂಕಿಂಗ್ ಆಫ್ ವರ್ಲ್ಡ್ ಯೂನಿವರ್ಸಿಟೀಸ್ (ಶಾಂಘೈ ರ್‍ಯಾಂಕಿಂಗ್), ಸೆಂಟರ್ ಫಾರ್ ವರ್ಲ್ಡ್ ಯೂನಿವರ್ಸಿಟಿ ರ್‍ಯಾಂಕಿಂಗ್್ಸ್, ಗ್ಲೋಬಲ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್‌, ಎಚ್‌ಇಇಎಸಿಟಿ, ಲೀಡೆನ್ ರ್‍ಯಾಂಕಿಂಗ್ಸ್‌, ಕ್ಯುಎಸ್ ವರ್ಲ್ಡ್ ಯೂನಿವರ್ಸಿಟೀಸ್, ಟೈಮ್ಸ್ ಹೈಯರ್ ಎಜ್ಯುಕೇಶನ್ ಯೂನಿವರ್ಸಿಟಿ ರ್‍ಯಾಂಕಿಂಗ್್ಸ್ ಇತ್ಯಾದಿ ಅನೇಕ ಸಂಸ್ಥೆಗಳು ವಿಶ್ವವಿದ್ಯಾನಿಲಯಗಳ ಸಮೀಕ್ಷೆಯನ್ನು ಜಾಗತಿಕ ಮಟ್ಟದಲ್ಲಿ ನಡೆಸುತ್ತವೆ. ಈ ಸಮೀಕ್ಷೆಗಳ ವಿಶ್ಲೇಷಣೆ ಮೂಲಕ ನಿರ್ದಿಷ್ಟ ಸಂಸ್ಥೆಯೊಂದು ಯಾವ ಕ್ಷೇತ್ರದಲ್ಲಿ ತನ್ನ ಶಿಕ್ಷಣದ ಗುಣಮಟ್ಟಕ್ಕಾಗಿ ಯಾವ ರೀತಿಯ ಒತ್ತನ್ನು ನೀಡಬೇಕೆಂಬುದನ್ನು ಗುರುತಿಸಿಕೊಳ್ಳಬಹುದು. ಅಂದರೆ ಬೋಧನೆ, ಬೋಧನಾ ಕೌಶಲ, ನಿಯತಕಾಲಿಕೆಗಳಲ್ಲಿ ಪ್ರಕಟಣೆ, ಪೇಟೆಂಟ್ ಇತ್ಯಾದಿಗಳಲ್ಲಿ ಯಾವ ಕ್ಷೇತ್ರದಲ್ಲಿ ಸಂಸ್ಥೆಯೊಂದು ನಿರ್ದಿಷ್ಟವಾಗಿ ಇಂದು ಯಾವ ಸ್ಥಿತಿಯಲ್ಲಿದೆ ಮತ್ತು ಮುಂದೆ ಕ್ರಮಿಸಬೇಕಾದ ಹಾದಿಯೇನು ಎಂದು ಈ ಸಮೀಕ್ಷೆಗಳ ಮೂಲಕ ಸ್ಪಷ್ಟವಾಗುತ್ತದೆ. ಇಂತಹ ಮಾನದಂಡಗಳ ಕುರಿತಾದಂತೆ ತಕರಾರುಗಳೇನೇ ಇದ್ದರೂ ಈ ಸಮೀಕ್ಷೆಗಳು ವಿಶ್ವವಿದ್ಯಾನಿಯಗಳಿಗೆ ಗುಣಾತ್ಮಕವಾಗಿ ಸಂಶೋಧನೆ ಮತ್ತು ಜ್ಞಾನಪ್ರಸರಣೆಯ ಕಾರ್ಯಕ್ಕೆ ದಿಕ್ಸೂಚಿಯನ್ನು ನೀಡುತ್ತವೆ.

(ಐ.ಐ.ಎಸ್‌ಸಿ. ಆವರಣದಲ್ಲಿರುವ ಜೆ. ಎನ್‌. ಟಾಟಾ ಪ್ರತಿಮೆ)

ಐ.ಐ.ಎಸ್‌ಸಿ.: ಶತಮಾನದ ಹಾದಿ

ಟೈಮ್ಸ್ ಸಮೀಕ್ಷೆಯ ಪ್ರಕಾರ ಜಾಗತಿಕವಾಗಿ ಸಣ್ಣ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಈ ವರ್ಷ ಎಂಟನೆಯ ಸ್ಥಾನಕ್ಕೇರಿರುವ ಐ.ಐ.ಎಸ್‌ಸಿ. ತನ್ನ ಅಸ್ತಿತ್ವದ ಶತಮಾನದ ನಂತರವೂ ನಿರಂತರವಾಗಿ ಸಂಶೋಧನೆಯಲ್ಲಿ ತೊಡಗಿದೆ. 19ನೆಯ ಶತಮಾನದ ಕೊನೆಯ ಭಾಗದಲ್ಲಿ ಸ್ವಾಮಿ ವಿವೇಕಾನಂದರ ಅಣತಿಯಂತೆ ಜೆ. ಎನ್. ಟಾಟಾರವರು  ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಸಹಕಾರದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆಗಾಗಿ ಐ.ಐ.ಎಸ್‌ಸಿ.ಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಖ್ಯಾತ ರಸಾಯನಶಾಸ್ತ್ರಜ್ಞ ಮೂರಿಸ್ ಟ್ರಾವರ್ಸ್ ಅವರ ನಿರ್ದೇಶನದಲ್ಲಿ 1909ರಲ್ಲಿ ಐ.ಐ.ಎಸ್‌ಸಿ. ಕೆಲಸ ಪ್ರಾರಂಭಿಸಿತು. ಸರ್ ಸಿ.ವಿ. ರಾಮನ್‌ರವರು ಇಲ್ಲಿಂದಲೇ ನೊಬೆಲ್ ಪಾರಿತೋಷಕವನ್ನು ಪಡೆದಿದ್ದಲ್ಲದೆ ಐ.ಐ.ಎಸ್‌ಸಿ.ಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದರು. ವಿಜ್ಞಾನಕ್ಷೇತ್ರದ ದಿಗ್ಗಜಗಳಾದ ಹೋಮಿ ಭಾಭಾ, ವಿಕ್ರಂ ಸಾರಾಭಾಯ್, ಸತೀಶ್ ಧನವ್, ಜೆ.ಸಿ. ಘೋಷ್, ಜಿ.ಎನ್. ರಾಮಚಂದ್ರನ್ – ಹೀಗೆ ಹಲವರು ಮೇಧಾವಿಗಳನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ ಖ್ಯಾತಿ ಈ ಸಂಸ್ಥೆಯದು.

ಐ.ಐ.ಎಸ್‌ಸಿ.ಯ ಸಾಧನೆಗಳು

ಶತಮಾನಕ್ಕೂ ಹೆಚ್ಚು ಕಾಲ ಸಂಶೋಧನೆಯಲ್ಲಿ ತೊಡಗಿರುವ ಐ.ಐ.ಎಸ್‌ಸಿ.ಯ ಸಾಧನೆಗಳನ್ನು ಪಟ್ಟಿ ಮಾಡಿದರೆ ಮುಗಿಯಲಾರದಷ್ಟು ದೊಡ್ಡದು. ಅದು ಸಾಮಾನ್ಯ ಹಳ್ಳಿಗನಿಗೂ ಹಿಂದೆ ಪರಿಚಿತವಿದ್ದ ಅಸ್ತ್ರ ಒಲೆಯಿಂದ ಹಿಡಿದು ಸೂಪರ್ ಕಂಪ್ಯೂಟರ್, ನ್ಯಾನೋ ಟೆಕ್ನಾಲಜಿವರೆಗಿನ ವಿಜ್ಞಾನದ ವಿವಿಧ ಕ್ಷೇತ್ರಗಳವರೆಗೆ ಹರಡಿದೆ. ಕೇವಲ ಉನ್ನತ ಶಿಕ್ಷಣದ ಸಮೀಕ್ಷೆಗಳ ಹಿನ್ನೆಲೆಯಲ್ಲಿ ಐ.ಐ.ಎಸ್‌ಸಿ.ಯ ಇತ್ತೀಚಿನ ಕೆಲವೇ ವರ್ಷಗಳ ಸಾಧನೆಗಳನ್ನು ಉದಾಹರಣೆಗಾಗಿ ಪಟ್ಟಿ ಮಾಡಬಹುದು.

1) ಟೈಮ್ಸ್ ಹೈಯರ್ ಎಜ್ಯುಕೇಶನ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್‌ 2017: ಜಗತ್ತಿನ ಅಗ್ರಗಣ್ಯ ಸಣ್ಣ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಎಂಟನೆಯ ಸ್ಥಾನ.

2) ಕ್ಯುಎಸ್ ವರ್ಲ್ಡ್ ಯೂನಿವರ್ಸಿಟೀಸ್ ರ್‍ಯಾಂಕಿಂಗ್ಸ್‌ 2016: ನಿಯತಕಾಲಿಕೆಗಳಲ್ಲಿ ವೈಜ್ಞಾನಿಕ ಲೇಖನಗಳ ಪ್ರಕಟಣೆ - 11ನೆಯ ಸ್ಥಾನ.

3) ಕ್ಯುಎಸ್ ವರ್ಲ್ಡ್ ಯೂನಿವರ್ಸಿಟೀಸ್ 2015: ಜಾಗತಿಕ ವಿಶ್ವವಿದ್ಯಾಲಯಗಳಲ್ಲಿ 147ನೆಯ ಸ್ಥಾನ.

4) ಟೈಮ್ಸ್ ಹೈಯರ್ ಎಜ್ಯುಕೇಶನ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್‌ ಫಾರ್ ಬ್ರಿಕ್ಸ್ ಆಂಡ್ ಎಮರ್ಜಿಂಗ್ ಇಕನಾಮಿಕ್ಸ್: ಆರನೆಯ ಸ್ಥಾನ.

5) ಗ್ಲೋಬಲ್ ಎಂಪ್ಲಾಯಬಲಿಟಿ ಯೂನಿವರ್ಸಿಟಿ ರ್‍ಯಾಂಕಿಂಗ್ಸ್‌, 2015: ಜಾಗತಿಕವಾಗಿ 20ನೇ ಸ್ಥಾನ.

6) ಅಕಾಡಮಿಕ್ ರ್‍ಯಾಂಕಿಂಗ್ಸ್‌ ಆಫ್ ವರ್ಲ್ಡ್ ಯೂನಿವರ್ಸಿಟೀಸ್: 2011ರಲ್ಲಿ ಮೊದಲ ಬಾರಿಗೆ (ಶಾಂಘೈ ರ್‍ಯಾಂಕಿಂಗ್‌ನಲ್ಲಿ) ಜಾಗತಿಕ ಐದುನೂರು ವಿಶ್ವವಿದ್ಯಾಲಯಗಳ ಪಟ್ಟಿಗೆ ಸೇರಿದ ಮೊದಲ ಭಾರತೀಯ ಸಂಸ್ಥೆ.

ನಮಗೆಲ್ಲರಿಗೂ ತಿಳಿದಂತೆ ಭಾರತದಲ್ಲಿ ಆಧುನಿಕ ವಿಜ್ಞಾನವನ್ನು ಅತ್ಯಂತ ಕ್ರಮಬದ್ಧವಾಗಿ ಕಲಿಸುವ ಮತ್ತು ನಿರಂತರ ಸಂಶೋಧನೆಯ ಮೂಲಕ ಮುಂದಿನ ತಲೆಮಾರಿಗೆ ಸಮಗ್ರವಾಗಿ ದಾಟಿಸುವ ಕೆಲಸವನ್ನು ಪ್ರಾರಂಭಿಸಿದ ಕೆಲವೇ ಸಂಸ್ಥೆಗಳಲ್ಲಿ ಐ.ಐ.ಎಸ್‌ಸಿ.ಯೂ ಒಂದು. ಒಂದರ್ಥದಲ್ಲಿ ಸಂಶೋಧನಾ ವಾತಾವರಣ ಮತ್ತು ಅದಕ್ಕೆ ಪೂರಕವಾಗಿ ಬೇಕಾಗಿರುವ ಎಲ್ಲ ಸಂಗತಿಗಳ ಕುರಿತು ಪ್ರಯೋಗ ಮಾಡಿ ಅದನ್ನು ಅಭಿವೃದ್ಧಿಗೊಳಿಸಿದ ಕೀರ್ತಿಯಲ್ಲೂ ಐ.ಐ.ಎಸ್‌ಸಿ.ಗೆ ಹೆಚ್ಚಿನ ಪಾಲು ಸಲ್ಲುತ್ತದೆ. ಐ.ಐ.ಎಸ್‌ಸಿ.ಯ ಕಾರ್ಯವ್ಯಾಪ್ತಿಯು ವಿಜ್ಞಾನದ ನಿಯತಕಾಲಿಕೆಗಳಿಂದ ಮೊದಲುಗೊಂಡು ಪ್ರಯೋಗಶಾಲೆಗಳವರೆಗೆ, ತರಬೇತಿಯಿಂದ ಹಿಡಿದು ಸಾಮಾನ್ಯ ಜನರ ಸಮಸ್ಯೆಯವರೆಗೆ, ಎಲ್ಲ ರೀತಿಯಲ್ಲೂ ಯೋಚಿಸಿ, ಅದಕ್ಕೆ ಪೂರಕ ಮೂಲಭೂತ ಸೌಕರ್ಯಗಳನ್ನು ಸಜ್ಜುಗೊಳಿಸುವವರೆಗೆ ಈ ಪ್ರಯತ್ನಗಳು ವಿಸ್ತರಿಸಿವೆ. ಆ ಕಾರಣಕ್ಕಾಗಿಯೇ ಒಂದರ್ಥದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯು ಭಾರತದಲ್ಲಿ ಸಂಶೋಧನೆ ಮಾಡುವ ಸಾಧ್ಯತೆಯ ಬಗ್ಗೆ ನಿರಂತರ ಆಶಾದಾಯಕ ಸ್ಥಿತಿಯನ್ನು ನಿರ್ಮಿಸಿದೆ. ಈಗ ಜಗತ್ತಿನ ಹತ್ತು ಶ್ರೇಷ್ಠ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಭಾರತೀಯರಿಗೆ ಹೊಸ ಸ್ಫೂರ್ತಿಯನ್ನು ಕೊಟ್ಟಿದೆ ಎಂದರೆ ಅತಿಶಯೋಕ್ತಿ ಆಗಲಾರದು.

ಸಾಧ್ಯತೆಗಳು ಮತ್ತು ಸವಾಲುಗಳು

ಒಂದೆಡೆ ಐ.ಐ.ಎಸ್‌ಸಿ. ಮತ್ತು ಐ.ಐ.ಟಿ.ಯಂಥ ಸಂಸ್ಥೆಗಳ ಸಾಧನೆಗಳು ನಮಗೆ ಹುರುಪು ತಂದರೆ, ಇನ್ನೊಂದೆಡೆ ಅವು ಅನೇಕ ಪ್ರಶ್ನೆಗಳನ್ನೂ ಸೃಷ್ಟಿಸುತ್ತವೆ. ಇಷ್ಟೆಲ್ಲ ಸಂಸ್ಥೆಗಳಿದ್ದರೂ ಭಾರತದಲ್ಲಿ ಯುವ ಪ್ರತಿಭೆಗಳಿಗೆ ಸಂಶೋಧನೆಯನ್ನು ಒಂದು ವೃತ್ತಿಜೀವನವಾಗಿ ತೋರಿಸಿಕೊಡುವಲ್ಲಿ ವಿಫಲರಾಗಿದ್ದೇವೆ. ಐ.ಟಿ., ಬಿ.ಟಿ., ಕಾರ್ಪೊರೇಟ್ ಉದ್ಯೋಗ ಅಥವಾ ಸಿವಿಲ್ ಸರ್ವೀಸ್‌ಗಳಂತೆ ಸಂಶೋಧನೆಯನ್ನೂ ಆಯ್ಕೆ ಮಾಡಬಹುದಾದ ವೃತ್ತಿಯಾಗಿಸಲು ಇರುವ ತೊಂದರೆಗಳೇನು ಎಂಬುದು ಸ್ಪಷ್ಟವಾಗಿ ತಿಳಿದಿಲ್ಲವೇಕೆ? ಭಾರತದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಸೃಷ್ಟಿಸಲು ಐ.ಐ.ಎಸ್‌ಸಿ.ಯಂಥದ್ದೇ  ಸಂಸ್ಥೆಗಳನ್ನು ಕಟ್ಟುವಲ್ಲಿ ನಾವೇಕೆ ವಿಫಲರಾಗಿದ್ದೇವೆ ಎನ್ನುವುದು ಕೂಡ ಇಂದು ನಮ್ಮ ಮುಂದಿರುವ ಗಂಭೀರವಾದ ಪ್ರಶ್ನೆ. ಐ.ಐ.ಎಸ್‌ಸಿ.ಯ ಸುತ್ತಲೂ ಇರುವ ಕೆಲವು ಜಿಲ್ಲೆಗಳಲ್ಲಿನ ನಾಲ್ಕಾರು ವಿಶ್ವವಿದ್ಯಾಲಯಗಳಲ್ಲಿ ಹೊರಬರುವ ಸಂಶೋಧನೆಗೂ ಐ.ಐ.ಎಸ್‌ಸಿ.ಯ ಸಂಶೋಧನೆಗೂ ಗುಣಾತ್ಮಕವಾಗಿ ಅಜಗಜಾಂತರದಷ್ಟು ವ್ಯತ್ಯಾಸವಿದೆ.

ಹಾಗಾದರೆ ಈ ರೀತಿ ಅಪ್ರತಿಮ ಜ್ಞಾನ ಪ್ರಸರಣೆ ಮತ್ತು ಸಂಶೋಧನಾ ಕೌಶಲವನ್ನು ಐ.ಐ.ಎಸ್‌ಸಿ.ಯಿಂದ ಬೇರೆ ಕಡೆಗೂ ಹರಡುವ ಕಾರ್ಯದಲ್ಲಿ ಇರಬಹುದಾದ ತೊಂದರೆ ಏನು ಎಂಬುದು ನಮಗೆ ಅರ್ಥವಾದಂತಿಲ್ಲ. ಬೇರೆ ಬೇರೆ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯ ನಂತರ ವಿಜ್ಞಾನಸಂಸ್ಥೆಗೆ ಬರುವುದು ಇದುವರೆಗೂ ವಾಡಿಕೆಯಾಗಿತ್ತು. ಈಗ ಐ.ಐ.ಎಸ್‌ಸಿ. ಸ್ವತಃ ಸ್ನಾತಕ ಪದವಿಗಳನ್ನು ಪ್ರಾರಂಭಿಸಿರುವುದು, ಐ.ಐ.ಎಸ್‌ಸಿ.ಗೂ ಇತರ ವಿಶ್ವವಿದ್ಯಾಲಯಗಳಿಗೂ ಇದ್ದ ಸಂಬಂಧವನ್ನು ಮತ್ತಷ್ಟು ಮೊಟಕುಗೊಳಿಸಿದೆ. ಇದಲ್ಲದೆ ಐ.ಐ.ಎಸ್‌ಸಿ. ಇಂದು ಒಂದು ಕಡೆ ಜಗತ್ತಿನ ವಿವಿಧ ಉನ್ನತ ಶಿಕ್ಷಣ ಪಡೆಯಲು ರಹದಾರಿಯಂತೆ ಕಂಡರೆ, ಮತ್ತೊಂದೆಡೆ ವಿದ್ಯಾರ್ಥಿಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಸಂಬಳವನ್ನು ಪಡೆಯುವ ಉದ್ಯೋಗದ ಮಾರ್ಗೋಪಾಯವಾಗಿಯೂ ಕಾಣುತ್ತಿದೆ. ಇದೊಂದು ಕಳವಳಕಾರಿ ಸಂಗತಿ ಎನ್ನುವುದು ವಿಜ್ಞಾನಕ್ಷೇತ್ರದ ಹಲವರು ಗಣ್ಯರ ಅಭಿಪ್ರಾಯವಾಗಿದೆ. ಮಾತ್ರವಲ್ಲ, ಈ ವಿಜ್ಞಾನಸಂಸ್ಥೆ ಮೂಲಭೂತ ವಿಜ್ಞಾನದ ಸಂಶೋಧನೆಗಳಿಂದ ದೂರ ಸರಿದು ಆನ್ವಯಿಕಗಳ ಕಡೆಗೆ ಮುಖ ಮಾಡಿರುವುದು ಕೂಡ ಅತ್ಯಂತ ಕಳವಳಕಾರಿ ಬೆಳವಣಿಗೆ. ಇದರ ಜೊತೆಗೆ, ಭಾರತದಲ್ಲಿ ವಿಜ್ಞಾನ – ತಂತ್ರಜ್ಞಾನ ಕ್ಷೇತ್ರದಲ್ಲಿ ಇಷ್ಟು ಮಹತ್ಸಾಧನೆ ಮಾಡುವುದು ಸಾಧ್ಯವಾಗಿರುವಾಗ ಇದೇ ರೀತಿಯಲ್ಲಿ ಸಮಾಜವಿಜ್ಞಾನ ಮತ್ತು ಮಾನವಿಕಗಳ ಅಧ್ಯಯನದಲ್ಲಿಯೂ ಇಂಥ ಸಾಧನೆ ಆಗದಿರುವುದಕ್ಕೆ ಕಾರಣಗಳನ್ನು ಕೇಳಿಕೊಳ್ಳಬೇಕಾಗುತ್ತದೆ. ಈ ಎಲ್ಲ ಪ್ರಶ್ನೆಗಳ ನಡುವೆಯೂ ಐ.ಐ.ಎಸ್‌ಸಿ.ಯ ಸಾಧನೆ ಅತ್ಯಂತ ಮಹತ್ತರ ಹಾಗೂ ಭಾರತೀಯರೆಲ್ಲರೂ ಸಂಭ್ರಮಿಸಬೇಕಾದ ಸಂಗತಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.