ಭಾನುವಾರ, ಡಿಸೆಂಬರ್ 8, 2019
20 °C

ಹಿಂದಿಯೇತರ ಭಾಷೆಗಳಿಗೆ ಮಾರಕ

Published:
Updated:
ಹಿಂದಿಯೇತರ ಭಾಷೆಗಳಿಗೆ ಮಾರಕ

ಒಕ್ಕೂಟ ವ್ಯವಸ್ಥೆಯಲ್ಲಿ ಭಾಷೆಯನ್ನು ಒಳಗೊಂಡಂತೆ ಯಾವುದೇ ‘ಹೇರಿಕೆ’ ಕೇಂದ್ರ ಸರ್ಕಾರದ ದಾರ್ಷ್ಟ್ಯದ ಪ್ರದರ್ಶನವಾಗುತ್ತದೆ. ರಾಜ್ಯಗಳ ಆತ್ಮಗೌರವ ಹಾಗೂ ಸ್ವಾಯತ್ತತೆ ಪ್ರಶ್ನಿಸುವಷ್ಟು ಗಂಭೀರ ವಿಚಾರವಾಗುತ್ತದೆ. ಕೇಂದ್ರವು ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದನ್ನೂ ಹೇರಿಕೆಯಾಗದಂತೆ ಸೂಕ್ಷ್ಮವಾಗಿ ನಿಭಾಯಿಸುವ ಛಾತಿ ಹೊಂದಿದ್ದರೆ ಒಕ್ಕೂಟ ವ್ಯವಸ್ಥೆ ಆರೋಗ್ಯಪೂರ್ಣವಾಗಿರುತ್ತದೆ. ಸಂವಿಧಾನದ 351ನೇ ವಿಧಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಂವಿಧಾನಿಕ ಆಶಯ, ಹಿಂದಿ ಭಾಷೆಯ ಬೆಳವಣಿಗೆಯನ್ನು ಎಲ್ಲ ರೀತಿಯಿಂದಲೂ ಪ್ರೋತ್ಸಾಹಿಸುವುದೇ ಆಗಿದೆ. ಹಿಂದಿಯೇತರ 21 ಭಾಷೆಗಳ ಕುರಿತು ಹೇಳುವುದು ಮಾತ್ರ ತೀರಾ ಔಪಚಾರಿಕವಾಗಿದೆ. ಅಂದರೆ, ಅದರ ಹೃದಯಂಗಮ ಮಾತುಗಳು ಹಿಂದಿ ಭಾಷೆಗೆ ಸಂಬಂಧಿಸಿದವು.ಎಂಟನೇ ಷೆಡ್ಯೂಲ್‌ನಲ್ಲಿರುವ 22 ಭಾಷೆಗಳ ಅಭಿವೃದ್ಧಿಗೆ ಸಮಾನ ಪ್ರೋತ್ಸಾಹ ನೀಡಬೇಕಾದುದು ಕೇಂದ್ರ ಸರ್ಕಾರದ ಕರ್ತವ್ಯ. ಆದರೆ, 343 ರಿಂದ 351ರ ವರೆಗಿನ ವಿಧಿಗಳು ಇದನ್ನು ಮುಕ್ತವಾಗಿ ಹೇಳದೆ ಹಿಂದಿ ಭಾಷೆಗೆ ಕದ್ದುಮುಚ್ಚಿ ಸಹಕರಿಸುವುದು ದುಃಖದ ಸಂಗತಿ.ಅಧಿಕೃತ ಭಾಷೆಗಳ ಕಾಯ್ದೆ ಮತ್ತು ನಿಯಮಗಳು ತಮಿಳುನಾಡಿನಲ್ಲಿ ಅನುಷ್ಠಾನಗೊಳ್ಳಲು ಅಲ್ಲಿನ ರಾಜ್ಯ ಸರ್ಕಾರ  ಬಿಟ್ಟಿಲ್ಲ. ಕರ್ನಾಟಕ ಒಳಗೊಂಡಂತೆ, ಇತರೆ ಹಿಂದಿಯೇತರ ರಾಜ್ಯಗಳಲ್ಲಿ ಈ ನಿಯಮಗಳ ದಬ್ಬಾಳಿಕೆ ಉಂಟು. ಈ ದಿಕ್ಕಿನಲ್ಲಿ ತಮಿಳುನಾಡಿನ ಬದ್ಧತೆ ಅನುಕರಣೀಯ.‘ಸಂಸತ್‌ ಸಮಿತಿ ಮಾಡಿರುವುದು ಶಿಫಾರಸು ಅಷ್ಟೇ. ಆದರೆ ಕಡ್ಡಾಯ ಅಲ್ಲ’ ಎಂಬ ಸಚಿವ ವೆಂಕಯ್ಯ ನಾಯ್ಡು ಅವರ ಉವಾಚ ನನಗೆ ದೊಡ್ಡವರ ಬಾಯಿಯಿಂದ ಹೊರಡುವ ಹಸಿ ಸುಳ್ಳಿನಂತೆ ಕಾಣುತ್ತದೆ. ಕಡ್ಡಾಯವಲ್ಲದ್ದನ್ನೇ ಇಷ್ಟೊಂದು ಗಂಭೀರವಾಗಿ ಕಾರ್ಯಗತ ಮಾಡಲು ಹೊರಟಿರುವ ಅವರ ನಿಲುವು ಒಂದು ಹುನ್ನಾರವೇ ಸರಿ.ಇವರಿಗೆ ಶಿಫಾರಸು ಎಂಬುದು ಹಿಂಬಾಗಿಲಿದ್ದಂತೆ. ನಮ್ಮ ವಿಧಾನಸೌಧಕ್ಕೆ ಇರುವಂತೆ. ಮುಖ್ಯ ದ್ವಾರವಿದ್ದರೂ ಅಲ್ಲಿ ಏನೂ ಜರುಗುವುದಿಲ್ಲ, ಎಲ್ಲವೂ ಹಿಂಬಾಗಿಲಿನಿಂದಲೇ...!ಶಿಫಾರಸಿನ ನೆಪದಲ್ಲಿ ಹಿಂದಿಯೇತರ ಭಾಷೆಗಳನ್ನು ಕೊಲ್ಲುತ್ತಲೇ ಹಿಂದಿ ಭಾಷೆಯನ್ನು ಕೊಬ್ಬಿಸುವ ಚಾಣಾಕ್ಷತನ ಇಲ್ಲಿದೆ.  ಹೀಗಾಗಿಯೇ ಅಲ್ಲವೇ ಹಿಂದಿ ಭಾಷೆ ಇತರ 21 ಭಾಷೆಗಳಂತೆ ಅಧಿಕೃತ ಭಾಷೆಯಾಗಿದ್ದರೂ ಅದಕ್ಕೆ ‘ರಾಷ್ಟ್ರಭಾಷೆ’ ಎಂಬ ಹುಸಿ ನಾಮಕರಣ ಮಾಡಿರುವುದು!ಹಿಂದಿ ರಾಷ್ಟ್ರಭಾಷೆ ಎಂದು ಭಾರತ ಸಂವಿಧಾನ ಹೇಳುವುದಿಲ್ಲ. ಅದಕ್ಕೆ ಎಲ್ಲ ಸ್ಥಾನಮಾನಗಳನ್ನು ಮಾತುಗಳಲ್ಲೇ ಕಟ್ಟಿಕೊಡುತ್ತಾ, ರಾಷ್ಟ್ರಭಾಷೆಯಾಗಿಸುವ ಪ್ರಯತ್ನದಲ್ಲಿ  ಕೇಂದ್ರ ಸರ್ಕಾರ ಕ್ರಿಯಾಶೀಲವಾಗಿರುವುದು ಹಿಂದಿಯೇತರ ಭಾಷೆಗಳಿಗೆ ಮಾರಕ.

-ಸಿ.ಎಚ್‌.ಹನುಮಂತರಾಯ, ವಕೀಲ

*ಭಾರತೀಯ ಭಾಷೆಗಳ ಹಿರಿಯಕ್ಕ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಜೆ.ಎಚ್‌.ಪಟೇಲರು 1967ರಲ್ಲಿ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿ ಇತಿಹಾಸವನ್ನೇ ನಿರ್ಮಿಸಿದರು. ಆಗ ಲೋಕಸಭಾ ಅಧ್ಯಕ್ಷರಾಗಿದ್ದ ನೀಲಂ ಸಂಜೀವ ರೆಡ್ಡಿ, ಪಟೇಲರ ನಿಲುವನ್ನು ಪ್ರೋತ್ಸಾಹಿಸಿದ್ದರು. ಜನತಂತ್ರ ವ್ಯವಸ್ಥೆಯಲ್ಲಿ ಸಾತ್ವಿಕ ಪ್ರತಿಭಟನೆ ಮತ್ತು ಹಕ್ಕುಗಳಿಗಾಗಿ ಹೋರಾಟ ಯಾವ ರೀತಿ ಇರಬೇಕು ಎಂಬುದಕ್ಕೆ ಇದೊಂದು ನಿದರ್ಶನ.ಹಿಂದಿ ಭಾಷೆ ಒಕ್ಕೂಟ ವ್ಯವಸ್ಥೆಯಲ್ಲಿ ಯಾವತ್ತೂ ಪ್ರಧಾನವಾಗಿಯೇ ರಾರಾಜಿಸಿದೆ. ಹೀಗೆಂದ ಮಾತ್ರಕ್ಕೆ ಅದು ಹೇರಿಕೆ ಅಲ್ಲ. ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ  ಹಿಂದಿ ದೇಶದ ಉದ್ದಗಲಕ್ಕೂ ಆಂದೋಲನದ ದೊಂದಿಯಾಗಿತ್ತು.ಹಿಂದಿ ಭಾಷೆ, ಒಕ್ಕೂಟ ವ್ಯವಸ್ಥೆಗೆ ಮಾರಕ ಎಂಬ ವಾದದಲ್ಲಿ ಹುರುಳಿಲ್ಲ. ಹಿಂದಿ ಭಾಷೆಯನ್ನು ವಿರೋಧಿಸುವವರಲ್ಲಿ  ಇಂಗ್ಲಿಷ್ ಭಾಷೆಯನ್ನು ಪೋಷಿಸುವ ಪಟ್ಟಭದ್ರ ಹಿತಾಸಕ್ತಿ ಉಳ್ಳವರೇ ಮುಖ್ಯರಾಗಿದ್ದಾರೆ. ಇಂಗ್ಲಿಷ್‌ ಇಲ್ಲದೇ ಹೋದರೆ ತಮ್ಮ ಮಹತ್ವ ಮರೆಯಾಗಿ ಹೋದಿತು ಎಂಬುದು ಇವರ ಭಯ. ಹಿಂದಿ ಭಾರತದ ಸಂಪರ್ಕ ಭಾಷೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ದಕ್ಷಿಣ ಭಾರತದಲ್ಲಿ ಹಿಂದಿ ಬಗ್ಗೆ ದ್ವೇಷ ಇದೆ ಎಂದು ಭಾವಿಸುವುದು ತಪ್ಪಾದೀತು. ನೂರಕ್ಕೆ ಅರವತ್ತು ಮಂದಿಗೆ ತಿಳಿಯುವ ಹಿಂದಿ ರಾಷ್ಟ್ರದ ಭಾಷೆ ಆಗುವುದರಲ್ಲಿ ಯಾವುದೇ ತಪ್ಪಿಲ್ಲ. ಸುಭದ್ರ ಜನತಂತ್ರಕ್ಕೆ ಭಾರತೀಯ ನೆಲದ್ದೇ ಆದ ಭಾಷೆಯಾಗಿ ಹಿಂದಿ ಇದೆ ಎಂಬುದು ನಮ್ಮ ಹೆಮ್ಮೆಯಾಗಬೇಕು.

ಭಾರತೀಯ ಭಾಷೆಗಳಿಗೆಲ್ಲಾ ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿ ವರ್ಗವೇ ಪ್ರಥಮ ಶತ್ರು. ಕಾನೂನು ಕಟ್ಟಳೆಗಳೆಲ್ಲಾ ಜನರ ಭಾಷೆಯಲ್ಲಿಯೇ ಬಂದು ಬಿಟ್ಟರೆ ಈ  ಪಟ್ಟಭದ್ರರಿಗೆ ಉಳಿಯುವುದೇನು?‘ವಿಶ್ವದ ನಾಲ್ಕು ಪ್ರಬಲ ಭಾಷೆಗಳಲ್ಲಿ ಒಂದಾದ ಹಿಂದಿ ಭಾಷೆ ವಿಶ್ವಸಂಸ್ಥೆಯ  ಭಾಷೆಗಳಲ್ಲಿ ಒಂದಾಗಿ ಮನ್ನಣೆ ಪಡೆಯಬೇಕು’ ಎಂದು ಕಾಕಾ ಕಾಲೇಲ್ಕರ್ ಬಹಳ ಹಿಂದೆಯೇ ಬೇಡಿಕೆ ಇಟ್ಟಿದ್ದರು. ‘ಕೋಟಿ ಕೋಟಿ ಜನರು ಮಾತನಾಡುವ ಹಿಂದಿಗೆ  ಏಕೆ ಅಗ್ರ ತಾಂಬೂಲ ಇರಬಾರದು’ ಎಂದು ಅವರು ಕೇಳಿದ್ದರು.‘ಹರುಕುಮುರುಕು ಇಂಗ್ಲಿಷ್‌ ಭಾಷೆಯನ್ನೇ ಸಾರ್ವಭೌಮ ಸ್ಥಾನದಲ್ಲಿ ಇರಿಸಿರುವ ತನಕ ಭಾರತೀಯ ಭಾಷೆಗಳು  ಅರಳಲಾರವು, ಬೆಳೆಯಲಾರವು’ ಎಂಬ ಗಾಂಧೀಜಿ ಮಾತುಗಳನ್ನು ಮೆಲುಕು ಹಾಕಿದಾಗ ಭಾಷೆಯ ಹೆಸರಿನಲ್ಲಿ ಗೊಂದಲ ಎಬ್ಬಿಸುವವರನ್ನು ಕಂಡರೆ ಮರುಕ ಹುಟ್ಟುತ್ತದೆ. ಈ ನಡೆ ತರವಲ್ಲ. ತರ್ಕಬದ್ಧವೂ ಅಲ್ಲ. ಯಾವತ್ತಿದ್ದರೂ ದೇಶಕ್ಕೆ ಒಂದು ಸಂಪರ್ಕ ಭಾಷೆ ಎಂಬುದು ಬೇಕೇ ಬೇಕು.ಅದು ಈಗಾಗಲೇ ಆಗಿ ಹೋಗಿದೆ. ಆ ಸ್ಥಾನದಲ್ಲಿ ಹಿಂದಿ ಬಂದು ಕುಳಿತಿದೆ. ಬಹುಭಾಷಾ ರಾಷ್ಟ್ರ ಭಾರತದಲ್ಲಿ ಹಿಂದಿಗೆ ಮೊದಲ ನೈವೇದ್ಯ ಮಾಡಿದರೆ ಯಾವುದೇ ತಪ್ಪಿಲ್ಲ.

ವೆಂಕಟೇಶ ಎಚ್.ದೊಡ್ಡೇರಿ, ವಕೀಲ

*ತುರ್ತು ಅಗತ್ಯ

ಈಚೆಗೆ ಬಿಡುಗಡೆಯಾಗಿರುವ ಹೊಸ ಶಿಕ್ಷಣ ನೀತಿಯಲ್ಲಿ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಬೆಳೆಸಲು ಅನೇಕ ಕಾರ್ಯಕ್ರಮಗಳನ್ನು ಸೂಚಿಸಲಾಗಿದೆ, ಆದರೆ ದೇಸೀ ಭಾಷೆಗಳ ಬಗ್ಗೆ ಅದು ಯಾವ ಉತ್ಸಾಹವನ್ನೂ ತೋರಿಲ್ಲ. ಈಗ ಕೇಂದ್ರದಲ್ಲಿರುವ ಸರ್ಕಾರವು ಹಿಂದಿ ಹೇರಿಕೆಯನ್ನು ನಿರ್ಲಜ್ಜವಾಗಿ ವಿವಿಧ ರೀತಿಗಳಲ್ಲಿ ಮಾಡುತ್ತಿದೆ.

ಸೃಜನಾತ್ಮಕವಾಗಿ ಹಿಂದಿಯೇತರ ಭಾಷೆಗಳೇ ಇವತ್ತು ಮುಂಚೂಣಿಯಲ್ಲಿವೆ ಎಂಬ ಅಂಶವನ್ನು ಅದು ಮರೆತಿದೆ. ಹೀಗಾಗಿ ದೇಸೀ ಭಾಷೆಗಳ ಉಳಿವಿಗೆ ಮತ್ತು ಹಿಂದಿ ಹೇರಿಕೆಯ ವಿರುದ್ಧ ಒಡಿಯಾ, ಸಂತಾಲಿ, ಡೋಗ್ರಿ, ಭೋಜಪುರಿ, ಮಣಿಪುರಿ, ತೆಲುಗು, ತಮಿಳು, ಮಲಯಾಳ, ಮರಾಠಿ, ಕಾಶ್ಮೀರಿ – ಹೀಗೆ ವಿವಿಧ ಭಾಷೆಗಳನ್ನು ಒಳಗೊಂಡ ರಾಷ್ಟ್ರಮಟ್ಟದ ವೇದಿಕೆಯೊಂದನ್ನು ನಾವೆಲ್ಲ ಕಟ್ಟಿಕೊಳ್ಳಬೇಕಾದ್ದು ಇಂದಿನ ತುರ್ತು ಅವಶ್ಯಕತೆ.

ಪುರುಷೋತ್ತಮ ಬಿಳಿಮಲೆ

ಮುಖ್ಯಸ್ಥರು, ಕನ್ನಡ ಅಧ್ಯಯನ ಪೀಠ, ಜೆಎನ್‌ಯು, ದೆಹಲಿ

*ಭಾರತದ ಬಹುತ್ವಕ್ಕೆ ವಿರೋಧ

ಹಿಂದಿ ಅಧಿಕೃತ ಭಾಷೆಯಷ್ಟೇ. ಅದು ಯಾವತ್ತೂ ರಾಷ್ಟ್ರೀಯ ಭಾಷೆಯಾಗಿಲ್ಲ. ಸಂವಿಧಾನದ 343ನೇ ವಿಧಿ, ಹಿಂದಿ ಭಾಷೆಯನ್ನು ಒಕ್ಕೂಟದ ಅಧಿಕೃತ ಭಾಷೆಯೆಂದೂ,  ಸಂವಿಧಾನ ಅಳವಡಿಕೆ ದಿನದಿಂದ 15 ವರ್ಷಗಳ ಕಾಲ ಇಂಗ್ಲಿಷ್‌ ಅಧಿಕೃತ ಭಾಷೆ ಎಂದೂ ಸ್ಪಷ್ಟವಾಗಿ ಉಲ್ಲೇಖಿಸಿದೆ.ಸಂವಿಧಾನದ ಷೆಡ್ಯೂಲ್‌ 8ರಲ್ಲಿ ಒಟ್ಟು 22 ಭಾಷೆಗಳು ಅಡಕವಾಗಿವೆ. ಇವುಗಳಲ್ಲಿ 15 ಇಂಡೊ ಆರ್ಯನ್‌, 4 ದ್ರಾವಿಡ, 2 ಟಿಬೆಟೊ ಬರ್ಮನ್‌ ಮತ್ತು 1 ಮುಂಡಾ ಮೂಲದ್ದೆಂದು ಗುರುತಿಸಲಾಗಿದೆ. ಈ 22 ಭಾಷೆಗಳಲ್ಲಿ ಹಿಂದಿ ಭಾಷೆಯೂ ಸೇರಿದ್ದು (ಇವುಗಳಲ್ಲಿ ಇಂಗ್ಲಿಷ್‌ ಒಳಗೊಂಡಿಲ್ಲ) ಇತರ ಪ್ರಾದೇಶಿಕ ಭಾಷೆಗಳ ಜೊತೆ ತೆರೆಮರೆಯಲ್ಲಿ ಪೈಪೋಟಿಗೆ ಇಳಿಯಲು ಅನುವು ಮಾಡಿಕೊಟ್ಟಂತೆ ಇದೆ.ಅಧಿಕೃತ (official language) ಭಾಷೆ ಎಂಬುದು ಸಂಸದೀಯ, ಆಡಳಿತ ಮತ್ತು ನ್ಯಾಯಾಂಗದ ವ್ಯವಹಾರಗಳಿಗೆ ಸಂಬಂಧಿಸಿದ್ದು ಎನ್ನುವುದು ಗಮನಾರ್ಹ.  ಆದರೆ ಇದು ಶಿಕ್ಷಣ ಮಾಧ್ಯಮ (medium of instruction) ಮತ್ತು ರಾಷ್ಟ್ರದ ಜನರ ದೈನಂದಿನ ಬದುಕಿಗೆ ಮೂಲವಾದ ಭಾಷೆಯಾಗಿರುವುದಿಲ್ಲ. ಇವುಗಳ ನಂತರದ ಸರದಿ 1963ರ ಅಧಿಕೃತ ಭಾಷೆಗಳ ಕಾಯ್ದೆ ಮತ್ತು ಅದಕ್ಕೆ ಪೂರಕವಾದ ಅಧಿಕೃತ ಭಾಷಾ ನಿಯಮ 1976.

ಸಂವಿಧಾನ ಜಾರಿಗೆ ಬಂದ 15 ವರ್ಷಗಳ ತರುವಾಯ ಬಂದ ಈ ಕಾಯಿದೆ ಇತರ ಪ್ರಾದೇಶಿಕ ಭಾಷೆಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಬಂದಂತಹುದು. ಆದರೆ ಹಿಂದಿ ಭಾಷೆಯನ್ನು ಕಡ್ಡಾಯವಾಗಿ 1ರಿಂದ 10ನೇ ತರಗತಿವರೆಗೆ ಕಲಿಯಬೇಕಾದ್ದು ಮತ್ತು ಆಡಳಿತಾತ್ಮಕ ವ್ಯವಹಾರಗಳು, ಸಂಸದೀಯ ಚಟುವಟಿಕೆಗಳು, ರಾಜ್ಯಾಂಗದ ಸಂವಹನಗಳಲ್ಲಿ ಕಡ್ಡಾಯವಾಗಿ ಹಿಂದಿ ಬಳಕೆಯು ಇತರೆ ಪ್ರಾದೇಶಿಕ ಭಾಷೆಗಳ ಪ್ರಸ್ತುತತೆಗೆ ಸವಾಲಾಗಿ ಪರಿಣಮಿಸುತ್ತದೆ.ಅನುಸೂಚಿತ ಭಾಷೆಗಳೇ ರಾಷ್ಟ್ರಮಟ್ಟದಲ್ಲಿ ಅಸ್ತಿತ್ವಕ್ಕೆ ಪರದಾಡಿದರೆ ಇನ್ನು ಸಾವಿರಕ್ಕೂ ಹೆಚ್ಚು ಭಾಷೆಗಳ ಸ್ಥಿತಿ ಏನಾಗಬೇಡ? ಬಹುಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ದೇಶದಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಗಣನೀಯವಾಗಿ ಮತ್ತು ಗುಣಾತ್ಮಕವಾಗಿ ಸಾಧನೆ ಮಾಡಲು ಪ್ರಾದೇಶಿಕ ಭಾಷೆಗಳು ಅನಿವಾರ್ಯ.

ದೇಶದಲ್ಲಿ ಹಿಂದಿಯೇತರ ರಾಜ್ಯಗಳ ಸಂಖ್ಯೆ 23. ಇಲ್ಲೆಲ್ಲ  ಪ್ರಾದೇಶಿಕ ಭಾಷೆಗಳೇ ಆಡಳಿತ ಮತ್ತು ದೈನಂದಿನ ಬದುಕಿನ ಭಾಷೆಗಳು.ತ್ರಿಭಾಷಾ ಸೂತ್ರದ ಅಡಿಯಲ್ಲಿ ಹಿಂದಿಯನ್ನು ಒಂದು ಕಲಿಕಾ ಭಾಷೆಯಾಗಿ ಇಲ್ಲಿ ಈಗಾಗಲೇ ಪರಿಗಣಿಸಲಾಗಿದೆ. ಸರ್ಕಾರಿ ಕಚೇರಿಗಳು, ರೈಲ್ವೆ, ಬ್ಯಾಂಕು, ವಿಮಾ ಕಂಪೆನಿಗಳು, ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣಗಳಲ್ಲಿ  ಸಮಗ್ರವಾಗಿ ಜಾರಿಗೆ ತರಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಿಂದಿಯನ್ನು ವಿಸ್ತರಣೆ ಮಾಡುತ್ತೇವೆ ಎನ್ನುವುದು ಸರಿಯಲ್ಲ.ಸಂವಿಧಾನದ 30ನೇ ವಿಧಿ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳ ರಕ್ಷಣೆ ಮತ್ತು ಪೋಷಣೆ ಕುರಿತು ಹೇಳಿದೆ. ಹೀಗಾಗಿ ಹಿಂದಿ ಭಾಷೆಯ ಅನಗತ್ಯ ಹೇರಿಕೆ ಎದ್ದು  ಕಾಣುತ್ತದೆ. ಈಗಾಗಲೇ ಹಿಂದಿ ಭಾಷೆಯ ಪ್ರಚಾರಕ್ಕೆ ಎಂದೇ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಪರಿಷತ್‌ ಇವೆ. ದಕ್ಷಿಣದ ರಾಜ್ಯಗಳ ಮೂಲೆಮೂಲೆಯಲ್ಲೂ ಹಿಂದಿ ಭಾಷೆಯನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಲಾಗುತ್ತಿದೆ.ಇಷ್ಟಾದರೂ ಕೇಂದ್ರ ಸರ್ಕಾರದ ಹಿಂದಿ ವ್ಯಾಮೋಹ  ತಪ್ಪಿಲ್ಲ. 8ನೇ ಷೆಡ್ಯೂಲ್‌ನಲ್ಲಿ ಉಳಿದ ಭಾಷೆಗಳ (ಸಂಸ್ಕೃತ ಹೊರತುಪಡಿಸಿ) ಅಭಿವೃದ್ಧಿಗೆ ಮತ್ತು ಪ್ರಚಾರಕ್ಕೆ  ಉತ್ಸಾಹ ತೋರಿದ್ದು ಕಾಣಸಿಗುವುದಿಲ್ಲ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಮತ್ತು ಬಹುಭಾಷಾ ಸಂಸ್ಕೃತಿಗೆ ಧಕ್ಕೆಯಾಗಬಲ್ಲದು.ಸಂವಿಧಾನದ  15ನೇ ವಿಧಿ, ‘ಪ್ರತಿಯೊಬ್ಬ ನಾಗರಿಕನನ್ನೂ ಯಾವುದೇ ತಾರತಮ್ಯ ಇಲ್ಲದೆ ಸಮಾನತೆಯಿಂದ ನಡೆಸಿಕೊಳ್ಳಬೇಕು’ ಎಂದು ಸಾರಿ ಹೇಳುತ್ತದೆ. ಹೀಗಿರುವಾಗ ಹಿಂದಿ ಭಾಷೆ ಹೇರಿಕೆ ಸಂವಿಧಾನದ ಸಮಗ್ರತೆ ಮತ್ತು ಬಹುತ್ವದ ಆಶಯಗಳಿಗೆ ವಿರೋಧವಾಗಿದೆ.

‌-ಕೆ.ಬಿ.ಕೆ ಸ್ವಾಮಿ, ವಕೀಲ

ಪ್ರತಿಕ್ರಿಯಿಸಿ (+)