ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಚಲನೆಗೆ ರೋಬೊಟಿಕ್‌ ಸಾಧನ

ಐಐಐಟಿ–ಬಿ ಹಾಗೂ ನಿಮ್ಹಾನ್ಸ್‌ ಜಂಟಿಯಾಗಿ ಅಭಿವೃದ್ಧಿ
Last Updated 31 ಆಗಸ್ಟ್ 2017, 19:48 IST
ಅಕ್ಷರ ಗಾತ್ರ

ಬೆಂಗಳೂರು: ನರ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ಹಾಗೂ ಕೈ ಚಲನೆ ಕಡಿಮೆ ಇರುವ ರೋಗಿಗಳ ಬೆರಳು ಮತ್ತು ಮಣಿಕಟ್ಟುಗಳ ಚಲನೆಗೆ ಸಹಾಯ ಮಾಡುವಂತಹ ರೋಬೊಟಿಕ್‌ ಸಾಧನವನ್ನು ಬೆಂಗಳೂರು ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್ಫಾರ್ಮೆಷನ್‌ ಟೆಕ್ನಾಲಜಿ (ಐಐಐಟಿ–ಬಿ) ಹಾಗೂ ನಿಮ್ಹಾನ್ಸ್‌ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

ಇದು ಎಲೆಕ್ಟ್ರೊ–ಮೆಕ್ಯಾನಿಕಲ್ ರೋಬೊಟಿಕ್‌ ಸಾಧನವಾಗಿದ್ದು, ಮಣಿಕಟ್ಟು ಮತ್ತು ಬೆರಳುಗಳ ಚಲನೆಯನ್ನು ಕಾರ್ಯಗತಗೊಳಿಸಲು ಬೇಕಾದ ಪ್ರೋಗ್ರಾಂಗಳನ್ನು ಸೇರಿಸಲಾಗಿದೆ. ರೋಗಿಯ ಅಗತ್ಯಕ್ಕೆ ತಕ್ಕಂತೆ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸಲಿದೆ.

ಉಪಕರಣ ಹೇಗಿರಬೇಕು, ಯಾವೆಲ್ಲ ಅಂಶಗಳನ್ನು ಒಳಗೊಂಡಿರಬೇಕು ಎಂಬುದರ ಬಗ್ಗೆ ನಿಮ್ಹಾನ್ಸ್‌ ಸಂಸ್ಥೆಯ ನರರೋಗ ತಜ್ಞ ಡಾ.ವಿಕಾಸ್‌ ವಜಿಯಾಲ್‌ ಮಾಹಿತಿ ನೀಡಿದ್ದಾರೆ. ಇದರ ಆಧಾರದ ಮೇಲೆ ಐಐಐಟಿ–ಬಿ ಸಹಾಯಕ ಪ್ರಾಧ್ಯಾಪಕ ಡಾ.ಮಾಧವ ರಾವ್‌ ಅವರ ಮಾರ್ಗದರ್ಶನದಲ್ಲಿ ಕಾಲೇಜಿನ ತೃತೀಯ ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿ ವಿನಯ್‌ ಚಂದ್ರಶೇಖರ್‌ ಈ ಸಾಧನವನ್ನು ಅಭಿವೃದ್ಧಿ ಪಡಿಸಿದ್ದಾರೆ.

‘ಅಪಘಾತಗಳಲ್ಲಿ ತೀವ್ರವಾಗಿ ಗಾಯಗೊಂಡವರು ನಿಮ್ಹಾನ್ಸ್‌ಗೆ ಬರುತ್ತಾರೆ. ಅವರ ಕೈ, ಕಾಲುಗಳಲ್ಲಿ ನರಗಳು ತುಂಡಾಗಿರುತ್ತವೆ. ಬೆನ್ನುಹುರಿ ಮುರಿತಕ್ಕೂ ಒಳಗಾಗಿರುತ್ತಾರೆ. ಅವರಿಗೆ ಶಸ್ತ್ರಚಿಕಿತ್ಸೆ ನೀಡಿದ ಬಳಿಕವೂ ನರಗಳಲ್ಲಿ ದುರ್ಲಲತೆ ಕಂಡುಬರುತ್ತದೆ. ಪಾರ್ಶ್ವವಾಯು ಸಮಸ್ಯೆ ಕಾಣಿಸಿಕೊಂಡ ರೋಗಿಗಳಲ್ಲೂ ನರಗಳು ದುರ್ಬಲಗೊಂಡಿರುತ್ತವೆ’ ಎಂದು ಡಾ.ವಿಕಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಂತಹ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಜತೆಗೆ, ಫಿಜಿಯೋಥೆರಪಿ ಚಿಕಿತ್ಸೆಯನ್ನೂ ನೀಡುತ್ತೇವೆ. ಆದರೆ, ಆಸ್ಪತ್ರೆಗೆ ನಿತ್ಯ ಸರಾಸರಿ 35 ರೋಗಿಗಳು ಬರುತ್ತಾರೆ. ಎಲ್ಲರಿಗೂ ಫಿಜಿಯೋಥೆರಪಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಫಿಜಿಯೋಥೆರಪಿ ಉಪಕರಣದ ವೆಚ್ಚವೇ ₹40 ಲಕ್ಷ ಇದೆ. ಈ ಚಿಕಿತ್ಸೆ ಪಡೆಯಲು ರೋಗಿಗಳು ದುಬಾರಿ ಶುಲ್ಕ ಪಾವತಿಸಬೇಕು’ ಎಂದರು.

‘ನರ ರೋಗಕ್ಕೆ ಚಿಕಿತ್ಸೆ ಪಡೆದು ಮನೆಗೆ ತೆರಳುವ ರೋಗಿಗಳು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಆದರೆ, ನರಗಳ ದುರ್ಬಲತೆಯಿಂದ ಅವರು ವ್ಯಾಯಾಮ ಮಾಡುವುದಿಲ್ಲ. ಇದರಿಂದ ಅವರ ಕೈ ಹಾಗೂ ಕಾಲಿನ ಚಲನೆ ಕಡಿಮೆಯಾಗಲಿದೆ. ಕಾಲಕ್ರಮೇಣ ಚಲನೆಯನ್ನು ಶಾಶ್ವತವಾಗಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದರು.

‘ಕೈ ಚಲನೆಗೆ ಸಹಾಯವಾಗುವ ಹಾಗೂ ಕೈಗೆಟುಕುವ ದರಗಳಲ್ಲಿ ಲಭ್ಯವಾಗುವ ಉಪಕರಣವೊಂದನ್ನು ಅಭಿವೃದ್ಧಿ ಪಡಿಸಿದರೆ ನೂರಾರು ರೋಗಿಗಳಿಗೆ ಅನುಕೂಲವಾಗಲಿದೆ. ಇದರ ಸಹಾಯದಿಂದ ಮನೆಯಲ್ಲೇ ವ್ಯಾಯಾಮ ಮಾಡಬಹುದು. ಈ ವಿಷಯವನ್ನು ಐಐಐಟಿ–ಬಿ ತಂತ್ರಜ್ಞರಿಗೆ ತಿಳಿಸಿದೆ. ಅವರು ಉಪಕರಣವನ್ನು ಕಂಡುಹಿಡಿದಿದ್ದಾರೆ’ ಎಂದರು.

ರೋಬೊಟಿಕ್‌ ಸಾಧನದ ಬಗ್ಗೆ ಮಾಹಿತಿ ನೀಡಿದ ಡಾ.ಮಾಧವ ರಾವ್‌, ‘ಇಂತಹದೊಂದು ಉಪಕರಣ ಬೇಕು ಎಂದು ಡಾ.ವಿಕಾಸ್‌ ಅವರು 2016ರ ಜನವರಿಯಲ್ಲಿ ಮನವಿ ಮಾಡಿದ್ದರು. ಈ ಬಗ್ಗೆ ನಾವು ಕಾರ್ಯ ಪ್ರವೃತ್ತರಾದೆವು. ಉಪಕರಣದ ವಿನ್ಯಾಸ, ಪ್ರೋಗ್ರಾಮಿಂಗ್‌ಗೆ ಸಂಬಂಧಿಸಿದಂತೆ ವಿನಯ್‌ ಅವರಿಗೆ ಮಾರ್ಗದರ್ಶನ ಮಾಡಿದೆ. ಅವರು ಒಂದು ವರ್ಷ ಎರಡು ತಿಂಗಳಲ್ಲಿ ಉಪಕರಣವನ್ನು ಆವಿಷ್ಕರಿಸಿದ್ದಾರೆ’ ಎಂದು ತಿಳಿಸಿದರು.

‘ಬ್ಯಾಟರಿ ಚಾಲಿತ ಉಪಕರಣವು ಕೈಗವಸು ರೀತಿಯಲ್ಲಿದ್ದು, ಮೊಣಕೈವರೆಗೂ ಬರುತ್ತದೆ. ಇದಕ್ಕೆ ಬೇಕಾಗುವ ಪ್ಲಾಸ್ಟಿಕ್‌ ವಸ್ತುಗಳನ್ನು ತ್ರೀಡಿ ತಂತ್ರಜ್ಞಾನ ಬಳಸಿ ತಯಾರಿಸಲಾಗಿದೆ. ಕೈಗವಸಿಗೆ ಇವುಗಳನ್ನು ಅಳವಡಿಸಿ, ಅದಕ್ಕೆ ನೈಲಾನ್‌ ತಂತಿಯನ್ನು ಅಳವಡಿಸಲಾಗಿದೆ.

ಈ ತಂತಿಗಳನ್ನು ಮೊಣಕೈ ಭಾಗದಲ್ಲಿ ಅಳವಡಿಸಿರುವ ಸಣ್ಣ ಯಂತ್ರವೊಂದಕ್ಕೆ ಸಂಪರ್ಕಿಸಲಾಗಿದೆ. ತಂತ್ರಾಂಶದ ಸಹಾಯದಿಂದ ಇದು ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ನಿಧಾನ ಚಲನೆ ಹಾಗೂ ಮಧ್ಯಮ ಚಲನೆಯ ಆಯ್ಕೆಗಳಿವೆ. ಇದನ್ನು ಕೈಗೆ ಹಾಕಿಕೊಂಡೇ ನೀರು ಅಥವಾ ಹಣ್ಣಿನ ರಸ ಕುಡಿಯಬಹುದು. ಮೊಬೈಲ್‌ ಕರೆಗಳನ್ನೂ ಸ್ವೀಕರಿಸಬಹುದು’ ಎಂದರು.

‘ಈ ಉಪಕರಣಕ್ಕೆ ₹11 ಸಾವಿರ ವೆಚ್ಚವಾಗಿದೆ. ವೈದ್ಯಕೀಯ ಉಪಕರಣಗಳನ್ನು ತಯಾರಿಸುವ ಕಂಪೆನಿಗಳು ಮುಂದೆ ಬಂದರೆ, ಇದರ ಬೆಲೆ ಮತ್ತಷ್ಟು ಕಡಿಮೆ ಆಗಲಿದೆ’ ಎಂದು ಹೇಳಿದರು.

₹16 ಲಕ್ಷ ಸಹಾಯಧನ
‘ಈ ಉಪಕರಣವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ₹16 ಲಕ್ಷ ಸಹಾಯಧನ ನೀಡಿದೆ. 8ರಿಂದ 10 ಉಪಕರಣಗಳನ್ನು ತಯಾರಿಸಿ ಕೊಡುವಂತೆ ಕೋರಿದೆ’ ಎಂದು ಮಾಧವ ರಾವ್‌ ತಿಳಿಸಿದರು.

‘ಈಗಿರುವ ಉಪಕರಣವು ಎಲ್ಲ ಬೆರಳುಗಳನ್ನು ಅಲುಗಾಡಿಸುತ್ತದೆ. ಚಲನೆ ಇಲ್ಲದ ಬೆರಳನ್ನು ಮಾತ್ರ ಅಲುಗಾಡಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ’ ಎಂದರು.

ಪರೀಕ್ಷೆ ನಂತರ ಉಪಕರಣ ಬಿಡುಗಡೆ
‘ವೈದ್ಯಕೀಯ ಉಪಕರಣಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುನ್ನ ವಿವಿಧ ಪರೀಕ್ಷೆಗಳನ್ನು ನಡೆಸಬೇಕು. ಈ ಉಪಕರಣದಿಂದ ರೋಗಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ವಿನ್ಯಾಸ, ಪ್ರೋಗ್ರಾಮಿಂಗ್‌ನಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿದ ಬಳಿಕ ಅಂತಿಮಗೊಳಿಸುತ್ತೇವೆ’ ಎಂದು ಡಾ.ವಿಕಾಸ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT