ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕಿನೋಡಿ, ಹಳ್ಳಿಕಾರ್‌...

Last Updated 11 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಸ್ಥಳೀಯ ವಾತಾವರಣ ಹಾಗೂ ಮೇವಿನ ಲಭ್ಯತೆಗೆ ಅನುಗುಣವಾಗಿ ಸಾವಿರಾರು ವರ್ಷಗಳಿಂದ ಸ್ವಾಭಾವಿಕವಾಗಿ ಬೆಳೆದ ದನಗಳ ತಳಿಗಳು ನಮ್ಮ ದೇಶದ ಗ್ರಾಮೀಣ ಆರ್ಥಿಕತೆಯ ಬೆನ್ನಲುಬಾಗಿವೆ. ಇವುಗಳನ್ನು ಸಾಕಲು ಬೇಕಾಗಿರುವ ಬಂಡವಾಳ ಕಡಿಮೆ. ಸ್ಥಳೀಯವಾಗಿ ಲಭ್ಯವಿರುವ ಮೇವನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಸಹ ಇರುವುದರಿಂದ ಬಡಕುಟುಂಬದವರು ಕೂಡ ಸಾಕಿ ತಮ್ಮ ಕುಟುಂಬಕ್ಕೆ ಬೇಕಾಗಿರುವ ಉತ್ಕೃಷ್ಟವಾದ ಹಾಲನ್ನು ಪಡೆಯಬಹುದು.

ಕಾಂಕ್ರೇಜ್, ಗೀರ್ ಹಾಗೂ ಹಳ್ಳಿಕಾರ್ ತಳಿಗಳು ದೇಶದ ಮೂಲ ತಳಿಗಳಲ್ಲಿ ಪ್ರಮುಖವಾಗಿವೆ. ಬೇರೆ ತಳಿಗಳಿಗೆ ಹೋಲಿಸಿದರೆ ಹಳ್ಳಿಕಾರ್ ದನಗಳು ತಮ್ಮ ಕೊಬ್ಬುರಹಿತ ದೇಹದಾರ್ಢ್ಯ, ಚುರುಕುತನ, ಹುಮ್ಮಸ್ಸು, ವೇಗ, ಸಹಿಷ್ಣುತೆಗೆ ಹೆಸರುವಾಸಿ. ಹಳೆ ಮೈಸೂರು ಪ್ರಾಂತ್ಯದ ಹೆಮ್ಮೆಯ ತಳಿ. ಹಿಂದೆ ದನಗಳ ಹಿಂಡನ್ನು ಸಾಕುತ್ತಿದ್ದ ರಾಜ್ಯದ ಮೂಲ ನಿವಾಸಿಗಳನ್ನು ಹಟ್ಟಿಕಾರರೆಂದು ಕರೆಯುತ್ತಿದ್ದರು. ಅವರು ಸಾಕುತ್ತಿದ್ದ ದನಗಳನ್ನು ಹಟ್ಟಿಕಾರ್ ದನಗಳೆಂದು ಹೇಳುತ್ತಿದ್ದರು. ಅದೇ ಮುಂದಿನ ದಿನಗಳಲ್ಲಿ ಹಳ್ಳಿಕಾರ್ ದನಗಳೆಂದು ಮಾರ್ಪಾಡು ಆಗಿರಬಹುದು.

ನಮ್ಮ ಪೂರ್ವಿಕರು ಎಷ್ಟು ಸಾವಿರ ವರ್ಷಗಳಿಂದ ಕಾವೇರಿ ನದಿ ತೀರದಲ್ಲಿ ನೆಲೆಸಿರುವರೋ ಅಷ್ಟು ವರ್ಷಗಳಿಂದಲೂ ಹಳ್ಳಿಕಾರ್ ದನಗಳು ಮನೆಯ ಸದಸ್ಯರಂತೆಯೇ ಜತೆಗೆ ಬೆಳೆದುಕೊಂಡು ಬಂದಿವೆ. ಬೆಟ್ಟದಪುರ, ಚುಂಚನಕಟ್ಟೆ, ಹೇಮಗಿರಿ, ಮುಡಕತೊರೆ, ಘಾಟಿಸುಬ್ರಹ್ಮಣ್ಯ, ಹಾಸನ, ಹೊಳೆನರಸೀಪುರ, ಸಿದ್ದಗಂಗೆ, ಕ್ಯಾಮೇನಹಳ್ಳಿ ಭಾಗದ ರೈತರು ಪಶುಪರಿಣತರು. ಕುಲ, ವರಸೆ, ಸುಳಿ ಮೇಲೆ ದನಗಳ ಆಯ್ಕೆಯಲ್ಲಿ ಅವರು ನಿಪುಣರು.

ಮೈಸೂರು ಜಿಲ್ಲೆಯಲ್ಲಿ ಈ ತಳಿಗಳ ಸಂಖ್ಯೆ ಹೆಚ್ಚಾಗಿದ್ದು, ತುಮಕೂರು ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಹಳೆ ಮೈಸೂರು ಪ್ರಾಂತ್ಯದಲ್ಲಿ ಕೆಂಪುಮಿಶ್ರಿತ ಮಣ್ಣು ಹೆಚ್ಚಾಗಿದ್ದು ಮಳೆ ಬಿದ್ದಾಗ ಬೇಗ ಮಳೆಯ ನೀರನ್ನು ಇಂಗಿಸಿಕೊಂಡು ಅಷ್ಟೇ ಬೇಗ ಆರಿಹೋಗುತ್ತದೆ. ಆದ್ದರಿಂದ ಭೂಮಿ ಮೆದುವಾಗಿರುವಾಗಲೇ ಉಳುಮೆ ಮಾಡಿ ಬೀಜ ನಾಟಿ ಮಾಡಬೇಕು. ಇಂತಹ ವಾತಾವರಣದಲ್ಲಿ ವೇಗವಾಗಿ ಉಳುಮೆ ಮಾಡುವ ಹಳ್ಳಿಕಾರ್ ದನಗಳು ವ್ಯವಸಾಯಕ್ಕೆ ಪ್ರಸಿದ್ಧಿ. ಹಳ್ಳಿಕಾರ್ ಹಸುಗಳು ಹಾಲು ನೀಡುವ ಜತೆಗೆ ವ್ಯವಸಾಯಕ್ಕೂ ಸಹಕಾರಿ.

ಗರ್ಭಧರಿಸಿದ ಹಸುಗಳನ್ನು ಸಹ ಉಳುಮೆ ಮಾಡಲು ಉಪಯೋಗಿಸುತ್ತಾರೆ. ಇಂತಹ ರಾಸುಗಳು ಪ್ರಸವ ಕಾಲದಲ್ಲಿ ಯಾವುದೇ ತೊಂದರೆ ಇಲ್ಲದೆ ಕರುವಿಗೆ ಜನ್ಮನೀಡುತ್ತವೆ. ಹುಟ್ಟಿದ ಕರುಗಳು ಯಾವುದೇ ಬೇರೆ ಉತ್ಕೃಷ್ಟವಾದ ಆಹಾರವಿಲ್ಲದೆಯೆ ತನ್ನ ತಾಯಿ ಹಾಲು ಹಾಗು ಸ್ಥಳೀಯ ಮೇವನ್ನು ಸೇವಿಸಿ 9-10 ತಿಂಗಳಲ್ಲಿ ಒಳ್ಳೆಯ ದೇಹದಾರ್ಢ್ಯವನ್ನು ಪಡೆಯುತ್ತವೆ.

ಈ ದನಗಳನ್ನು ಸಾಕುವ ಪ್ರದೇಶಗಳಲ್ಲಿ ಒಂದು ಪ್ರತೀತಿ ಎಂದರೆ ಕುಟುಂಬದಲ್ಲಿ ಒಬ್ಬ ಹೆಣ್ಣುಮಗಳು ಗರ್ಭಿಣಿಯಾದಳೆಂದರೆ ಆ ಮನೆಗೆ ಹಾಲು ಕೊಡುವ ಹಳ್ಳಿಕಾರ್ ಹಸುವನ್ನು ತರುತ್ತಾರೆ ಎಂಬುದು. ಇದರಿಂದ ಗರ್ಭಿಣಿ ಹಾಗೂ ಹುಟ್ಟುವ ಮಗುವಿಗೆ ಬೇಕಾದ ಉತ್ಕೃಷ್ಟ ಹಾಲು, ಮೊಸರು ಹಾಗೂ ತುಪ್ಪ ಮನೆಯಲ್ಲೇ ಸಿಗುವಂತಾಗಲಿ ಎಂಬ ಮುಂದಾಲೋಚನೆ.

ಈ ಪ್ರದೇಶದಲ್ಲಿನ ಆರೋಗ್ಯವಂತ ಮಗುವಿನ ಗುಟ್ಟೇನೆಂದರೆ, ಹುಟ್ಟಿದ ಮಗುವಿಗೆ ಒಂದು ವರ್ಷದವರೆಗೂ ತಾಯಿ ಹಾಲು, ಒಂದು ವರ್ಷದ ನಂತರ ಹಳ್ಳಿಕಾರ್ ಹಸುವಿನ ಹಾಲು ಹಾಗೂ ತುಪ್ಪ.

ಹಳ್ಳಿಕಾರ್ ತಳಿ ದನಗಳು ಈಗೀಗ ಕಣ್ಮರೆಯಾಗುತ್ತಿವೆ. ವ್ಯವಸಾಯದ ಕೆಲಸಗಳು ಯಾಂತ್ರಿಕವಾಗಿ ದನಗಳನ್ನು ವ್ಯವಸಾಯಕ್ಕಾಗಿ ಸಾಕುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಹಾಲಿನ ಉತ್ಪಾದನೆಗಾಗಿ ಮಿಶ್ರತಳಿ ಹಸುಗಳನ್ನು ಸಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ಈಗೀಗ ಏರುತ್ತಿರುವ ಉಷ್ಣಾಂಶ ನೋಡಿದರೆ, ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳಲು ಜನಗಳೇ ಕಷ್ಟಪಡು ತ್ತಿದ್ದಾರೆ. ಇನ್ನು ದನಗಳ ಬಗ್ಗೆ ಕೇಳು ವಂತೆಯೇ ಇಲ್ಲ. ಜ್ವರ, ಉಸಿರಾಟ ಹೆಚ್ಚು ವುದು, ಹಾಲಿನ ಇಳುವರಿ ತ್ವರಿತವಾಗಿ ಕಡಿಮೆ ಆಗುವುದು, ಕೆಚ್ಚಲ ಬಾವು, ಭೇದಿ, ಗರ್ಭನಿಲ್ಲದೆ ಇರುವುದು ಹಾಗೂ ಸರಿಯಾಗಿ ಮೇವು ತಿನ್ನದೇ ಇರುವುದು ಮುಂತಾದ ಸಮಸ್ಯೆಗಳು ಸರ್ವೇಸಾಮಾನ್ಯ.

ಈ ಸಮಸ್ಯೆಗಳು ಮಿಶ್ರತಳಿ ಹಸುಗಳಲ್ಲಿ ಹೆಚ್ಚು. ಸ್ಥಳೀಯ ಹಳ್ಳಿಕಾರ್ ದನಗಳಲ್ಲಿ ಈ ಸಮಸ್ಯೆಗಳು ಕಡಿಮೆ. ಬೇಸಿಗೆ ಕಾಲದಲ್ಲಿ ಕಂಡು ಬರುವ ಜ್ವರ ಬಿಟ್ಟರೆ ಬೇರೆ ಯಾವುದೇ ಆರೋಗ್ಯದ ಸಮಸ್ಯೆಗಳು ಇರುವುದಿಲ್ಲ. ಜ್ವರ ಬಂದಾಗ ಹಳ್ಳಿಕಾರ್ ದನಗಳಿಗೆ ನೋವು ನಿವಾರಕ ಚುಚ್ಚುಮದ್ದು ನೀಡಿ, ವಿಶ್ರಾಂತಿಗೆ ಅನುವು ಮಾಡಿಕೊಟ್ಟರೆ ಸಾಕು. ಇದೇ ರೀತಿ ವಾತಾವರಣದ ಉಷ್ಣಾಂಶ ಹೆಚ್ಚಾದರೆ, ಮಿಶ್ರತಳಿ ಹಸುಗಳ ಆರೋಗ್ಯದ ಸಮಸ್ಯೆ ಉಲ್ಬಣಗೊಳ್ಳುತ್ತದೆ.

ಮಿಶ್ರತಳಿ ಹಸುಗಳು ವಾತಾವರಣದ ಉಷ್ಣಾಂಶ 20ರಿಂದ 25 ಡಿಗ್ರಿ ಸೆಲ್ಸಿಯಸ್‌ ಇದ್ದಾಗ ಹೆಚ್ಚಿನ ಇಳುವರಿ ಹಾಗು ಸಾಮರ್ಥ್ಯವನ್ನು ತೋರಿಸಬಲ್ಲವು. ಈಗಿನ ಬೇಸಿಗೆ ಕಾಲದ ಉಷ್ಣಾಂಶ ಹಳೆ ಮೈಸೂರು ಪ್ರಾಂತ್ಯದಲ್ಲೇ 38 ರಿಂದ 42 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ.

ಈ ಉಷ್ಣಾಂಶದಲ್ಲಿ ಹಸುಗಳ ಹಾಲಿನ ಇಳುವರಿ ಅರ್ಧದಷ್ಟು ಕಡಿಮೆಯಾಗುತ್ತದೆ. ಆರೋಗ್ಯದ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಇದಲ್ಲದೆ ಜನರಿಗೆ ಕುಡಿಯುವ ನೀರಿಗೆ ತೊಂದರೆ. ಮಿಶ್ರತಳಿ ರಾಸುಗಳ ನಿರ್ವಹಣೆಗೆ ಬೇಕಾಗಿರುವ ನೀರಿನ ಪ್ರಮಾಣ ಸ್ಥಳೀಯ ದನಗಳಿಗಿಂತ ಹೆಚ್ಚು.

ದಿನವೂ ಒಂದು ಬಾರಿ ಮಿಶ್ರತಳಿ ಹಸುಗಳನ್ನು ನೀರಿನಿಂದ ಶುಚಿಗೊಳಿಸಲೇಬೇಕು, ಇಲ್ಲವಾದಲ್ಲಿ ಅನಾರೋಗ್ಯದ ಸಮಸ್ಯೆ ಹೆಚ್ಚು. ಹಳ್ಳಿಕಾರ್‌ ದನಗಳನ್ನು ಹದಿನೈದು ದಿನಗಳಿಗೊಮ್ಮೆ ಶುಚಿಗೊಳಿಸಿದರೆ ಸಾಕು. ಹಳ್ಳಿಕಾರ್‌ ದನಗಳ ಚರ್ಮ ಹಾಗು ಬೇವರಿನಗ್ರಂಥಿಗಳ ವಿನ್ಯಾಸವೇ ಬೇರೆಯಾಗಿದೆ. ಯಾವ ರೀತಿ ಮರಳುಗಾಡು ಪ್ರದೇಶದಲ್ಲಿ ಒಂಟೆಗಳು ಜೀವಿಸಬಲ್ಲವೋ ಅದೇ ರೀತಿ ಹಳ್ಳಿಕಾರ್‌ ದನಗಳು ನಮ್ಮ ಸ್ಥಳೀಯ ವಾತಾವರಣಕ್ಕೆ ತಕ್ಕಂತೆ ಒಗ್ಗಿಕೊಂಡು ನಿರಾಯಾಸವಾಗಿ ಜೀವಿಸಬಲ್ಲವು.

ವಿಜ್ಞಾನಿಗಳು ಹಸುವಿನ ಹಾಲಿನಲ್ಲಿರುವ ‍‍ಪ್ರೊಟೀನ್ ಪೋಷಕಾಂಶವನ್ನು ಎರಡು ವಿಧವಾಗಿ ಎ1 ಹಾಗು ಎ2 ಕೇಸಿನ್‌‍‍ಪ್ರೊಟೀನ್ ಎಂದು ವರ್ಗೀಕರಿಸಿದ್ದಾರೆ. ಎ1 ಕೇಸಿನ್‌‍‍ಪ್ರೊಟೀನ್ ಮಿಶ್ರತಳಿ ಹಸುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಹಾಗೂ ಎ2 ಕೇಸಿನ್‌‍‍ಪ್ರೊಟೀನ್ ನಮ್ಮ ಎಲ್ಲಾ ಸ್ಥಳೀಯ ತಳಿರಾಸುಗಳಲ್ಲಿ ಕಂಡುಬರುತ್ತದೆ.

ಎ2 ಕೇಸಿನ್‌‍‍ಪ್ರೊಟೀನ್ ಹೊಂದಿರುವ ಹಾಲು ಮೂಳೆಗಳ ಬೆಳವಣಿಗೆ, ರಕ್ತದೊತ್ತಡ ಹಾಗೂ ಆರೋಗ್ಯವಾದ ಹೃದಯಕ್ಕೆ ಸಹಕಾರಿಯಾಗಿದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಈ ಕಾರಣದಿಂದಲೇ ವಿಚಾರವಂತ ನಾಗರಿಕರು ಈಗ ಹಳ್ಳಿಕಾರ್ ದನಗಳ ಹಾಲನ್ನು
₹ 75ರಂತೆ ಖರೀದಿಸುತ್ತಿದ್ದಾರೆ.

ಹಳ್ಳಿಕಾರ್‌ ತಳಿಯ ಹಸುಗಳು, ಕರುಗಳು ಮಾರಾಟಕ್ಕೆ ಸಿಗುವುದು ಅಪರೂಪ ಆಗುತ್ತಿದೆ. ತಿಪಟೂರು ತಾಲ್ಲೂಕಿನ ಕೊನೇಹಳ್ಳಿಯಲ್ಲಿ ಈ ಹಸುಗಳ ಜಾತ್ರೆಯೇ ನಡೆಯುತ್ತದೆ. ತುಮಕೂರಿನ ಕೆ.ಜಿ.ಟೆಂಪಲ್‌, ರಾಮನಗರದ ಮಾಗಡಿಯಲ್ಲಿ ನಡೆಯುವ ದನಗಳ ಸಂತೆಯಲ್ಲಿ ಈ ಹಸುಗಳು ಮಾರಾಟಕ್ಕೆ ಸಿಗುತ್ತವೆ. ಹಸು ಗರ್ಭಿಣಿಯಾಗಿದ್ದರೆ ಅದರ ಬೆಲೆ ₹25 ಸಾವಿರದಿಂದ 50 ಸಾವಿರದವರೆಗೂ ಇರುತ್ತದೆ. ಹಳ್ಳಿಕಾರ್‌ ಕರುಗಳಿಗೆ ಭಾರಿ ಬೆಲೆಯಿದೆ. ಈ ದೇಸಿ ತಳಿ ಹಸುವನ್ನು ಸಾಕಿ ನೋಡಿದರೆ ಮಾತ್ರ ಗೊತ್ತಾಗುವುದು, ಅದರ ಮಹತ್ವ!
ಸಂಪರ್ಕಕ್ಕೆ: 90087 27712.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT