ಗುರುವಾರ , ಫೆಬ್ರವರಿ 27, 2020
19 °C

ಅಂಬೇಡ್ಕರ್ ಬದುಕಿಗೆ ಕನ್ನಡಿ ಹಿಡಿವ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಬೇಡ್ಕರ್ ಬದುಕಿಗೆ ಕನ್ನಡಿ ಹಿಡಿವ ಯತ್ನ

ಹಿಂದುವಾಗಿ ಹುಟ್ಟಿದ್ದೇನೆ; ಹಿಂದುವಾಗಿ ಸಾಯುವುದಿಲ್ಲ' ಬಲಿಷ್ಠ ಸವರ್ಣೀಯರ ವಿರುದ್ಧದ ನಿರಂತರ ಸೆಣಸಾಟದಲ್ಲಿ ಬಳಲಿಹೋದ ಡಾ.ಬಿ.ಆರ್‌.ಅಂಬೇಡ್ಕರ್‍ ಅವರ ಹತಾಶೆಯ ಮಾತಿದು.

‘ಅಂಬೇಡ್ಕರ್ ಅವರ ರಾಜಕೀಯ ಸಂಘರ್ಷ, ಸಾಮಾಜಿಕ ಕಾಳಜಿ, ಪ್ರಖರ ವೈಚಾರಿಕ ಚಿಂತನೆಯ ನಿಷ್ಠೆ, ಅಸ್ಪೃಶ್ಯ ನಿವಾರಣೆಯ ದಣಿವಿರದ ಅವರ ದುಡಿಮೆ; ಇವೆಲ್ಲವನ್ನು ಯಾರು ತಾನೆ ಮರೆತಾರು? ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ‘ಅಂಬೇಡ್ಕರ್’ ನಾಟಕದಲ್ಲಿ ಈ ಅಂಶಗಳನ್ನು 'ರಂಗನಿರಂತರ' ತಂಡವು ಅಭಿನಯಿಸಿ ತೋರಿಸಿತು. ಬೆಳಕಬಳ್ಳಿ ಅ.ನಾ. ರಮೇಶ್ ನೆನಪಿಗಾಗಿ ರಂಗನಿರಂತರ ಈ ನಾಟಕ ಪ್ರದರ್ಶನವನ್ನು ಆಯೋಜಿಸಿತ್ತು.

ಎಲ್.ಹನುಮಂತಯ್ಯ ವಿರಚಿತ ಈ ನಾಟಕವನ್ನು ವೆಂಕಟರಾಜು ಮರುನಿರ್ದೇಶಿಸಿ, ಅವರೇ ಅಂಬೇಡ್ಕರ್ ಪಾತ್ರವನ್ನೂ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ಗಾಂಧಿ ಮತ್ತು ಅಂಬೇಡ್ಕರ್‌ ಅವರ ರಾಜಕೀಯ ಸಂಘರ್ಷ, ಆ ಇಬ್ಬರು ಮಹಾನ್ ವ್ಯಕ್ತಿ-ವ್ಯಕ್ತಿತ್ವಗಳ ಭಿನ್ನ ಭಿತ್ತಿಯ ಆಶಯಗಳು, ಅಂಬೇಡ್ಕರ್‍ ಅವರ ದಲಿತ ಹಾಗೂ ಹಿಂದುಳಿದ ಜನವರ್ಗಗಳ ಮೇಲಿನ ಪ್ರೇಮ, ಅವರ ಅಸ್ಪೃಶ್ಯ ನಿವಾರಣೆಯ ಅದಮ್ಯ ಬಯಕೆಗಳನ್ನು ಈ ನಾಟಕ ಅನಾವರಣಗೊಳಿಸಿತು.

ಅಂಬೇಡ್ಕರ್‍ ಅವರ ನೋವಿನ ಬದುಕಿನಲ್ಲಿ ಭಾಗಿಯಾದವರಲ್ಲಿ ಪ್ರಮುಖರು ಪತ್ನಿ ರಮಾಬಾಯಿ, ಓದು, ವಿದ್ಯಾಭ್ಯಾಸ, ವೃತ್ತಿಗೆ ನೆರವಾದ ಸಾಹೋ ಮಹಾರಾಜರು, ಕಷ್ಟಗಳಿಗೆ ನೆರವಾದ ಕೆಲೂಸ್ಕರ್‌ ಬಗ್ಗೆ ಈ ನಾಟಕ ಸ್ಪಂದಿಸದೇ ಇದ್ದುದು ನಾಟಕದ ದೊಡ್ಡ ಕೊರತೆ ಎನಿಸಿತು.

ವಿಶಾಲ ವಿದ್ವತ್ತಿನ, ಸಾತ್ವಿಕ ಸಿಟ್ಟಿನ, ಗೌರವ ಗಾಂಭೀರ್ಯಗಳ ಅಂಬೇಡ್ಕರ್ ಪಾತ್ರ ಪೋಷಣೆಗೆ ವೆಂಕಟರಾಜು ಅವರು ಇನ್ನೂ ಶ್ರಮಿಸಬೇಕಾಗಿತ್ತು. ದಲಿತರು ಕೆರೆಯ ನೀರನ್ನು ಮುಟ್ಟುವ ದೃಶ್ಯದಲ್ಲಿ ದಲಿತರು ದಲಿತರಂತೆ ಕಾಣದೆ ಅಪ್ಪಟ ಬ್ರಾಹ್ಮಣರಂತೆ ಕಂಡು ಬಂದದ್ದು ಮತ್ತೊಂದು ವಿಪರ್ಯಾಸ. ದುಂಡುಮೇಜಿನ ದೃಶ್ಯದಲ್ಲಿ ಕೂಡ ನಿರ್ದೇಶಕರು ಅಷ್ಟಾಗಿ ಜಾಣ್ಮೆ ಮೆರೆದಿಲ್ಲ.

ಪೆರಿಯಾರ್ ಪಾತ್ರಧಾರಿ ರಾಜಕುಮಾರ್, ದಲಿತ ಗುಂಪಿನ ಅಜ್ಜನ ಪಾತ್ರಧಾರಿ ಪ್ರಕಾಶ್‍ ಅರಸ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಆದರೂ ಅವರು ತಮ್ಮ ದೇಹಭಾಷೆ, ಮಾತಿನ ಶೈಲಿಗಳಲ್ಲಿ ಇನ್ನೂ ಸಾಕಷ್ಟು ಪಳಗಬೇಕು. ರಂಗವಿನ್ಯಾಸ ಹಾಗೂ ಬೆಳಕಿನ ವಿನ್ಯಾಸ ಬಹುತೇಕ ಅಚ್ಚುಕಟ್ಟಾಗಿತ್ತು. ಆದರೆ ಅಂಬೇಡ್ಕರ್ ತಮ್ಮ ಬದುಕಿನ ಮುಸ್ಸಂಜೆಯಲ್ಲಿ ಬೌದ್ಧ ಧರ್ಮಕ್ಕೆ ಸೇರ್ಪಡೆಯಾಗುವ ದೃಶ್ಯವನ್ನು ಫ್ಲ್ಯಾಶ್‌ಬ್ಯಾಕ್ ಮಾದರಿಯಲ್ಲಿ ಮೊದಲಿಗೇ ತಂದಿರುವುದು ಅಷ್ಟೇನೂ ಸಮಂಜಸ ಎನಿಸಲಿಲ್ಲ.

ಪ್ರೊ. ನಾರಾಯಣಘಟ್ಟ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)