ಮಂಗಳವಾರ, ಮಾರ್ಚ್ 2, 2021
31 °C
ಎಸ್‌ಸಿ, ಎಸ್‌ಟಿ ನೌಕರ ವರ್ಗದ ಹಿತ ಕಾಪಾಡಲು ತಿದ್ದುಪಡಿ ಮಸೂದೆ ಸಿದ್ಧ

ಬಡ್ತಿ: ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ಅಂತಿಮ

ರಾಜೇಶ್ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬಡ್ತಿ: ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ಅಂತಿಮ

ಬೆಂಗಳೂರು: ಬಡ್ತಿ ಮೀಸಲಾತಿ ಕಾಯ್ದೆ ರದ್ದುಪಡಿಸಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಅನ್ವಯ ನೌಕರರ ಸೇವಾ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸುವ ಮತ್ತು ಬಡ್ತಿ ವಂಚಿತರಾದವರಿಗೆ ಮುಂಬಡ್ತಿ ನೀಡಬೇಕಾದ ಒತ್ತಡದಲ್ಲಿರುವ ರಾಜ್ಯ ಸರ್ಕಾರ, ಬಹುತೇಕ ಇಲಾ

ಖೆಗಳಲ್ಲಿ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ಅಂತಿಮಗೊಳಿಸಿದೆ.

ಈ ಮಧ್ಯೆ, ಸುಪ್ರೀಂ ಕೋರ್ಟ್‌ ಆದೇಶ ಪಾಲನೆಯಿಂದ ಹಿಂಬಡ್ತಿ ಆಗಬಹುದೆಂಬ ಆತಂಕದಲ್ಲಿರುವ ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ನೌಕರರ ಹಿತ ಕಾಪಾಡಲು ಮುಂದಾಗಿರುವ ಸರ್ಕಾರ, ಬೆಳಗಾವಿಯಲ್ಲಿ ಇದೇ 13ರಿಂದ ನಡೆಯಲಿರುವ ಅಧಿವೇಶನದಲ್ಲಿ ಈ ಕಾಯ್ದೆಗೆ ತಿದ್ದು‍ಪಡಿ ತರುವ ಉದ್ದೇಶದಿಂದ ಮಸೂದೆ ಮಂಡಿಸಲು ನಿರ್ಧರಿಸಿದೆ.

‘ತಿದ್ದುಪಡಿ ಮಸೂದೆ ಸಿದ್ಧವಾಗಿದೆ. 1978ರಿಂದ ಸರ್ಕಾರಿ ಹುದ್ದೆಗಳಲ್ಲಿ ನೀಡಿದ ಬಡ್ತಿ ಉಳಿಸಿಕೊಳ್ಳಲು ಸಾಧ್ಯವಾಗುವಂತೆ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, ಬಹುತೇಕ ಇಲಾಖೆಗಳಲ್ಲಿ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ಅಂತಿಮಗೊಂಡಿದೆ. ಕೆಲವು ಇಲಾಖೆಗಳ ಪಟ್ಟಿ ಇನ್ನೂ ನಮಗೆ ಬಂದಿಲ್ಲ. ಇದೇ 15ರೊಳಗೆ ಎಲ್ಲ ಇಲಾಖೆಗಳು ಪಟ್ಟಿ ಸಿದ್ಧಪಡಿಸಿ, ಆಕ್ಷೇಪಣೆ ಆಹ್ವಾನಿಸಲೇ ಬೇಕಾಗಿದೆ’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) (ಸೇವಾ‘ ನಿಯಮಗಳು) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಬಡ್ತಿಯಲ್ಲಿ ಮೀಸಲಾತಿ ನೀಡಿರುವುದನ್ನು ಪ್ರಶ್ನಿಸಿ ಬಿ.ಕೆ. ಪವಿತ್ರ ಮತ್ತು ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ‘ಬಡ್ತಿ ಮೀಸಲಾತಿ ಕಾಯ್ದೆ–2002’ ಅನ್ನು ರದ್ದುಪಡಿಸಿ ಫೆ. 9ರಂದು ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಎಲ್‌) ಪ್ರತಿವಾದಿ ಆಗಿರುವುದರಿಂದ, ಅಲ್ಲಿ ಎಂಜಿನಿಯರ್‌ ಶ್ರೇಣಿಯ ಅಂತಿಮ ಜ್ಯೇಷ್ಠತಾ ಪಟ್ಟಿ ಕೂಡಾ ಸಿದ್ಧವಾಗಿದೆ. ಉಳಿದ ಇಲಾಖೆಗಳು ಪಟ್ಟಿ ಸಿದ್ಧಪಡಿಸಿಲ್ಲ’ ಎಂದರು.ಲಭ್ಯ ಮಾಹಿತಿ ಪ್ರಕಾರ, ಸುಪ್ರೀಂ ಕೋರ್ಟ್‌ ತೀರ್ಪು ಪಾಲನೆಯಾದರೆ ಕೆಪಿಟಿಸಿಎಲ್‌ನಲ್ಲಿ ಮುಖ್ಯ ಎಂಜಿನಿಯರ್‌ಗಳು ಮತ್ತು ಸೂಪರಿಂಟೆಂಡಿಂಗ್‌ ಎಂಜಿನಿಯರ್‌ಗಳು ಸೇರಿ 150ರಷ್ಟು ಸಿಬ್ಬಂದಿ ಹಿಂಬಡ್ತಿ ಪಡೆಯಲಿದ್ದಾರೆ.

‘ಸರ್ಕಾರ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದರಿಂದ ಅಂತಿಮ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಇನ್ನೂ ಆರಂಭಿಸಿಲ್ಲ. ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಗೆ ಬಂದಿರುವ ಆಕ್ಷೇಪಣೆಗಳನ್ನು ಪರಿಶೀಲಿಸಿ ಪಟ್ಟಿ ಅಂತಿಮಗೊಳಿಸಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಭೀತಿ ಇರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಜ. 15ಕ್ಕೆ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಬರಲಿದೆ. ಅಷ್ಟರೊಳಗೆ ಒಂದೋ, ಸುಪ್ರೀಂ ಕೋರ್ಟ್‌ ಆದೇಶ ಪಾಲನೆ ಮಾಡಬೇಕು ಅಥವಾ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರಬೇಕಿದೆ’ ಎಂದರು.

‘ಸಚಿವಾಲಯದಲ್ಲಿ 40 ವಿವಿಧ ಶ್ರೇಣಿಗಳ ಪೈಕಿ 16 ಶ್ರೇಣಿಗಳ ತಾತ್ಕಾಲಿಕ ಪಟ್ಟಿ ಸಿದ್ಧಪಡಿಸಲಾಗಿದ್ದು, ಆಕ್ಷೇಪಣೆಗಳನ್ನೂ ಆಹ್ವಾನಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಪ್ರತಿಯೊಂದು ಶ್ರೇಣಿಯ ಪಟ್ಟಿ ಸಿದ್ಧಪಡಿಸಲಾಗಿದೆ. ಹಿಂಬಡ್ತಿ ಆಗಬಹುದಾದ ಸಿಬ್ಬಂದಿ ಪಟ್ಟಿಯೂ ಸಿದ್ಧವಿದೆ. ಆದರೆ, ಇನ್ನೂ ಅಂತಿಮಗೊಳಿಸಿಲ್ಲ’ ಎಂದು ಡಿಪಿಎಆರ್‌ (ಆಡಳಿತ ಕೋಶ) ಅಧಿಕಾರಿಯೊಬ್ಬರು ತಿಳಿಸಿದರು.

‘ಕೆಲವು ಇಲಾಖೆಗಳಲ್ಲಿ 7–8 ಶ್ರೇಣಿಗಳಿವೆ. ಆದರೆ, ಯಾವುದೇ ಇಲಾಖೆಯಲ್ಲಿ ಎಲ್ಲ ಶ್ರೇಣಿಗಳ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ಸಿದ್ಧವಾಗಿಲ್ಲ. ನ. 30ಕ್ಕೆ ಅಂತಿಮ ಪಟ್ಟಿ ಮಾಡಬೇಕು. ಅದಕ್ಕೆ ಪೂರ್ವವಾಗಿ ಆಕ್ಷೇಪಣೆ ಸಲ್ಲಿಸಲು 30 ದಿನ ಕೊಡಬೇಕಿತ್ತು. ಆದರೆ, ಕೆಲವು ಇಲಾಖೆಗಳು ಆಕ್ಷೇಪಣೆ ಸಲ್ಲಿಸಲು 15 ದಿನಗಳ ಅವಕಾಶ ನೀಡುತ್ತಿವೆ. ಒಟ್ಟಿನಲ್ಲಿ, ತಾತ್ಕಾಲಿ ಪಟ್ಟಿಯನ್ನು 15 ದಿನದೊಳಗೆ ಪ್ರಕಟಿಸಬೇಕು. ಇಲ್ಲದಿದ್ದರೆ ಸರ್ಕಾರ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಅಹಿಂಸಾ (ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ) ಒಕ್ಕೂಟದ ಅಧ್ಯಕ್ಷ ನಾಗರಾಜ ತಿಳಿಸಿದರು.

‘ಬೆಳಗಾವಿ ಅಧಿವೇಶನದಲ್ಲಿ ಮಸೂದೆ ತಂದು ಕಾಯ್ದೆಗೆ ತಿದ್ದುಪಡಿ ತಂದರೆ ಈ ಜ್ಯೇಷ್ಠತಾ ಪಟ್ಟಿ ಸಿದ್ದಪಡಿಸುವ ಅಗತ್ಯ ಇಲ್ಲ ಎನ್ನುವ ನಿಲುವು ಸರ್ಕಾರದ್ದು. ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಳ್ಳಲು ಸರ್ಕಾರ ಸುಗ್ರೀವಾಜ್ಞೆ ತರಲು ಮುಂದಾಗಿತ್ತು. ಆದರೆ, ಅದಕ್ಕೆ ಅಂಕಿತ ಹಾಕಲು ರಾಜ್ಯಪಾಲರು ನಿರಾಕರಿಸಿದ್ದರಿಂದ, ಕಾಯ್ದೆಗೆ ತಿದ್ದುಪಡಿ ತರುವ ದಾರಿ ಮಾತ್ರ ಸರ್ಕಾರಕ್ಕೆ ಉಳಿದಿದೆ’ ಎಂದೂ ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.