ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿ ತಾಲ್ಲೂಕಿಗೆ ಕೃಷ್ಣಾ ನೀರು: ಪರಿಶೀಲನೆಗೆ ಆಗ್ರಹ

Last Updated 10 ನವೆಂಬರ್ 2017, 6:35 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಮೊಳಕಾಲ್ಮುರು ಹಾಗೂ ಚಳ್ಳಕೆರೆ ತಾಲ್ಲೂಕಿನ ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ಹರಿಸಲು ಇರುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ನೆರೆಯ ಸೀಮಾಂಧ್ರ ಭಾಗದ ರಾಯದುರ್ಗ ತಾಲ್ಲೂಕಿನಲ್ಲಿರುವ ಬೋರನ ತಿಪ್ಪೆ ಅಣೆಕಟ್ಟೆ (ಬಿ.ಟಿ.ಪಿ. ಡ್ಯಾಂ) ರಾಜ್ಯಕ್ಕೆ ಹೊಂದಿಕೊಂಡಂತೆ ಇದೆ.

ಇದಕ್ಕೆ ಪ್ರತಿವರ್ಷ ಕೃಷ್ಣಾ ನದಿಯಿಂದ ನೀರು ತುಂಬಿಸಲು ಅಲ್ಲಿನ ಸರ್ಕಾರ ಮುಂದಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಇಂತಹ ಶಾಶ್ವತ ನೀರು ಹರಿಸುವ ಯೋಜನೆಗಳನ್ನು ನಮ್ಮ ತಾಲ್ಲೂಕುಗಳಲ್ಲೂ ಮಾಡಲು ಸಾಧ್ಯವಿಲ್ಲವೇ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ಬಿ.ಟಿ.ಪಿ. ಅಣೆಕಟ್ಟೆ ಆಂಧ್ರಪ್ರದೇಶದಲ್ಲಿ ಇದ್ದರೂ ನೀರಿನ ಬಹುತೇಕ ಮೂಲಗಳು ರಾಜ್ಯಕ್ಕೆ ಸೇರಿವೆ. ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರದ ಮೂಲಕ ಸಾಗುವ ವೇದಾವತಿ ನದಿ ಹಾಗೂ ತಳಕು ಹೋಬಳಿಯ ಹಳ್ಳ–ಕೊಳ್ಳಗಳ ನೀರು ಅದಕ್ಕೆ ಹರಿಯುತ್ತದೆ.

‘ಅಣೆಕಟ್ಟೆಯು ರಾಜ್ಯದ ಗಡಿ ಗ್ರಾಮವಾದ ಮಲ್ಲಸಮುದ್ರದಿಂದ ಸುಮಾರು 10 ಕಿ.ಮೀ. ದೂರದಲ್ಲಿದೆ. ಅಣೆಕಟ್ಟೆಯು ವಾಯುಮಾರ್ಗದಲ್ಲೂ ಅಷ್ಟೇ ದೂರದಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಯೋಜನೆಯಿಂದ ಪರಶುರಾಂಪುರ ಹೋಬಳಿಯ ಗ್ರಾಮಗಳಲ್ಲೂ ಅಂತರ್ಜಲ ವೃದ್ಧಿಗೆ ಅನುಕೂಲವಾಗುತ್ತದೆ.

ಆದ್ದರಿಂದ ನಮಗೂ ನೀರು ಹರಿಸುವ ಸಾಧ್ಯತೆಯನ್ನು ಏಕೆ ಪರಿಶೀಲಿಸಬಾರದು?’ ಎಂದು ಜನಸಂಸ್ಥಾನ ಸಂಘಟನೆಯ ಮುಖಂಡ ವಿರೂಪಾಕ್ಷಪ್ಪ, ಕರವೇ ಸ್ಥಳೀಯ ಘಟಕದ ಅಧ್ಯಕ್ಷ ಸೂರಮ್ಮನಹಳ್ಳಿ ನಾಗರಾಜ್‌, ಜೈಕರ್ನಾಟಕ ರಕ್ಷಣಾ ವೇದಿಕೆ ಎಂ.ಎಚ್‌.ಶಶಿಧರ್‌, ಕಿಸಾನ್‌ ಸಂಘದ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಮಂಜುಳಾಸ್ವಾಮಿ ಒತ್ತಾಯಿಸಿದ್ದಾರೆ.

‘ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕುಗಳಿಗೆ ತುಂಗಭದ್ರಾ ಹಿನ್ನೀರು ಯೋಜನೆಯ ಮೂಲಕ ಕುಡಿಯುವ ನೀರು ತರಲು ಇಲ್ಲದ ಪರಿಶ್ರಮ ವಹಿಸಲಾಗುತ್ತಿದೆ. ಆದರೆ, ಸಮೀಪದ ಸೀಮಾಂಧ್ರದ ರಾಯದುರ್ಗ ತಾಲ್ಲೂಕಿನ ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ನೀಡಿ ವರ್ಷಗಳು ಕಳೆದಿವೆ. ನಮ್ಮ ರಾಜ್ಯದ ಸರ್ಕಾರಗಳ ಬೇಜವಾಬ್ದಾರಿಗೆ ಇದು ಸಾಕ್ಷಿಯಾಗಿದೆ. ಕೆರೆ ತುಂಬಿಸುವ ಯೋಜನೆಯಲ್ಲಾದರೂ ಹಿತಾಸಕ್ತಿ ತೋರಿಸಬೇಕು’ ಎಂದು ಮನವಿ ಮಾಡಿದರು.

ರೈತಸಂಘ ಹಾಗೂ ಹಸಿರುಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ‘ಭದ್ರಾಮೇಲ್ದಂಡೆ ನೀರು ಈ ಎರಡೂ ತಾಲ್ಲೂಕುಗಳಿಗೆ ಎರಡನೇ ಹಂತದಲ್ಲಿ ಹರಿಯಬಹುದು. ಇದು ಪೂರ್ಣ ಮಳೆಯಾಶ್ರಿತ ಪ್ರದೇಶಗಳಾಗಿರುವ ಕಾರಣ ಮಳೆಗಾಲದಲ್ಲಿ ಅದೆಷ್ಟೋ ಟಿಎಂಸಿ ಅಡಿಗಳಷ್ಟು ನೀರು ಸಮುದ್ರ ಸೇರುತ್ತದೆ.

ಹಾಗಾಗಿ ಕೃಷ್ಣಾ ನದಿ ನೀರನ್ನು ಹರಿಸುವಂತೆ ಕೇಳುವುದೂ ಸೂಕ್ತವಾಗಿದೆ. ಯೋಜನೆಯ ಸಾಧ್ಯಾಸಾಧ್ಯತೆ ಬಗ್ಗೆ ಮೊದಲು ಸರ್ವೆ ಮಾಡಬೇಕು. ಇದಕ್ಕಾಗಿ ಅಗತ್ಯವಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ‘ಕೃಷ್ಣಾ ನದಿ ಮೂಲದಿಂದ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಸಾಧ್ಯತೆ ಇದ್ದಲ್ಲಿ ಕಾರ್ಯಕ್ಕೆ ಪೂರ್ಣ ಸಹಕಾರ ನೀಡಲಾಗುವುದು. ಈ ಬಗ್ಗೆ ನೀರಾವರಿ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗುವುದು’ ಎಂದು ಭರವಸೆ ನೀಡಿದರು.

ಶಾಸಕ ಎಸ್.ತಿಪ್ಪೇಸ್ವಾಮಿ ‘ಪ್ರಜಾವಾಣಿ’ ಜತೆ ಮಾತನಾಡಿ, ‘ಇದರ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುವುದು. ಶಾಸಕ ರಘುಮೂರ್ತಿ ಅವರನ್ನು ಜತೆಯಲ್ಲಿ ಕರೆದುಕೊಂಡು ಆಂಧ್ರಪ್ರದೇಶದಲ್ಲಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಲಾಗುವುದು. ಜತೆಗೆ ರಾಜ್ಯಸರ್ಕಾರದ ಗಮನ ಸೆಳೆಯಲು ಶ್ರಮಿಸುತ್ತೇನೆ. ಕೃಷ್ಣ ನದಿ ಮೂಲದಿಂದ ನೀರು ತರುವ ಕಾರ್ಯಕ್ಕೆ ಪೂರ್ಣ ಬೆಂಬಲ ನೀಡುತ್ತೇನೆ’ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT