ಶುಕ್ರವಾರ, ಮಾರ್ಚ್ 5, 2021
17 °C
ದೇಶದಲ್ಲಿ 1.83 ಕೋಟಿ ಗುಲಾಮರು

ಭಾರತದಲ್ಲಿ ಆಧುನಿಕ ಗುಲಾಮಗಿರಿಯ ರೂಪಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದಲ್ಲಿ ಆಧುನಿಕ ಗುಲಾಮಗಿರಿಯ ರೂಪಗಳು

ಬೆಂಗಳೂರು: ‘ಭಾರತದಲ್ಲಿ ಸುಮಾರು 1.83 ಕೋಟಿ ಜನರು ಆಧುನಿಕ ಗುಲಾಮಗಿರಿಗೆ ಸಿಲುಕಿ ನರಳುತ್ತಿದ್ದಾರೆ’ ಎಂದು ಜಾಗತಿಕ ಗುಲಾಮಗಿರಿ ಸೂಚ್ಯಂಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿಶ್ವದಲ್ಲಿ ಅತಿ ಹೆಚ್ಚು ಜನರು ಗುಲಾಮಗಿರಿಗೆ ಸಿಲುಕಿರುವ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಉತ್ತರ ಕೊರಿಯ, ಉಜ್ಬೆಕಿಸ್ತಾನ ಮತ್ತು ಕಾಂಬೋಡಿಯ ಕ್ರಮವಾಗಿ ಒಂದು, ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಆಸ್ಟ್ರೇಲಿಯದ ವಾಕ್ ಫ್ರೀ ಫೌಂಡೇಷನ್, ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಕಾರ್ಮಿಕ ಆಯೋಗವು ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಪತ್ತೆಯಾಗಿದೆ.

ವಿಶ್ವದ 150 ದೇಶಗಳು ಗುಲಾಮಗಿರಿಯನ್ನು ಸಂಪೂರ್ಣವಾಗಿ ನಿಷೇಧಿಸಿವೆ. ಆದರೂ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲೂ ಗುಲಾಮಗಿರಿ ಅಸ್ತಿತ್ವದಲ್ಲಿದೆ. ಒಟ್ಟಾರೆ ವಿಶ್ವದಾದ್ಯಂತ 4.58 ಕೋಟಿ ಜನರು ಆಧುನಿಕ ಗುಲಾಮಗಿರಿಗೆ ಸಿಲುಕಿದ್ದಾರೆ ಎಂದು ಸಮೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜೀತಪದ್ಧತಿ ನಿರ್ಮೂಲನಾ ಕಾಯ್ದೆ, ಕಾರ್ಮಿಕ ಕಾನೂನು ಇದ್ದರೂ ಭಾರತದಲ್ಲಿ ಗುಲಾಮಗಿರಿ ಮತ್ತು ಜೀತಪದ್ಧತಿಯ ವಿರುದ್ಧ ದಾಖಲಾಗುವ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ.

ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತರನ್ನು ಬೆದರಿಸುವುದರಿಂದ ಮತ್ತು ಸೂಕ್ತ ಸಾಕ್ಷ್ಯಾಧಾರ ದೊರೆಯದೇ ಇರುವುದರಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದಿಲ್ಲ ಎಂದು ವರದಿ ಹೇಳಿದೆ.

*

ಆಧುನಿಕ ಗುಲಾಮಗಿರಿಗೆ ವಿಶ್ವದಲ್ಲಿ ಅತಿಹೆಚ್ಚು ಜನರು ಗುರಿಯಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ

ಭಾರತದಲ್ಲಿ ಇದ್ದಾರೆಂದು ಅಂದಾಜಿಸಲಾದ ಆಧುನಿಕ ಗುಲಾಮರ ಸಂಖ್ಯೆ 1.83 ಕೋಟಿ

ದೇಶದ ಜನಸಂಖ್ಯೆಯಲ್ಲಿ ಆಧುನಿಕ ಗುಲಾಮರ ಪ್ರಮಾಣ 1.40%

ವಿಶ್ವದಾದ್ಯಂತ ಇದ್ದಾರೆಂದು ಅಂದಾಜಿಸಲಾದ ಆಧುನಿಕ ಗುಲಾಮರ ಸಂಖ್ಯೆ 4.58 ಕೋಟಿ

ವಿಶ್ವದ ಒಟ್ಟು ಆಧುನಿಕ ಗುಲಾಮರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಭಾರತ, ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಉಜ್ಬೆಕಿಸ್ತಾನಗಳಲ್ಲಿ ಇದ್ದಾರೆ

ಹೆಚ್ಚು ಗುಲಾಮರ ದೇಶಗಳು

ದೇಶದ ಜನಸಂಖ್ಯೆಯ ಪ್ರಮಾಣದಲ್ಲಿ ಹೆಚ್ಚು ಗುಲಾಮರನ್ನು ಹೊಂದಿರುವ ದೇಶಗಳು

1. ಉತ್ತರ ಕೊರಿಯ

2. ಉಜ್ಬೆಕಿಸ್ತಾನ

3. ಕಾಂಬೋಡಿಯ

 

ಜೀತಪದ್ಧತಿ

* ಅತ್ಯಂತ ಹಳೆಯ ಮತ್ತು ನಿಷೇಧವಾಗಿದ್ದರೂ ಅಸ್ತಿತ್ವದಲ್ಲಿರುವ ಪದ್ಧತಿ

* ಕುಟುಂಬದ ಹಿರಿಯರು ಮಾಡಿದ ಸಾಲವನ್ನು ತೀರಿಸುವ ಸಲುವಾಗಿ ಸಂಬಳವಿಲ್ಲದೇ ದುಡಿಮೆ

* ಸಾಲ ಮಾಡಿದವರ ಮಕ್ಕಳು ಬಲಿಯಾಗುವುದು ಹೆಚ್ಚು. ಮಕ್ಕಳು ಇಲ್ಲದಿದ್ದರೆ ಪತಿಯ ಪರವಾಗಿ ಪತ್ನಿ ದುಡಿಯಬೇಕಾಗುತ್ತದೆ

* ಮನೆಗೆಲಸ, ಹೊಲ–ಗದ್ದೆ, ಕಲ್ಲು ಗಣಿಗಾರಿಕೆ, ಮೀನುಗಾರಿಕೆ ಮತ್ತು ಇಟ್ಟಿಗೆ ತಯಾರಿಕಾ ಘಟಕಗಳಲ್ಲಿ ಇಂತಹ ಜೀತದಾಳುಗಳನ್ನು ಕಾಣಬಹುದುಮನೆಗೆಲಸದಾಳು

* ಇದೊಂದು ಅಸಂಘಟಿತ ವಲಯ

* ಮಹಿಳೆಯರು ಮತ್ತು ಮಕ್ಕಳು ಕಂಡು ಬರುತ್ತಾರೆ

* ಕಡಿಮೆ ಸಂಬಳ ಮತ್ತು ಹೆಚ್ಚು ಅವಧಿಯ ದುಡಿಮೆ

* ಮಕ್ಕಳನ್ನು ಖರೀದಿಸಿ ತಂದು ಮನೆಗೆಲಸಕ್ಕೆ ಇರಿಸಿಕೊಳ್ಳುವುದು ರೂಢಿಯಲ್ಲಿದೆ

* ಹಲ್ಲೆ, ನಿಂದನೆ, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳು ನಡೆಯುವ ಅಪಾಯ ಹೆಚ್ಚುಒತ್ತಾಯದ ಬಿಕ್ಷಾಟನೆ

* ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವ್ಯಾಪಕವಾಗಿದೆ

* ವೃದ್ಧರು ಮತ್ತು ಮಕ್ಕಳನ್ನು ಬೆದರಿಕೆ ಒಡ್ಡಿ ಬಿಕ್ಷಾಟನೆಗೆ ದೂಡಲಾಗುತ್ತದೆ

* ಬಿಕ್ಷೆಯಲ್ಲಿ ಸಂಗ್ರಹವಾದ ಹಣವನ್ನು ಯಾವುದೋ ಒಬ್ಬ ವ್ಯಕ್ತಿ/ಗುಂಪುಗಳಿಗೆ ನೀಡಬೇಕು

* ಸಂತ್ರಸ್ತರಿಗೆ ಊಟವನ್ನು ಒದಗಿಸುವ ಕೆಲಸವನ್ನಷ್ಟೇ ಆ ವ್ಯಕ್ತಿ/ಗುಂಪುಗಳು ಮಾಡುತ್ತವೆ

* ಮನೆಬಿಟ್ಟು ಬಂದ ಮಕ್ಕಳು, ಮಕ್ಕಳು ಹೊರದಬ್ಬಿದ ವೃದ್ಧರು ಈ ದಂದೆಗೆ ಬಲಿಯಾಗುವುದು ಹೆಚ್ಚುವೇಶ್ಯಾವಾಟಿಕೆ

* ಭಾರತದಾಧ್ಯಂತ ಈ ದಂದೆ ವ್ಯಾಪಕವಾಗಿದೆ

* ಬಾಲಕಿಯರು–ಯುವತಿಯರು– ಮಹಿಳೆಯರನ್ನು ವೇಶ್ಯಾವಾಟಿಕೆ ದಂದೆಯಲ್ಲಿರುವವರಿಗೆ ಮಾರಾಟ ಮಾಡುವುದು ಸಾಮಾನ್ಯವಾಗಿದೆ

* ಪ್ರೀತಿ–ಮದುವೆಯ ಮೂಲಕ ವಂಚಿಸಿ ಯುವತಿಯರನ್ನು ದಂದೆಗೆ ದೂಡಲಾಗುತ್ತದೆ

* ದಿನಗಟ್ಟಲೆ ಊಟ ನೀಡದೆ, ಕೂಡಿ ಹಾಕಿ ಗ್ರಾಹಕರ ಜತೆ ಲೈಂಗಿಕತೆಗೆ ಸಹಕರಿಸುವಂತೆ ಮಾಡಲಾಗುತ್ತದೆಬಲವಂತದ ಮದುವೆ

* 18 ವರ್ಷ ತುಂಬದ ಬಾಲಕಿಯರಿಗೆ ಬಲವಂತವಾಗಿ ಮದುವೆ ಮಾಡಲಾಗುತ್ತದೆ

* ಬಾಲಕಿಯರ ಪೋಷಕರಿಗೆ ಹಣ ನೀಡಲಾಗಿರುತ್ತದೆ, ಆದರೆ ಬಾಲಕಿಯರನ್ನು ಖರೀದಿಸಲಾಗಿದೆ ಎಂಬುದು ಅವರಿಗೆ ತಿಳಿಯದಂತೆ ವಂಚಿಸಲಾಗಿರುತ್ತದೆ

* ಗ್ರಾಮೀಣ ಭಾಗದ ಬಾಲಕಿಯರನ್ನು ನಗರವಾಸಿ ಕುಟುಂಬದ ವರನಿಗೆ ಹೀಗೆ ಮದುವೆ ಮಾಡಿಕೊಳ್ಳುವುದು ರೂಢಿಯಲ್ಲಿದೆ

* ಮದುವೆಯ ನಂತರ ವರನ ಮನೆಯಲ್ಲಿ ಬಾಲಕಿಯನ್ನು ಮನೆಗೆಲಸಕ್ಕೆ ಇರಿಸಿಕೊಳ್ಳಲಾಗುತ್ತದೆ. ಊಟ–ವಸತಿ–ಬಟ್ಟೆಯನ್ನಷ್ಟೇ ಕೊಡಲಾಗುತ್ತದೆ

* ಮನೆಯಿಂದ ಹೊರ ಹೋಗಲು ಅವಕಾಶವಿರುವುದಿಲ್ಲ. ಹಲ್ಲೆ, ನಿಂದನೆ, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದ ಅಪಾಯ ಹೆಚ್ಚು

ಉಗ್ರ–ಬಂಡುಕೋರರ ಸಂಘಟನೆಗಳಿಗೆ ಬಲಿ

* 6–7 ವರ್ಷದ ಮಕ್ಕಳನ್ನೇ ಒ್ತತಾಯವಾಗಿ ಇಲ್ಲವೇ ಅಪಹರಿಸಿಕೊಂಡು ಈ ಸಂಘಟನೆಗಳಿಗೆ ಸೇರಿಸಿಕೊಳ್ಳಲಾಗುತ್ತದೆ

* ಇವರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿ, ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪ್ರಚೋದನೆ ನೀಡಲಾಗುತ್ತದೆ

* ಉಗ್ರರ ಸಂಘಟನೆಗಳು, ಬಂಡುಕೋರರ ಗುಂಪು ಮತ್ತು ನಕ್ಸಲ್ ಚಳವಳಿಗೆ ಈ ರೀತಿ ಮಕ್ಕಳು ಬಲಿಯಾಗುವುದು ಹೆಚ್ಚು

* ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಅಸ್ಸಾಂ, ಮಣಿಪುರ, ತ್ರಿಪುರ, ಉತ್ತರ ಪ್ರದೇಶ, ಛತ್ತೀಸಗಡ, ಮಧ್ಯಪ್ರದೇಶ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕಗಳಲ್ಲಿ ಈ ಸಮಸ್ಯೆ ವ್ಯಾಪಕವಾಗಿದೆ

* ಲೈಂಗಿಕ ದೌರ್ಜನ್ಯದ ಅಪಾಯ ಹೆಚ್ಚುಆಧುನಿಕ ಗುಲಾಮಗಿರಿ

ಯಾವುದೇ ವ್ಯಕ್ತಿಯ ಕೆಲಸದ ಆಯ್ಕೆ, ಊಟ ಮತ್ತು ಜೀವನ ಶೈಲಿಯ ಸ್ವಾತಂತ್ರ್ಯವನ್ನು ಮತ್ತೊಬ್ಬ ವ್ಯಕ್ತಿ ಹಣ, ಅಧಿಕಾರ, ಬಲ ಮತ್ತು ಹಿಂಸೆಯನ್ನು ಬಳಸಿ ಕಸಿದುಕೊಳ್ಳುವುದು ಆಧುನಿಕ ಜೀತ ಎಂದು ವಿಶ್ವ ಸಂಸ್ಥೆ ಹೇಳಿದೆ.

ಆಧಾರ: ಜಾಗತಿಕ ಗುಲಾಮಗಿರಿ ಸೂಚ್ಯಂಕ–2016

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.