ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳದಲ್ಲಿ ತ್ರಿವರ್ಣಧ್ವಜ ಎತ್ತಿಹಿಡಿದ ಸಿದ್ಧಾರೂಢ!

Last Updated 3 ಡಿಸೆಂಬರ್ 2017, 5:54 IST
ಅಕ್ಷರ ಗಾತ್ರ

ಬಾಗಲಕೋಟೆ: ಬಾದಾಮಿ ತಾಲ್ಲೂಕು ಕೆಂದೂರಿನ ಸಿದ್ಧಾರೂಢ ಎಂ.ಕೊಪ್ಪದ, ಅಕ್ಟೋಬರ್ 28ರಿಂದ 30ರವರೆಗೆ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಸಾರ್ಕ್‌ ರಾಷ್ಟ್ರಗಳ ಅಂಗವಿಕಲರ ಅಥ್ಲೆಟಿಕ್ಸ್ ಕೂಟದಲ್ಲಿ ಡಿಸ್ಕಸ್ ಥ್ರೋನಲ್ಲಿ ಚಿನ್ನ ಹಾಗೂ ಶಾಟ್‌ಪಟ್‌ನಲ್ಲಿ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಕೆಂದೂರಿನ ಬಾದಾಮಿ– ಪಟ್ಟದಕಲ್ಲು ಹೆದ್ದಾರಿಯ ಪಕ್ಕದಲ್ಲಿ ಸಹೋದರ ಪರಶುರಾಮನ ಜೊತೆ ಊರುಗೋಲು ಹಿಡಿದು ನಿಂತು ತಳ್ಳುವ ಗಾಡಿಯಲ್ಲಿ ಎಗ್‌ರೈಸ್ ಮಾರಾಟ ಮಾಡಿ ಸಿದ್ಧಾರೂಢ ಬದುಕಿನ ಬಂಡಿ ನೂಕುತ್ತಾರೆ.

ಅಂಗವಿಕಲರ ಕ್ರೀಡಾಕೂಟವೇ ಸ್ಫೂರ್ತಿ: ಕೆಂದೂರಿನ ಮಾಗುಂಡಪ್ಪ, ಮುಡಿಯವ್ವ ದಂಪತಿ ಪುತ್ರ ಸಿದ್ಧಾರೂಢ ಅವರು ಒಂದು ವರ್ಷದವರಿದ್ದಾಗಲೇ ಪೋಲಿಯೊದಿಂದ ಒಂದು ಕಾಲ ಊನಗೊಂಡಿದೆ. ಆದರೆ ಅಂಗವೈಕಲ್ಯ ಬದುಕಿನ ಉತ್ಸಾಹ ಕುಗ್ಗಿಸಿಲ್ಲ. 1996ರಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಆಗಿನ ಜಿಲ್ಲಾ ಕೇಂದ್ರ ವಿಜಯಪುರದಲ್ಲಿ ಅಂಗವಿಕಲರ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಸಿದ್ಧಾರೂಢ, ಆಗ ಕೋಲಿನ ಆಸರೆಯಲ್ಲಿ ಒಂದೇ ಕಾಲಿನಲ್ಲಿ ಓಡಿ ಮೊದಲ ಸ್ಥಾನ ಪಡೆದಿದ್ದರು.

‘ಅಂದಿನ ಗೆಲುವು ಮುಂದೆ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಲು ಸ್ಫೂರ್ತಿಯಾಯಿತು’ ಎಂದು ಸ್ಮರಿಸುತ್ತಾರೆ. ‘ಆಗಿನಿಂದಲೇ ನಿತ್ಯ ತಾಲೀಮು ಆರಂಭಿಸಿದೆ. ಸ್ಪರ್ಧೆಗೆ ಸೂಕ್ತ ವೇದಿಕೆ ಸಿಕ್ಕಿರಲಿಲ್ಲ. ಆದರೆ ಪ್ರತಿ ವರ್ಷ ಅಂಗವಿಕಲರ ದಿನಾಚರಣೆ ಕ್ರೀಡಾ ಕೂಟದಲ್ಲಿ ತಪ್ಪದೇ ಪಾಲ್ಗೊಂಡು ಬಹುಮಾನ ಪಡೆಯುತ್ತಿದ್ದೆ. 2010ರಲ್ಲಿ ಪತ್ರಿಕೆಯೊಂದರಲ್ಲಿ ಬಂದ ಮಾಹಿತಿ ಗಮನಿಸಿ ಮೈಸೂರಿನಲ್ಲಿ ನಡೆದ
ರಾಜ್ಯ ಮಟ್ಟದ ಅಂಗವಿಕಲರ ಕ್ರೀಡಾಕೂಟದಲ್ಲಿ ಪಾಲ್ಗೊಂಡೆ. ಅಲ್ಲಿ ಡಿಸ್ಕಸ್ ಥ್ರೋ ಹಾಗೂ ಶಾಟ್‌ಪಟ್‌ನಲ್ಲಿ ಮೊದಲ ಸ್ಥಾನ ದೊರೆಯಿತು. ಆಗಿನಿಂದಲೂ ಅವೆರಡೂ ಸ್ಪರ್ಧೆಗಳಲ್ಲಿ ಹೆಚ್ಚಿನ ಸಾಧನೆ ಮಾಡುವ ಆಸೆ ಹುಟ್ಟಿತು. ಬಳಿಕ ನಿತ್ಯ ಮುಂಜಾನೆ ಕೆಂದೂರಿನ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ತಾಲೀಮು ಆರಂಭಿಸಿದೆ’ ಎಂದು ಹೇಳುತ್ತಾರೆ.

2013ರಲ್ಲಿ ಚೆನ್ನೈನಲ್ಲಿ, 2014ರಲ್ಲಿ ಬೆಂಗಳೂರು ಹಾಗೂ ಮರು ವರ್ಷ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಅಂಗವಿಕಲರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರಮವಾಗಿ ಜಾವೆಲಿನ್, ಡಿಸ್ಕಸ್ ಥ್ರೋ ಹಾಗೂ ಶಾಟ್‌ಪಟ್‌ನಲ್ಲಿ ಪದಕ ಪಡೆದಿದ್ದಾರೆ. ಅದರ ಪರಿಣಾಮವಾಗಿ ಅದೇ ವರ್ಷ ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಅಂಗವಿಕಲರ ಅಥ್ಲೆಟಿಕ್ಸ್ ಕೂಟದಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ. ಆದರೆ ಆಗ ಯಾವುದೇ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಮೂರು
ವರ್ಷಗಳ ನಂತರ ಇದೀಗ ಸಾರ್ಕ್ ಕೂಟದಲ್ಲಿ ತ್ರಿವರ್ಣ ಧ್ವಜ ಎತ್ತಿಹಿಡಿದಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆಯಲು ಬೆಂಗಳೂರಿನ ಕೋಚ್‌ ಜಿ.ಎಚ್.ತುಳಸೀಧರ ಅವರ ಪ್ರೋತ್ಸಾಹ ನೆನೆಯುತ್ತಾರೆ. ಬಿಎಸ್‌ಡಬ್ಲ್ಯೂ ಪದವೀಧರರಾದ ಅವರು ಊರಿನಲ್ಲಿ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುತ್ತಾರೆ. ‘ವಯೋಮಿತಿ ಮೀರಿದ ಕಾರಣ ಪ್ಯಾರಾ ಒಲಿಂಪಿಕ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ದೊರೆಯುವುದಿಲ್ಲ ಎಂದು ಬೇಸರ ವ್ಯಕ್ತಪಡಿಸುವ ಅವರು, ಇನ್ನು ಮುಂದೆ ಕಿರಿಯರಿಗೆ ತರಬೇತಿ ನೀಡುವುದಾಗಿ ಹೇಳುತ್ತಾರೆ.

ಸಿದ್ಧಾರೂಢ ಅವರ ಅಪ್ಪ 11 ವರ್ಷಗಳ ಹಿಂದೆ ಸಾವಿಗೀಡಾಗಿದ್ದಾರೆ. ಅಮ್ಮ ಊರಿನಲ್ಲಿಯೇ ಕೂಲಿ
ಕೆಲಸ ಮಾಡುತ್ತಾರೆ. ಸಹೋದರನೊಂದಿಗೆ ಮನೆಯ ಜವಾಬ್ದಾರಿ ಹೊತ್ತಿರುವ ಅವರಿಗೆ ಊರುಗೋಲಿನ ಜೊತೆಗೆ ತಳ್ಳುಗಾಡಿ ಆಸರೆಯಾಗಿ ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT