ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟೂರೇಶ್ವರ ಸ್ವಾಮಿಯ ಮಹಾ ಕಾರ್ತಿಕೋತ್ಸವ ಇಂದು

Last Updated 4 ಡಿಸೆಂಬರ್ 2017, 6:59 IST
ಅಕ್ಷರ ಗಾತ್ರ

ಕೂಡ್ಲಿಗಿ: ಪಟ್ಟಣದ ಕೊಟ್ಟೂರೇಶ್ವರ ಸ್ವಾಮೀಯ ಕಾರ್ತೀಕೋತ್ಸವ ಹಾಗೂ ಲಕ್ಷದೀಪೋತ್ಸವ ಡಿ.4 (ಸೋಮವಾರ) ನಡೆಯಲಿದೆ. ಪ್ರತಿ ವರ್ಷದ ಹೊಸ್ತಿಲ ಹುಣ್ಣಿಮೆಯ ನಂತರ ಅಥವಾ ಮೊದಲ ಹುಣ್ಣೆಮೆಗೆ ಹತ್ತಿರವಾದ ಸೋಮವಾರ ಅಥವಾ ಗುರುವಾರ ಕೊಟ್ಟೂರೇಶ್ವರ ಕಾರ್ತೀಕೋತ್ಸವ ನಡೆಯಲಿದೆ.

ಅದರಂತೆ ಡಿ.3 ರಂದು ಹುಣ್ಣಿಮೆ ದಿನವಾಗಿದ್ದು, ಮಾರನೇ ದಿನ ಮಹಾ ಕಾರ್ತೀಕೋತ್ಸವ ನಡೆಯಲಿದೆ. ಈ ಕಾರ್ತೀಕೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ. ರಾಷ್ಟ್ರಕೂಟರ ಚಕ್ರೇಶ್ವರ ಕೊಟ್ಟಿಗರ ಹೆಸರಿನಲ್ಲಿ ನಿರ್ಮಾಣವಾದ ಈ ಊರು, ಕೊಟ್ಟಿಗನ ಊರು ನಂತರ ಕೊಟ್ಟೂರು ಆಗಿದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.

ಕೊಟ್ಟೂರು ಬಸವೇಶ್ವರರು ವೇದ, ಆಗಮ, ಜ್ಯೋತಿಷ, ಮನುಸ್ಮೃತಿಗಳ ವಿಚಾರಧಾರೆಗಳ ಬೆಂಕಿ ನಂದಿಸಿ, ಕಾಯಕ, ದಾಸೋಹ, ಷ‌ಟ್‌ಸ್ಥಲ, ಅಷ್ಠಾವರಣ, ಪಂಚಾಚಾರಗಳ ವಿವೇಕದ ನಂದಾದೀಪ ಹಚ್ಚಿ ಇಂದಿಗೂ ದೀಪವನ್ನು ಜೀವಂತವಾಗಿರಿಸುವುದನ್ನು ಇಂತಹ ಮಹೋತ್ಸವಗಳು ಸಾರುತ್ತವೆ.

ಬೆಳ್ಳಿ ರಥಾಕರ್ಷಣೆ: ಕಡೆಯ ಕಾರ್ತೀಕ ಉತ್ಸವದಂದು ನಡೆಯುವ ಬೆಳ್ಳಿ ರಥದಲ್ಲಿ ಮೂಲ ಬಂಗಾರ ಖಚಿತ ವಿಗ್ರಹ ವಿರಾಜಮಾನಗೊಳ್ಳುತ್ತದೆ. ಇದೊಂದು ಅಪರೂಪ. ಬಹುತೇಕ ಕಡೆಗಳಲ್ಲಿ ಉತ್ಸವ ಮೂರ್ತಿ ಬೇರೆಯೇ ಇರುತ್ತವೆ. ಮೂಲ ವಿಗ್ರಹವನ್ನು ಕಣ್ತುಂಬಿಕೊಳ್ಳಲು ಜನರು ಕಿಕ್ಕಿರಿದು ಸೇರುತ್ತಾರೆ.

ಕೊಟ್ಟೂರೇಶ್ವರ ಕಲ್ಯಾಣ ಮಂಟಪ ಸಮಿತಿ 290 ಕೆಜಿ ಬೆಳ್ಳಿಯನ್ನು ಭಕ್ತಾಧಿಗಳಿಂದ ಸಂಗ್ರಹಿಸಿ ₹40 ಲಕ್ಷ ವೆಚ್ಚದಲ್ಲಿ ಸುಂದರ ರಥ ನಿರ್ಮಿಸಿ ಸೇವೆಗೆ ಅರ್ಪಿಸಿತು.
ಸೋಮವಾರ ಸಂಜೆ 6ಕ್ಕೆ ಹಿರೇಮಠದ ಮುಂದೆ ದೀಪ ಬೆಳಗಿಸುವುದರೊಂದಿಗೆ ಕಾರ್ತೀಕೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ನಂತರ ಭಕ್ತರು ತಮ್ಮ ಶಕ್ತಾನುಸಾರ ದೀಪಗಳಿಗೆ ಎಣ್ಣೆ, ಬತ್ತಿ ಹಾಕಿ ದೀಪ ಬೆಳಗಿಸುತ್ತಾರೆ. ಈ ಸಂದರ್ಭದಲ್ಲಿ ಸಾವಿರಾರು ಲೀಟರ್ ಎಣ್ಣೆ ಮಾರಾಟ ನಡೆಯುತ್ತದೆ. ನಂತರ ಮಧ್ಯರಾತ್ರಿ ಸ್ವಾಮಿಯ ಮೂರ್ತಿಯನ್ನು ಹಿರೇಮಠದಿಂದ ಸಕಲ ವಾಧ್ಯಗಳೊಂದಿಗೆ ಹೊರ ತಂದು ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿ, ತೊಟ್ಟಿಲ ಮಠದ ಮುಖಾಂತರ ಗಚ್ಚಿನ ಮಠಕ್ಕೆ ತರಲಾಗುತ್ತದೆ. ಅಲ್ಲಿ ವಡುಪುಗಳನ್ನು ಹೇಳಿ ಮದಲ್ಸಿ ಮಾಡಿ ನಂತರ ಬೆಳಗಿ ಜಾವ ಮರಳಿ ಹಿರೇಮಠಕ್ಕೆ ಕೊಂಡೊಯ್ಯಲಾಗುತ್ತದೆ. ಇದರೊಂದಿಗೆ ಕಾರ್ತೀಕೋತ್ಸವಕ್ಕೆ ತೆರೆ ಬೀಳುತ್ತದೆ.

ದಾಖಲೆ ಕೊಬ್ಬರಿ: ಕೊಟ್ಟೂರೇಶ್ವರ ಸ್ವಾಮಿಯ ಈ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುವ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬರಿ ಸುಡುವ ಸಂಪ್ರದಾಯ ಮುಂದುವರೆಸಿದ್ದಾರೆ. ದೇವಸ್ಥಾನದ ಹಿರೇಮಠದ ಮುಂಭಾಗದಲ್ಲಿ 30 ಕ್ವಿಂಟಲ್‍ಗೂ ಹೆಚ್ಚು ಕೊಬ್ಬರಿಯನ್ನು ಪ್ರತಿವರ್ಷ ಸುಡುವ ಮೂಲಕ ಭಕ್ತಿ ಸಮರ್ಪಿಸುವುದು ನಡೆದಿದೆ. ಕೊಬ್ಬರಿ ಸುಡಲೆಂದೇ ಧಾರ್ಮಿಕ ದತ್ತಿ ಇಲಾಖೆ ಪ್ರತ್ಯೇಕ ಸುತ್ತುಕಟ್ಟೆ ನಿರ್ಮಿಸಿದೆ.

ಮಾಲಾಧರಣೆ: ಕೊಟ್ಟೂರು ಸುತ್ತಮುತ್ತಲಿನ ಭಕ್ತರು ಕೊಟ್ಟೂರೇಶ್ವರನಿಗೆ ಭಕ್ತಿ ಸಮರ್ಪಿಸಲು ಮಾಲಾಧಾರಿಗಳಾಗುತ್ತಾರೆ. ಅಂತರಂಗ ಶುದ್ಧಿಯ ಮಹೋನ್ನತ ಆಶಯವೂ ಇದರ ಹಿಂದಿದೆ. ದಶಕಗಳ ಹಿಂದೆ ಆರಂಭವಾದ ಈ ಮಾಲಾಧಾರಣೆಯ ಪೂರ್ಣಾವಧಿ 45 ದಿನ. ಆದರೆ ಈಗ ಭಕ್ತರು ಅನುಕೂಲಕ್ಕೆ ತಕ್ಕಂತೆ ಕಾಲಮಿತಿ ಬದಲಾಯಿಸಿಕೊಂಡಿದ್ದಾರೆ. ಈಗ 21,11,9,5 ದಿನಗಳ ಅವಧಿಗೂ ಮಾಲೆ ಧರಿಸುವ ಪರಿಪಾಠ ಬೆಳೆದುಬಂದಿದೆ.

ಕೊಟ್ಟೂರೇಶ್ವರನ ಕಾರ್ತಿಕೋತ್ಸವ ಹಾಗೂ 'ಲಕ್ಷ ದೀಪೋತ್ಸವ'ದ ಮಾರನೇ ದಿನ ಸ್ವಾಮಿಯ ಭಕ್ತರು ಎಲ್ಲಿಯೇ ಮಾಲೆಯನ್ನು ಹಾಕಿದ್ದರೂ ಮುಕ್ತಾಯಕ್ಕೆ ಮಾತ್ರ ಗುರು ಕೊಟ್ಟೂರೇಶ್ವರನ ಸನ್ನಿದಿಗೆ ಬರಲೇಬೇಕು. ಪೂಜೆ-ಮುಗಿಸಿಕೊಂಡ ನಂತರ ಮಾಲೆಯನ್ನು ಬಿಚ್ಚುತ್ತಾರೆ.

ದಾಖಲೆ ಕೊಬ್ಬರಿ: ಕೊಟ್ಟೂರೇಶ್ವರ ಸ್ವಾಮಿಯ ಈ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುವ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬರಿ ಸುಡುವ ಸಂಪ್ರದಾಯ ಮುಂದುವರೆಸಿದ್ದಾರೆ. ದೇವಸ್ಥಾನದ ಹಿರೇಮಠದ ಮುಂಭಾಗದಲ್ಲಿ 30 ಕ್ವಿಂಟಲ್‍ಗೂ ಹೆಚ್ಚು ಕೊಬ್ಬರಿಯನ್ನು ಪ್ರತಿವರ್ಷ ಸುಡುವ ಮೂಲಕ ಭಕ್ತಿ ಸಮರ್ಪಿಸುವುದು ನಡೆದಿದೆ. ಕೊಬ್ಬರಿ ಸುಡಲೆಂದೇ ಧಾರ್ಮಿಕ ದತ್ತಿ ಇಲಾಖೆ ಪ್ರತ್ಯೇಕ ಸುತ್ತುಕಟ್ಟೆ ನಿರ್ಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT