ಗುರುವಾರ , ಫೆಬ್ರವರಿ 25, 2021
30 °C

ಮೀನುಗಾರಿಕಾ ದೋಣಿಗಳ ಲಂಗರು ಮುಂದುವರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೀನುಗಾರಿಕಾ ದೋಣಿಗಳ ಲಂಗರು ಮುಂದುವರಿಕೆ

ಕಾರವಾರ: ‘ಓಖಿ’ ಚಂಡಮಾರುತದ ಪರಿಣಾಮವಾಗಿ ಪಶ್ಚಿಮ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿರುವುದರಿಂದ ಕಳೆದ ಮೂರು ದಿನಗಳಿಂದ ಜಿಲ್ಲೆಯ ಬಂದರು ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದ ಮೀನುಗಾರಿಕಾ ದೋಣಿಗಳು ಮತ್ತೆರಡು ದಿನ ಕಡಲಿಗೆ ಇಳಿಯದಂತೆ ಮೀನುಗಾರಿಕಾ ಇಲಾಖೆ ತಿಳಿಸಿದೆ.

ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ರಾಜ್ಯದ ವಿವಿಧೆಡೆಯ ಹಾಗೂ ಅನ್ಯ ರಾಜ್ಯಗಳ ದೋಣಿಗಳು ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯ ವಿವಿಧೆಡೆಯ ಬಂದರು ಪ್ರದೇಶದಲ್ಲಿ ಬೀಡುಬಿಟ್ಟಿದ್ದವು. ಆದರೆ ಸಮುದ್ರದಲ್ಲಿ ಅಲೆಗಳ ವೇಗ ಹೆಚ್ಚಿರುವುದರಿಂದ ಮಂಗಳವಾರ ಹಾಗೂ ಬುಧವಾರವೂ ಕಡಲಿಗಿಳಿಯದಂತೆ ಮೀನುಗಾರಿಕೆ ಇಲಾಖೆ ಮೀನುಗಾರರಿಗೆ ಮುನ್ಸೂಚನೆ ನೀಡಿದೆ.

‘ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಡಿ. 4ರ ತನಕ ಕಡಲಿಗಿಳಿಯದಂತೆ ಮೀನುಗಾರಿಕೆ ಇಲಾಖೆ ಎಚ್ಚರಿಕೆ ನೀಡಿತ್ತು. ಆದರೆ ಈಗಿನ ವಾತಾವರಣ ಗಮನಿಸಿದರೆ ಇನ್ನೂ ಮೂರ್ನಾಲ್ಕು ದಿನಗಳವರೆಗೆ ಕಡಲಿಗಿಳಿಯಲು ಸಾಧ್ಯವಾಗದ ಸ್ಥಿತಿ ಇದೆ.

ಕಡಲಿನಲ್ಲಿ ಗಾಳಿ ವೇಗವಾಗಿ ಬೀಸುತ್ತಿದ್ದು, ಅಲೆಗಳ ಅಬ್ಬರ ಹೆಚ್ಚಾಗಿದೆ. ನಗರದ ಬೈತ್‌ಖೋಲ್‌ ಬಂದರಿನಲ್ಲಿ ಲಂಗರು ಹಾಕಿದ್ದ ಮೀನುಗಾರಿಕೆ ದೋಣಿಗಳ ಸಂಖ್ಯೆ ದಿನೇ ದಿನೇ ದ್ವಿಗುಣಗೊಳ್ಳುತ್ತಿದೆ. ಹೊರ ಪ್ರದೇಶದಲ್ಲಿದ್ದ ದೋಣಿಗಳೆಲ್ಲವೂ ಮರಳಿ ದಡದತ್ತ ಬರುತ್ತಿವೆ’ ಎಂದು ಮೀನುಗಾರ ಮುಖಂಡ ಮೋಹನ ಬೋಳಶೆಟ್ಟಿಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಜಿಲ್ಲೆಯ ಕಡಲತೀರಗಳಿಗೆ ಚಂಡಮಾರುತದ ಪರಿಣಾಮ ಅಷ್ಟೇನೂ ಬೀರುವುದಿಲ್ಲ. ಅದು ಮಹಾರಾಷ್ಟ್ರ, ಗುಜರಾತ್ ಭಾಗಕ್ಕೆ ಚಲಿಸುವ ವೇಳೆ ಇಲ್ಲಿ ಗಾಳಿ ಸಹಿತ ಮಳೆ ಉಂಟಾಗಬಹುದು. ಆದರೆ ಸಮುದ್ರದ ಅಲೆಗಳ ಅಬ್ಬರ ದ್ವಿಗುಣಗೊಂಡಿದೆ. ಹೀಗಾಗಿ ಇನ್ನೆರಡು ದಿನ ಮೀನುಗಾರರು ಕಡಲಿಗಿಳಿಯುವುದು ಸುರಕ್ಷತಾ ದೃಷ್ಟಿಯಿಂದ ಉತ್ತಮವಲ್ಲ’ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಸಂತೋಷ ಕೊಪ್ಪದ ತಿಳಿಸಿದರು.

ಕಡಲಬ್ಬರಕ್ಕೆ ತಡೆಗೋಡೆ ಕುಸಿತ

ಅಂಕೋಲಾ: ತಾಲ್ಲೂಕಿನ ಸಮುದ್ರ ತೀರಗಳಲ್ಲಿ ಮತ್ತು ನದಿಯಂಚಿನ ಪ್ರದೇಶಗಳಲ್ಲಿ ಭಾನುವಾರ ರಾತ್ರಿ ನೀರಿನ ಮಟ್ಟ ಏರಿಕೆಯಾಗಿದೆ. ಅಲೆಗಳ ಆರ್ಭಟಕ್ಕೆ ವಿವಿಧ ಭಾಗಗಳಲ್ಲಿ ತಡೆಗೋಡೆಗಳು ಕುಸಿದು, ಜನರಲ್ಲಿ ಆತಂಕ ಮನೆಮಾಡಿದೆ.

ಭಾನುವಾರ ರಾತ್ರಿ ಓಖಿ ಚಂಡಮಾರುತ ಹಾಗೂ ಸೂಪರ್ ಮೂನ್‌ನ ಪ್ರಭಾವದಿಂದಾಗಿ ಮಂಜುಗುಣಿ, ಬೆಳಂಬಾರ, ನದಿಭಾಗ, ಕೇಣಿ, ಭಾವಿಕೇರಿ, ಬೇಲೆಕೇರಿ, ಹಾರವಾಡ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತಡೆಗೋಡೆಗಳಿಗೆ ಹಾನಿಯಾಗಿ ಸುಮಾರು ₹ 30 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ.

ಮಂಜಗುಣಿ ಭಾಗದಲ್ಲಿ ಕಡಲಬ್ಬರಕ್ಕೆ ತಡೆಗೋಡೆ ಕುಸಿದು ನೀರು ರಸ್ತೆಗೆ ಬರುತ್ತಿರುವುದರಿಂದ ಭಾನುವಾರ ರಾತ್ರಿ ತಹಶೀಲ್ದಾರ ವಿವೇಕ ಶೇಣ್ವಿ, ಕಂದಾಯ ನಿರೀಕ್ಷಕ ಅಮರ ನಾಯ್ಕ ಹಾಗೂ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲ್ಲಿಯ ಸ್ಥಿತಿಗತಿಗಳ ಕುರಿತು ಗ್ರಾಮ ಪಂಚಾಯ್ತಿ ಸದಸ್ಯ ವೆಂಕಟರಮಣ ನಾಯ್ಕ, ಪ್ರಮುಖರಾದ ಕೆ.ಡಿ.ನಾಯ್ಕ ಹಾಗೂ ಇತರರು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.