ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್‌ಪೋರ್ಟ್‌ಗೆ ಹೈಕೋರ್ಟ್‌ ನಿರಾಕರಣೆ

Last Updated 5 ಡಿಸೆಂಬರ್ 2017, 20:28 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಹದ ಸರಕುಗಳ ಸಾಗರೋತ್ತರ ರಫ್ತು ಉದ್ಯಮಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೇಂದ್ರ ಬೊಕ್ಕಸಕ್ಕೆ ₹ 1,208 ಕೋಟಿ ನಷ್ಟ ಉಂಟು ಮಾಡಿದ್ದಾರೆ’ ಎಂಬ ಆರೋಪ ಎದುರಿಸುತ್ತಿರುವ ಬೆಂಗಳೂರಿನ ಸುಧೀರ್ ಶ್ರೀರಾಮ್‌ಗೆ ಪಾಸ್‌ಪೋರ್ಟ್ ನೀಡಲು ಹೈಕೋರ್ಟ್‌ ನಿರಾಕರಿಸಿದೆ.

‘ಮುಟ್ಟುಗೋಲು ಹಾಕಿಕೊಂಡಿರುವ ನನ್ನ ಪಾಸ್‌ಪೋರ್ಟ್‌ ಹಿಂದಿರುಗಿಸಲು ಪಾಸ್‌ಪೋರ್ಟ್‌ ಪ್ರಾಧಿಕಾರಕ್ಕೆ ನಿರ್ದೇಶಿಸಿ’ ಎಂದು ಕೋರಿ ಸುಧೀರ್ ಶ್ರೀರಾಮ್‌ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಲೇವಾರಿ ಮಾಡಿದೆ.

‘ಸುಧೀರ್, ಸದ್ಯ ಯಾವ ದೇಶದಲ್ಲಿ ಇದ್ದಾರೊ ಅಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ 4 ವಾರಗಳ ಒಳಗೆ ತಾತ್ಕಾಲಿಕ ಸಂಚಾರ ಪತ್ರ ನೀಡಲು ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಅರ್ಜಿ ಸಲ್ಲಿಸದಿದ್ದರೆ ಈಗ ಜಾರಿಯಲ್ಲಿರುವ ರೆಡ್‌ ಕಾರ್ನರ್ ನೋಟಿಸ್‌ ಮತ್ತೆ ಕಾರ್ಯರೂಪಕ್ಕೆ ಬರುತ್ತದೆ’ ಎಂದು ನ್ಯಾಯಪೀಠ ಆದೇಶಿಸಿದೆ.

‘ಭಾರತಕ್ಕೆ ಬಂದ ತಕ್ಷಣ ಏರ್‌ಪೋರ್ಟ್‌ನಲ್ಲಿ ಇಮಿಗ್ರೇಷನ್‌ ಪ್ರಾಧಿಕಾರಕ್ಕೆ ಸುಧೀರ್ ವಿಷಯ ಮುಟ್ಟಿಸಬೇಕು. ಅಲ್ಲಿಂದಲೇ ಸಿಬಿಐಗೂ ಮಾಹಿತಿ ಒದಗಿಸಬೇಕು. ನಂತರ ಸಿಬಿಐ ಕೈಗೊಳ್ಳುವ ಮುಂದಿನ ಕಾನೂನು ಕ್ರಮಕ್ಕೆ ಬದ್ಧವಾಗಿರಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಏನಿದು ಪ್ರಕರಣ?: ‘ಲೋಹದ ಅದಿರು ಸಾಗಣೆ ಗುತ್ತಿಗೆದಾರರಾಗಿದ್ದ ಸುಧೀರ್ ಶ್ರೀರಾಮ್‌ 2005ರಿಂದ 2008ರ ಅವಧಿಯಲ್ಲಿ ವಿದೇಶಗಳಿಗೆ ತಾಮ್ರ ಒದಗಿಸುವ ಬದಲಿಗೆ ಕಬ್ಬಿಣದ ಅದಿರು ರವಾನಿಸಿ ಮೋಸ ಮಾಡಿದ್ದಾರೆ. ಈ ವ್ಯವಹಾರಕ್ಕೆ ಭಾರತ ಸರ್ಕಾರ ಖಾತ್ರಿ ನೀಡಿತ್ತು. ಈ ವಂಚನೆಯಿಂದ 1,208 ಕೋಟಿಯಷ್ಟು ಬೃಹತ್‌ ಮೊತ್ತವನ್ನು ಭಾರತ ಸರ್ಕಾರವೇ ಭರಿಸಿದೆ’ ಎಂದು ಸಿಬಿಐ ಇವರ ವಿರುದ್ಧ ಪ್ರಕರಣ ದಾಖಲಿಸಿದೆ.

‘ಪ್ರಕರಣ ದಾಖಲು ಮಾಡಿದ ದಿನದಿಂದಲೂ ವಿದೇಶಗಳಲ್ಲಿ ನೆಲೆ ಬದಲಾಯಿಸುತ್ತಿರುವ ಸುಧೀರ್ ಬೇರೆ ಬೇರೆ ಹೆಸರಿನಲ್ಲಿ ಪಾಸ್‌ಪೋರ್ಟ್ ಹೊಂದಿ ತಲೆ ಮರೆಸಿಕೊಂಡಿದ್ದಾರೆ. ಪಾಸ್‌ಪೋರ್ಟ್ ಕಾಯ್ದೆ–1967ರ ಕಲಂ 6 ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದರೆ, ಯಾವುದೇ ವಾರಂಟ್‌ ಬಾಕಿ ಇದ್ದರೆ ಅಥವಾ ಸಾರ್ವಜನಿಕ ಹಿತಕ್ಕೆ ವಿರುದ್ಧವಾದ ನಡವಳಿಕೆ ಹೊಂದಿದ್ದರೆ ಅಂತಹ ಸಮಯದಲ್ಲಿ ಪಾಸ್‌ಪೋರ್ಟ್ ನೀಡಲು ಸಾಧ್ಯವಿಲ್ಲ’ ಎಂಬುದು ಸಿಬಿಐ ಆಕ್ಷೇಪ.

‘ಸುಧೀರ್‌ ವಿರುದ್ಧ ಕ್ರಿಮಿನಲ್‌ ಪ್ರಕರಣ, ರೆಡ್‌ ಕಾರ್ನರ್ ನೋಟಿಸ್‌, ಲುಕ್‌ ಔಟ್ ನೋಟಿಸ್‌ ಹೊರಡಿಸಲಾಗಿದ್ದು ಈತನನ್ನು ನಾವೇ ಹಿಡಿದುಕೊಂಡು ಬರುತ್ತೇವೆ. ಇಲ್ಲದಿದ್ದರೆ ಅರ್ಜಿದಾರರಿಗೆ ಭಾರತಕ್ಕೆ ಬರುವ ಇಚ್ಛೆ ಇದ್ದರೆ ತಾತ್ಕಾಲಿಕ ಸಂಚಾರ ಪತ್ರ (ಎಮರ್ಜೆನ್ಸಿ ಟ್ರಾವೆಲ್‌ ಡಾಕ್ಯುಮೆಂಟ್‌) ಪಡೆದು ಬರಲಿ’ ಎಂಬುದು ಸಿಬಿಐನ ಮತ್ತೊಂದು ವಾದಾಂಶ.

ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಯ ಪರವಾಗಿ ಸಹಾಯಕ ಸಾಲಿಸಿಟರ್‌ ಜನರಲ್‌ ಕೃಷ್ಣ ಎಸ್.ದೀಕ್ಷಿತ್ ಹಾಗೂ ಸಿಬಿಐ ಪರ ಪಿ.ಪ್ರಸನ್ನ ಕುಮಾರ್ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT