ಭಾನುವಾರ, ಮಾರ್ಚ್ 7, 2021
29 °C

ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಐವರ ಹೆಸರು ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಐವರ ಹೆಸರು ಶಿಫಾರಸು

ನವದೆಹಲಿ: ಕರ್ನಾಟಕ ಹೈಕೋರ್ಟ್‌ನಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂ ಐವರು ವಕೀಲರ ಹೆಸರನ್ನು ಶಿಫಾರಸು ಮಾಡಿದೆ.

ಈ ಹೆಸರುಗಳಿಗೆ ಕರ್ನಾಟಕದ ರಾಜ್ಯಪಾಲ ಮತ್ತು ಮುಖ್ಯಮಂತ್ರಿ ಸಮ್ಮತಿಸಿಲ್ಲ. ಆದರೆ ಕೊಲಿಜಿಯಂ ಐವರು ವಕೀಲರ ಹೆಸರನ್ನು ಅಂತಿಮಗೊಳಿಸಿದೆ.

ಉನ್ನತ ನ್ಯಾಯಾಲಯಗಳ ನ್ಯಾಯಮೂರ್ತಿಗಳ ಹುದ್ದೆಗೆ ಅರ್ಹರ ಹೆಸರನ್ನು ಸುಪ್ರೀಂ ಕೋರ್ಟ್‌ನ ಸಮಿತಿ (ಕೊಲಿಜಿಯಂ) ಶಿಫಾರಸು ಮಾಡುತ್ತದೆ.

ಕರ್ನಾಟಕ ಹೈಕೋರ್ಟ್ ಒಟ್ಟು ಹತ್ತು ವಕೀಲರ ಹೆಸರನ್ನು ಜನವರಿ 13ರಂದು ಕೊಲಿಜಿಯಂಗೆ ಕಳುಹಿಸಿತ್ತು. ಆ ಪೈಕಿ ಐವರ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡಿದೆ.

ನಾಲ್ವರ ಹೆಸರನ್ನು ಪುನರ್‌ ಪರಿಶೀಲನೆಗಾಗಿ ಸುಪ್ರೀಂ ಕೋರ್ಟ್ ವಾಪಸ್‌ ಕಳುಹಿಸಿದೆ.  ಹುದ್ದೆಗೆ ಯೋಗ್ಯರಲ್ಲ ಎಂಬ ಕಾರಣ ನೀಡಿ ಕಾಸರವಳ್ಳಿ ಚೈತನ್ಯ ಕೇಶವಮೂರ್ತಿ ಅವರ ಹೆಸರನ್ನು ತಿರಸ್ಕೃರಿಸಲಾಗಿದೆ.

ಕೇಂದ್ರ ಸರ್ಕಾರ ಅನುಮೋದನೆ ನೀಡಿದರೆ, ಈ ಐವರನ್ನು ಹೆಚ್ಚುವರಿ ನ್ಯಾಯಮೂರ್ತಿಗಳ ಹುದ್ದೆಗೆ ನೇಮಕ ಮಾಡಿ ರಾಷ್ಟ್ರಪತಿ ಕಚೇರಿ ಆದೇಶ ಹೊರಡಿಸಲಿದೆ.

ಹೈಕೋರ್ಟ್ ಕೊಲಿಜಿಯಂ ಅಂತಿಮಗೊಳಿಸಿದ್ದ ಹತ್ತು ವಕೀಲರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮ್ಮತಿ ಇರಲಿಲ್ಲ. ರಾಜ್ಯಪಾಲರು, ಯಾರ ಹೆಸರನ್ನೂ ಪ್ರಸ್ತಾಪಿಸದೆ ಕೆಲವರ ಅರ್ಹತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.

‘ಆಯ್ಕೆಯಲ್ಲಿ ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ಸಿಕ್ಕಿಲ್ಲ’ ಎಂದು ವಕೀಲರ ಸಂಘ, ಸಂಸ್ಥೆಗಳು ತಕರಾರು ಎತ್ತಿದ್ದವು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದವು.

ರಾಜ್ಯಪಾಲರ ಅಭಿಪ್ರಾಯವನ್ನು ಪರಿಗಣಿಸಿರುವ ಕೊಲಿಜಿಯಂ, ಅಭ್ಯರ್ಥಿಗಳ ಹಿನ್ನೆಲೆ, ಯೋಗ್ಯತೆ, ನಡತೆ, ಕಾರ್ಯಕ್ಷಮತೆ ಮಾನದಂಡಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವಷ್ಟೇ ನೇಮಕಾತಿ ಮಾಡಲಾಗುವುದು ಎಂದು ಹೇಳಿದೆ.

ಅಭ್ಯರ್ಥಿಗಳ ಹಿನ್ನೆಲೆಯ ಬಗ್ಗೆ ಗುಪ್ತಚರ ಇಲಾಖೆ ವರದಿಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕರ್ನಾಟಕ ಹೈಕೋರ್ಟ್ ವಿದ್ಯಮಾನಗಳ ಬಗ್ಗೆ ನಿಕಟ ಮಾಹಿತಿ ಹೊಂದಿರುವ ನ್ಯಾಯಮುರ್ತಿಗಳಿಂದಲೂ ಮಾಹಿತಿ ಕಲೆ ಹಾಕಲಾಗುತ್ತದೆ.

* ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ನರೇಂದ್ರ ಜಿ ಅವರನ್ನು ಕಾಯಂ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೊಲಿಜಿಯಂ ಶಿಫಾರಸು ಮಾಡಿದೆ.

ಶಿಫಾರಸುಗೊಂಡ ಐವರು ವಕೀಲರುದೀಕ್ಷಿತ್‌ ಕೃಷ್ಣ ಶ್ರೀಪಾದ್‌

ಶಂಕರ್‌ ಗಣಪತಿ ಪಂಡಿತ್‌

ರಾಮಕೃಷ್ಣ ದೇವದಾಸ್‌

ಭೂತನಹೊಸೂರು ಮಲ್ಲಿಕಾರ್ಜುನ ಶ್ಯಾಮಪ್ರಸಾದ್‌

ಸಿದ್ಧಪ್ಪ ಸುನೀಲ್‌ ದತ್‌ ಯಾದವ್‌

 

ಮರುಪರಿಶೀಲನೆಗೆ ಕಳಿಸಿದ ಹೆಸರು

ಗುರುದಾಸ್‌ ಶ್ಯಾಮರಾವ್‌ ಕಣ್ಣೂರು

ಕೂಳೂರು ಅರವಿಂದ್‌ ಕಾಮತ್‌

ಕಾನಕಟ್ಟೆ ನಾರಾಯಣ (ಕೆ.ಎನ್‌.) ಫಣೀಂದ್ರ

ಮಹೇಶನ್‌ ನಾಗಪ್ರಸನ್ನ

 

ತಿರಸ್ಕೃತಗೊಂಡ ಹೆಸರು

ಕಾಸರವಳ್ಳಿ ಚೈತನ್ಯ ಕೇಶವಮೂರ್ತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.