ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕೈಗಾರಿಕೆಯಂತೆ ಅಭಿವೃದ್ಧಿಯಾಗಲಿ

Last Updated 10 ಡಿಸೆಂಬರ್ 2017, 6:33 IST
ಅಕ್ಷರ ಗಾತ್ರ

ರಾಯಚೂರು: ಕೃಷಿಯನ್ನು ನಂಬಿಕೊಂಡು ಜೀವನ ಮಾಡುವ ಪರಿಸ್ಥಿತಿ ಸದ್ಯಕ್ಕಿಲ್ಲ. ಕೃಷಿಯನ್ನು ಕೈಗಾರಿಕೆಯಂತೆ ಅಭಿವೃದ್ಧಿ ಮಾಡಬೇಕು ಎಂದು ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಿದ ನಾಲ್ಕು ದಿನಗಳ ಕೃಷಿ ಮೇಳದ ಎರಡನೇ ದಿನ ಶನಿವಾರ ಏರ್ಪಡಿಸಿದ್ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕೃಷಿಯೊಂದಿಗೆ ಉಪಕಸುಬುಗಳನ್ನು ರೈತರು ಮಾಡಲೇಬೇಕು. ಈ ನಿಟ್ಟಿನಲ್ಲಿ ಕೃಷಿ ಮೇಳಗಳು ರೈತರಿಗೆ ಉತ್ಸಾಹ ಮತ್ತು ಪ್ರೋತ್ಸಾಹ ನೀಡುತ್ತಿವೆ. ಹೊಸ ಹೊಸ ಕೃಷಿ ಪದ್ಧತಿಗಳನ್ನು ರೈತರಿಗೆ ಮನವರಿಕೆ ಮಾಡಬೇಕು. ಕೃಷಿ ಯೊಂದಿಗೆ ಮಾಡಬಹುದಾದ ಕೆಲಸ ಗಳನ್ನು ತಿಳಿಸಬೇಕು ಎಂದರು.

ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ರೈತರಿಗೆ ಅನುಕೂಲ ಮಾಡಿಕೊಡಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಅಧಿಕಾರಿಗಳು ರೈತರಿಗೆ ಸ್ಪಂದಿಸುವ ಕೆಲಸವಾಗಬೇಕು ಎಂದರು.

ಹಿಂದಿನ ಕಾಲದಲ್ಲಿ ಜನಸಾಮಾನ್ಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದರು. ಹೀಗಾಗಿ ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸುತ್ತಿದ್ದರು. ಆಧುನಿಕ ಜೀವನ ಶೈಲಿಯಿಂದಾಗಿ ಇಂದಿನ ಆಹಾರ ಪದ್ಧತಿಯು ವಿಷಯುಕ್ತವಾಗಿದ್ದು, ಸಿರಿ ಧಾನ್ಯಗಳತ್ತ ಮತ್ತೆ ಮರಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಸಿರಿಧಾನ್ಯಗಳನ್ನು ಬಳಸುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಚಿಂತನೆ ಜನರಲ್ಲಿ ಈಗ ಶುರು ವಾಗಿದೆ. ಕ್ರಮೇಣ ಅವುಗಳ ಬಳಕೆ ಮಾಡಲಾರಂಭಿಸಿದ್ದಾರೆ. ಸಿರಿ ಧಾನ್ಯ ಗಳನ್ನು ಮೊದಲು ಬಡವರು ಹೆಚ್ಚಾಗಿ ಬಳಸುತ್ತಿದ್ದರು. ಈಗ ಬಡವರು ಖರೀ ದಿಸಲು ಸಾಧ್ಯವಿಲ್ಲದ ದರಕ್ಕೆ ಮಾರಾಟ ಆಗುತ್ತಿವೆ ಎಂದು ಹೇಳಿದರು.

ಕಾಡಾ ಅಧ್ಯಕ್ಷ ಹಂಪಯ್ಯ ನಾಯಕ, ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು ಮಾತನಾಡಿದರು. ಸಂಶೋಧನಾ ನಿರ್ದೇಶಕ ಡಾ. ಐ. ಶಂಕರಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಜ್ಯೋತ್ಸವ ಪ್ರಶಸ್ತಿಗೆ ಭಾಜರಾದ ಜಾನಪದ ಗಾಯಕಿ ದುರ್ಗಮ್ಮ ಕರಡಿಗುಡ್ಡ, ಜಾನಪದ ಕಲಾವಿದೆ ಶಾವಮ್ಮ ರಾಠೋಡ, ಪತ್ರಕರ್ತ ವಿಟ್ಲಪ್ಪ ಗೋರಂಟ್ಲಿ ಅವರನ್ನು ಸನ್ಮಾನಿಸಲಾಯಿತು.

ವಿಶ್ರಾಂತ ಕುಲಪತಿ ಡಾ.ಎಸ್‌.ಎ.ಪಾಟೀಲ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್‌.ಬಿ. ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಪಾಟೀಲ ಇಟಗಿ, ರಾಯಚೂರು ಎಪಿಎಂಸಿ ಅಧ್ಯಕ್ಷ ಅಮರೇಗೌಡ ಹಂಚಿನಾಳ, ರಾಯಚೂರು ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಅಬ್ದುಲ್ ಕರೀಂ, ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಹೇಮಾವತಿ ಲಂಕೇಶ, ಸಿದ್ದಪ್ಪ ಭಂಡಾರಿ, ಡಾ.ಎಂ. ಶೇಖರಗೌಡ, ವೀರನಗೌಡ ಪರಸರೆಡ್ಡಿ ಇದ್ದರು. ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಂ. ಸಾಲಿಮಠ ಸ್ವಾಗತಿಸಿದರು. ವಿಸ್ತರಣಾ ಅಧಿಕಾರಿ ಡಾ.ಎಸ್‌.ಕೆ.ಮೇಟಿ ವಂದಿಸಿದರು. ಪ್ರಾಧ್ಯಾಪಕ ಡಾ.ಆರ್‌. ಲೋಕೇಶ್‌ ನಿರೂಪಿಸಿದರು.

ಮಳಿಗೆದಾರರ ಅಸಮಾಧಾನ

ಕಳೆದ ವರ್ಷ ಒಂದು ಮಳಿಗೆ ಬಾಡಿಗೆ ₹5.5 ಸಾವಿರ ಇತ್ತು. ಈ ವರ್ಷ ₹9.5 ಸಾವಿರಕ್ಕೆ ಬಾಡಿಗೆ ಹೆಚ್ಚಿಸಿದ್ದಾರೆ. ಆದರೆ ಮಳಿಗೆದಾರರಿಗೆ ಸಮರ್ಪಕ ಶೌಚಾಲಯ, ರಾತ್ರಿ ಬೀದಿ ದೀಪಗಳ ವ್ಯವಸ್ಥೆಗಳಿಲ್ಲ. ಊಟದ ವ್ಯವಸ್ಥೆಯೂ ಸರಿಯಾಗಿಲ್ಲ. ಮೊಬೈಲ್‌ ಚಾರ್ಜ್‌ ಮಾಡಿಕೊಳ್ಳುವುದು ಸಂಕಷ್ಟವಾಗುತ್ತಿದೆ ಎಂದು
ಮಳಿಗೆ ಪಡೆದ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡು ಬಂತು.

‘ಹೊರಗಿನಿಂದ ಬಂದಿರುವ ವ್ಯಾಪಾರಿಗಳಿಂದ ಸಾಕಷ್ಟು ಬಾಡಿಗೆ ವಸೂಲಿ ಮಾಡಿಕೊಂಡಿದ್ದರೂ ಸೂಕ್ತ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಕೃಷಿ ಮೇಳವನ್ನು ಕಾಟಾಚಾರಕ್ಕೆ ಮಾಡಲಾಗುತ್ತಿದೆ. ಇದು ಖಂಡನೀಯ’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾ ಅಧ್ಯಕ್ಷ ಅಶೋಕ ಜೈನ್‌ ಅವರು ತಮ್ಮ ಕಾರ್ಯಕರ್ತರೊಂದಿಗೆ ಉದ್ಘಾಟನಾ ಸಮಾರಂಭ ನಡೆಯುತ್ತಿರುವಾಗಲೆ ಏರುದನಿಯಲ್ಲಿ ಆಕ್ಷೇಪಿಸಿದರು. ವೇದಿಕೆಯ ಮೇಲಿದ್ದವರು ಅಚ್ಚರಿಗೊಂಡು ಆಸಮಾಧಾನದ ಮಾತು ಕೇಳಿಸಿಕೊಂಡರು. ಆದರೆ, ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಮೇಳದಲ್ಲಿ ಇಂದು

ಕೃಷಿ ಮೇಳದ ಮೂರನೇ ದಿನ ಭಾನುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೂ ರೈತರಿಂದ ರೈತರಿಗಾಗಿ ಕಾರ್ಯಕ್ರಮ. ಕಲಬುರ್ಗಿ ಜಿಲ್ಲೆಯ ರೈತರು ತಮ್ಮ ಅನುಭವವನ್ನು ಹಂಚಿಕೊಳ್ಳುವರು. ಮಧ್ಯಾಹ್ನ 2 ರಂದ ಸಂಜೆ 5 ಗಂಟೆವರೆಗೂ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲೆಯ ರೈತರು ಅನುಭವ ಹಂಚಿಕೊಳ್ಳುವರು. ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಸಂಗೀತ ಕಾರ್ಯಕ್ರಮ. ಮುಖ್ಯ ವೇದಿಕೆಯಲ್ಲಿ ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಸದಾನಂದ ತಬಲ, ಆಕಾಶದೀಪ ಗಿಟಾರ್‌, ಜುಗಲಬಂದಿ ಹಾಗೂ ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಯುವುದು. ರಾತ್ರಿ 5.30 ರಿಂದ ಸ್ಫೂರ್ತಿ ಮತ್ತು ಜಲ್ಸಾ ತಂಡಗಳಿಂದ ನೃತ್ಯ ಪ್ರದರ್ಶನ ಹಾಗೂ ಜುನಿಯರ್‌ ಮೊಹ್ಮದ್‌ ರಫಿ ಅವರಿಂದ ಹಾಡುಗಳು.

* * 

ಕೃಷಿಯಲ್ಲಿ ವಿಶ್ವವಿದ್ಯಾಲಯವು ಅನೇಕ ಪ್ರಯೋಗಗಳನ್ನು ಮಾಡಿ, ರೈತರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಈ ಭಾಗದ ರೈತರು ಸಾಧನೆ ಮಾಡುತ್ತಿದ್ದಾರೆ
ಎನ್‌.ಎಸ್‌.ಬೋಸರಾಜು
ವಿಧಾನ ಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT