ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧರ ಕ್ರಿಕೆಟ್‌ ‘ವಿಶ್ವ’ ಗೆಲ್ಲುವ ತವಕ

Last Updated 10 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನಿರಂತರ ಮೂರು ವಿಶ್ವಕಪ್ ಕಿರೀಟಗಳು ಮುಡಿಗೇರಿವೆ. ಈಗ ನಾಲ್ಕನೇ ಪ್ರಶಸ್ತಿಯ ಕನಸು. ಅದನ್ನು ಸಾಕಾರ ಮಾಡಲು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ನಿರಂತರ ಪ್ರಯತ್ನ. ಅಂಧರ ಕ್ರಿಕೆಟ್‌ನಲ್ಲಿ ಕೆಲವು ವರ್ಷಗಳಿಂದ ಹೆಸರು ಮಾಡುತ್ತಿರುವ ಭಾರತ ತಂಡ ಈಗ ಮತ್ತೊಂದು ಸವಾಲಿಗೆ ಸಜ್ಜಾಗುತ್ತಿದೆ.

ಜನವರಿಯಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ ಟೂರ್ನಿಯಲ್ಲಿ ಬಲಿಷ್ಠ ಎದುರಾಳಿಗಳನ್ನು ಮಣಿಸುವ ಧ್ಯೇಯದೊಂದಿಗೆ ತಂಡ ಉದ್ಯಾನ ನಗರಿಯ ಗೋಪಾಲ್ ಶಾಲೆ ಆವರಣದಲ್ಲಿ ತಯಾರಿ ನಡೆಸುತ್ತಿದೆ.

2012ರಲ್ಲಿ ನಡೆದ ಅಂಧರ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಗೆದ್ದು ಬೀಗಿದ್ದ ಭಾರತ ತಂಡ 2014ರಲ್ಲಿ ನಡೆದ 50 ಓವರ್‌ಗಳ ವಿಶ್ವಕಪ್‌ ಪ್ರಶಸ್ತಿಯನ್ನೂ ಎತ್ತಿ ಹಿಡಿದಿತ್ತು.  ಈ ವರ್ಷದ ಆರಂಭದಲ್ಲಿ ಬೆಂಗಳೂರಿನಲ್ಲಿ ನಡೆದ ಟ್ವೆಂಟಿ–20 ವಿಶ್ವಕಪ್‌ನಲ್ಲೂ ಚಾಂ‍ಪಿಯನ್‌ ಆಗಿತ್ತು. ಈ ಮೂರೂ ಟೂರ್ನಿಗಳ ಫೈನಲ್‌ನಲ್ಲಿ ತಂಡದ ಎದುರಾಳಿ ಪಾಕಿಸ್ತಾನವೇ ಆಗಿತ್ತು.

2018ರ ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಆತಿಥ್ಯ ವಹಿಸುತ್ತಿರುವುದು ಕೂಡ ಪಾಕಿಸ್ತಾನ. ಶೇಖರ್‌ ನಾಯಕ್ ನಂತರ ಭಾರತ ಅಂಧರ ಕ್ರಿಕೆಟ್‌ನಲ್ಲಿ ಹೆಸರು ಮಾಡುತ್ತಿರುವ ಆಂಧ್ರಪ್ರದೇಶದ ಅಜಯ್‌ ಕುಮಾರ್ ರೆಡ್ಡಿ ಈಗ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಟ್ವೆಂಟಿ–20 ವಿಶ್ವಕಪ್‌ನಲ್ಲಿ ತಂಡದ ನಾಯಕತ್ವ ವಹಿಸಿ ಯಶಸ್ಸಿನ ಉತ್ತುಂಗಕ್ಕೇರಿಸಿದ ಅವರಿಗೆ ಇದು ಇನ್ನೊಂದು ಸವಾಲು. ವಿಶ್ವದ ಬಲಿಷ್ಠ ಆಟಗಾರರನ್ನು ಹೊಂದಿರುವ ತಂಡ ಪ್ರಶಸ್ತಿ ಗೆಲ್ಲುವುದು ಖಚಿತ ಎಂಬುದು ಅವರ ಭರವಸೆಯ ಮಾತು. 50 ಓವರ್‌ಗಳ ವಿಶ್ವಕಪ್‌ ಫೈನಲ್‌ನಲ್ಲಿ ಐದು ವಿಕೆಟ್‌ಗಳ ಜಯ ಗಳಿಸಿದ್ದ ಭಾರತ ಈ ಬಾರಿಯ ಟ್ವೆಂಟಿ–20 ಫೈನಲ್‌ನಲ್ಲಿ ಒಂಬತ್ತು ವಿಕೆಟ್‌ಗಳಿಂದ ಗೆದ್ದಿತ್ತು. 2012ರ ಟ್ವೆಂಟಿ–20 ವಿಶ್ವಕಪ್‌ನ ಫೈನಲ್‌ನಲ್ಲಿ 29 ರನ್‌ಗಳಿಂದ ಗೆದ್ದಿತ್ತು. ಈ ವರ್ಷ ನಡೆದ ವಿಶ್ವಕಪ್‌ನಲ್ಲಿ ಮಿಂಚಿದ ಆಟಗಾರರು ಈಗಲೂ ತಂಡದಲ್ಲಿದ್ದಾರೆ. ಇದುವೇ ನಾಯಕನ ವಿಶ್ವಾಸಕ್ಕೆ ಕಾರಣ.

ಹಿರಿಯರ ಮಾರ್ಗದರ್ಶನ; ಅನುಭವಿಗಳ ಪ್ರೇರಣೆ
ವಿಶ್ವಕಪ್‌ಗೆ ಸಜ್ಜಾಗುತ್ತಿರುವ ಅಂಧ ಕ್ರಿಕೆಟಿಗರಿಗೆ ಕ್ರಿಕೆಟ್ ಕೌಶಲಗಳನ್ನು ಬೆಳೆಸಿಕೊಳ್ಳುವ ಕಲೆಯನ್ನು ಹೇಳಿಕೊಡುವುದರ ಜೊತೆಯಲ್ಲಿ ವಿವಿಧ ರೀತಿಯ ತರಬೇತಿಗಳನ್ನು ನೀಡುವುದಕ್ಕೂ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ (ಕ್ಯಾಬಿ) ಮುಂದಾಗಿದೆ. ಸಮರ್ಥನಂ ಟ್ರಸ್ಟ್‌ ಇದಕ್ಕೆ ಬೆಂಬಲವಾಗಿ ನಿಂತಿದೆ.

‘ಜಾನ್ ಡೇವಿಡ್ ಮತ್ತು ಪ್ಯಾಟ್ರಿಕ್‌ ಅವರ ನೇತೃತ್ವದಲ್ಲಿ ನಡೆಯುವ ತರಬೇತಿಯಲ್ಲಿ ಕ್ರಿಕೆಟ್ ತಂತ್ರಗಳ ಜೊತೆ ಸಾಂಘಿಕ ಪ್ರಯತ್ನ ನಡೆಸುವ ಕಲೆ, ಆಹಾರ ಕ್ರಮ, ಮಾನಸಿಕ ಸ್ಥೈರ್ಯ ತುಂಬುವ ಕಾರ್ಯವನ್ನೂ ಮಾಡಲಾಗುವುದು’ ಎಂದು ಶಿಬಿರದ ಉಸ್ತುವಾರಿ ಗಾಯತ್ರಿ ತಿಳಿಸಿದರು.

‘ನೆಟ್ ಅಭ್ಯಾಸದ ಜೊತೆ ಫಿಟ್‌ನೆಸ್‌ ತರಬೇತಿ, ಯೋಗ, ಧ್ಯಾನ ಮುಂತಾದವುಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಹಿರಿಯ ಕ್ರಿಕೆಟಿಗರು ಶಿಬಿರಕ್ಕೆ ಭೇಟಿ ನೀಡಿ ಆಟಗಾರರಿಗೆ ಸ್ಥೈರ್ಯ ತುಂಬುವ ಕಾರ್ಯ ಮಾಡಲಿದ್ದಾರೆ’ ಎಂದು ಅವರು ವಿವರಿಸಿದರು.

ದಶಕಗಳ ಇತಿಹಾಸ
ಅಂಧರ ಕ್ರಿಕೆಟ್‌ಗೆ ಒಂಬತ್ತು ದಶಕಗಳ ಇತಿಹಾಸವಿದೆ. 1922ರಲ್ಲಿ ಆಸ್ಟ್ರೇಲಿಯಾದ ಇಬ್ಬರು ಅಂಧ ಕಾರ್ಮಿಕರು ಇದರ ಹಿಂದಿರುವ ಶಕ್ತಿ. ಅದೇ ವರ್ಷ ವಿಕ್ಟೋರಿಯನ್ ಅಂಧ ಕ್ರಿಕೆಟ್‌ ಸಂಸ್ಥೆ ರೂಪುಗೊಂಡಿತು. 2000ನೇ ಇಸವಿಯಲ್ಲಿ ಅಂಧರ ಮೊತ್ತ ಮೊದಲ ಟೆಸ್ಟ್ ಪಂದ್ಯ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಿತು. ಪಾಕಿಸ್ತಾನ ಗೆದ್ದಿತು. ಮೊತ್ತಮೊದಲ ವಿಶ್ವಕಪ್‌ 1998ರಲ್ಲಿ ನಡೆಯಿತು. 2004ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ನಡುವೆ ಐದು ಪಂದ್ಯಗಳ ‘ಆ್ಯಷಸ್‌’ ಸರಣಿಯೂ ನಡೆದಿತ್ತು.

ಅಂಧ ಕ್ರಿಕೆಟ್‌ನಲ್ಲಿ ಆಟಗಾರರನ್ನು ಮೂರು ವಿಧದಲ್ಲಿ ವಿಂಗಡಿಸಲಾಗುತ್ತದೆ. ಪೂರ್ಣ ಅಂಧತ್ವ ಇರುವವರನ್ನು ಬಿ–1 ಎಂದೂ ಭಾಗಶ: ಅಂಧತ್ವ ಇರುವವರನ್ನು ಬಿ–2 ಎಂದೂ ಹೆಚ್ಚೇನೂ ದೃಷ್ಟಿದೋಷ ಇಲ್ಲದವರನ್ನು ಬಿ–3 ಎಂದೂ ಬೇರ್ಪಡಿಸಲಾಗುತ್ತದೆ. ಚೆಂಡಿನ ಒಳಗೆ ಗೆಜ್ಜೆಯಂತೆ ಸದ್ದು ಮಾಡುವ ವಸ್ತು ಹಾಕಿರುತ್ತಾರೆ. ಶಬ್ದವನ್ನು ಗ್ರಹಿಸಿ ಆಟವಾಡಲಾಗುತ್ತದೆ.

ಅಂಧರ ವಿಶ್ವಕಪ್‌ ಮಾಹಿತಿ
ವರ್ಷ, ದೇಶ, ಚಾಂಪಿಯನ್‌, ರನ್ನರ್‌ ಅಪ್‌, ಭಾರತದ ಸ್ಥಾನ
1998, ಭಾರತ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಸೆಮಿಫೈನಲ್‌
2002, ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಲೀಗ್ ಹಂತ
2006, ಪಾಕಿಸ್ತಾನ, ಪಾಕಿಸ್ತಾನ, ಭಾರತ, ರನ್ನರ್‌ ಅಪ್‌
2014, ದಕ್ಷಿಣ ಆಫ್ರಿಕಾ, ಭಾರತ, ಪಾಕಿಸ್ತಾನ, ಚಾಂಪಿಯನ್‌

ಅಂಧರ ಟ್ವೆಂಟಿ–20 ವಿಶ್ವಕಪ್‌ ವಿವರ
ವರ್ಷ, ದೇಶ, ಚಾಂಪಿಯನ್‌, ರನ್ನರ್‌ ಅಪ್‌
2012, ಭಾರತ, ಭಾರತ, ಪಾಕಿಸ್ತಾನ
2017, ಭಾರತ, ಭಾರತ, ಪಾಕಿಸ್ತಾನ

ಅಂಧರ ವಿಶ್ವಕಪ್‌
ಸ್ಥಳ : ಪಾಕಿಸ್ತಾನ ಮತ್ತು ದುಬೈ
ದಿನಾಂಕ : ಜನವರಿ 7ರಿಂದ 21
ಪಾಲ್ಗೊಳ್ಳುವ ತಂಡಗಳು
ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ

ಭಾರತ ತಂಡದ ಆಟಗಾರರ ವಿವರ
ಬಿ–ಒನ್ ವಿಭಾಗ: ಮಹಮ್ಮದ್ ಜಾಫರ್ ಇಕ್ಬಾಲ್‌, ನರೇಶ್‌ಭಾಯ್‌ ತುಮ್ಡಾ, ಮಹೇಂದರ್‌ ವೈಷ್ಣವ್‌, ಸೋನು ಗೋಲ್ಕರ್‌, ಪ್ರೇಮ್‌ ಕುಮಾರ್‌, ಬಸಪ್ಪ ವಾಡಗೋಳ
ಬಿ–ಟು ವಿಭಾಗ: ಅಜಯ್‌್ ಕುಮಾರ್ ರೆಡ್ಡಿ (ನಾಯಕ), ವೆಂಕಟೇಶ್ವರ ರಾವ್‌, ಗಣೇಶ್‌ಭಾಯ್‌ ಮುಹುಡ್ಕರ್‌, ಸುರ್ಜಿತ್ ಘರ, ಅನಿಲ್ ಭಾಯ್‌ ಗರಿಯ.
ಬಿ–ತ್ರಿ ವಿಭಾಗ:  ಪ್ರಕಾಶ್ ಜಯರಾಮಯ್ಯ, ದೀಪಕ್ ಮಲಿಕ್‌, ಸುನಿಲ್ ರಮೇಶ್‌, ದುರ್ಗಾರಾವ್‌, ಪಂಕಜ್‌ ಭೂಯೆ, ರಾಂಬೀರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT