ಸೋಮವಾರ, ಮಾರ್ಚ್ 1, 2021
31 °C

ಉದ್ಘಾಟನೆಗೆ ಕೂಡಿಬರದ ಮುಹೂರ್ತ

ಎಚ್‌.ಸಿ.ಅನಂತರಾಮು Updated:

ಅಕ್ಷರ ಗಾತ್ರ : | |

ಉದ್ಘಾಟನೆಗೆ ಕೂಡಿಬರದ ಮುಹೂರ್ತ

ಶಿರಾ: ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ಕನ್ನಡ ಸಾಂಸ್ಕೃತಿಕ ಭವನದ ಕಟ್ಟಡ ನಿರ್ಮಾಣವಾಗಿ 3 ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾಗಿರುವ ಶಿರಾ ತಾಲ್ಲೂಕು ಶಾಶ್ವತ ಬರಪೀಡಿತ ಎನ್ನುವ ಹಣೆ ಪಟ್ಟಿ ಹೊಂದಿದೆ. ಆದರೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ.

ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ₹ 35 ಲಕ್ಷ ವೆಚ್ಚದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲಾಗಿದೆ. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಹಾಗೂ ನಿರ್ಲಕ್ಷ್ಯದ ಕಾರಣ ಇನ್ನೂ ಉದ್ಘಾಟನೆಯಾಗಿಲ್ಲ.

ಗ್ರಾಮದ ಈಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅನುದಾನ ಬಿಡುಗಡೆ, ಬಾಲಕಿಯರ ವಿದ್ಯಾರ್ಥಿ ನಿಲಯದ ನಿರ್ಮಾಣ, ಸರ್ಕಾರಿ ಅಸ್ಪತ್ರೆಯ ನೂತನ ಕಟ್ಟಡದ ನಿರ್ಮಾಣಕ್ಕೆ ಗ್ರಾಮದವರೇ ಆದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ನೀಡಿದ ಕೊಡುಗೆ ಮಹತ್ವದ್ದು. ಅದೇ ರೀತಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಹ ರಾಮಚಂದ್ರಪ್ಪ ಅವರೇ ಕಾರಣೀಭೂತರು. 

ಹಾರೋಗೆರೆ ಗ್ರಾಮಕ್ಕೆ ಭವನ ಮಂಜೂರಾಗಿತ್ತು. ಆದರೆ ಅಲ್ಲಿ ಜಾಗ ಗುರುತಿಸಲು ಅಧಿಕಾರಿಗಳು ವಿಫಲವಾದ ಕಾರಣ ಅನುದಾನ ವಾಪಸ್ ಹೋಗುವಂತಾಯಿತು. ಈ ಸಮಯದಲ್ಲಿ ರಾಮಚಂದ್ರಪ್ಪ ಅವರು ಭವನವನ್ನು ತಮ್ಮ ಗ್ರಾಮದಲ್ಲಿ ನಿರ್ಮಿಸುವಂತೆ ಮಾಡಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ 2013ರಲ್ಲಿ ಶಂಕುಸ್ಥಾಪನೆ ನೆರವೇರಿತು. ಅದೇ ವರ್ಷ ಕಾಮಗಾರಿ ಪೂರ್ಣವಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರ ಕ್ಷೇತ್ರದಲ್ಲೇ ಕನ್ನಡ ಸಾಂಸ್ಕೃತಿಕ ಭವನ ಉದ್ಘಾಟನೆಯಾಗಿಲ್ಲ. ಗಡಿ ಭಾಗದಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕವಾಗಬೇಕಿದ್ದ ಭವನ ಇಂದು ಉದ್ಘಾಟನೆಯೇ ಆಗಿಲ್ಲ.

ತಾಲ್ಲೂಕಿನಲ್ಲಿ ಜನಪದ ಕಲೆಗಳು ಮತ್ತು ಕನ್ನಡ ಭಾಷೆಯ ಬೆಳವಣಿಗೆಗೆ ಯೋಜನೆ ರೂಪಿಸಲು ತಾಲ್ಲೂಕು ಆಡಳಿತ ವಿಫಲವಾಗಿದೆ. ಭವನ ಉದ್ಘಾಟನೆಗೆ ಸಾರ್ವಜನಿಕರಿಂದ ಒತ್ತಡ ಬಂದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಧಿಕಾರಿಗಳಿಗೆ ಭವನ ಉದ್ಘಾಟನೆಯಾಗಿಲ್ಲ ಎನ್ನುವ ವಿಚಾರವೇ ತಿಳಿದಿಲ್ಲ. ಈಗಲಾದರೂ ತಾಲ್ಲೂಕು ಆಡಳಿತ ಎಚ್ಚೆತ್ತು  ಭವನ ಉದ್ಘಾಟಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸುವರು.

‘ಹುಟ್ಟೂರಿನ ಮೇಲಿನ ಪ್ರೀತಿಯಿಂದ ರಾಮಚಂದ್ರಪ್ಪ ಸಾಂಸ್ಕೃತಿಕ ಭವನ ಮಂಜೂರು ಮಾಡಿಸಿದರು. ಆದರೆ ಉದ್ಘಾಟನೆಗೆ  ನಿರ್ಲಕ್ಷ್ಯ ತೋರಲಾಗಿದೆ. ಈಗಲಾದರೂ ಎಚ್ಚೆತ್ತು ಕಟ್ಟಡವನ್ನು ಉದ್ಘಾಟಿಸಬೇಕು’ ಎಂದು ಉಪನ್ಯಾಸಕ ಓಂಕಾರಪ್ಪ ಆಗ್ರಹಿಸುವರು.

‘ಈ ವಿಷಯವನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ತಾಲ್ಲೂಕು ಆಡಳಿತದ ಈ ನಡೆ ಒಂದು ರೀತಿಯಲ್ಲಿ ರಾಮಚಂದ್ರಪ್ಪ ಅವರಿಗೆ ಮಾಡಿದ ಅವಮಾನ’ ಎಂದು ಗ್ರಾಮಸ್ಥ ಪ್ರಸನ್ನಕುಮಾರ್ ತಿಳಿಸಿದರು.

ಉದ್ಘಾಟನೆಗೆ ಯಾರನ್ನೂ ಕಾಯುವುದು ಬೇಡ

‘ನಾನು ಪಿಯುಸಿಯಲ್ಲಿ ಇದ್ದಾಗಲೇ ಗೆಳೆಯರ ಜತೆ ಸೇರಿ ಕನ್ನಡ ಸಂಘವನ್ನು ಕಟ್ಟಿದ್ದೆ. ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತಿದ್ದೆವು. ವಾಚನಾಲಯ ನಡೆಸುತ್ತಿದ್ದೆವು. ಈ ಹೆಸರಿನಲ್ಲಿಯೇ ಊರಿನಲ್ಲಿ ಸಾಂಸ್ಕೃತಿಕ ಭನವ ಅಗತ್ಯವಾಗಿದೆ ಎನಿಸಿತು’ ಎಂದು ಹೇಳುವರು ಬರಗೂರು ರಾಮಚಂದ್ರಪ್ಪ.

‘ಈ ಹಿಂದಿನ ಸರ್ಕಾರ ಇದ್ದಾಗ ಗಡಿನಾಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದೆ. ₹ 35 ಲಕ್ಷ ಮಂಜೂರು ಆಯಿತು. ಶಂಕುಸ್ಥಾಪನೆ ದಿನ ಜಿಲ್ಲಾ ಉಸ್ತುವಾರಿ ಸಚಿವರಿಗಾಗಿಯೇ ಮುಕ್ಕಾಲು ಗಂಟೆ ಕಾದಿದ್ದೆ. ಆದ್ದರಿಂದ ಉದ್ಘಾಟನೆಗೆ ಸಚಿವರ ಸಮಯವನ್ನು ಕೇಳಿ. ಒಂದು ವೇಳೆ ನನ್ನ ಉಪಸ್ಥಿತಿ ಇಲ್ಲದಿದ್ದರೂ ಉದ್ಘಾಟನೆ ಆಗಲಿ. ಉದ್ಘಾಟನೆಗಾಗಿ ಯಾರನ್ನೂ ಕಾಯುವುದು ಬೇಡ’ ಎನ್ನುವುದು ನನ್ನ ಅಭಿಪ್ರಾಯ. ‘ನನ್ನ ಹುಟ್ಟಿದ ಊರಿನ ಬಗ್ಗೆ ನನಗೆ ಎಂದೆಂದಿಗೂ ಅಳಿಯದ ಅಭಿಮಾನ ಇದೆ’ ಎಂದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.