ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ದನಗಳ ಜಾತ್ರೆಗೆ ಚಾಲನೆ

Last Updated 12 ಡಿಸೆಂಬರ್ 2017, 10:07 IST
ಅಕ್ಷರ ಗಾತ್ರ

ಹಾಸನ: ನಗರದ ಸಂತೆಪೇಟೆ ನಗರಸಭೆ ಮೈದಾನದಲ್ಲಿ 10 ದಿನ ನಡೆಯುವ ಐತಿಹಾಸಿಕ ದನಗಳ ಜಾತ್ರೆಗೆ ಶಾಸಕ ಎಚ್.ಎಸ್‌. ಪ್ರಕಾಶ್‌ ಸೋಮವಾರ ಚಾಲನೆ ನೀಡಿದರು.

ಜಾತ್ರೆ ಪ್ರಯುಕ್ತ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ರಾಸುಗಳ ಮೆರವಣಿಗೆ ನಡೆಯಿತು. ವಿವಿಧ ತಳಿಯ ದನಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಮೆರವಣಿಗೆ ಎನ್.ಆರ್. ವೃತ್ತ, ಬಿ.ಎಂ.ರಸ್ತೆಯಲ್ಲಿ ಸಾಗಿ ದನಗಳ ಜಾತ್ರೆ ನಡೆಯುವ ಸಂತೆಪೇಟೆಯ ನಗರಸಭೆ ಮೈದಾನದಲ್ಲಿ ಅಂತ್ಯಗೊಂಡಿತು.

ಜೋಡಿ ಎತ್ತುಗಳು, ಎತ್ತಿನಗಾಡಿ, ನಂದಿಧ್ವಜ ಹಾಗೂ ವಿವಿಧ ಜಾನಪದ ಕಲಾತಂಡಗಳು ಗಮನಸೆಳೆದವು. 1990ರಲ್ಲಿ ಹಾಸನ ದನಗಳ ಜಾತ್ರೆ ನಿಂತು ಹೋಗಿತ್ತು. ಆದರೆ, ನಗರಸಭೆ ವತಿಯಿಂದ ವೈಭವದಿಂದ ಕಳೆದ ವರ್ಷದಿಂದ ಮತ್ತೆ ಜಾತ್ರೆ ಆರಂಭವಾಗಿದೆ. ಇದರಿಂದಾಗಿ ರೈತರು ಸಂತಸಗೊಂಡಿದ್ದಾರೆ.

ಜಿಲ್ಲೆಯಲ್ಲದೇ ಹೊರ ಜಿಲ್ಲೆಗಳ ರೈತರು ತಮ್ಮ ಒಡನಾಡಿಗಳಾದ ಲಕ್ಷಾಂತರ ರೂ. ಮೌಲ್ಯದ ಸುಂದರ, ಸದೃಢ ಮೈಕಟ್ಟಿನ ಜೋಡಿ ಎತ್ತುಗಳನ್ನು ನಗರಸಭೆ ಹಿಂಭಾಗದಲ್ಲಿ ಇರುವ ವಿಶಾಲ ಮೈದಾನದಲ್ಲಿ ಜಾತ್ರಾ ಸ್ಥಳಕ್ಕೆ ಕರೆತಂದಿದ್ದಾರೆ.

ಎತ್ತುಗಳೊಂದಿಗೆ ಬರುವ ರೈತರಿಗೆ ಮೂಲಸೌಕರ್ಯ ಮತ್ತು ರಾಸುಗಳಿಗೆ ಮೇವು, ನೀರು ಒದಗಿಸಲು ನಗರಸಭೆ ಕ್ರಮ ಕೈಗೊಂಡಿದೆ. ಅಂತ್ಯದಲ್ಲಿ ಅತ್ಯುತ್ತಮ ಎತ್ತುಗಳಿಗೆ ಬಹುಮಾನ, ಭಾಗವಹಿಸುವ ಎಲ್ಲರಿಗೆ ಸಮಾಧಾನಕರ ಬಹುಮಾನವಿದೆ.

ದಶಕದ ಹಿಂದೆ ರೈತರು ಎತ್ತಿನ ಗಾಡಿಗಳಿಗೆ ಅಲಂಕಾರ ಮಾಡಿಕೊಂಡು ಮೆರವಣಿಗೆ ಮೂಲಕ ಬರುತ್ತಿದ್ದರು. ಹಾಸನ ಜಿಲ್ಲೆಯಲ್ಲಿ ಹಳ್ಳಿಕಾರ್ ತಳಿಯ ರಾಸುಗಳು ಹೆಚ್ಚಾಗಿದ್ದರಿಂದ ಉಳುಮೆ ಮಾಡಲು ಈ ತಳಿಯನ್ನು ಹೆಚ್ಚು ಬಳಸಿಕೊಳ್ಳಲಾಗುತ್ತಿತ್ತು. ಆದ್ದರಿಂದ ಈ ತಳಿಯ ರಾಸುಗಳನ್ನು ಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ರೈತರು ದನಗಳ ಜಾತ್ರೆಗೆ ಬರುತ್ತಿದ್ದರು.

ಶಾಸಕ ಎಚ್.ಎಸ್.ಪ್ರಕಾಶ್, ’ಹಾಸನದ ದನಗಳ ಜಾತ್ರೆ ಕಾರಣಾಂತರಗಳಿಂದ ಕೆಲ ವರ್ಷ ಸ್ಥಗಿತಗೊಂಡಿತ್ತು. ಕಳೆದ ವರ್ಷದಿಂದ ಪುನಾರಂಭವಾಗಿದೆ.  ಈ ವರ್ಷ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ದನಗಳು ಆಗಮಿಸಿವೆ’ ಎಂದರು.

ನಗರಸಭೆ ಅಧ್ಯಕ್ಷ ಎಚ್.ಎಸ್.ಅನಿಲ್ ಕುಮಾರ್, ಉಪಾಧ್ಯಕ್ಷೆ ಲೀಲಾವತಿ ವಾಸು, ಸದಸ್ಯರಾದ ಗೋಪಾಲ್, ವಿಜಯ್ ಕುಮಾರ್, ಇರ್ಷಾದ್ ಪಾಷ, ಸಮೀರ್, ಮಹೇಶ್, ಮುಖಂಡರಾದ ವಾಸುದೇವ್, ಎಸ್.ದ್ಯಾವೇಗೌಡ, ಜಿಪಂ ಮಾಜಿ ಸದಸ್ಯ ಲಕ್ಷ್ಮಣ್ ಇದ್ದರು.

‘ಜಾತ್ರೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ ಹಾಗೂ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಗುತ್ತದೆ.
ಎಚ್.ಎಸ್. ಪ್ರಕಾಶ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT