ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಮುನ್ನುಡಿ ಬರೆದ ಭಾರತ

Last Updated 12 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಳಗಾವಿ: ಉತ್ಸಾಹದ ಚಿಲುಮೆಯಾಗಿ ಚಿಮ್ಮಿದ ಭಾರತ ಮಹಿಳಾ ‘ಎ’ ತಂಡದವರು ಬಾಂಗ್ಲಾದೇಶ ಮಹಿಳಾ ‘ಎ’ ತಂಡದ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ–20 ಕ್ರಿಕೆಟ್‌ ಸರಣಿಯಲ್ಲಿ ಗೆಲುವಿನ ಮುನ್ನುಡಿ ಬರೆದರು.

ಇಲ್ಲಿನ ಆಟೊ ನಗರದಲ್ಲಿರುವ ಕೆ.ಎಸ್‌.ಸಿ.ಎ. ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಅತಿಥೇಯ ತಂಡ ಎಂಟು ವಿಕೆಟ್‌ಗಳಿಂದ ಗೆದ್ದು ಸರಣಿಯಲ್ಲಿ 1–0ಯಿಂದ ಮುನ್ನಡೆ ಸಾಧಿಸಿತು.

ಟಾಸ್‌ ಗೆದ್ದ ಬಾಂಗ್ಲಾದೇಶ ‘ಎ’ ತಂಡ 17 ಓವರ್‌ಗಳಲ್ಲೇ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಆ ತಂಡವನ್ನು 57 ರನ್‌ಗಳಿಗೆ ಕಟ್ಟಿಹಾಕಿದ ಭಾರತ ಸುಲಭವಾಗಿ ಗುರಿ ತಲುಪಿತು. ಅತಿಥೇಯ ತಂಡ 10.4 ಓವರ್‌ಗಳಲ್ಲಿ 60 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

ಕರ್ನಾಟಕದ ವಿ.ಆರ್‌. ವನಿತಾ (14; 11 ಎ. 3 ಬೌಂ) ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಎಸ್‌. ಮೇಘನಾ (ಔಟಾಗದೆ 30; 32 ಎ. 4 ಬೌಂ) ಮತ್ತು ಡಿ.ಪಿ. ವೈದ್ಯ (ಔಟಾಗದೆ 11; 12ಎ, 2 ಬೌಂ) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪರದಾಡಿದ ಪ್ರವಾಸಿ ತಂಡ
ಭಾರತದ ಸ್ಪಿನ್‌ ಹಾಗೂ ಮಧ್ಯಮ ವೇಗಿಗಳ ದಾಳಿಗೆ ಪ್ರವಾಸಿ ತಂಡದ ಬ್ಯಾಟ್ಸ್‌ವುಮನ್‌ಗಳು ತತ್ತರಿಸಿದರು. ರುಮಾನಾ ಅಹಮದ್‌ (24), ಫರ್ಗಾನಾ ಹಕ್‌ (14), ಲತಾ ಮಂಡೋಳ್‌ (10) ಅವರನ್ನು ಬಿಟ್ಟರೆ ಇತರ ಯಾರೂ ಎರಡಂಕಿ ಮೊತ್ತ ದಾಟಲಿಲ್ಲ.

ಮೊದಲ ಓವರ್‌ನಲ್ಲೇಎರಡು ವಿಕೆಟ್‌ ಕಳೆದುಕೊಂಡ ಬಾಂಗ್ಲಾ 51 ರನ್‌ ಸೇರಿಸುವಷ್ಟರಲ್ಲಿ ಮೂರು ವಿಕೆಟ್‌ಗಳನ್ನಷ್ಟೇ ಉಳಿಸಿಕೊಂಡಿತ್ತು. ನಾಲ್ವರು ಆಟಗಾರ್ತಿಯರು ಶೂನ್ಯಕ್ಕೇ ಔಟಾದರು. ಭಾರತದ ನಾಯಕಿ ಅನುಜಾ ಪಾಟೀಲ ಹಾಗೂ ರಾಧಾ ಯಾದವ್‌ ತಲಾ 2 ವಿಕಟ್‌ ಕಬಳಿಸಿದರು. ತಮ್ಮದೇ ಬೌಲಿಂಗ್‌ನಲ್ಲಿ ಆಕರ್ಷಕ ಕ್ಯಾಚ್‌ ಪಡೆದ ರಾಧಾ ಮಿಂಚಿದರು.

ಸಂಕ್ಷಿಪ್ತ ಸ್ಕೋರ್‌:

ಬಾಂಗ್ಲಾದೇಶ ‘ಎ’: 17 ಓವರ್‌ಗಳಲ್ಲಿ 57ಕ್ಕೆ ಆಲೌಟ್‌ (ರುಮಾನಾ ಅಹಮ್ಮದ್‌ 24, ಫರ್ಗಾನಾ ಹಕ್‌ 14, ಲತಾ ಮಂಡೋಳ್‌ 10; ಅನುಜಾ ಪಾಟೀಲ 9ಕ್ಕೆ 2, ರಾಧಾ ಯಾಧವ್‌ 4ಕ್ಕೆ 2, ಪೂಜಾ ವಸ್ತ್ರಕರ 10ಕ್ಕೆ 1, ಟಿ.ಪಿ. ಕನ್ವರ್‌ 6ಕ್ಕೆ 1, ಡಿ. ಹೇಮಲತಾ 16ಕ್ಕೆ 1); ಭಾರತ ‘ಎ’: 10.4 ಓವರ್‌ಗಳಲ್ಲಿ 2ಕ್ಕೆ 60 (ಎಸ್‌. ಮೇಘನಾ ಔಟಾಗದೆ 30, ಡಿ.ಪಿ. ವೈದ್ಯ ಔಟಾಗದೆ 11, ವಿ.ಆರ್‌. ವನಿತಾ 14; ಖದಿಜಾ ಖುಬ್ರಾ 16ಕ್ಕೆ 1, ರುಮಾನಾ ಅಹಮದ್‌ 23ಕ್ಕೆ 1). ಫಲಿತಾಂಶ: ಭಾರತಕ್ಕೆ 8 ವಿಕೆಟ್‌ಗಳ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT