ಭಾನುವಾರ, ಮಾರ್ಚ್ 7, 2021
19 °C
ಜಾತ್ಯತೀತ ರಾಜಕೀಯ ಪಕ್ಷಗಳು, ಸಂಘಟನೆಗಳಿಂದ ಬಂಟ್ವಾಳದ ಫರಂಗಿಪೇಟೆಯಿಂದ ಮಾಣಿಯವರೆಗೆ ಪಾದಯಾತ್ರೆ

ಸುಸೂತ್ರವಾಗಿ ನಡೆದ ಸಾಮರಸ್ಯ ಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಸೂತ್ರವಾಗಿ ನಡೆದ ಸಾಮರಸ್ಯ ಯಾತ್ರೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ದ್ವೇಷ ಹಬ್ಬಿಸುತ್ತಿರುವ ಶಕ್ತಿಗಳ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾತ್ಯತೀತ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆಯಿಂದ ಮಾಣಿ ಸಮೀಪದ ನೇರಳಕಟ್ಟೆವರೆಗೆ ಮಂಗಳವಾರ ಹಮ್ಮಿಕೊಂಡಿದ್ದ ಸಾಮರಸ್ಯ ಯಾತ್ರೆ ಸುಸೂತ್ರವಾಗಿ ನಡೆಯಿತು.

ಪದೇ ಪದೇ ಮತೀಯ ದ್ವೇಷದ ಘಟನೆಗಳು ನಡೆಯುವ ಅತಿಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಲ್ಲಿದೇ ಸಾಮರಸ್ಯ ನಡಿಗೆ ಸಾಗಿತು. ಪೊಲೀಸರು ಮಾರ್ಗದುದ್ದಕ್ಕೂ ಬಿಗಿ ಕಟ್ಟೆಚ್ಚರ ವಹಿಸಿದ್ದರು. ಘೋಷಣೆ, ಬಾವುಟಗಳಿಲ್ಲದೇ ಹೆಜ್ಜೆ ಹಾಕಿದ ವಿವಿಧ ಪಕ್ಷ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ‘ಜೊತೆ ಜೊತೆಯಾಗಿ ನಡೆಯೋಣ’ ಎಂಬ ಸಂದೇಶ ಸಾರಲು ಯತ್ನಿಸಿದರು.

ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಫರಂಗಿಪೇಟೆಯಲ್ಲಿ ಆರಂಭವಾದ ನಡಿಗೆ ಸಂಜೆ 6 ಗಂಟೆಗೆ ನೇರಳಕಟ್ಟೆ ಮೈದಾನ ತಲುಪಿತು. ಕಾಂಗ್ರೆಸ್‌, ಸಿಪಿಎಂ, ಸಿಪಿಐ, ರಾಜ್ಯ ರೈತ ಸಂಘ, ಡಿವೈಎಫ್‌ಐ ಮತ್ತು ದಲಿತ ಸಂಘಟನೆಗಳ ಸಾವಿರಾರು ಮಂದಿ 24 ಕಿ.ಮೀ. ದೂರದ ಪಾದಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಸಾಮರಸ್ಯ ವೃದ್ಧಿಯ ಪ್ರಯತ್ನಕ್ಕೆ ಬಲ ತುಂಬಿದರು.

ಬಹುಭಾಷಾ ಸಿನಿಮಾ ನಟ ಪ್ರಕಾಶ್ ರೈ, ಸಚಿವ ಯು.ಟಿ.ಖಾದರ್‌, ಶಾಸಕರಾದ ಕೆ.ವಸಂತ ಬಂಗೇರ, ಕೆ.ಅಭಯಚಂದ್ರ ಜೈನ್‌, ಶಕುಂತಳಾ ಶೆಟ್ಟಿ, ಜೆ.ಆರ್‌.ಲೋಬೊ, ವಿಧಾನ ಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಐವನ್‌ ಡಿಸೋಜ, ಸಿಪಿಎಂ ರಾಜ್ಯ ಮಂಡಳಿ ಕಾರ್ಯದರ್ಶಿ ಜಿ.ವಿ.ಶ್ರೀರಾಮ ರೆಡ್ಡಿ, ಸಿಪಿಐ ಮುಖಂಡ ಡಾ.ಸಿದ್ದನಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್‌ಕುಮಾರ್‌, ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಸೇರಿದಂತೆ ವಿವಿಧ ಪಕ್ಷ, ಸಂಘಟನೆಗಳ ಮುಂಚೂಣಿ ಮುಖಂಡರು ಸಾಮರಸ್ಯ ನಡಿಗೆಯಲ್ಲಿ ಜೊತೆಗೂಡಿ ಸಾಗಿದರು.

ಪಾದಯಾತ್ರೆಯ ಆರಂಭದಲ್ಲಿ ಮಾತನಾಡಿದ ರಮಾನಾಥ ರೈ, ‘ಒಂದು ಕಾಲದಲ್ಲಿ ಜಿಲ್ಲೆಯ ಎಲ್ಲರೂ ಅಣ್ಣ– ತಮ್ಮ, ಅಕ್ಕ– ತಂಗಿಯರಂತೆ ಬದುಕುತ್ತಿದ್ದರು. ಆದರೆ, ಮತೀಯ ದ್ವೇಷ ಹೆಚ್ಚುತ್ತಾ ಬಂದಂತೆಲ್ಲಾ ಜೊತೆಗಿದ್ದವರನ್ನೂ ಸಂಶಯದಿಂದ ನೋಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಕೊಲೆ, ಹಿಂಸಾಚಾರಗಳಿಂದ ಜಿಲ್ಲೆಯ ಗೌರವ ಕುಂದುತ್ತಿದೆ. ಅದನ್ನು ತಪ್ಪಿಸಲು ಈ ನಡಿಗೆಯನ್ನು ಹಮ್ಮಿಕೊಂಡಿದ್ದೇವೆ’ ಎಂದರು.

ಮಾಣಿ ಸಮೀಪದ ನೇರಳಕಟ್ಟೆ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕಾಂಗ್ರೆಸ್, ಸಿಪಿಎಂ ಮತ್ತು ಸಿಪಿಐ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಮತೀಯವಾದಿ ಶಕ್ತಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಯಾವುದೇ ಸಂದರ್ಭದಲ್ಲೂ ಯಾವುದೇ ಧರ್ಮದ ಮತೀಯವಾದಿ ಶಕ್ತಿಗಳಿಗೆ ಬೆಂಬಲ ನೀಡದಂತೆ ಜಿಲ್ಲೆಯ ಜನರಲ್ಲಿ ಮನವಿ ಮಾಡಿದರು.

ಪೊಲೀಸ್‌ ಕಟ್ಟೆಚ್ಚರ: ಸಾಮರಸ್ಯ ನಡಿಗೆಯ ಆರಂಭದಿಂದ ಅಂತ್ಯದವರೆಗೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಮತ್ತು ಜಿಲ್ಲೆಯ ಎಸ್‌ಪಿ ಸಿ.ಎಚ್‌.ಸುಧೀರ್‌ಕುಮಾರ್‌ ರೆಡ್ಡಿ ಖುದ್ದು ಸ್ಥಳದಲ್ಲಿದ್ದು ಭದ್ರತಾ ವ್ಯವಸ್ಥೆ ಪರಿಶೀಲಿಸಿದರು. ಫರಂಗಿಪೇಟೆ, ಬಿ.ಸಿ.ರೋಡ್‌, ಕಲ್ಲಡ್ಕ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ನೂರಾರು ಸಂಖ್ಯೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಪಾದಯಾತ್ರೆ ಸಾಗಿದ ಮಾರ್ಗದಲ್ಲಿರುವ ಸೂಕ್ಷ್ಮ ಪ್ರದೇಶಗಳಲ್ಲಿನ ಬಹುಮಹಡಿ ಕಟ್ಟಡಗಳಲ್ಲಿ ಬೆಳಿಗ್ಗೆಯಿಂದಲೇ ಪೊಲೀಸ್‌ ಪಹರೆ ಹಾಕಲಾಗಿತ್ತು. ಈ ಮಾರ್ಗದಲ್ಲಿದ್ದ ಕಲ್ಲಡ್ಕ ಶ್ರೀರಾಮ ಮಂದಿರ, ಮಸೀದಿ ಸೇರಿದಂತೆ ಧಾರ್ಮಿಕ ಕೇಂದ್ರಗಳಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.