ಬುಧವಾರ, ಜೂಲೈ 8, 2020
21 °C
ಮಾಗಡಿಯಲ್ಲಿ ರಾಷ್ಟ್ರೀಯ ಪ್ರಚಾರಾಂದೋಲನ ಉದ್ಫಾಟನೆ

ನದಿ ಜೋಡಣೆಯಿಂದ ಅನುಕೂಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗಳನ್ನು ಮಾಡಿರುವುದರಿಂದ ಪ್ರಮುಖ ನಗರಗಳನ್ನು ಸಂಪರ್ಕಿಸಲು ಸುಲಭವಾಗಿದೆ. ಗಂಗಾ–ಕಾವೇರಿ ನದಿಗಳ ಜೋಡಣೆ ಮಾಡುವುದು ತುಂಬಾ ಅಗತ್ಯವಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ತಿಳಿಸಿದರು.

ಪಟ್ಟಣದ ಕೆಂಪೇಗೌಡ ಬಯಲು ರಂಗಮಂದಿರದಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಲು ಸಂಚಾರ ಮಾಡಿದ್ದ,  ಜಾಗೃತಿ ಮತದಾರರ ವೇದಿಕೆ ವತಿಯಿಂದ ನಡೆದ ಗಂಗಾ–ಕಾವೇರಿ ನದಿಗಳ ಜೋಡಣೆ ರಾಷ್ಟ್ರೀಯ ಪ್ರಚಾರಾಂದೋಲನ ಉದ್ಫಾಟಿಸಿ ಮಾತನಾಡಿದರು.

ಪುಣ್ಯಭೂಮಿ ಭಾರತದಲ್ಲಿ ಎಲ್ಲವೂ ಇದೆ. ಭಗೀರಥ ಮುನಿ ದೇವಗಂಗೆಯನ್ನು ಭುವಿಗೆ ತಂದಂತೆ ಗಂಗಾ–ಕಾವೇರಿ ನದಿ ಜೋಡಣೆ ಮಾಡುವುದರಿಂದ ಬರಗಾಲದಲ್ಲಿ ಸಿಲುಕಿರುವ ರಾಜ್ಯಗಳಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಯೋಜನೆ ಮಂಜೂರಾಗಿದೆ. ಕಾರ್ಯರೂಪಕ್ಕೆ ತರಲೇ ಬೇಕು. ಜಾಗೃತಿ ಮತದಾರರ ವೇದಿಕೆ ಮಾಡುತ್ತಿರುವ ನದಿಗಳ ಜೋಡಣೆಗೆ ಎಲ್ಲರೂ ಧ್ವನಿಗೂಡಿಸೋಣ ಎಂದರು.

ಜಾಗೃತಿ ಮತದಾರರ ವೇದಿಕೆಯ ಸಂಚಾಲಕ ಎನ್‌.ಜಿ.ಕಾರಟಗಿ ಮಾತನಾಡಿ ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡುವ ದೃಷ್ಟಿಯಿಂದ ಮತದಾರರು ಮತವನ್ನು ಮಾರಿಕೊಳ್ಳಬಾರದು ಎಂದು ಸಲಹೆ ನೀಡಿದರು.

ಮತದಾನದ ಬಗ್ಗೆ ಸಾಮಾಜಿಕ ಪ್ರಜ್ಞೆ ಮೂಡಿಸುವುದರ ಜೊತೆಗೆ ಗಂಗಾ ನದಿ ತುಂಬಿಹರಿದು ದೇಶದ ವಿವಿಧೆಡೆಯಲ್ಲಿ ಉಂಟಾಗುವ ಅನಾಹುತವನ್ನು ತಪ್ಪಿಸಲು ಮತ್ತು ನೀರಾವರಿಗೆ ಹೆಚ್ಚಿನ ಒತ್ತು ನೀಡಿ ಆಹಾರಧಾನ್ಯ ಉತ್ಪಾದಿಸಲು ಗಂಗಾ–ಕಾವೇರಿ ನದಿಗಳ ಜೋಡಣೆ ಅತ್ಯಗತ್ಯವಾಗಿದೆ ಎಂದರು.

ರಾಜ್ಯ ಬೆಸ್ಕಾಂ ನಿರ್ದೇಶಕ ಬಿ.ವಿ.ಜಯರಾಮು, ಕೆಪಿಟಿಸಿಎಲ್‌ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಟಿ.ಆರ್‌.ರಾಮಕೃಷ್ಣಯ್ಯ, ಪುರಸಭೆ ಸದಸ್ಯ ಕೆ.ವಿ.ಬಾಲು, ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌, ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕಿ ಎಸ್‌.ಜಿ.ವನಜ, ಬೆಸ್ಕಾಂನ ನಿವೃತ್ತ ಅಧಿಕಾರಿ ರಹಮತ್ ಉಲ್ಲಾ ಖಾನ್‌, ಲೇಖಕ ಡಿ.ಆರ್‌.ಚಂದ್ರ ಮಾಗಡಿ, ಬಿಜೆಪಿ ಮುಖಂಡರಾದ ನರಸಿಂಹಣ್ಣ, ಬಾಲಾಜಿ, ಜಗದೀಶ್‌, ಭಾಸ್ಕರ, ನಿವೃತ್ತ ಪ್ರಾಂಶುಪಾಲ ಪುಟ್ಟಸ್ವಾಮಿ, ಕನ್ನಡ ಪರ ಹೋರಾಟಗಾರ ಬಸವರಾಜ್‌, ದೇವದಾಸ್‌, ಉಪನ್ಯಾಸಕ ಆರ್‌.ರಾಜು ಹೊಸಪೇಟೆ, ಶುಭೋದಯ ಮಹೇಶ್‌, ಸಂಗೀತ ಶಿಕ್ಷಕಿ ವತ್ಸಲಾ ಗೋವಿಂದರಾಜನ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.