ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜೆರ್ಸಿಗೆ ಯಲ್ಲಾಪುರದ ಕಲೆ

Last Updated 1 ಜನವರಿ 2018, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ–ಕಾರವಾರ ನಡುವಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ಯಲ್ಲಾಪುರ ಸಮೀಪಿಸುವುದಕ್ಕೂ ಮುನ್ನ ಎಡ ಬಲಗಳಲ್ಲಿ ವಿಶಾಲವಾದ ಗದ್ದೆಗಳು, ಜೋಡಿ ಕೆರೆಗಳು ಗಮನ ಸೆಳೆಯುತ್ತಿದ್ದರೆ, ಅಲ್ಲಿನ ಕಿರು ತಿರುವಿನಲ್ಲಿ ಎಡ ಬದಿಯಲ್ಲೊಂದು ಮಾಸಿದ ಬೋರ್ಡ್‌ ಕಾಣುತ್ತದೆ. ‘ಬಿಕ್ಕು ಗುಡಿಗಾರ ಕಲಾಕೇಂದ್ರ’ ಎಂಬ ಬೋರ್ಡ್ ನೋಡಿಕೊಂಡು, ತಗಡಿನ ಶೀಟಿನ ಕುಟೀರ ಹೊಕ್ಕಿದರೆ ನಿಮಗೊಂದಿಷ್ಟು ಅಚ್ಚರಿ ಖಚಿತ.

ಅಪರೂಪದ ಮರದ ಕೆತ್ತನೆಯ ಒಂದಿಷ್ಟು ಕಲಾಕೃತಿಗಳು, ಶಿಲ್ಪಕಲಾಕೃತಿಗಳು, ಉಳಿ, ಸುತ್ತಿಗೆಯ ಪೆಟ್ಟು ತಿನ್ನುತ್ತ ಇನ್ನಷ್ಟೇ ಅಂತಿಮ ರೂಪ ಪಡೆಯಬೇಕಾಗಿರುವ ಹಲವಾರು ಮರದ ಕುಸುರಿ ಕೆಲಸಗಳು ಮನ ಸೆಳೆಯುತ್ತವೆ. ಇತ್ತೀಚೆಗೆ ಈ ಪುಟ್ಟ ಕುಟೀರ ಗಮನ ಸೆಳೆಯುತ್ತಿರುವುದಕ್ಕೆ ಕಾರಣ– ಇಲ್ಲಿ ತಯಾರಾಗುತ್ತಿರುವ ಮರದ ಕೆತ್ತನೆಗಳು ಅಮೆರಿಕದ ನ್ಯೂಜೆರ್ಸಿಯ ಸ್ವಾಮಿ ನಾರಾಯಣ ಮಂದಿರದ ಮಹಾಮಂಟಪವಾಗಿ ಅರಳಿಕೊಳ್ಳುತ್ತಿರುವುದು...

ಐದು ಗೋಪುರಾಕಾರದ ಕೆತ್ತನೆ, ಕುಸುರಿ ಕಂಬಗಳ ವಿನ್ಯಾಸಗಳು ಈಗಾಗಲೇ ಬಹುತೇಕ ಪೂರ್ಣಗೊಂಡಿವೆ. ಉಳಿದಂತೆ ಮಂದಿರದ ಇನ್ನಷ್ಟು ರಚನೆಗಳ ಕೆತ್ತನೆ ಕೆಲಸ ಭರದಿಂದ ಸಾಗಿದೆ. ಸುಮಾರು 15 ಪುರುಷ ಕೆಲಸಗಾರರು ಹಾಗೂ ಐವರು ಮಹಿಳಾ ಕೆಲಸಗಾರರು ದಿನವಿಡೀ ಇದಕ್ಕಾಗಿ ದುಡಿಯುತ್ತಿದ್ದಾರೆ. ಅವರೆಲ್ಲರ ದುಡಿಮೆಯ ನೇತೃತ್ವ ವಹಿಸಿದ ವರು ಬಿಕ್ಕು ಗುಡಿಗಾರ ಕಲಾಕೇಂದ್ರದ ಮುಖ್ಯಸ್ಥರಾದ ಸಂತೋಷ ಹಾಗೂ ಅರುಣ ಗುಡಿಗಾರ ಸಹೋದರರು.

ಇವರು ರಚಿಸಿದ ಹಲವು ಮರದ ಕೆತ್ತನೆಗಳು ಈಗಾಗಲೇ ದೇಶ ವಿದೇಶ ತಲುಪಿವೆ. ಗುಜರಾತ್‌, ಮುಂಬೈ, ಪುಣೆ, ಬೆಂಗಳೂರು, ಅಮೆರಿಕದ ಕೆಲ ಮಂದಿರಗಳಲ್ಲಿ ಈಗಾಗಲೇ ಬಹಳಷ್ಟು ಕುಸುರಿ ಕೆತ್ತನೆಗಳು ಸ್ಥಾನ ಪಡೆದಿವೆ. ಈ ಕಲಾ ಕೇಂದ್ರದ ಕೆತ್ತನೆಯ ಹಲವಾರು ಅತ್ಯುತ್ತಮ ಕುಸುರಿಯ ರಥಗಳು, ಕಾಷ್ಠಶಿಲ್ಪಗಳು, ದೇವಾಲಯದ ಮಂಟಪಗಳು, ದೇವರ ಮೂರ್ತಿಗಳು ರಾಷ್ಟ್ರವ್ಯಾಪಿ ಹರಡಿವೆ. ಪುಣೆ, ಅಮೆರಿಕ ಮತ್ತಿತರ ಕಡೆಗಳಲ್ಲಿರುವ ಇಸ್ಕಾನ್‌ ಕೃಷ್ಣ ಮಂದಿರಗಳಿಗೆ ಇವರ ಕೆತ್ತನೆಯ ರಚನೆಗಳು ಮುಖ ಮಂಟಪಗಳಾಗಿ ಸ್ಥಾನ ಪಡೆದಿವೆ. ಗುಡಿ ಕೈಗಾರಿಕೆ, ಅದರಲ್ಲೂ ಶ್ರೀಗಂಧದ ಕೆತ್ತನೆ ಕೆಲಸದಲ್ಲಿ ಇವರದು ಅಪರೂಪದ ಸಾಧನೆ. ಗುಜರಾತಿನ ಸಕೋಡದಲ್ಲಿ, ಸ್ವಾಮಿ ನಾರಾಯಣ ದೇವಾಲಯದ ಮಹಾದ್ವಾರದ ರಚನೆಯಲ್ಲಿ ಇವರ ಕಲಾ ಕೌಶಲ ಆಗಿನ ಮುಖ್ಯಮಂತ್ರಿ ಹಾಗೂ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದಿದೆ ಎಂದು ಗುಡಿಗಾರ ಸಹೋದರರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಮೂಲತಃ ಗುಡಿಗಾರ ಮನೆತನದವರಾದ ಬಿಕ್ಕು ಗುಡಿಗಾರರು ಈ ಹಿಂದಿನಿಂದಲೂ ಯಲ್ಲಾಪುರದಲ್ಲಿ ನೆಲೆ ನಿಂತವರು. ಗಣೇಶ ಹಬ್ಬ, ದಸರಾ ಬಂದರೆ ಬಿಡುವಿಲ್ಲದ ಕೆಲಸ. ಇವುಗಳ ನಡುವೆ ಮರ, ಶಿಲ್ಪದ ಕೆತ್ತನೆಗಳೂ ಅವಿರತ ವಾಗಿ ನಡೆಯುತ್ತವೆ. ಹೊಸ ತಲೆಮಾರಿನ ಪೈಕಿ ಕಲೆಯನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಬಿಕ್ಕು ಗುಡಿಗಾರರ ಪುತ್ರರಾದ ಸಂತೋಷ ಹಾಗೂ ಅರುಣ ತಮ್ಮ ಕಲಾಕ್ಷೇತ್ರದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಂಡರು. ಅದರ ಫಲವಾಗಿಯೇ 1989ರಲ್ಲಿ ‘ಬಿಕ್ಕು ಗುಡಿಗಾರ ಕಲಾಕೇಂದ್ರ’ ಸ್ಥಾಪನೆ ಮಾಡಿಕೊಂಡು ಕಲೆಯಲ್ಲಿ ಆಸಕ್ತರಾದವರಿಗೆ ಕೆಲಸ ನೀಡುವ ಮೂಲಕ ಉದ್ಯೋಗ ಸೃಷ್ಟಿ ಮಾಡಿದರು.

‘ಸದಾಕಾಲ ಹೊಸದನ್ನು ಮಾಡಬೇಕು ಎನ್ನುವ ಉದ್ದೇಶ ದಿಂದ ಕಂಪ್ಯೂಟರ್‌ಗಳಲ್ಲಿ ಜಾಲಾಡಿ, ಹೊಸ ವಿನ್ಯಾಸ ಗಳನ್ನು ಹುಡುಕಿ, ಕಾಷ್ಠಶಿಲ್ಪ ತಯಾರಿಗೆ ತೊಡಗುತ್ತೇವೆ. ಈ ಬಾರಿ ನಾವು ತಯಾರಿಸುತ್ತಿರುವ ಕಾಷ್ಠಶಿಲ್ಪಗಳು ಇಷ್ಟು ದೊಡ್ಡ ಮಟ್ಟದಲ್ಲಿ ಸಾಗರೋಲ್ಲಂಘನ ಮಾಡುತ್ತಿರುವುದು ಖುಷಿ ನೀಡಿದೆ’ ಎನ್ನುತ್ತಾರೆ ಗುಡಿಗಾರ ಸಹೋದರರು.
ಅಂದಾಜು ₹75 ರಿಂದ 85ಲಕ್ಷ ವೆಚ್ಚದಲ್ಲಿ ಸಾಗವಾನಿ ಕಟ್ಟಿಗೆಯಿಂದ ಸಿದ್ಧಗೊಳ್ಳುತ್ತಿರುವ ಈ ಮಂದಿರದ ಕೆತ್ತನೆಯ ವಿನ್ಯಾಸಗಳು ಅಂತಿಮ ರೂಪ ಪಡೆಯುತ್ತಿದೆ. ಸುಮಾರು 14 ಅಡಿ ಎತ್ತರ 8 ಅಡಿ ಅಗಲದ ಗೋಪುರಗಳು, ಕಂಬ, ಇತರೆ ವಿನ್ಯಾಸಗಳು ಸೇರಿ ಸಾಕಷ್ಟು ಕುಸುರಿ ಕೆಲಸಗಳಿರುವುದರಿಂದ ಮುಂದಿನ 2–3 ತಿಂಗಳು ಬೇಕಾಗಬಹುದು. ಬಳಿಕ ಇವು ಗಳನ್ನು ಉತ್ತಮವಾಗಿ ಪ್ಯಾಕಿಂಗ್‌ ಮಾಡಿ ಹಡಗಿನಲ್ಲಿ ವಿದೇಶಕ್ಕೆ ಸಾಗಿಸಲಾಗುವುದು ಎನ್ನುತ್ತಾರೆ.

ಕೆಲ ದಿನಗಳ ಹಿಂದೆ ಗುಜರಾತ್‌ನ ಸ್ವಾಮಿ ನಾರಾಯಣ ದೇವಸ್ಥಾನದ ಪ್ರೇಮಸ್ವರೂಪಾನಂದಜೀ ಈ ಕುಟೀರಕ್ಕೆ ಬಂದು ಕೆತ್ತನೆಯ ಪ್ರಗತಿ ನೋಡಿಕೊಂಡು ಹೋಗಿದ್ದಾರೆ. ಅವರ ಸೂಚನೆಯಂತೆ ಈ ಕೆತ್ತನೆಯ ಮಂಟಪಗಳು ಸಿದ್ಧಗೊಳ್ಳುತ್ತಿವೆ.

‘ಉಳಿ, ಸುತ್ತಿಗೆ ಹಿಡಿಯುವುದನ್ನು, ಚಿತ್ರ ರಚಿಸುವುದನ್ನೆಲ್ಲ ನಾವು ಕಲಿತಿದ್ದು ನಮ್ಮ ತಂದೆಯವರನ್ನು ನೋಡಿ. ಬಾಲ್ಯ ದಿಂದಲೇ ನಮಗೆ ಮನೆತನದ ಈ ವೃತ್ತಿಯ ಮೇಲೆ ವಿಶೇಷ ಒಲವು. ಹಾಗಂತ ಮಾಡಿದ್ದನ್ನೇ ಮಾಡುವುದಕ್ಕಿಂತ ಒಂದಿಷ್ಟು ಹೊಸತನದಿಂದ ಕೂಡಿದ ಕೆಲಸಗಳನ್ನು ಮಾಡುವ ಉತ್ಸಾಹ ನಮ್ಮದು. ಅದರ ಫಲವಾಗಿಯೇ ನಾವು ತಯಾರಿಸುವ ಕೆಲಸಗಳು ಮೆಚ್ಚುಗೆ ಪಡೆದು ದೇಶ ವಿದೇಶಕ್ಕೆ ತಲುಪುತ್ತಿವೆ’ ಎನ್ನುತ್ತಾರೆ. ಹೀಗಾಗಿಯೇ ಸಂತೋಷ ಗುಡಿಗಾರ ಅವರು ಅಮೆರಿಕದ ‘ದಿ ರಿಸರ್ಚ್‌ ಬೋರ್ಡ್‌ ಆಫ್‌ ಅಡ್ವೈಸರಿ ಕಮಿಟಿ’ ಸದಸ್ಯರಾಗಿ ಕೂಡ ಆಯ್ಕೆಯಾಗಿದ್ದಾರೆ.

⇒ಚಿತ್ರಗಳು ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT