ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿಗಿಲ್ಲ ಇಂದಿರಾ ಕ್ಯಾಂಟೀನ್‌

ನಗರದಲ್ಲಿ ನಾಲ್ಕು ಕಡೆ ಮಹಾನಗರ ಪಾಲಿಕೆಯಿಂದ ಸಿದ್ಧತೆ; ಮಾರ್ಚ್‌ಗೆ ಆರಂಭ
Last Updated 1 ಜನವರಿ 2018, 12:46 IST
ಅಕ್ಷರ ಗಾತ್ರ

ವಿಜಯಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಇಂದಿರಾ ಕ್ಯಾಂಟೀನ್‌’ ಜಿಲ್ಲೆಯ ವ್ಯಾಪ್ತಿಯಲ್ಲಿ ಜನವರಿಗೆ ಆರಂಭಗೊಳ್ಳದಿರುವುದು ಕಾರ್ಮಿಕ ವರ್ಗದವರು, ಯುವ ಶ್ರಮಿಕರಲ್ಲಿ ಬೇಸರ ಮೂಡಿಸಿದೆ.

ಇಂದಿರಾ ಕ್ಯಾಂಟೀನ್‌ ಆರಂಭಕ್ಕೆ ಸಂಬಂಧಿಸಿದ ಪ್ರಕ್ರಿಯೆ ಇದೀಗ ಚುರುಕು ಪಡೆದಿದ್ದು, ಮಾರ್ಚ್‌ನಲ್ಲಿ ಕಾರ್ಯಾರಂಭ ಮಾಡಲಿವೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಮಹಾನಗರ ಪಾಲಿಕೆ ವ್ಯಾಪ್ತಿಯ ನಾಲ್ಕು ಕಡೆ ಸೇರಿದಂತೆ, ತಾಲ್ಲೂಕು ಕೇಂದ್ರಗಳಾದ ಮುದ್ದೇಬಿಹಾಳ, ಸಿಂದಗಿ, ಬಸವನಬಾಗೇವಾಡಿ, ಇಂಡಿ ಪಟ್ಟಣಗಳಲ್ಲೂ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ತಲಾ ಒಂದೊಂದು ಇಂದಿರಾ ಕ್ಯಾಂಟೀನ್‌ ಆರಂಭಕ್ಕೆ ರಾಜ್ಯ ಸರ್ಕಾರ ಸೂಚಿಸಿದೆ.

ಈಗಾಗಲೇ ಎಂಟು ಸ್ಥಳಗಳಲ್ಲಿ ಕ್ಯಾಂಟೀನ್‌ನ ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿದೆ. ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ನಂತರ ಇನ್ನುಳಿದ ಅಗತ್ಯ ಸೌಲಭ್ಯಗಳನ್ನು ಸ್ಥಳೀಯ ಸಂಸ್ಥೆಗಳ ಆಡಳಿತವೇ ನಿರ್ಮಿಸಿ ಕೊಡಲಿದೆ. ರಾಜ್ಯದ 10 ಜಿಲ್ಲೆಗಳಲ್ಲಿ ಇಂದಿರಾ ಕ್ಯಾಂಟೀನ್‌ ಕಾರ್ಯಾರಂಭ ವಿಳಂಬವಾಗಿದ್ದು, ಮಾರ್ಚ್‌ನಿಂದ ಕಾರ್ಯಾರಂಭಿಸಲಿವೆ ಎನ್ನಲಾಗಿದೆ.

ಟೆಂಡರ್‌ ಅಂತಿಮ: ‘ಜಿಲ್ಲೆಯಲ್ಲಿ ಎಂಟು ಕ್ಯಾಂಟೀನ್‌ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಸೂಕ್ತ ಜಾಗ ಗುರುತಿಸಿ, ಕಟ್ಟಡ ನಿರ್ಮಾಣಕ್ಕೆ ಟೆಂಡರ್‌ ನೀಡಲಾಗಿದೆ. ಜನವರಿ ಆರಂಭದಿಂದ ಕಟ್ಟಡ ನಿರ್ಮಾಣ ಚಾಲನೆ ಪಡೆದುಕೊಳ್ಳಲಿದೆ. ಆಹಾರ ತಯಾರಿಕೆ, ಪೂರೈಕೆ, ಸ್ವಚ್ಛತೆಗೆ ಸಂಬಂಧಿ
ಸಿದಂತೆಯೂ ಟೆಂಡರ್‌ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಡಿಸೆಂಬರ್‌ ಅಂತ್ಯದೊಳಗೆ ಇದೂ ಪೂರ್ಣಗೊಳ್ಳಲಿದೆ. ಒಟ್ಟಾರೆ ಮಾರ್ಚ್‌ ಆರಂಭದಿಂದ ಇಂದಿರಾ ಕ್ಯಾಂಟೀನ್‌ ಕಾರ್ಯಾಚರಿಸಲಿದ್ದು, ಬಡ ಕಾರ್ಮಿಕರ ಪಾಲಿನ ಕಾಮಧೇನುವಾಗಲಿದೆ’ ಎಂದು ಜಿಲ್ಲಾಡಳಿತ ತಿಳಿಸಿದೆ.

ವೆಚ್ಚ ಭರಿಸುವಿಕೆ: ‘ನಗರದ ಗೋದಾವರಿ ಹೋಟೆಲ್‌ ಮುಂಭಾಗದ ಎನ್‌ಇಕೆಆರ್‌ಟಿಸಿ ಡಿಪೋ ಪಕ್ಕ, ಬಂಜಾರಾ ಕ್ರಾಸ್‌ನಲ್ಲಿನ ಐಟಿಐ ಕಾಲೇಜು ಸನಿಹ, ಎಪಿಎಂಸಿ ಮಾರುಕಟ್ಟೆ ಬಳಿ, ಪಾಲಿಕೆಯ ಜಲನಗರ ಕಚೇರಿ ಬಳಿ ಇಂದಿರಾ ಕ್ಯಾಂಟೀನ್‌ ಆರಂಭಿಸಲು ಸಿದ್ಧತೆ ನಡೆದಿದೆ’ ಎಂದು ಪಾಲಿಕೆ ಆಯುಕ್ತ ಹರ್ಷಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಪಾಲಿಕೆ ಕಚೇರಿ ಬಳಿ ನಿರ್ಮಿಸುವ ಕ್ಯಾಂಟೀನ್‌ನಲ್ಲೇ ಮಾಸ್ಟರ್‌ ಕಿಚನ್ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಇಲ್ಲಿಯೇ ಉಪಾಹಾರ, ಊಟ ತಯಾರಿಸಿ, ಉಳಿದೆಡೆ ಸರಬರಾಜು ಮಾಡಲಾಗುವುದು. ಒಬ್ಬ ಕಾರ್ಮಿಕನಿಗೆ ಒಂದು ದಿನದ ವೆಚ್ಚ ₹ 57 ತಗುಲಲಿದೆ. ಇದರಲ್ಲಿ ಕಾರ್ಮಿಕ (ಗ್ರಾಹಕ) ₹ 25 ನೀಡಿದರೆ, ಪಾಲಿಕೆ ಆಡಳಿತ ₹ 32 ನೀಡುತ್ತದೆ.

ಈ ವೆಚ್ಚವನ್ನು ಪಾಲಿಕೆ ಆಡಳಿತ ತನ್ನ ಸಾಮಾನ್ಯ ನಿಧಿ, ಎಸ್‌ಎಫ್‌ಸಿ ಇಲ್ಲವೇ ಯಾವುದಾದರೂ ಅನುದಾನದಿಂದ ತೆಗೆದಿರಿಸಬಹುದು ಎಂದು ರಾಜ್ಯ ಸರ್ಕಾರವೇ ಸೂಚಿಸಿದೆ’ ಎಂದು ಆಯುಕ್ತರು ಮಾಹಿತಿ ನೀಡಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕು ಕ್ಯಾಂಟೀನ್ ಆರಂಭಗೊಳ್ಳಲಿದ್ದು, ಪ್ರತಿ ಕ್ಯಾಂಟೀನ್‌ನಲ್ಲಿ 500 ಜನರಿಗಷ್ಟೇ ಅವಕಾಶ. ಹೆಚ್ಚಿನ ಜನ ಬಂದರೂ ಊಟ–ಉಪಾಹಾರ ಸಿಗಲ್ಲ. ವಿಜಯಪುರದಲ್ಲಿ ನಿತ್ಯ 2,000 ಜನರಿಗೆ ಉಪಾಹಾರ–ಊಟ ಇಂದಿರಾ ಕ್ಯಾಂಟೀನ್‌ನಲ್ಲಿ ಲಭಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT