ಶನಿವಾರ, ಜೂಲೈ 4, 2020
21 °C

ವಿಜ್ಞಾನದ ಹೆಸರಲ್ಲೂ ಮೌಢ್ಯ!

ಎಂ.ಅಬ್ದುಲ್ ರೆಹಮಾನ್ ಪಾಷ Updated:

ಅಕ್ಷರ ಗಾತ್ರ : | |

ವಿಜ್ಞಾನದ ಹೆಸರಲ್ಲೂ ಮೌಢ್ಯ!

ಮಂತ್ರಿಸಿದರೆ ಮಾವಿನ ಕಾಯಿ ಬೀಳುತ್ತದೆ, ಗೊತ್ತಾ? ಹೀಗೇನಾದರೂ ಹೇಳಿದರೆ ಮಕ್ಕಳೂ ಬಿದ್ದು ಬಿದ್ದು ನಗಬಹುದು. ಅವಕ್ಕೆ ಗೊತ್ತು, ಮಾವಿನ ಕಾಯಿ ಬೀಳಬೇಕು ಎಂದರೆ ಶ್ರಮ, ಕೌಶಲ ಬೇಕೇ ಬೇಕೂಂತ. ‘ಹಿರಣ್ಯಕೇಶೋ ರಜಸೊ... ಎಂಬ ಮಂತ್ರ ಪಠಿಸುತ್ತಾ ಪುನರ್ನವ ಮರದ ಎಲೆಗಳನ್ನು ‘ಆಹವನೀಯ’ ಎಂಬ ಅಗ್ನಿಗೆ ಆಹುತಿ ಮಾಡಿದಾಗ ಧೂಮವು ಬಂಗಾರದ ಬಣ್ಣದ ಬೆಂಕಿಯೊಡನೆ ಮೋಡಗಳನ್ನು ತಲುಪುತ್ತದೆ. ಕೂಡಲೇ ಅಧಿಕ ಪ್ರಮಾಣ

ದಲ್ಲಿ ಮಳೆಯಾಗುತ್ತದೆ...'; ‘ಒಂದು ಕೈ ಅಳತೆಯಷ್ಟು ಆಳಕ್ಕೆ ಮಣ್ಣನ್ನು ಅಗೆಯಬೇಕು. ಗುಂಡಿಯನ್ನು ಮತ್ತೆ ಅದೇ ಮಣ್ಣಿನಿಂದ ಮುಚ್ಚ

ಬೇಕು. ಮಣ್ಣು ಇನ್ನೂ ಉಳಿದರೆ ಆ ಭೂಮಿಯಿಂದ ಶುಭ ಹಾಗೂ ಸಂಪತ್ತು ವೃದ್ಧಿಯಾಗುವುದು ಎಂದು ತಿಳಿಯಬೇಕು. ಮಣ್ಣು ಕಡಿಮೆ

ಯಾದರೆ ನಷ್ಟ ಸಂಭವಿಸುವುದು ಎಂದರ್ಥ. ಇದು ಭೂಮಿಯ ಗುಣ ಪರೀಕ್ಷೆಯ ಒಂದು ವಿಧಾನ...’; ‘ದುಷ್ಟಶಕ್ತಿಯ ಪ್ರಭಾವ ನಿಗ್ರಹಿಸುವ ಸಾಮರ್ಥ್ಯ ಚಿನ್ನಕ್ಕೆ ಇದೆ’ (ಪ್ರ.ವಾ., ಡಿ. 1) ಎಂದು ಹೇಳಿದರೆ ನಕ್ಕರೂ ಸ್ವಲ್ಪ ಎಚ್ಚರಿಕೆಯಿಂದ ನಗಬೇಕಾಗುತ್ತದೆ.

ಏಕೆಂದರೆ ಇವು, ಯಾರೋ ದಡ್ಡರು ಹೇಳಿದ ರಂಜನೀಯ ಮಾತುಗಳಲ್ಲ. ಕರ್ನಾಟಕ ರಾಜ್ಯ ಮಟ್ಟದ 25ನೇ ಮಕ್ಕಳ ವಿಜ್ಞಾನ ಸಮಾವೇಶದ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಲಾದ ಜ್ಞಾನಬಿಂದುಗಳಿವು. ತಮಾಷೆಯಲ್ಲ ಸ್ವಾಮಿ, ನವೆಂಬರ್ 29ರಿಂದ ಡಿಸೆಂಬರ್ 1ರ ವರೆಗೆ ಮೈಸೂರಿನಲ್ಲಿ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ಇದನ್ನು ಆಯೋಜನೆ ಮಾಡಿದ್ದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು. ವಿಷಯ: ‘ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನೆ’. ಉದ್ದೇಶ: ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸುವುದು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆಗೆ ಮಕ್ಕಳನ್ನು ಸೆಳೆಯುವುದು.

ಮೈಸೂರು ಅದು ಹೇಗೋ ಹಿಂದೊಮ್ಮೆಯೂ ಇಂಥ ಒಂದು ವಿಂಡಂಬನೆಗೆ ಸಾಕ್ಷಿಯಾಗಿತ್ತು. 2016ರ ಜನವರಿ 3ರಿಂದ 7ರ ವರೆಗೆ ಮೈಸೂರು ವಿ.ವಿಯಲ್ಲಿ 103ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶ ನಡೆಯಿತು. ಅದರಲ್ಲಿ ಉತ್ತರ ಪ್ರದೇಶದ ಹಿರಿಯ ಐಎಎಸ್ ಅಧಿಕಾರಿ ರಾಜೀವ್ ಶರ್ಮಾ ಒಂದು ಗೋಷ್ಠಿಯ ಆರಂಭದಲ್ಲಿ ಎರಡು ನಿಮಿಷಗಳ ಕಾಲ ಶಂಖ ಊದಿದರು. ‘ಶಂಖವನ್ನು ಶಾಸ್ತ್ರೋಕ್ತವಾಗಿ ಊದುವುದರಿಂದ ಬಿಳಿ ಕೂದಲು ಕಪ್ಪಾಗುತ್ತವೆ’ ಎಂದರು. ಇದಕ್ಕೆ ಅವರು ‘ವಿಶ್ವದಲ್ಲಿನ ಹೆಚ್ಚಿನ ಸಮಸ್ಯೆಗಳಿಗೆ ಸರಳವಾದ ಪರಿಹಾರ ಇರುತ್ತವೆ’ ಎಂದು ಐನ್‌ಸ್ಟೀನ್‌ರ ಮಾತನ್ನು ಉದ್ಧರಿಸಿಬಿಟ್ಟರು. ಮೌಢ್ಯಕ್ಕೆ ಅಧಿಕೃತತೆಯ ಮೊಹರನ್ನು ಹಾಕಲು ಪ್ರಾಯೋಗಿಕ ವಿಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವುದು ಇಂದಿನ ಮೂಲಭೂತವಾದಿಗಳ ಹೊಸ ಪಿತೂರಿಯಾಗಿದೆ.

ಇತ್ತೀಚೆಗೆ ಇಂಥ ಅವೈಜ್ಞಾನಿಕ ವಿಚಾರಗಳಿಗೆ ಹೆಚ್ಚು ಪ್ರಚಾರ ಸಿಗುತ್ತಿರುವುದು ಪ್ರಧಾನಿ ನರೇಂದ್ರ ಮೋದಿಯವರ ನಿಲುವಿನಿಂದ. ‘ಜೆನೆಟಿಕ್‌ ಎಂಜಿನಿಯರಿಂಗ್‌, ಪ್ಲಾಸ್ಟಿಕ್‌ ಸರ್ಜರಿ... ಮುಂತಾದ ಆವಿಷ್ಕಾರಗಳಲ್ಲಿ ಪ್ರಾಚೀನ ಭಾರತ ಮುಂದಿತ್ತು’ ಎಂಬ ಅವರ ಪ್ರತಿಪಾದನೆಯಿಂದ. ಅವರೇ ಇನ್ನೊಂದು ಕಡೆ, ಭಾರತದ ವಿಜ್ಞಾನಿಗಳ ಸಂಶೋಧನಾ ಸಾಮರ್ಥ್ಯದ ಕುರಿತು ಅಸಮಾಧಾನವನ್ನೂ ವ್ಯಕ್ತಪಡಿಸುತ್ತಾರೆ. ಸ್ವಾತಂತ್ರ್ಯಾನಂತರ ಆರೋಗ್ಯ, ಬಾಹ್ಯಾಕಾಶ, ಅಣುಶಕ್ತಿ, ಕೃಷಿ ಇತ್ಯಾದಿ ಕ್ಷೇತ್ರಗಳಲ್ಲಿ ಉನ್ನತ ಸಂಶೋಧನೆಯಾಗಿದ್ದರೂ ಇತ್ತೀಚೆಗೆ ಇದು ಕುಂಠಿತವಾಗಿರುವುದು ನಿಜ. ವಿಜ್ಞಾನದ ಮೂಲಭೂತ ಸಂಶೋಧನೆಗೆ ಸರ್ಕಾರ ಕೊಡಮಾಡಿರುವುದು ದೇಶದ ಜಿಡಿಪಿಯ ಕೇವಲ ಶೇ 0.8ರಷ್ಟು. ಮುಂದುವರಿದ ದೇಶಗಳಿಗೆ ಹೋಲಿಸಿದರೆ ಇದು ದಯನೀಯವಾಗಿ ಕಡಿಮೆ. ಆದರೂ ಇಡೀ ಜಗತ್ತು ಅಚ್ಚರಿಪಡುವಂಥ ತಂತ್ರಜ್ಞಾನದ ಅಭಿವೃದ್ಧಿಯನ್ನು ನಮ್ಮ ದೇಶದ ವಿಜ್ಞಾನಿಗಳು ಮಾಡಿದ್ದಾರೆ. ವಿಜ್ಞಾನದ ಅಭಿವೃದ್ಧಿಗಾಗಿ ಕೊಡಮಾಡುವ ಮೊತ್ತವನ್ನು ಜಿಡಿಪಿಯ ಶೇ 3ಕ್ಕೆ ಏರಿಸಬೇಕು ಎಂದು ವಿಜ್ಞಾನಿಗಳು ಹಲವು ವರ್ಷಗಳಿಂದ ಒತ್ತಾಯಿ

ಸುತ್ತಿದ್ದಾರೆ. ಆದರೂ ಸರ್ಕಾರದ ಕಿವಿಗೆ ಇದು ಬಿದ್ದಿಲ್ಲ.

ಏಕೆಂದರೆ ಈಗ ಅದರ ಲಕ್ಷ್ಯ ಆಧುನಿಕ ವಿಜ್ಞಾನಕ್ಕಿಂತ ಪ್ರಾಚೀನ ಭಾರತೀಯ ವಿಜ್ಞಾನದ ಮರುಶೋಧನೆಯತ್ತ ಹರಿದಿದೆ. 19 ಸದಸ್ಯರ ‘ನ್ಯಾಷನಲ್ ಸ್ಟೀರಿಂಗ್ ಕಮಿಟಿ ಫಾರ್ ಸೈಂಟಿಫಿಕ್ ವ್ಯಾಲಿಡೇಶನ್ ಅಂಡ್‌ ರಿಸರ್ಚ್ ಆನ್ ಪಂಚಗವ್ಯ’ ಎನ್ನುವ ಸಂಶೋಧನಾ ಯೋಜನೆಗೆ ಸರ್ಕಾರ ಕೋಟಿಕೋಟಿ ವ್ಯಯ ಮಾಡುತ್ತಿದೆ. ಗುರಿ: ಪಂಚಗವ್ಯ, ಎಂದರೆ ಆಕಳಿನಿಂದ ಬರುವ ಪಂಚಾಮೃತಗಳು- ಹಾಲು, ಮೊಸರು, ತುಪ್ಪ, ಸೆಗಣಿ ಮತ್ತು ಮೂತ್ರ ಇವುಗಳ ಕುರಿತು ಆಳವಾದ ಸಂಶೋಧನೆ. ಬೆಲ್ಲ, ಬಾಳೆಹಣ್ಣು, ಎಳನೀರು ಮತ್ತು ಕಬ್ಬಿನ ರಸದ ಜೊತೆಗೆ ನಿಗದಿತ ಪ್ರಮಾಣದಲ್ಲಿ ಮಿಶ್ರಣ ಮಾಡಿದರೆ ಮಾಂತ್ರಿಕ ಮದ್ದು ಲಭ್ಯವಾಗುತ್ತದೆ ಎನ್ನುತ್ತದೆ ‘ಕೌಸೈನ್ಸ್’. ಇದರ ವೈಜ್ಞಾನಿಕ ತಳಹದಿ ಹುಡುಕುವ ಪ್ರಯತ್ನ ಭರದಿಂದ ಸಾಗಿದೆ.

ಅಖಿಲ ಭಾರತೀಯ ಗೋಸೇವಾ ಸಂಘದ ಅಧ್ಯಕ್ಷ ಶಂಕರ್‌ಲಾಲ್‌, ‘ಭಾರತದ ಹಸು ಹಾಕುವ ಸೆಗಣಿಯು ಅಪಾಯಕಾರಿವಿಕಿರಣಗಳನ್ನು ಹೀರಿಕೊಳ್ಳುವ ಶಕ್ತಿ ಹೊಂದಿದೆ’ ಎಂದು ಸಂದರ್ಶನವೊಂದರಲ್ಲಿ ಹೇಳಿ ಹಿಂಬದಿಯಲ್ಲಿ ಒಣ ಸೆಗಣಿ ಮೆತ್ತಿರುವ ತಮ್ಮ ಸೆಲ್ಫೋನ್‌ ಪ್ರದರ್ಶಿಸಿದರು ಕೂಡ. ಸೆಲ್‌ಫೋನಿನ ವಿಕಿರಣ ಎದುರುಗಡೆಯಿಂದಲೂ ಹೊಮ್ಮುತ್ತದೆ ಎಂದು ಇವರಿಗೆ ಗೊತ್ತಿಲ್ಲ.

‘ನಾವು ಪ್ರಾಚೀನ ಭಾರತೀಯರಿಗೆ ಋಣಿಯಾಗಿದ್ದೇವೆ, ನಮಗೆ ಅವರು ಎಣಿಸುವುದನ್ನು ಕಲಿಸಿದರು. ಇದರ ಹೊರತಾಗಿ ಹೆಚ್ಚಿನ ಆಧುನಿಕ ವೈಜ್ಞಾನಿಕ ಸಂಶೋಧನೆಗಳು ಸಾಧ್ಯವಾಗುತ್ತಿರಲಿಲ್ಲವೇನೋ’ ಎಂದಿದ್ದಾರೆ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೀನ್‌. ನಿಜ. ಪ್ರಾಚೀನ ಭಾರತದ ವಿವಿಧ ಕಾಲಘಟ್ಟಗಳಲ್ಲಿ ಖಗೋಳಶಾಸ್ತ್ರ, ಗಣಿತಶಾಸ್ತ್ರ, ವೈದ್ಯಕೀಯ ಶಾಸ್ತ್ರಗಳಿಗೆ ಬೌಧಾಯನ, ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರಾಚಾರ್ಯ, ವರಾಹಮಿಹಿರ, ನಾಗಾರ್ಜುನ ಅವರ ಕೊಡುಗೆ ಅನನ್ಯ. ನಂತರದ ಶತಮಾನಗಳಲ್ಲಿ ಮಸುಕಾಗಿರುವ ಈ ಇತಿಹಾಸವನ್ನು ವೈಜ್ಞಾನಿಕವಾಗಿಯೇ ಶೋಧಿಸಿ ಕಲಿಯುವುದು ಬೇಕಾದಷ್ಟಿದೆ. ಆದರೆ ಈ ಕೆಲಸವನ್ನು ವಿಜ್ಞಾನಿಗಳಿಗೇ ಬಿಟ್ಟು ಉಳಿದ ವಿದೂಷಕರು ಸುಮ್ಮನಿರುವುದು ಒಳ್ಳೆಯದು. ವಿಜ್ಞಾನದಲ್ಲಿ ಇಟಲಿಯ ವಿಜ್ಞಾನ, ಅಮೆರಿಕದ ವಿಜ್ಞಾನ ಅಂತಿರುವುದಿಲ್ಲ. ಹಾಗೆಯೇ ಭಾರತೀಯ ವಿಜ್ಞಾನ ಎಂದಿರುವುದಿಲ್ಲ. ವಿಜ್ಞಾನ ಒಂದು ಜಾಗತಿಕ ವಸ್ತುನಿಷ್ಠ ವಿದ್ಯಮಾನ. ಈ ನೆಲೆಗಟ್ಟಿನಲ್ಲಿ ಸಂಶೋಧನೆ ನಡೆಸಿದಾಗಲೇ ಪ್ರಾಚೀನ ಭಾರತದಲ್ಲಿ ಆಗಿದ್ದ ಅಭಿವೃದ್ಧಿಯ ನೈಜ ಚಿತ್ರಣ, ನಿಜವಾದ ಗೌರವ ಸಿಗುತ್ತದೆ.

ಇನ್ನು ನಾವು ಆರಂಭಿಸಿದ್ದಲ್ಲಿಗೆ ಮರಳೋಣ. ಮೈಸೂರಿನಲ್ಲಿ ಜರುಗಿದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ನಡೆದ ‘ಮೌಢ್ಯ ಪ್ರತಿಪಾದಿಸುವ ವಸ್ತುಪ್ರದರ್ಶನ’ಕ್ಕೆ ಬಂದ ಟೀಕೆಗಳಿಗೆ, ಇದರ ಸಂಯೋಜಕ ಸಿ.ಕೃಷ್ಣೇಗೌಡರು, ‘ವಿಜ್ಞಾನ ಸಮಾವೇಶಕ್ಕೂ ವಸ್ತುಪ್ರದರ್ಶನಕ್ಕೂ ಸಂಬಂಧವಿಲ್ಲ. ವಿಜ್ಞಾನ ಪರಿಷತ್ತಿನಿಂದ ಇದನ್ನು ಆಯೋಜಿಸಿರಲಿಲ್ಲ. 20 ಶಾಲೆಗಳು ಸೇರಿ ಇದನ್ನು ಏರ್ಪಡಿಸಿದ್ದವು’ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ ಇದು ನಡೆದದ್ದು ಸಮಾವೇಶದ ಸಂದರ್ಭದಲ್ಲಿ, ಸಮಾವೇಶ ನಡೆದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿನ ಮೊದಲ ಮಹಡಿಯಲ್ಲಿ. ಸಂಘಟಕರ ಸಹಮತಿ ಇಲ್ಲದೇ ಈ ಪ್ರದರ್ಶನ ನಡೆಯಿತೇ?

ವಿಜ್ಞಾನ, ವೈಜ್ಞಾನಿಕ ಮನೋವೃತ್ತಿ ಪ್ರಸಾರ, ಅದರಲ್ಲೂ ಮಕ್ಕಳ ಸಂದರ್ಭ ಕೇವಲ ಸಂಭ್ರಮ– ಸಡಗರಗಳಿಗಷ್ಟೇ ಸೀಮಿತಗೊಳ್ಳದೆ ಮೈಯೆಲ್ಲಾ ಕಣ್ಣು ಎಂಬಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಎಚ್.ನರಸಿಂಹಯ್ಯ ಅಂಥವರು ಸ್ಥಾಪಿಸಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಆಜೀವ ಸದಸ್ಯ ಎಂದು ಹೇಳಿಕೊಳ್ಳಲು ನನಗೆ ಇತ್ತೀಚೆಗೆ ಮುಜುಗರವಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.