ಸೋಮವಾರ, ಆಗಸ್ಟ್ 3, 2020
25 °C

ಮರುಕಳಿಸಲಿದೆ ಕ್ಲಾಕ್‌ ಟವರ್‌ ವೈಭವ

ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

ಮರುಕಳಿಸಲಿದೆ ಕ್ಲಾಕ್‌ ಟವರ್‌ ವೈಭವ

ಮಂಗಳೂರು: ಒಂದು ಕಾಲದಲ್ಲಿ ನಗರದಲ್ಲಿ ರಾರಾಜಿಸುತ್ತಿದ್ದ ಕ್ಲಾಕ್ ಟವರ್ ಮತ್ತೆ ತನ್ನ ಗತವೈಭವದೊಂದಿಗೆ ತಲೆ ಎತ್ತಲಿದೆ. ಮಂಗಳೂರು ಮೇಯರ್ ಕವಿತಾ ಸನಿಲ್ ಆಗ್ರಹದ ಮೇರೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ನೂತನ ಕ್ಲಾಕ್ ಟವರ್ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ.

ನಗರದ ಪ್ರಮುಖ ಆಕರ್ಷಣೆಯನ್ನು ಮತ್ತೊಮ್ಮೆ ನಿರ್ಮಿಸುವುದಕ್ಕೆ ಮಹಾನಗರ ಪಾಲಿಕೆ ಮುಂದಾಗಿದ್ದು, ₹90 ಲಕ್ಷ ವೆಚ್ಚದಲ್ಲಿ ಹೊಸ ಗಡಿಯಾರ ಗೋಪುರ ನಿರ್ಮಾಣಕ್ಕೆ ಇದೀಗ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ.

ಅಭಿವೃದ್ಧಿಯ ವೇಗದಲ್ಲಿ ದಶಕಗಳ ಹಿಂದೆ ನೆಲಕ್ಕೆ ಉರುಳಿದ್ದ ಗಡಿಯಾರ ಗೋಪುರವನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಮತ್ತೆ ನಿರ್ಮಿಸಲು ಮೇಯರ್‌ ಕವಿತಾ ಸನಿಲ್‌ ಉತ್ಸುಕರಾಗಿದ್ದಾರೆ. ಈ ಹಿಂದೆ ಇದ್ದ ಜಾಗದಲ್ಲಿಯೇ ಹೊಸ ಕ್ಲಾಕ್ ಟವರ್ ತಲೆ ಎತ್ತಲಿದ್ದು, ಮತ್ತೆ ಹಳೆಯ ನೆನಪು ಮರುಕಳಿಸಲಿದೆ. ಈಗಾಗಲೇ ಯೋಜನೆಗೆ ಅನುಮೋದನೆ ಪಡೆಯಲಾಗಿದ್ದು, ಅಲ್ಪಾವಧಿ ಟೆಂಡರ್‌ ಮೂಲಕ ಕಾಮಗಾರಿ ಆರಂಭಿಸಲಾಗುತ್ತಿದೆ.

ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನಗರದ ವಿಶ್ವವಿದ್ಯಾಲಯ ಕಾಲೇಜಿನ ಬಳಿ ಇದ್ದ ಗಡಿಯಾರ ಗೋಪುರವನ್ನು ತೆಗೆಯಲಾಗಿತ್ತು. ಬಳಿಕ ಮತ್ತೆ ಕ್ಲಾಕ್ ಟವರ್ ನಿರ್ಮಾಣಕ್ಕೆ ತೆರೆಮರೆಯಲ್ಲಿಯೇ ಪ್ರಕ್ರಿಯೆಗಳು ಆರಂಭವಾಗಿದ್ದವು. 2010 ರಲ್ಲಿಯೇ ಪಾಲಿಕೆಯಿಂದ ಕ್ಲಾಕ್ ಟವರ್ ನಿರ್ಮಿಸಲು ಯೋಚನೆ ಮಾಡಲಾಗಿತ್ತು. 2013 ರಲ್ಲಿ ಶಾಸಕರಾಗಿ ಆಯ್ಕೆಯಾದ ಜೆ.ಆರ್. ಲೋಬೊ ಸಹ, ನಗರದ ವೈಭವವನ್ನು ಮತ್ತೆ ಕಟ್ಟುವ ಉದ್ದೇಶದಿಂದ ಗಡಿಯಾರ ಗೋಪುರ ನಿರ್ಮಿಸುವ ಪ್ರಸ್ತಾವನೆಯನ್ನು ಮುಂದಿಟ್ಟರು.

ಆದರೆ, ಪಾಲಿಕೆಯ ಆಡಳಿತ ಮಂಡಳಿಯಲ್ಲಿ ಈ ವಿಷಯ ಮಾತ್ರ ಯಾವುದೇ ಪ್ರಗತಿ ಕಾಣಲಿಲ್ಲ. ಇದುವರೆಗೆ ಕೇವಲ ಪ್ರಸ್ತಾವನೆಯಲ್ಲಿಯೇ ಉಳಿದಿದ್ದ ಕ್ಲಾಕ್‌ ಟವರ್‌ಗೆ ಇದೀಗ ಸ್ಮಾರ್ಟ್‌ ಸಿಟಿ ಮರುಜೀವ ನೀಡಿದೆ. ಮಾರ್ಚ್‌ನಲ್ಲಿ ಸಿದ್ಧ: ಸ್ಮಾರ್ಟ್ ಸಿಟಿ ಯೋಜನೆಯಡಿ ಈಗಾಗಲೇ ಎಸ್‌ಪಿವಿಯಿಂದ 65 ಕಾಮಗಾರಿಗಳಿಗೆ ಅನುಮೋದನೆ ಪಡೆಯಲಾಗಿದ್ದು, ಆ ಪೈಕಿ ಕ್ಲಾಕ್‌ ಟವರ್‌ ಕೂಡ ಒಂದು.

ಈ ಹಿಂದೆ ಪ್ರಸ್ತಾಪಿಸಿದ್ದ ಸ್ಮಾರ್ಟ್ ಸಿಟಿ ಯೋಜನೆಯಡಿ ಕ್ಲಾಕ್‌ ಟವರ್‌ ನಿರ್ಮಾಣದ ಉಲ್ಲೇಖ ಇರಲಿಲ್ಲ. ಆದರೆ, ಮೇಯರ್‌ ಮುತುವರ್ಜಿಯಿಂದಾಗಿ ಪಂಪ್‌ವೆಲ್ ಬಸ್‌ನಿಲ್ದಾಣದ ಜತೆಗೆ ಕ್ಲಾಕ್‌ ಟವರ್‌ ಕೂಡ ಸ್ಮಾರ್ಟ್‌ ಸಿಟಿಯಲ್ಲಿ ಒಪ್ಪಿಗೆ ದೊರೆತಿದೆ.

ಕ್ಲಾಕ್ ಟವರ್‌ಗೆ ಶೀಘ್ರದಲ್ಲಿಯೇ ಶಿಲಾನ್ಯಾಸ ನಡೆಸಲಿದ್ದು, ಇದು ಆದಷ್ಟು ಶೀಘ್ರ ಜಾರಿಗೊಳಿಸಬೇಕು ಎನ್ನುವ ಆಲೋಚನೆ ಹೊಂದಿರುವ ಪಾಲಿಕೆ, ನೀಲನಕ್ಷೆ ಸಿದ್ಧಪಡಿಸಿ, ಅಲ್ಪಾವಧಿ ಟೆಂಡರ್ ಕರೆದಿದೆ. ಇದೇ 15 ರಂದು ಟೆಂಡರ್‌ ತೆರೆಯಲಾಗುತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ಮಾರ್ಚ್‌ ಅಂತ್ಯಕ್ಕೆ ಕ್ಲಾಕ್‌ ಟವರ್‌ ಸಿದ್ಧವಾಗುವ ಸಾಧ್ಯತೆಗಳಿವೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.

‘21 ಮೀಟರ್ ಎತ್ತರದ ಕ್ಲಾಕ್ ಟವರ್‌ನ ಮೇಲಿನ ಭಾಗದಲ್ಲಿ ನಾಲ್ಕು ಬದಿಯಲ್ಲೂ ಬೃಹತ್ ಗಡಿಯಾರಗಳನ್ನು ಅಳವಡಿಸಲಾಗುತ್ತದೆ. ಕೆಳಭಾಗದಲ್ಲಿ ಗಾರ್ಡನ್ ನಿರ್ಮಿಸುವ ಯೋಚನೆ ಇದೆ’ ಎಂದು ಪಾಲಿಕೆ ಆಯುಕ್ತ ಮುಹಮ್ಮದ್‌ ನಜೀರ್‌ ತಿಳಿಸಿದ್ದಾರೆ.

‘ಕ್ಲಾಕ್ ಟವರ್ ನಿರ್ಮಾಣದಿಂದ ಮಂಗಳೂರಿನ ಪರಂಪರೆಯನ್ನು ಉಳಿಸಿದಂತಾಗಲಿದೆ. ಸಂಚಾರಕ್ಕೆ ತೊಂದರೆ ಆಗದ ರೀತಿಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಹೊಸ ತಂತ್ರಜ್ಞಾನವನ್ನೂ ಅಳವಡಿಸಿಕೊಳ್ಳಬಹುದಾಗಿದೆ’ ಎನ್ನುತ್ತಾರೆ ಶಾಸಕ ಜೆ.ಆರ್. ಲೋಬೊ.

‘ಕನಸು ಈಡೇರಿದೆ’

ಮಂಗಳೂರಿನ ಹಂಪನಕಟ್ಟೆಯಲ್ಲಿ ಹೆಗ್ಗುರುತಾಗಿದ್ದ ಹಳೆ ಕ್ಲಾಕ್‌ ಟವರ್‌ ಜಾಗದಲ್ಲಿಯೇ ಹೊಸದಾಗಿ ಕ್ಲಾಕ್‌ ಟವರ್‌ ನಿರ್ಮಿಸಬೇಕು ಎಂಬ ಬಗ್ಗೆ ನನ್ನ ಬಹುದಿನಗಳ ಕನಸನ್ನು ಈಡೇರಿಸಲಾಗುತ್ತಿದೆ ಎಂದು ಮೇಯರ್‌ ಕವಿತಾ ಸನಿಲ್‌ ಹೇಳಿದ್ದಾರೆ.

ಮಂಗಳೂರಿನ ಹಳೆಯ ನೆನಪನ್ನು ಜೀವಂತವಾಗಿ ಇಡುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಇದಕ್ಕಾಗಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಇದನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕವಿತಾ ಸನಿಲ್‌ ಅವರ ಅವಧಿ ಮಾರ್ಚ್‌ನಲ್ಲಿ ಪೂರ್ಣಗೊಳ್ಳಲಿದ್ದು, ಅಷ್ಟರಲ್ಲಿಯೇ ಕ್ಲಾಕ್‌ ಟವರ್‌ ಉದ್ಘಾಟನೆ ನೆರವೇರಿಸಬೇಕು ಎನ್ನುವುದು ಅವರ ಬಯಕೆ.

* * 

ವಿಶ್ವವಿದ್ಯಾಲಯ ಕಾಲೇಜಿನ ಬಳಿ ಹಳೆಯ ಜಾಗದಲ್ಲಿಯೇ ಸಂಚಾರಕ್ಕೆ ತೊಂದರೆ ಆಗದಂತೆ ಕ್ಲಾಕ್‌ ಟವರ್‌ ನಿರ್ಮಿಸಲು ಉದ್ದೇಶಿಸಲಾಗಿದೆ.

ಮುಹಮ್ಮದ್‌ ನಜೀರ್‌

ಪಾಲಿಕೆ ಆಯುಕ್ತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.