ಬುಧವಾರ, ಆಗಸ್ಟ್ 5, 2020
21 °C

ಏತ ನೀರಾವರಿ: ಕಾಲುವೆಗಳಲ್ಲಿ ಹೂಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏತ ನೀರಾವರಿ: ಕಾಲುವೆಗಳಲ್ಲಿ ಹೂಳು

ಮುಂಡರಗಿ: ‘ತಾಲ್ಲೂಕಿನ ಬೀಡನಾಳ, ಬೆಣ್ಣಿಹಳ್ಳಿ, ಕೊರ್ಲಹಳ್ಳಿ ಗ್ರಾಮಗಳ ಬಳಿ ನಿರ್ಮಿಸಲಾಗಿರುವ ಸಿಂಗಟಾಲೂರ ಹುಲಿಗುಡ್ಡ ಏತ ನೀರಾವರಿ ಯೋಜನೆಯ ಕಾಲುವೆಗಳು ಹೂಳಿನಿಂದ ತುಂಬಿದ್ದು, ರೈತರ ಜಮೀನುಗಳಿಗೆ ನೀರು ಹರಿಯದಂತಾಗಿದೆ’ ಎಂದು ತಾಲ್ಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್‌.ಗೌಡರ ಆರೋಪಿಸಿದರು. ರೈತರೊಂದಿಗೆ ಕಾಲುವೆಗಳಿಗೆ ಸೋಮವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಬೀಡನಾಳ ಗ್ರಾಮದ ಬಳಿ ಕಳಪೆ ಕಾಮಗಾರಿ ನಡೆದಿದ್ದು, ಕಾಲುವೆ ದಂಡೆಗಳು ಕಿತ್ತುಹೋಗಿವೆ ಮತ್ತು ಹೂಳಿನಿಂದ ಮುಚ್ಚಿಹೋಗಿವೆ. ಇದರಿಂದ ರೈತರು ತಮ್ಮ ಜಮೀನುಗಳಿಗೆ ನೀರು ಹಾಯಿಸಿಕೊಳ್ಳಲು ಹರಸಾಹಸಪಡುವಂತಾಗಿದೆ. ಕಾಲುವೆಗಳಲ್ಲಿ ನೀರು ಹರಿಯದೆ, ನಿತ್ಯ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿಯುತ್ತಿದೆ. ಕಾಲುವೆ ಪಕ್ಕದ ಜಮೀನುಗಳು ಜವುಗು ಭೂಮಿಯಾಗುತ್ತಲಿವೆ’ ಎಂದು ದೂರಿದರು.

‘ಕಳೆದ ಎರಡು ವರ್ಷದಿಂದ ಕಾಲುವೆಗಳಲ್ಲಿ ನೀರು ಹರಿಯುತ್ತಿದೆ. ತೀರಾ ಆಳವಾಗಿ ನಿರ್ಮಿಸಿರುವುದರಿಂದ ಕಾಲುವೆಯ ನೀರು ರೈತರ ಜಮೀನಿಗೆ ಹರಿಯದಂತಾಗಿದೆ. ಜಮೀನಿನ ಪಕ್ಕದಲ್ಲಿ ನಿತ್ಯ ನೀರು ಹರಿಯುತ್ತಿದ್ದರೂ ರೈತರ ಜಮೀನಿಗೆ ನೀರಿಲ್ಲದಂತಾಗಿದೆ’ ಎಂದು ತಿಳಿಸಿರು.

‘ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಈ ಕುರಿತು ಈಗಾಗಲೇ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ, ಅವರ‍್ಯಾರೂ ರೈತರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಕಳಪೆ ಕಾಲುವೆಗಳನ್ನು ನಿರ್ಮಿಸಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಮತ್ತು ಅಧಿಕಾರಿಗಳನ್ನು ಅಮಾನತುಗೊಳಿಸಬೇಕು’ ಎಂದು ಒತ್ತಾಯಿಸಿದರು.

ಎ.ಪಿ.ಎಂ.ಸಿ. ಸದಸ್ಯ ರವೀಂದ್ರ ಉಪ್ಪಿನಬೆಟಗೇರಿ ಮಾತನಾಡಿ, ‘ಬೀಡನಾಳ ಗ್ರಾಮ ಸೇರಿ ಅದರ ಸುತ್ತಲಿನ ಗ್ರಾಮಗಳ ಸುಮಾರು 12,000 ಹೆಕ್ಟರ್ ಪ್ರದೇಶಕ್ಕೆ ಕಾಲುವೆ ಮುಖಾಂತರ ನೀರು ಒದಗಿಸಲು ಸಾಧ್ಯವಿದೆ. ಆದರೆ ಸರ್ಕಾರ ಕಾಲುವೆಗಳನ್ನು ಬಿಟ್ಟು ಹನಿ ನೀರಾವರಿ ಯೋಜನೆ ಮೂಲಕ ರೈತರ ಜಮೀನಿಗೆ ನೀರೊದಗಿಸಲು ಪ್ರಯತ್ನಸುತ್ತಿದೆ. ಹನಿ ನೀರಾವರಿ ಯೋಜನೆಗಳು ವಿಫಲವಾಗಿದ್ದು, ಸರ್ಕಾರ ಅದನ್ನು ಕೈಬಿಟ್ಟು ಕಾಲುವೆ ಮೂಲಕ ರೈತರ ಜಮೀನುಗಳಿಗೆ ನೀರೊದಗಿಸಬೇಕು’ ಎಂದು ಒತ್ತಾಯಿಸಿದರು.

‘ಸಿಂಗಟಾಲೂರ ಹುಲಿಗುಡ್ಡ ಏತ ನೀರಾವರಿ ಯೋಜನೆಯಿಂದ ತಾಲ್ಲೂಕಿನ ಕೆರೆಗಳನ್ನು ತುಂಬಿಸಲಾಗುತ್ತಿದೆ. ಕೆರೆಗಳು ತುಂಬಿ ಕೋಡಿ ಹರಿದರೂ ನೀರು ಹರಿಸುವುದನ್ನು ಸ್ಥಗಿತಗೊಳಿಸಿಲ್ಲ. ನಿತ್ಯ ವ್ಯರ್ಥವಾಗಿ ನೀರು ಹರಿದು ಹೋಗುತ್ತಲಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.