ಸೋಮವಾರ, ಆಗಸ್ಟ್ 10, 2020
23 °C

ಸಹನಾಧರ್ಮ–ಸೆಕ್ಯುಲರ್‌ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

–ರಾಜಾರಾಮ ತೋಳ್ಪಾಡಿ, ನಿತ್ಯಾನಂದ ಬಿ.ಶೆಟ್ಟಿ

‘ಸೆಕ್ಯುಲರ್ ಮತ್ತು ಸಹಜ ಸಮುದಾಯ’ ಎಂಬ ತಮ್ಮ ಪ್ರತಿಕ್ರಿಯೆಯಲ್ಲಿ ಅಶ್ವಿನ್‍ರವರು ಸೆಕ್ಯುಲರ್ ಎಂಬ ಸಹಜ ಸಮುದಾಯವಿಲ್ಲವೆಂದೂ, ಜಾತಿ ಮತ್ತು ಪಂಗಡಗಳು ಸಹಜ ಸಮುದಾಯಗಳು ಎಂದೂ ಹೇಳಿದ್ದಾರೆ (ಪ್ರ.ವಾ.,ಚರ್ಚೆ, ಡಿ. 29).

ಸಹಜ ಸಮುದಾಯಗಳೆಂದರೆ ಏನು? ಸಮುದಾಯಗಳು ಗಿಡ-ಮರ, ನದಿ-ನದಗಳಂತೆ ಸಹಜವಾಗಿವೆಯೋ ಅಥವಾ ಕಾಲಾನುಕ್ರಮದಲ್ಲಿ ರೂಢಿಸಿಕೊಂಡು ಬಂದ ಸಂಪ್ರದಾಯಗಳನ್ನು ಪರಿಪಾಲಿಸುತ್ತ ರೂಪುಗೊಂಡ ಕುಲಾಚಾರದ ಕೂಡು-ಕಟ್ಟುಗಳನ್ನು ಅಸ್ಮಿತೆಗಳಾಗಿ ಧರಿಸಿ

ಕೊಂಡಿರುವ ಗುಂಪುಗಳೋ? ಅಶ್ವಿನ್, ಊರು-ಕೇರಿಗಳನ್ನು ಸ್ವಾಭಾವಿಕ ಎನ್ನುತ್ತಾರೆ. ನಮ್ಮ ದೇಶದ ಯಾವ ಊರು-ಕೇರಿಗಳು ಸ್ವಾಭಾವಿಕವಾಗಿವೆ? ಯಾರು ಯಾರು ಎಲ್ಲೆಲ್ಲಿ ಇರಬೇಕು ಎಂಬ ರೀತಿ-ರಿವಾಜಿನಲ್ಲಿ ರಚಿತಗೊಂಡಿರುವುದೇ ನಮ್ಮ ಊರು-ಕೇರಿಗಳಲ್ಲವೇ? ಒಂದು ಕಾಲಕ್ಕೆ ನಿರ್ದಿಷ್ಟ ಸಾಮಾಜಿಕ ಧೋರಣೆಯ ಹಿನ್ನೆಲೆಯಲ್ಲಿ ವಿನ್ಯಾಸಗೊಂಡ ಊರು-ಕೇರಿಗಳನ್ನು ನಾವು ಇಂದು ಸಹಜ-ಸ್ವಾಭಾವಿಕ ಎಂದು ಭಾವಿಸುವು

ದಾದರೆ; ಸೆಕ್ಯುಲರ್ ಎನ್ನುವ ಪಾತಳಿಯನ್ನೂ ಕಾಲಾನುಕ್ರಮದಲ್ಲಿ ನಾವು ನಮ್ಮ ಜೀವನಕ್ರಮಗಳಿಂದ ಸ್ವಾಭಾವಿಕಗೊಳಿಸಬಹುದಲ್ಲವೇ?

ಭಾರತದ ಸಂದರ್ಭದಲ್ಲಿ ವಿಶೇಷವಾಗಿ ಸೆಕ್ಯುಲರ್‌ವಾದ ತನ್ನ ಐರೋಪ್ಯ ಮೂಲದ ಕಾರಣಕ್ಕಾಗಿ ವ್ಯಾಪಕ ಮೂದಲಿಕೆಗೆ ಒಳಗಾಗಿದೆ. ಸೆಕ್ಯುಲರ್‌ವಾದ ಈ ದೇಶದ ಜಾಯಮಾನಕ್ಕೆ ಹೊಂದುವಂತಹುದಲ್ಲ. ಪಶ್ಚಿಮದ ಚಾರಿತ್ರಿಕ, ಸಾಂಸ್ಕೃತಿಕ ಹಾಗೂ ದೈವಶಾಸ್ತ್ರೀಯ ಹಿನ್ನೆಲೆಯಲ್ಲಿ ರೂಪುಗೊಂಡ ಅದನ್ನು ಭಾರತೀಯ ಸನ್ನಿವೇಶಕ್ಕೆ ಅಳವಡಿಸುವುದು ಅಪಾಯಕಾರಿ ಎಂದು ಚಿಂತಕ ಆಶಿಶ್ ನಂದಿ, ಪ್ರಾಧ್ಯಾಪಕ ಬಾಲಗಂಗಾಧರ ಸೇರಿದಂತೆ ಕೆಲವರು ವಾದಿಸಿದ್ದಾರೆ.

ಸೆಕ್ಯುಲರ್‌ವಾದವನ್ನು ಅನ್ಯವೆಂದು ಪರಿಭಾವಿಸುವ ಈ ಚಿಂತನೆಯ ಯಥಾರ್ಥತೆಯ ಕುರಿತು ನಮಗೆ ಸಂದೇಹಗಳಿವೆ. ಪಶ್ಚಿಮ ಮೂಲದ್ದು ಎಂಬ ಕಾರಣಕ್ಕಾಗಿ ತಿಳಿವಳಿಕೆಗಳನ್ನು ಬದಿಗೆ ಸರಿಸುವ ನಮ್ಮ ಅರಿವಿನ ನೆಲೆಗಳೂ ಅದೇ ಪಾಶ್ಚಾತ್ಯ ಜ್ಞಾನಪರಂಪರೆಯಿಂದಲೇ ರೂಪುಗೊಂಡವುಗಳಲ್ಲವೇ? 190 ವರ್ಷಗಳ ವಸಾಹತುಶಾಹಿ ಆಧುನಿಕತೆ ಹಾಗೂ 70 ವರ್ಷಗಳ ವಸಾಹತೋತ್ತರ ಆಧುನಿಕತೆಯ ನಂತರದಲ್ಲೂ ನಾವು ನಮ್ಮ ಇಂದಿನ ವಾಸ್ತವದಲ್ಲಿ ಇದು ಪಶ್ಚಿಮದ್ದು, ಇದು ಪೂರ್ವದ್ದು, ಇದು ಹೊರಗಿನದ್ದು, ಇದು ಒಳಗಿನದ್ದು ಎನ್ನುವ ಪ್ರತ್ಯೇಕೀಕರಣವನ್ನು ಮಾಡುವುದು ಹಾಸ್ಯಾಸ್ಪದವಲ್ಲವೇ? ಸೆಕ್ಯುಲರ್‌ವಾದವೂ ಸೇರಿದಂತೆ ಯಾವುದೇ ತಿಳಿವಳಿಕೆಯನ್ನು ಅದು ಎಲ್ಲಿಂದ ಬಂದದ್ದು ಎಂದು ಕೇಳುವ ಬದಲು ನಮ್ಮ ಪ್ರಕ್ಷುಬ್ಧ ಸ್ಥಿತಿಯನ್ನು ಈ ತಿಳಿವಳಿಕೆಯಿಂದ ಸರಿಯಾಗಿ ಅರಿಯಬಹುದೇ ಎಂದು ಕೇಳುವುದು ಸೂಕ್ತ.

ವಿಚಾರಗಳ ಆಯ್ಕೆಯಲ್ಲಿ ಅವುಗಳ ಚಾರಿತ್ರಿಕ ಅಥವಾ ಸಾಂಸ್ಕೃತಿಕ ಹಿನ್ನೆಲೆಗಳ ನಿಷ್ಕರ್ಷೆ ಇರಬೇಕು ನಿಜ, ಆದರೆ ಆಯ್ಕೆ ಮಾಡಿದ ವಿಚಾರಗಳನ್ನು ನಾವು ನಮ್ಮೊಳಗೆ ಎಷ್ಟು ಅಂತರ್ಗತಗೊಳಿಸಿ ರೂಢಿಸಿಕೊಳ್ಳುತ್ತೇವೆ ಎನ್ನುವುದೂ ಬಹಳ ಮುಖ್ಯ.

ಸೆಕ್ಯುಲರ್‌ವಾದ, ಐರೋಪ್ಯ ಮೂಲದ ಸೈದ್ಧಾಂತಿಕ ರಾಜಕೀಯ ವಿದ್ಯಮಾನವೆನ್ನುವುದು ಎಷ್ಟು ಸತ್ಯವೋ ಭಾರತೀಯ ಸಂದರ್ಭದಲ್ಲಿ ಅದು ಹೊಸ ಸವಾಲುಗಳ ನಡುವೆ ಮರುನಿರೂಪಿತವಾಗುತ್ತಿದೆ ಎನ್ನುವುದೂಅಷ್ಟೇ ಸತ್ಯ. ಆದರೆ ಅದು ಪಶ್ಚಿಮದಲ್ಲಿದ್ದ ಸ್ವರೂಪದಲ್ಲೇ ಯಥಾವತ್ ಆಗಿ ಈ ದೇಶಕ್ಕೆ ಬಂದಿಲ್ಲ. ಅದು ಈ ದೇಶದಲ್ಲಿ ಅನೇಕ ಚಾರಿತ್ರಿಕ ಪ್ರಕ್ರಿಯೆಗಳನ್ನು ಹಾದು ಬಂದಿದೆ. ಸಮಾಜ ಸುಧಾರಣಾ ಮತ್ತು ಸ್ವಾತಂತ್ರ್ಯ ಹೋರಾಟಗಳ ಮೂಲಕ, ಸಂವಿಧಾನದ ಸಭೆಯ ಚರ್ಚೆಗಳ ಮೂಲಕ, ಜೊತೆಗೆ ಸ್ವಾತಂತ್ರ್ಯೋತ್ತರ ರಾಜಕಾರಣದಲ್ಲಿ ನಡೆದ ಅನೇಕ ರಾಜಕೀಯ ಮತ್ತು ಬೌದ್ಧಿಕ ಸೆಣಸಾಟಗಳ ಮೂಲಕವೇ ಸೆಕ್ಯುಲರ್‌ವಾದ ನಮ್ಮೊಳಗೆ ಬಂದಿದೆ. ಇದರಲ್ಲಿ ಅನೇಕ ಲೋಪದೋಷಗಳು ಇರುವುದೂ ನಿಜ. ಆ ಲೋಪದೋಷಗಳ ಜೊತೆಗಿನ ತಿಕ್ಕಾಟವೇ ಸುತ್ತಲಿನ ಲೋಕದ ಕುರಿತ ನಮ್ಮ ಜೀವನದೃಷ್ಟಿಯನ್ನು ರೂಪಿಸುತ್ತಿದೆ.

ಸಹಜ ಸಂಸ್ಕಾರಗಳೇ ನಮ್ಮ ಪಾಡು ಅಂತ ಆದರೆ ಆ ಸಹಜ ಸಂಸ್ಕಾರಗಳಿಂದ ಹೊರತಾಗಿದ್ದುಕೊಂಡು ಪಶ್ಚಿಮದಲ್ಲಿ ವಿದ್ಯಾಭ್ಯಾಸ ಮಾಡಿದ ಮತ್ತು ಭಾರತೀಯ ಆಧುನಿಕರಾಗಿರುವ ಕೆಲವೇ ಕೆಲವು ಜನ ಕುಳಿತು ರಚಿಸಿದ ಸಂವಿಧಾನ ಯಾಕೆ ಬೇಕು? ಹಾಗೆ ನೋಡುವುದರ ಮೂಲಕ ನಮ್ಮ ಸಂವಿಧಾನವನ್ನೇ ಅಸಹಜ ಎಂದಹಾಗಲ್ಲವೇ? ಸಹಜ- ಸ್ವಾಭಾವಿಕವಾಗಿರದ, ನಮ್ಮಲ್ಲಿ ಹುಟ್ಟಿ ಬೆಳೆಯದ ಸೆಕ್ಯುಲರ್‌ವಾದ ನಮಗೆ ಬೇಡವಾದರೆ ಅದೇ ರೀತಿ ಸಹಜವಾಗಿ ಹುಟ್ಟಿ ಬೆಳೆಯದ ಸಂಸತ್ತು ಎಂಬ ಸಂಸ್ಥೆ ನಮಗೆ ಯಾಕೆ ಬೇಕು? ವಿಶ್ವವಿದ್ಯಾಲಯದಂತಹ ಉನ್ನತ ಶಿಕ್ಷಣ ಸಂಸ್ಥೆಗಳು ಯಾಕೆ ಬೇಕು? ಲಾಗಾಯ್ತಿನಿಂದ ಬಂದದ್ದು ಮಾತ್ರ ಸಹಜವೂ, ಸ್ವಾಭಾವಿಕವೂ, ರೂಢಿಗತವೂ ಆದರೆ ಲೋಕರೂಢಿಯಲ್ಲಿ ತಂತಮ್ಮ ಸಂಸ್ಕಾರಗಳಲ್ಲಿ ಬೆಳೆದು ಬಂದಿರುವ ಜಾತಿ, ಅಸ್ಪೃಶ್ಯತೆ, ತಾರತಮ್ಯ ಇತ್ಯಾದಿಗಳೂ ಸಹಜವೂ ಸ್ವಾಭಾವಿಕವೂ ಹೌದಾದರೆ, ಅವುಗಳೆಲ್ಲವೂ ಹಾಗೆ-ಹಾಗೆಯೇ ಇರಬೇಕೇ? ರೂಢಿಗತವಾದವುಗಳೆಲ್ಲವೂ ನ್ಯಾಯಸಮ್ಮತವೋ? ನ್ಯಾಯಸಮ್ಮತದ ಪ್ರಶ್ನೆಯನ್ನು ನಾವು ನಮ್ಮ ದೇಶದ ನಿರ್ದಿಷ್ಟ ಪರಿಸ್ಥಿತಿಯಲ್ಲಿ ಎತ್ತುವುದು ಅಸ್ವಾಭಾವಿಕವಾಗಿ ಕಾಣುತ್ತದೋ? ಸಹಜ ಎನ್ನುವುದು ಸಹಜವಾದ ಸಂಗತಿಯಲ್ಲ. ಯಾವುದೇ ಒಂದು ಸಾಮಾಜಿಕ ಪರಿಸ್ಥಿತಿಯಲ್ಲಿ ಯಾರು ಎಲ್ಲಿ ನಿಂತಿದ್ದಾರೆ ಎನ್ನುವುದರಿಂದ ಯಾವುದು ಸಹಜ ಯಾವುದು ಅಸಹಜ ಎನ್ನುವುದು ನಿರ್ಧರಿತಗೊಳ್ಳುತ್ತದೆ.

ಸೆಕ್ಯುಲರ್ ಎನ್ನುವುದು ಒಂದು ರೂಢಿಯಾಗಿಲ್ಲದಿದ್ದರೆ, ಅದು ಸಹಜವಾಗಿಲ್ಲದಿದ್ದರೆ ಅದನ್ನು ನಾವು ರೂಢಿಗತಗೊಳಿಸಬೇಕಾಗಿದೆ. ಸಹಜವೂ ಸ್ವಾಭಾವಿಕವೂ ಆಗಿ ರೂಪಿಸಬೇಕಾಗಿದೆ. ಅದನ್ನು ರೂಢಿಯಾಗಿಸುವ ಪ್ರಯತ್ನದಲ್ಲಿ ನಾವು ಕೆಲವು ಸಲ ಹಿಮ್ಮೆಟ್ಟಿರಬಹುದು. ಆದರೆ ಅದರಿಂದ ನಾವು ಎದೆಗುಂದಬೇಕಾಗಿಲ್ಲ.

ಸೆಕ್ಯುಲರ್‌ವಾದ ಪಶ್ಚಿಮದಿಂದ ನಮ್ಮಲ್ಲಿಗೆ ಬರುವಾಗ ಏನೇನೋ ರೂಪಾಂತರಗಳನ್ನು ಪಡೆದಿದೆ. ಭಾರತದ ಸಾಂಸ್ಕೃತಿಕ ಚರಿತ್ರೆಯಲ್ಲಿ ಹಾಸು ಹೊಕ್ಕಂ

ತಿರುವ ಸಹನಶೀಲತೆ, ಸಹಬಾಳ್ವೆ ಹಾಗೂ ಸೌಹಾರ್ದಗಳ ನೆಲೆಯಲ್ಲಿ ಭಾರತದ ಸೆಕ್ಯುಲರ್‌ವಾದ ಮರುಹುಟ್ಟು ಪಡೆಯುತ್ತಿದೆ. ಈ ಅರ್ಥದಲ್ಲೇ ಕನ್ನಡದ ಸಾಮಾಜಿಕ ಚಿಂತಕ ದೇವನೂರ ಮಹಾದೇವ ಅವರು ಇದನ್ನು ‘ಸಹನಾಧರ್ಮ’ ಎಂದು ಕರೆದಿರುವುದು. ಸಾಂಸ್ಕೃತಿಕ ಪ್ರಕ್ಷುಬ್ಧತೆ, ಸಾಮಾಜಿಕ ಅಸಮತೆ, ಬೌದ್ಧಿಕ ಅಸಹನೆ ಹಾಗೂ ರಾಜಕೀಯ ಬರ್ಬರಗಳ ಪ್ರಸ್ತುತ ಭಾರತದಲ್ಲಿ ದೇವನೂರ ಚಾಲ್ತಿಗೆ ತಂದ ‘ಸಹನಾಧರ್ಮ’ದ ಆಶಯಗಳು, ಗುಣವಿಶೇಷಗಳು ಸೆಕ್ಯುಲರ್‌ವಾದದ ಇಂದಿನ ನಮ್ಮ ಆಯ್ಕೆ ಮತ್ತು ಅರ್ಥ ನಿರೂಪಣೆಯಾಗಬೇಕಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.