ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಾಯಿ ಸಮಿತಿಗೆ ವೈದ್ಯಕೀಯ ಮಸೂದೆ

Last Updated 2 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ವಿರೋಧ ಪಕ್ಷಗಳ ಒತ್ತಡ ಮತ್ತು ವೈದ್ಯರ ವಿರೋಧಕ್ಕೆ ಮಣಿದ ಕೇಂದ್ರ ಸರ್ಕಾರ ‘ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ’ಯನ್ನು ಪುನರ್‌ ಪರಿಶೀಲನೆಗಾಗಿ ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಲು ಮಂಗಳವಾರ ಒಪ್ಪಿಕೊಂಡಿದೆ.

ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಸಂಸತ್ತಿನ ಬಜೆಟ್‌ ಅಧಿವೇಶನದ ಒಳಗಾಗಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.

ಮಸೂದೆಯನ್ನು ಸ್ಥಾಯಿ ಸಮಿತಿಗೆ ಒಪ್ಪಿಸುತ್ತಿದ್ದಂತೆಯೇ ಭಾರತೀಯ ವೈದ್ಯಕೀಯ ಸಂಘ ಮುಷ್ಕರವನ್ನು ವಾಪಸ್‌ ಪಡೆಯಿತು. ಮಸೂದೆ ವಿರೋಧಿಸಿ ಮಂಗಳವಾರ ಕರಾಳ ದಿನಾಚರಣೆಗೆ ಕರೆ ನೀಡಿದ್ದ ಭಾರತೀಯ ವೈದ್ಯಕೀಯ ಸಂಘ(ಐಎಂಎ) ರಾಷ್ಟ್ರವ್ಯಾಪಿ 12 ಗಂಟೆ ಮುಷ್ಕರ ಆರಂಭಿಸಿತ್ತು.

ದೇಶದ ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಬದಲಾಯಿಸುವ ಮತ್ತು ಹೊಸ ವೈದ್ಯಕೀಯ ಆಯೋಗ ಸ್ಥಾಪಿಸಲು ಅವಕಾಶ ನೀಡುವ ಮಸೂದೆಯನ್ನು ಶುಕ್ರವಾರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿತ್ತು.

ಸರ್ಕಾರದ ಸಮ್ಮತಿ: ಸದನದಲ್ಲಿ ಹೇಳಿಕೆ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಅನಂತ್‌ಕುಮಾರ್‌, ‘ಮಸೂದೆಯನ್ನು ಸ್ಥಾಯಿ ಸಮಿತಿಗೆ ಪರಿಶೀಲನೆಗಾಗಿ ಕಳುಹಿಸಲು ಆಡಳಿತಾರೂಢ ಎನ್‌ಡಿಎದ ಕೆಲವು ಅಂಗಪಕ್ಷಗಳು ಹಾಗೂ ವಿರೋಧ ಪಕ್ಷಗಳು ಬಯಸಿವೆ. ಇದಕ್ಕೆ ಸರ್ಕಾರ ಸಮ್ಮತಿಸಿದೆ’ ಎಂದರು.

ಸ‌ುಪ್ರೀಂ ಕೋರ್ಟ್‌ ಆದೇಶದ ಅನ್ವಯ ಮತ್ತು ಸ್ಥಾಯಿ ಸಮಿತಿಯ ವರದಿಯ ಆಧಾರದಲ್ಲಿ ಶೀಘ್ರ ಹೊಸ ಕಾನೂನು ಜಾರಿಗೆ ತರಬೇಕಾಗಿದೆ. ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಬಜೆಟ್‌ ಅಧಿವೇಶನದ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಸಮಿತಿಗೆ ನಿರ್ದೇಶನ ನೀಡಬೇಕು ಎಂದು ಅವರು ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್‌ ಅವರಿಗೆ ಮನವಿ ಮಾಡಿದರು.

‘ಸಾಮಾನ್ಯವಾಗಿ ಸಮಿತಿಗಳಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಆದರೆ, ಈಗಾಗಲೇ ಒಂದು ಸ್ಥಾಯಿ ಸಮಿತಿ ಮಸೂದೆ ಬಗ್ಗೆ ವರದಿ ನೀಡಿದೆ’ ಎಂದು ಹೇಳಿದರು.

ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಭಾರತೀಯ ವೈದ್ಯಕೀಯ ಸಂಘ, ವೈದ್ಯಕೀಯ ವೃತ್ತಿಪರರನ್ನು ಅಧಿಕಾರಶಾಹಿ ಮತ್ತು ವೈದ್ಯಕೀಯೇತರ ಆಡಳಿತಗಾರರ ನಿಯಂತ್ರಣಕ್ಕೆ ತರುವ ಈ ಮಸೂದೆ ವೈದ್ಯರ ವೃತ್ತಿ ಸ್ವಾತಂತ್ರ್ಯ ಕಸಿದುಕೊಳ್ಳಲಿದೆ ಎಂದು ಆರೋಪಿಸಿದೆ

ಮುಖ್ಯಾಂಶಗಳು

* ವಿರೋಧ ಪಕ್ಷಗಳ ಬೇಡಿಕೆಗೆ ತಲೆಬಾಗಿದ ಕೇಂದ್ರ ಸರ್ಕಾರ

* ಎರಡನೇ ಬಾರಿಗೆ ಮಸೂದೆ ಸ್ಥಾಯಿ ಸಮಿತಿಗೆ

* ಬಜೆಟ್‌ ಅಧಿವೇಶನದ ಒಳಗೆ ವರದಿ ಮಂಡನೆಗೆ ಸೂಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT