ಗುರುವಾರ , ಜೂಲೈ 9, 2020
27 °C
ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿನ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಲು ಎನ್‌ಎಂಸಿ ರಚನೆ: ಆರೋಪ

ವೈದ್ಯಕೀಯ ಮಸೂದೆ: ಎಐಡಿಎಸ್‌ಒ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈದ್ಯಕೀಯ ಮಸೂದೆ: ಎಐಡಿಎಸ್‌ಒ ವಿರೋಧ

ಬೆಂಗಳೂರು: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ರಚನೆ ವಿರೋಧಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯ (ಎಐಡಿಎಸ್‌ಒ) ಕಾರ್ಯಕರ್ತರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದರು.

‘ರಾಷ್ಟ್ರೀಯ ವೈದ್ಯಕೀಯ ಮಂಡಳಿ ಬದಲಿಗೆ, ಎನ್‌ಎಂಸಿ ರಚನೆಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಇದು ಅವೈಜ್ಞಾನಿಕ ನಿರ್ಧಾರ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಬಿ.ರವಿನಂದನ್ ಹೇಳಿದರು.

‘ಶೇ 60 ರಷ್ಟು ಮ್ಯಾನೇಜ್‌ಮೆಂಟ್ ಸೀಟುಗಳನ್ನು ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜುಗಳು ಹಾಗೂ ಶೇ 40ರಷ್ಟು ಸೀಟುಗಳನ್ನು ಸರ್ಕಾರ ಹಂಚಿಕೆ ಮಾಡಬಹುದು’ ಎಂದು ಎನ್‌ಎಂಸಿ ಹೇಳಿದೆ. ಇದು ಸಹ ಅವೈಜ್ಞಾನಿಕ.ಶೇ 60 ರಷ್ಟು ಸೀಟುಗಳನ್ನು ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಬಿಟ್ಟುಕೊಡುವುದರಿಂದ ಸೀಟುಗಳನ್ನು ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡುವ ಸಾಧ್ಯತೆ ಇದೆ. ಇದು ವಿದ್ಯಾರ್ಥಿಗಳಿಗೆ ಮಾರಕವಾಗಲಿದೆ ಎಂದು ವಿವರಿಸಿದರು.

ಎನ್‌ಎಂಸಿಯಲ್ಲಿ 20 ಸದಸ್ಯರು ಇರಲಿದ್ದಾರೆ. ಅವರೆಲ್ಲರನ್ನು ಕೇಂದ್ರ ಸರ್ಕಾರವೇ ನೇಮಕ ಮಾಡುತ್ತದೆ. ರಾಜಕಾರಣಿಗಳು ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರನ್ನೇ ಸದಸ್ಯರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಇದರಿಂದ ಸೀಟುಗಳ ಹಂಚಿಕೆ ವೇಳೆ ಅವರು ಹಸ್ತಕ್ಷೇಪ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಅದನ್ನು ಕಾನೂನುಬದ್ಧಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಆಯೋಗ ರಚಿಸಲು ಮುಂದಾಗಿದೆ ಎಂದು ಆರೋಪಿಸಿದರು.

ಕಪ್ಪು ಪಟ್ಟಿ ಧರಿಸಿದ ವೈದ್ಯರು: ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಸ್ಥಾಪನೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮಂಗಳವಾರ ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರಮುಖ ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗವು (ಒಪಿಡಿ) ಎಂದಿನಂತೆ ತೆರೆದಿದ್ದವು. ವೈದ್ಯರು ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸುವ ಮೂಲಕ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು.

ವಿ.ವಿ.ಪುರದ ಕೆಂಪೇಗೌಡ ವೈದ್ಯಕೀಯ ಆಸ್ಪತ್ರೆ (ಕಿಮ್ಸ್‌), ಕನ್ನಿಂಗ್‌ ಹ್ಯಾಮ್‌ ರಸ್ತೆಯಲ್ಲಿರುವ ಫೋರ್ಟಿಸ್‌, ವಿಕ್ರಮ್‌, ಹಳೇ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್‌ ಆಸ್ಪತ್ರೆ, ಮತ್ತಿಕೆರೆಯ ಎಂ.ಎಸ್‌.ರಾಮಯ್ಯ, ಜಯನಗರದ ಸಾಗರ್‌ ಹಾಗೂ ಹಲಸೂರಿನ ಕೇಂಬ್ರಿಡ್ಜ್‌ ಆಸ್ಪತ್ರೆಗಳಲ್ಲಿ ಒಪಿಡಿಗಳು ತೆರೆದಿದ್ದುದು ಕಂಡು ಬಂತು. ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸಂಖ್ಯೆ ಎಂದಿಗಿಂತ ಕಡಿಮೆ ಇತ್ತು.

ರಾಜಾಜಿನಗರದ ಸುಗುಣ ಆಸ್ಪತ್ರೆ, ಮಲ್ಲೇಶ್ವರದ ಲಕ್ಷ್ಮಿ ಮೆಟರ್ನಿಟಿ ಆಸ್ಪತ್ರೆಗಳು ಮುಷ್ಕರಕ್ಕೆ ಸಂಪೂರ್ಣ ಬೆಂಬಲ ನೀಡಿವೆ. ಬೆಳಿಗ್ಗೆ 6ರಿಂದ ಸಂಜೆ6ರವರೆಗೆ ಒಪಿಡಿ ಬಂದ್‌ ಆಗಿರುವುದಾಗಿ ಫಲಕ ಹಾಕಲಾಗಿತ್ತು. ಮುಷ್ಕರದ ಹಾಗೂ ಒಪಿಡಿ ಮುಚ್ಚಿರುವ ಕುರಿತು ಹಲವರಿಗೆ ಮಾಹಿತಿಯೇ ಇರಲಿಲ್ಲ. ಮಧ್ಯಾಹ್ನದ ವೇಳೆ ವೈದ್ಯರು ಮುಷ್ಕರ ಹಿಂಪಡೆದರು.

‘ಮುಷ್ಕರದ ಬಗ್ಗೆ ಗೊತ್ತಿಲ್ಲ. ಕೆಲವು ವೈದ್ಯರು ರಜೆ ಹಾಕಿರುವುದರಿಂದ ತೊಂದರೆ ಆಗಿದೆ’ ಎನ್ನುತ್ತಾರೆ ರೋಗಿ ಯೋಗೇಶ್‌.

‘ಒಪಿಡಿಯನ್ನು ಮುಚ್ಚಿಲ್ಲ. ಕೆಲವು ವೈದ್ಯರು ರಜೆಯಲ್ಲಿದ್ದಾರೆ. ಖಾಸಗಿ ಆಸ್ಪತ್ರೆಗಳ ಒಪಿಡಿಗಳು ಮಂಗಳವಾರ ಬಂದ್‌ ಆಗಲಿವೆ ಎಂದು ಮಾಧ್ಯಮಗಳು ಬಿತ್ತರಿಸಿದ್ದರಿಂದ ಹೊರರೋಗಿಗಳ ಸಂಖ್ಯೆ ಕಡಿಮೆ ಇದೆ. ಯಾರಿಗೂ ಚಿಕಿತ್ಸೆ ನಿರಾಕರಿಸಿಲ್ಲ’ ಎಂದು ಮಣಿಪಾಲ್‌ ಆಸ್ಪತ್ರೆಯ ಮುಖ್ಯಸ್ಥ ಡಾ.ಸುದರ್ಶನ ಬಲ್ಲಾಳ್‌ ತಿಳಿಸಿದರು.

‘ಸಾಮಾನ್ಯವಾಗಿ ಒಪಿಡಿ ಸಂಜೆ 4ರವರೆಗೆ ಕಾರ್ಯನಿರ್ವಹಿಸುತ್ತವೆ. ಸರ್ಕಾರದ ಸೂಚನೆಯ ಮೇರೆಗೆ ಮಂಗಳವಾರ ಸಂಜೆ 6–7ರವರೆಗೆ ಒಪಿಡಿ ತೆರೆದಿ

ದ್ದೆವು. ವೈದ್ಯರು ರಜೆ ತೆಗೆದುಕೊಂಡಿಲ್ಲ. ಹೊರರೋಗಿಗಳ ಸಂಖ್ಯೆಯಲ್ಲಿ ಶೇ 20–25ರಷ್ಟು ಹೆಚ್ಚಳವಾಗಿದೆ’ ಎಂದು ಶಿವಾಜಿನಗರದ ಬೌರಿಂಗ್‌ ಆಸ್ಪತ್ರೆಯ ಡಾ. ರವಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.