ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿದ ವಿಜ್ಞಾನ ಮೇಳ

ಅಕ್ಷರ ಗಾತ್ರ

ಲಿಂಗಸುಗೂರು: ಪ್ರೌಢಶಾಲಾ ಮಕ್ಕಳನ್ನು ವಿಜ್ಞಾನ ಕಲಿಕೆ ಕಠಿಣವಾದುದ್ದು ಎಂಬ ಮನೋಸ್ಥಿತಿಯಿಂದ ಹೊರತಂದು ಅವರಲ್ಲಿ ಆತ್ಮವಿಶ್ವಾಸ ತುಂಬಲು ಉಮಾಮಹೇಶ್ವರಿ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳಲ್ಲಿ ಉತ್ಸಾಹ ಮೂಡಿಸುವಲ್ಲಿ ಯಶಸ್ವಿಯಾಯಿತು.

ತಾಲ್ಲೂಕಿನ ಕೆಲ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಮಾತ್ರ ವಿಜ್ಞಾನ ವಿಭಾಗ ಇವೆ. ಮಕ್ಕಳ ದಾಖಲತಿ ಪಡೆದರೂ ಪ್ರಯೋಗಾಲಯ, ಉಪನ್ಯಾಸಕರ ಕೊರತೆಯಿಂದ ವಿಜ್ಞಾನ ಕಲಿಕೆ ಮಕ್ಕಳಿಗೆ ಕಷ್ಟವಾಗುತ್ತಿತ್ತು. ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ವಿಜ್ಞಾನ ವಿಭಾಗ ಆರಂಭಿಸಿ ನಿರೀಕ್ಷಿತ ಪ್ರೋತ್ಸಾಹ ದೊರಕದೆ ಕೈ ಸುಟ್ಟುಕೊಂಡಿವೆ.

ಉಮಾಮಹೇಶ್ವರಿ ಶಿಕ್ಷಣ ಸಂಸ್ಥೆ ಆರಂಭಗೊಂಡ ಎರಡು ವರ್ಷದಲ್ಲಿ 459ಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ 120, ವಾಣಿಜ್ಯ ವಿಭಾಗದಲ್ಲಿ 160, ವಿಜ್ಞಾನ ವಿಭಾಗದಲ್ಲಿ 169 ಮಕ್ಕಳು ಪ್ರವೇಶ ಪಡೆದಿದ್ದಾರೆ. 2017ರಲ್ಲಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಆರಂಭಿಸಲಾಗಿದ್ದು, ಪ್ರಯೋಗಾಲಯ, ಗ್ರಂಥಾಲಯ, ಅನುಭವಿ ಉಪನ್ಯಾಸಕರ ನೇಮಕ ಮಾಡಲಾಗಿದೆ.

ಎನ್‌ಇಇಟಿ, ಸಿಇಟಿ, ಐಐಟಿ, ಜೆಇಇ ಪರೀಕ್ಷೆಗಳ ಬಗ್ಗೆ ಪ್ರಾರಂಭದಿಂದಲೆ ತರಬೇತಿ ನೀಡಲಾಗುತ್ತಿದೆ. ತಮ್ಮ ಕಾಲೇಜಿನ ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಜೊತೆಗೆ ತಾಲ್ಲೂಕಿನ ಪ್ರೌಢಶಾಲಾ ಮಕ್ಕಳಲ್ಲಿ ವಿಜ್ಞಾನ ಕುರಿತು ಇರುವ ಭಯ ನಿರ್ಮೂಲನೆಗೆ ಎ.ಪಿ.ಜೆ ಅಬ್ದುಲ್‌ ಕಲಾಂ ಸ್ಮರಣಾರ್ಥ ಈಚೆಗೆ ವಿಜ್ಞಾನ ಮೇಳದಲ್ಲಿ ಮಕ್ಕಳು ಮಾಹಿತಿ ಪಡೆದರು.

ಸೂರ್ಯ, ಗಾಳಿ, ಜಲದಿಂದ ವಿದ್ಯುತ್‌ ಉತ್ಪಾದಿಸುವ ತಂತ್ರಜ್ಞಾನ, ಕಲರ್‌ ಸೆನ್ಸರ್‌ ರೊಬೋಟ್‌, ಕ್ಷಿಪಣಿ ತಂತ್ರಜ್ಞಾನದ ಪೂರಕ ಮಾಹಿತಿ, ಉಷ್ಣ ಎಂಜಿನ್‌ಗಳ (ಪೆಟ್ರೋಲ್‌–ಡಿಸೈಲ್‌) ಮಾಹಿತಿ, ಆಮ್ಲ, ಪ್ರತ್ಯಾಮ್ಲಗಳ ಗುಣ ಧರ್ಮ, ಮಣ್ಣು ಇಲ್ಲದೆ ಸಸಿ ಬೆಳೆಸುವುದು, ಜಲಜನಕ ಬಿಡುಗಡೆ ವಿಧಾನ, ತರಕಾರಿಗಳಿಂದ ವಿದ್ಯುತ್‌ ಉತ್ಪದಾನೆ ಮಾದರಿಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ತಮಗೆ ನೀಡಿದ್ದ ಪ್ರಯೋಗಗಳ ಮಾದರಿ ಸಿದ್ಧಪಡಿಸಿ, ವಿಶ್ಲೇಷಣೆ ನೀಡಿದ ಇದೇ ಕಾಲೇಜಿನ ಪಿಯುಸಿ ಪ್ರಥಮ ವರ್ಷದ ವಿದ್ಯಾಸಾಗರ, ಸುಜಾತ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದು ಹೊಸ ಅನುಭವ ನೀಡಿದೆ. ವೀಕ್ಷಣೆಗೆ ಬಂದಿದ್ದ ಪ್ರೌಢಶಾಲಾ ಮಕ್ಕಳ ಪ್ರಶ್ನೆಗಳಿಂದ ಕಲಿತಿದ್ದೇವೆ ಎಂದು ಅನುಭವ ಹಂಚಿಕೊಂಡರು.

ಉಮಾಮಹೇಶ್ವರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ವಿ ಸುರೇಶ, ಆಡಳಿತ ಮಂಡಳಿ ಕಾರ್ಯದರ್ಶಿ ವಿನಯಕುಮಾರ ಗಣಾಚಾರಿ ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಜೊತೆ ಅಗತ್ಯ ಸೌಲಭ್ಯಗಳ ವಿಜ್ಞಾನ ವಿಭಾಗ ಆರಂಭಿಸಿದ ತಮಗೆ ಉತ್ತಮ ಪ್ರೋತ್ಸಾಹ ದೊರೆತಿದೆ. ಅಂತೆಯೆ ವಿಜ್ಞಾನ ವಸ್ತು ಪ್ರದರ್ಶನಕ್ಕೆ ತಾಲ್ಲೂಕಿನ ಪ್ರೌಢಶಾಲಾ ಮಕ್ಕಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ’ ಎಂದರು.

* * 

ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ಅದಕ್ಕೆ ಉತ್ತಮ ಪ್ರೋತ್ಸಾಹ ಸಿಕ್ಕಿದೆ.
ವಿನಯಕುಮಾರ, ಕಾರ್ಯದರ್ಶಿ, ಉಮಾಮಹೇಶ್ವರಿ ಶಿಕ್ಷಣ ಸಂಸ್ಥೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT