ಸೋಮವಾರ, ಜೂಲೈ 6, 2020
21 °C

ಆರಂಭವಾಗದ ತೊಗರಿ ಖರೀದಿ ಕೇಂದ್ರಗಳು

ಟಿ.ನಾಗೇಂದ್ರ Updated:

ಅಕ್ಷರ ಗಾತ್ರ : | |

ಆರಂಭವಾಗದ ತೊಗರಿ ಖರೀದಿ ಕೇಂದ್ರಗಳು

ಶಹಾಪುರ: ‘ತಾಲ್ಲೂಕಿನಲ್ಲಿ ಏಳು ಕಡೆ ತೊಗರಿ ಖರೀದಿ ಕೇಂದ್ರಗಳನ್ನು ವಾರದ ಹಿಂದೆ ಸ್ಥಾಪಿಸಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ತಿಳಿಸಿದ್ದಾರೆ. ಆದರೆ, ಇಂದಿಗೂ ಖರೀದಿ ಕೇಂದ್ರ ಬಾಗಿಲು ತೆರೆದಿಲ್ಲ’ ಎಂದು ವಿವಿಧ ರೈತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

‘ತಾಲ್ಲೂಕಿನ ರಬ್ಬನಹಳ್ಳಿ, ಚಾಮನಾಳ, ದೋರನಹಳ್ಳಿ, ವಡಗೇರಾ, ಹಯ್ಯಾಳ, ಗೋಗಿ ಹಾಗೂ ಟಿಎಪಿಎಂಎಸ್‌ ನಲ್ಲಿ ತೊಗರಿ ಖರೀದಿ ಕೇಂದ್ರ ಸ್ಥಾಪಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಅದರಂತೆ ಖರೀದಿ ಆರಂಭಿಸಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ರಂಗನಾಥ ತಿಳಿಸಿದ್ದರು.

ಮಾರುಕಟ್ಟೆಗೆ ಈಗಾಗಲೇ ತೊಗರಿ ಬರುತ್ತಿದ್ದು ಬೆಂಬಲ ಬೆಲೆಗೆ ಮಾರಾಟ ಮಾಡಿದರೆ ತುಸು ನೆರವಾಗುತ್ತದೆ ಎಂಬ ಭರವಸೆ ಹುಸಿಯಾಗಿದೆ. ಜಿಲ್ಲಾಧಿಕಾರಿ ಸಹ ನಿಷ್ಕಾಳಜಿ ತೋರಿಸುತ್ತಿದ್ದಾರೆ’ ಎಂದು ಕರ್ನಾಟಕ ಕಿಸಾನ ಸಂಘದ ಮುಖಂಡ ಶರಣಪ್ಪ ಪ್ಯಾಟಿ, ಅಖಂಡ ಕರ್ನಾಟಕ ರೈತ ಸಂಘದ ಸಂಚಾಲಕ ಮಲ್ಲಣ್ಣ ಪರಿವಾಣ ಗೋಗಿ, ಕೃಷ್ಣಾ ಅಚ್ಚುಕಟ್ಟು ಪ್ರದೇಶ ಭೂಮಿ ಉಳಿಸಿ ಹೋರಾಟ ಸಂಚಾಲಕ ಅಶೋಕ ಮಲ್ಲಾಬಾದಿ, ಕರ್ನಾಟಕ ರೈತ ಸಂಘದ ಸಂಚಾಲಕ ಮಹೇಶ ಸುಬೇದಾರ ಸಗರ ಆರೋಪಿಸಿದ್ದಾರೆ.

‘ಸರ್ಕಾರ ಖರೀದಿ ಕೇಂದ್ರದ ಮೂಲಕ ಪ್ರತಿ ಕ್ವಿಂಟಲ್‌ಗೆ ₹6,000 ನಿಗದಿಗೊಳಿಸಿದೆ. ತಾಲ್ಲೂಕಿನಲ್ಲಿ 14,363 ಹೆಕ್ಟೇರ್ ಕ್ಷೇತ್ರದಲ್ಲಿ ತೊಗರಿ ಬಿತ್ತನೆ ಆಗಿದೆ. ಒಣ ಬೇಸಾಯದ ಪ್ರದೇಶದಲ್ಲಿ ಎಕರೆಗೆ 4 ಕ್ವಿಂಟಲ್ ಹಾಗೂ ನೀರಾವರಿ ಪ್ರದೇಶದಲ್ಲಿ ಎಕರೆಗೆ 8–10 ಕ್ವಿಂಟಲ್ ಇಳುವರಿ ಬರಲಿದೆ. ಹೆಚ್ಚಿನ ಪ್ರದೇಶದಲ್ಲಿ ಕಟಾವು ಕಾರ್ಯ ಸಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ದಾನಪ್ಪ ಕತ್ನಳ್ಳಿ ತಿಳಿಸಿದರು.

ದೃಢೀಕರಣ ಪತ್ರ ಕಡ್ಡಾಯ: ಖರೀದಿ ಕೇಂದ್ರಕ್ಕೆ ರೈತರು ತೊಗರಿ ತರಬೇಕಾದರೆ ಪಹಣೆ, ಆಧಾರ್‌ ಕಾರ್ಡ್, ಬ್ಯಾಂಕ್ ಪುಸ್ತಕ, ಬೆಳೆ ದೃಢೀಕರಣ ಪತ್ರ ಕಡ್ಡಾಯವಾಗಿ ತೆಗೆದುಕೊಂಡು ಬಂದು ಆಯಾ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸಬೇಕು.

ಆದರೆ ‘ಗ್ರಾಮ ಲೆಕ್ಕಿಗರು ನೀಡಿದ ಕೈಬರಹದ ಬೆಳೆ ದೃಢೀಕರಣ ಪತ್ರವನ್ನು ನಿರಾಕರಿಸುತ್ತಿದ್ದು, ತಹಶೀಲ್ದಾರ್‌ ಕಚೇರಿಯಿಂದ ಕಂಪ್ಯೂಟರ್ ಮೂಲಕ ನೀಡುವ ಬೆಳೆ ದೃಢೀಕರಣ ಪತ್ರ ಅಗತ್ಯವಾಗಿದೆ. ಇದರಿಂದ ರೈತರು ವಾರಗಟ್ಟಲೆ ಬೆಳೆ ದೃಢೀಕರಣ ಪತ್ರ ಪಡೆಯಲು ಕಚೇರಿಗೆ ಅಲೆಯಬೇಕಾದ ಸ್ಥಿತಿ ಬಂದಿದೆ. ನೆರೆ ಕಲಬುರ್ಗಿ ಜಿಲ್ಲೆಯಲ್ಲಿ ಗ್ರಾಮ ಲೆಕ್ಕಿಗರು ನೀಡಿದ ಪ್ರಮಾಣ ಪತ್ರದಿಂದಲೇ ಖರೀದಿಸುತ್ತಿರುವಾಗ ಯಾದಗಿರಿ ಜಿಲ್ಲೆಯಲ್ಲಿ ಹೊಸದಾಗಿ ಕಾನೂನು ರೂಪಿಸಿದ್ದಾರೆ’ ಎಂದು ರೈತ ಮುಖಂಡ ಮಲ್ಲಣ್ಣ ಪರಿವಾಣ ಗೋಗಿ ದೂರಿದರು.

‘ತಹಶೀಲ್ದಾರ್‌ ಕಚೇರಿಯಲ್ಲಿ ಹೆಚ್ಚುವರಿ ಕೇಂದ್ರ ತೆರೆದು ಒಂದೇ ದಿನದಲ್ಲಿಯೇ ಬೆಳೆ ದೃಢೀಕರಣ ಪತ್ರ ನೀಡುವ ವ್ಯವಸ್ಥೆ ಮಾಡಬೇಕು. ರೈತರಿಗೆ ತಾಂತ್ರಿಕ ಸಮಸ್ಯೆ ನೆಪ ಹೇಳುತ್ತಾ ಕಾಲಹರಣ ಮಾಡುವುದು ಸರಿಯಲ್ಲ. ರೈತರ ಸಂಕಷ್ಟವನ್ನು ಅಧಿಕಾರಿಗಳು ಅರಿತುಕೊಳ್ಳಬೇಕು. ತಿಂಗಳ ಹಿಂದೆ ಜಿಲ್ಲಾಧಿಕಾರಿ ಜೆ.ಮಂಜುನಾಥ ಅವರು ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದಲ್ಲಿ ರೈತರ ಜೊತೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಗಮನಕ್ಕೆ ತರಲಾಗಿದೆ. ಈಗ ಮತ್ತೆ ಅಧಿಕಾರಿಗಳ ವರ್ತನೆ ಅದೆ ರಾಗ ಅದೇ ಹಾಡು ಎನ್ನುವಂತಾಗಿದೆ’ ಎಂದು ರೈತ ಮುಖಂಡ ಶರಣಪ್ಪ ಪ್ಯಾಟಿ ತಿಳಿಸಿದರು.

‘ತಾಂತ್ರಿಕ ಸಮಸ್ಯೆಯನ್ನು ಎರಡು ದಿನಗಳಲ್ಲಿ ತೊಗರಿ ಖರೀದಿ ಕೇಂದ್ರವನ್ನು ಆರಂಭಿಸದಿದ್ದರೆ ರೈತರು ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ತೊಗರಿ ಬೆಳೆಗಾರರು ಎಚ್ಚರಿಕೆ ನೀಡಿದ್ದಾರೆ.

* * 

ತೊಗರಿ ಖರೀದಿ ಕೇಂದ್ರ ಇನ್ನೂ ಆರಂಭಿಸಿಲ್ಲ. ಎಪಿಎಂಸಿ ಸಿಬ್ಬಂದಿ ಅನುಷ್ಠಾನಗೊಳಿಸಬೇಕು. ಬೆಳೆ ದೃಢೀಕರಣ ಪತ್ರ ನೀಡಲಾಗುತ್ತಿದೆ.

ಸೋಮಶೇಖರ ಹಾಗರಗುಂಡಗಿ ತಹಶೀಲ್ದಾರ್

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.